Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 03ರ ದಿನಭವಿಷ್ಯ 

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್​ 03ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 03ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 03ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕೆಲವು ಮುಖ್ಯ ಕೆಲಸಗಳನ್ನು ಮುಂದಕ್ಕೆ ಹಾಕಬೇಕಾಗಬಹುದು. ಸಲೀಸಾಗಿ ಆಗುತ್ತದೆ ಎಂದುಕೊಂಡ ಕೆಲಸಗಳಿಗೂ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ದೇವತಾ ಕಾರ್ಯಗಳಿಗೆ ಈ ದಿನದ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಈ ದಿನ ಕುಟುಂಬ ಸದಸ್ಯರ ಒತ್ತಾಯ ಮೇರೆಗೆ ತೀರ್ಥಕ್ಷೇತ್ರ ದರ್ಶನ ಅಥವಾ ಪ್ರವಾಸಕ್ಕೆ ತೆರಳಬೇಕಾಗುತ್ತದೆ. ಇದು ನೀವೇ ಅಂದುಕೊಳ್ಳದೆ ದಿಢೀರ್ ಆಗಿ ನಿಗದಿಯಾಗುವಂತಾಗುತ್ತದೆ. ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನೀವು ಗೌರವಿಸುವಂಥ, ನಿಮಗೆ ಮಾರ್ಗದರ್ಶನ ನೀಡುವಂಥ ವ್ಯಕ್ತಿಗಳ ಜತೆ ಚರ್ಚೆ ನಡೆಸಲಿದ್ದೀರಿ, ಅವರಿಂದ ಸಲಹೆಗಳನ್ನು ಕೇಳಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸಂಗಾತಿ ನೀಡುವಂಥ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಅವುಗಳನ್ನು ಪಾಲಿಸುವುದಕ್ಕೆ ಪ್ರಯತ್ನಿಸಿ. ಮುಖ್ಯವಾಗಿ ನೀವು ಮುಖ್ಯವಾದ ಕೆಲಸಗಳ ಬಗ್ಗೆ ತೀರ್ಮಾನ ಮಾಡಬೇಕಿದೆ ಅಂತಾದಲ್ಲಿ ಸಂಗಾತಿಯ ಜತೆಗೆ ಚರ್ಚಿಸಿ. ಸ್ವಂತ ಉದ್ಯಮ, ವ್ಯವಹಾರ ಮಾಡುತ್ತಿರುವವರಿಗೆ ಭವಿಷ್ಯದ ದೊಡ್ಡ ದೊಡ್ಡ ಅವಕಾಶಗಳು ಗೋಚರಿಸುವುದಕ್ಕೆ ಆರಂಭವಾಗುತ್ತವೆ. ಅದಕ್ಕೆ ಬೇಕಾದ ಹೂಡಿಕೆ, ಸಿದ್ಧತೆ, ಮೂಲ ಸೌಕರ್ಯಗಳನ್ನು ಮಾಡಿಕೊಳ್ಳುವ ಸಲುವಾಗಿ ಸ್ನೇಹಿತರಿಂದ ಸಹಾಯವನ್ನು ಕೇಳಬೇಕು ಅಥವಾ ಬ್ಯಾಂಕಿನಿಂದ ಸಾಲ ಮಾಡಬೇಕು ಎಂದುಕೊಳ್ಳಲಿದ್ದೀರಿ. ಸಣ್ಣ ಪ್ರಮಾಣದಲ್ಲಿಯಾದರೂ ಚಿನ್ನದ ಒಡವೆಯನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಒಪ್ಪಿಕೊಂಡ ವಿಚಾರಗಳು ಸಮಸ್ಯೆಯಾಗಿ ಪರಿಣಮಿಸಲಿವೆ. ಸಮಯಕ್ಕೆ ಸರಿಯಾಗಿ ಕೆಲವು ಕೆಲಸಗಳು ಮುಗಿಯದೆ ಒತ್ತಡಕ್ಕೆ ಕಾರಣ ಆಗಲಿದೆ. ಯಾರದೋ ಮಾತಿಗೆ ಕಟ್ಟುಬಿದ್ದು, ಏನನ್ನೂ ಹೇಳಲಿಕ್ಕೆ ಆಗದಂಥ ಪರಿಸ್ಥಿತಿಯನ್ನು ಎದುರಿಸಲಿದ್ದೀರಿ. ಇನ್ನು ನಿಮ್ಮ ವರ್ಚಸ್ಸಿಗೆ ಹಾನಿಯಾಗುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಮುಖ್ಯವಾಗಿ ನೀವಾಡುವ ಮಾತುಗಳು, ಆಯ್ಕೆ ಮಾಡಿಕೊಳ್ಳುವ ಪದಗಳು ಹಾಗೂ ಧ್ವನಿಯ ಬಗ್ಗೆ ಎಚ್ಚರಿಕೆ ಅಗತ್ಯ. ಒಂದು ಕ್ಷಣದ ಸಿಟ್ಟು, ಕಳೆದುಕೊಳ್ಳುವ ನಾಲಗೆ ಮೇಲಿನ ನಿಯಂತ್ರಣದಿಂದ ಗಂಭೀರ ತೊಂದರೆ ಆಗಬಹುದು. ಪ್ರತಿಷ್ಠೆಗೆ ಬಿದ್ದು ಖರ್ಚು ಮಾಡಲಿಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಮಾಧಾನದಿಂದ ದಿನ ಕಳೆಯಲಿದೆ. ನೀವು ಸ್ವಲ್ಪ ಪ್ರಯತ್ನ ಪಟ್ಟರೂ ದೊಡ್ಡ ದೊಡ್ಡ ಮಾಹಿತಿ ನಿಮಗೆ ದೊರೆಯಲಿದೆ. ಇನ್ನು ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಂಡು, ಗಂಭೀರವಾಗಿಯೇ ಪ್ರಯತ್ನಿಸಿದಲ್ಲಿ ಏನೆಲ್ಲಾ ಆಗಬಹುದು ಆಲೋಚಿಸಿ. ರಾಜಕಾರಣದಲ್ಲಿ ಇರುವಂಥವರಿಗೆ ಪ್ರಭಾವವನ್ನು ವಿಸ್ತರಿಸಿಕೊಳ್ಳುವುದಕ್ಕೆ ಹಣವನ್ನು ಬಳಸುವಂಥ ದಿನ ಇದಾಗಿರುತ್ತದೆ. ನಿಮ್ಮ ಬಹಳ ದಿನಗಳ ಕನಸಿಗೆ ನೀರೆರೆದು, ಪೋಷಿಸಲಿದ್ದೀರಿ. ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡದೊಂದು ಪ್ರಾಜೆಕ್ಟ್ ಅಚಾನಕ್ಕಾಗಿ ನಿಗದಿ ಆಗಬಹುದು. ಸೂಕ್ಷ್ಮವಾದ ಸಂಗತಿಗಳು ಸಹ ಈ ದಿನ ನಿಮ್ಮ ಗಮನಕ್ಕೆ ಬಹಳ ಶೀಘ್ರವಾಗಿ ಬರಲಿದೆ. ಚುರುಕುತನದಿಂದ ಗಮನ ಸೆಳೆಯಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಕುಟುಂಬದಲ್ಲಿ, ಸ್ನೇಹಿತರ ಮಧ್ಯೆ ನಿಮಗೆ ಗೌರವ ಹೆಚ್ಚಾಗಲಿದೆ. ಒಂದು ಹಂತದಲ್ಲಿ ಇವರೆಲ್ಲ ಯಾಕಿಷ್ಟು ಹೊಗಳುತ್ತಿದ್ದಾರೆ ಎಂದು ನಿಮಗೇ ಮುಜಗರ ಸಹ ಆಗಬಹುದು. ಆದರೆ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಊಟ- ತಿಂಡಿ ವಿಚಾರದಲ್ಲಿ ಮಿತಿಯನ್ನು ಇರಿಸಿಕೊಳ್ಳಿ. ಮಾತನಾಡುತ್ತಾ ಅಥವಾ ಟೀವಿ ನೋಡುತ್ತಾ ಅಳತೆ ಮೀರಿ ಆಹಾರ ಸೇವಿಸಿ, ಆ ನಂತರ ಕಷ್ಟ ಪಡಬೇಕಾಗುತ್ತದೆ. ಅದರಲ್ಲೂ ಮಾಂಸಾಹಾರ ಸೇವನೆಯಿಂದ ಈ ದಿನ ದೂರ ಇರುವುದು ಒಳ್ಳೆಯದು. ಕೃಷಿಕರಿಗೆ ಮನೆಯಲ್ಲಿ ಶುಭ ಕಾರ್ಯ ನಿಗದಿ ಆಗಬಹುದು. ಅಥವಾ ಕುಟುಂಬ ಸದಸ್ಯರೊಬ್ಬರಿಗೆ ವಿದೇಶಕ್ಕೋ ಅಥವಾ ದೂರದ ಊರುಗಳಲ್ಲೋ ತಾತ್ಕಾಲಿಕವಾಗಿಯಾದರೂ ಮಹತ್ತರ ಕೆಲಸವೊಂದು ದೊರೆಯಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಪದೇಪದೇ ನಿಮ್ಮ ಆತ್ಮಗೌರವಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಹಾಗೊಂದು ವೇಳೆ ಅಲ್ಲದಿದ್ದರೆ ತಂದೆ-ತಾಯಿ, ಅಣ್ಣ-ತಮ್ಮ, ಸಂಗಾತಿ ಅಥವಾ ಕೊನೆಗೆ ಸ್ನೇಹಿತರು, ಮಕ್ಕಳ ಬಗ್ಗೆಯಾದರೂ ಲಘುವಾಗಿ ಇತರರು ಮಾತನಾಡಿ, ನಿಮ್ಮ ಮನಸ್ಸಿಗೆ ಚುಚ್ಚಲಿದ್ದಾರೆ. ಯಾವುದಾದರೂ ಸ್ಥಳಕ್ಕೆ ಹೋಗುವುದು ಬೇಡ ಎಂದೇನಾದರೂ ಅನಿಸಿದಲ್ಲಿ ಅಂಥ ಕಡೆ ಹೋಗದಿರುವುದು ಉತ್ತಮ. ಪರಿಚಿತರು ತಮ್ಮ ಸ್ನೇಹಿತರೋ ಅಥವಾ ಸಂಬಂಧಿಕರಿಗೆ ನಿಮ್ಮಿಂದ ನೆರವಾಗಬೇಕು ಎಂದು ಕೇಳಿಕೊಳ್ಳಬಹುದು. ನಿಮಗೆ ಇಲ್ಲ ಎನ್ನುವುದು ಕಷ್ಟ ಆಗಬಹುದು. ಸಣ್ಣ- ಸಣ್ಣ ವಿಷಯಗಳಿಗೂ ಆಕ್ಷೇಪ- ಟೀಕೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆತ್ಮವಿಶ್ವಾಸ ತಗ್ಗಿಹೋಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಗಂಟಲು, ಧ್ವನಿ, ಕಿವಿ, ಕಣ್ಣು ಇಂಥದ್ದರ ಸಮಸ್ಯೆ ಕಾಣಿಸಿಕೊಳ್ಳಬಹುದು. ಒಂದು ವೇಳೆ ಇದಕ್ಕೆ ಸಂಬಂಧಿಸಿದ ಅಲರ್ಜಿ ಈಗಾಗಲೇ ಇದೆ ಎಂದಾದರೆ ಅದು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಅಥವಾ ಈ ದಿನವೇ ಸಮಸ್ಯೆ ಕಾಣಿಸಿಕೊಂಡಲ್ಲಿ ಆತಂಕಕ್ಕೆ ಕಾರಣ ಆಗಲಿದೆ. ಸ್ವಯಂ ವೈದ್ಯ ಮಾಡಿಕೊಳ್ಳದೆ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳುವುದು