
ಅಣಬೆ ಬೆಳೆಯುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಬಹಳ ಸಮಯದಿಂದ ನಿಂತು ಹೋಗಿರುವ ಸರ್ಕಾರಿ ಮಟ್ಟದಲ್ಲಿನ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಮಕ್ಕಳ ಶಿಕ್ಷಣ- ಉದ್ಯೋಗದಲ್ಲಿ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಉದ್ದೇಶ ಈಡೇರುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮನೆಯ ಮಟ್ಟಿಗೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವಂಥ ನಿರ್ಧಾರ ಮಾಡಲಿದ್ದೀರಿ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಯೋಜನೆ ಮಾಡಿಕೊಳ್ಳುವುದು ಉತ್ತಮ. ಸ್ನೇಹಿತರು ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ದಿನಾಂಕವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಏಕೆಂದರೆ ಅದು ತಪ್ಪಿಹೋಗಿ, ಆ ನಂತರ ಹೆಚ್ಚುವರಿ ಮೊತ್ತವನ್ನು ಕಟ್ಟಬೇಕಾದ ಸನ್ನಿವೇಶ ಎದುರಾಗುತ್ತದೆ, ಜಾಗ್ರತೆ.
ಹಣದ ವಿಚಾರದಲ್ಲಿ ಕೆಲವು ವ್ಯಕ್ತಿಗಳ ಜೊತೆಗೆ ಅಭಿಪ್ರಾಯ ಭೇದ- ಮನಸ್ತಾಪ ಕಾಣಿಸಿಕೊಳ್ಳಬಹುದು. ನೀವು ಹೇಳುವುದೊಂದು ಅದು ಅರ್ಥವಾಗುವ ರೀತಿ ಮತ್ತೊಂದು ಎಂಬ ಸನ್ನಿವೇಶ ಸೃಷ್ಟಿ ಆಗುತ್ತದೆ. ಮುಖ್ಯ ವಿಚಾರಗಳು ಇದ್ದಲ್ಲಿ ಫೋನ್ ನಲ್ಲಿ ಮಾತನಾಡುವ ಬದಲಿಗೆ ನೇರಾನೇರ ಭೇಟಿ ಆಗಿಬಿಡುವುದು ಉತ್ತಮ. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ಯಾರೇ ಪ್ರಸ್ತಾವ ಮುಂದಿಟ್ಟರೂ ನೇರವಾಗಿ ‘ಬೇಡ” ಎಂದುಬಿಡುವುದು ಒಳ್ಳೆಯ ನಿರ್ಧಾರ ಎಂದೆನಿಸಿಕೊಳ್ಳುತ್ತದೆ. ಈಗಿರುವ ಉದ್ಯೋಗವನ್ನು ಬಿಟ್ಟು, ಹೊಸದಾಗಿ ವ್ಯಾಪಾರ- ವ್ಯವಹಾರ ಮಾಡಬೇಕು ಎಂದುಕೊಂಡಿದ್ದಲ್ಲಿ ಸ್ವಲ್ಪ ಸಮಯ ನಿರ್ಧಾರ ಮುಂದೂಡುವುದು ಒಳ್ಳೆಯದು. ಪ್ರೀತಿಯಲ್ಲಿ ಇರುವವರಿಗೆ ಈ ದಿನ ಕಹಿಯಾದ ಅನುಭವ ಹಾಗೂ ಹಿತ ಅನಿಸದಂಥ ಕೆಲವು ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗುತ್ತದೆ. ಎಂಥ ಸನ್ನಿವೇಶದಲ್ಲೂ ತಕ್ಷಣದ ಪ್ರತಿಕ್ರಿಯೆ ನೀಡಬೇಡಿ.