ಒಳ್ಳೆಯದು. ಇತರರ ವೈಯಕ್ತಿಕ ಸಂಗತಿಗಳ ಬಗ್ಗೆ ನಿಮಗೆ ಅನಿಸಿದ್ದೆಲ್ಲವನ್ನೂ ಹೇಳುವುದಕ್ಕೆ ಹೋಗದಿರಿ. ವಾಹನ ಚಾಲನೆಯನ್ನೇ ಕೆಲಸವನ್ನಾಗಿ ಮಾಡುತ್ತಿರುವವರು ದಾಖಲಾತಿಗಳನ್ನು ಸರಿಯಾಗಿ ಇರಿಸಿಕೊಳ್ಳಿ. ನೋ ಪಾರ್ಕಿಂಗ್, ಒನ್ ವೇ ಇಂಥ ಸಂಚಾರಿ ನಿಯಮಗಳ ಉಲ್ಲಂಘನೆಯಾಗಿ, ದಂಡ ಪಾವತಿಸಬೇಕಾಗಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಾಟಕ, ಸಂಗೀತ ಕಛೇರಿ, ಚಿತ್ರಕಲಾ ಪ್ರದರ್ಶನ ಇಂಥವುಗಳಿಗೆ ಭೇಟಿ ನೀಡುವ ಯೋಗ ಈ ದಿನ ನಿಮಗಿದೆ. ಮಕ್ಕಳಿಗಾಗಿ ಮದುವೆ ಸಂಬಂಧಗಳನ್ನು ನೋಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಸಾಧ್ಯತೆ ಇದೆ. ಇನ್ನು ಮನೆ, ಅಪಾರ್ಟ್ ಮೆಂಟ್ ಅಥವಾ ಗೇಟೆಡ್ ಕಮ್ಯುನಿಟಿಯಲ್ಲಿ ಸೈಟ್ ಗಳನ್ನು ಹುಡುಕುತ್ತಿರುವವರಿಗೆ ಅದು ಕೂಡ ದೊರೆಯುವ ಅವಕಾಶ ಇದೆ. ಪರಿಚಯಸ್ಥರೊಬ್ಬರಿಗೆ ಅಥವಾ ಬಂಧುಗಳಿಗೆ ನೆರವು ನೀಡುವಂತೆ ತಂದೆ- ತಾಯಿ ಆರ್ಥಿಕ ಸಹಾಯ ಕೇಳಬಹುದು. ಹಳೇ ಸ್ನೇಹಿತರು ಭೇಟಿ ಆಗಲಿದ್ದಾರೆ. ದಿನದ ದ್ವಿತೀಯಾರ್ಧದಲ್ಲಿ ಅವರೊಂದಿಗೆ ಸೇರಿ ಪಾರ್ಟಿಗಾಗಿ ರೆಸ್ಟೋರೆಂಟ್ ಗೆ ತೆರಳಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮನೆಯ ನೆರೆ ಹೊರೆಯವರ ಜತೆಗೆ ಸಣ್ಣ- ಪುಟ್ಟ ಸಂಗತಿಗಳಿಗಾದರೂ ಜಗಳ- ಕಲಹಗಳಾಗಬಹುದು. ಅದರಲ್ಲೂ ಮಕ್ಕಳ ಕಾರಣಕ್ಕಾಗಿಯೇ ಮನಸ್ತಾಪಗಳು ಆಗಬಹುದು. ಒಂದು ವೇಳೆ ಬರೀ ಮಾತಿನಲ್ಲಿ ಬಗೆಯ\ಹರಿಯುತ್ತದೆ ಎಂದಾದಲ್ಲಿ ವಿನಾಕಾರಣದ ಜಗಳ ಆಗದಂತೆ ನೋಡಿಕೊಳ್ಳುವುದು ಒಳ್ಳೆಯದು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಲ್ಲಿ ಮುಖ್ಯವಾದ ವಸ್ತುಗಳ ಕಡೆಗೆ ಮಾಮೂಲಿ ದಿನಗಳಿಗಿಂತ ಜಾಸ್ತಿ ಜಾಗ್ರತೆಯಿಂದ ಇರುವುದು ಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನರಿರುವ ಕಡೆ ನೀವು ಇದ್ದೀರಿ ಅಂತಾದಲ್ಲಿ ವ್ಯಾಲೆಟ್, ವ್ಯಾನಿಟಿ ಬ್ಯಾಗ್ ಇವುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