ಸ್ವಾದಿಷ್ಟವಾದ ಊಟ- ತಿಂಡಿಗಳನ್ನು ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಇಷ್ಟು ಸಮಯ ನಿಮ್ಮ ಬಗ್ಗೆ ತಿರಸ್ಕಾರದಿಂದ ನೋಡುತ್ತಿದ್ದವರು, ದ್ವೇಷ ಸಾಧನೆ ಮಾಡುತ್ತಿದ್ದವರು ತಾವಾಗಿಯೇ ನಿಮ್ಮ ಬಳಿ ಬಂದು, ಸಹಾಯ ಕೇಳಲಿದ್ದಾರೆ. ದೂರ ಪ್ರಯಾಣ ಅನಿವಾರ್ಯ ಎಂಬಂತೆ ಆಗಲಿದೆ. ಒಬ್ಬರೇ ವ್ಯಕ್ತಿಯ ಸಲುವಾಗಿ ನಿಮ್ಮ ಹೆಚ್ಚು ಸಮಯವನ್ನು ನೀಡಬೇಕಾದ ಪರಿಸ್ಥಿತಿ ಸೃಷ್ಟಿ ಆಗಲಿದೆ. ತೀರಾ ಅನಿವಾರ್ಯ ಎಂದಾದಲ್ಲಿ ಮಾತ್ರ ಗ್ಯಾಜೆಟ್- ಮೊಬೈಲ್ ಫೋನ್ ಇಂಥವುಗಳ ಖರೀದಿ ಮಾಡಿ. ಡಿಸ್ಕೌಂಟ್ ಸಿಗುತ್ತಿದೆ ಅಂತಲೋ ಅಥವಾ ಕ್ರೆಡಿಟ್ ಕಾರ್ಡ್ ನಲ್ಲಿ ಆಫರ್ ಸಿಗುತ್ತಿದೆ ಎಂಬ ಕಾರಣದಿಂದ ಅಗತ್ಯ ಇಲ್ಲದಿದ್ದರೂ ಕೊಳ್ಳುವುದಕ್ಕೆ ಹೋಗಬೇಡಿ. ಹಳೆ ಗೆಳೆಯ- ಗೆಳತಿಯರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಮೂಡಲಿದೆ. ಇನ್ನು ಈಗಾಗಲೇ ಕೆಲಸ ಮಾಡಿಕೊಟ್ಟಾಗಿದೆ, ಆದರೆ ಬರಬೇಕಾದ ಹಣ ಬಂದಿಲ್ಲ ಅಂತಾಗಿದ್ದಲ್ಲಿ ಅದು ಕೂಡ ವಸೂಲಿ ಆಗುವಂಥ ಸಾಧ್ಯತೆಗಳಿವೆ.
ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇದರಿಂದ ನಿಮಗೆ ಸಮಾಧಾನ- ತೃಪ್ತಿ ಸಿಗಲಿದೆ. ದೀರ್ಘ ಕಾಲದಿಂದ ನಿಮ್ಮ ಜತೆಗಿದ್ದು ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ದೂರದ ಪ್ರದೇಶಗಳಿಗೆ ತೆರಳುವ ವಿಚಾರ ತಿಳಿದುಬರಲಿದೆ. ಇದರಿಂದ ಭಾವನಾತ್ಮಕವಾಗಿ ಸ್ವಲ್ಪ ಕುಗ್ಗಿದಂತೆ ಭಾವನೆ ಮೂಡಲಿದೆ. ಆಸ್ತಮಾ ಸಮಸ್ಯೆ ಇರುವಂಥವರು ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಔಷಧ- ಮಾತ್ರೆಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೀರಿ ಅಂತಾದರೆ ಅದರಿಂದ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕುಟುಂಬ ಸದಸ್ಯರ ಪೈಕಿಯೇ ಕೆಲವರು ನೀವು ಕೆರಳುವ ರೀತಿಯಲ್ಲಿ ಮಾತುಗಳನ್ನು ಆಡುತ್ತಾರೆ. ಅಂಥ ಸನ್ನಿವೇಶದಲ್ಲಿ ಏಕಾಏಕಿ ನೀವು ಸಿಟ್ಟಿಗೇಳಬೇಡಿ. ನಿಮ್ಮ ಬಗ್ಗೆ ಇತರರು ಎತ್ತುವ ಆಕ್ಷೇಪಗಳಿಗೆ ಸಮಾಧಾನದಿಂದ ಸಮಜಾಯಿಷಿ ಹೇಳುವುದಕ್ಕೆ ಪ್ರಯತ್ನಿಸಿ. ಕೆಲವು ಸಣ್ಣ- ಪುಟ್ಟ ಸಾಲಗಳನ್ನು ತೀರಿಸುವುದಕ್ಕೆ ಪ್ರಯತ್ನಿಸಿ.
ಸಂಗಾತಿ ಜೊತೆಗೆ ಲಾಂಗ್ ಡ್ರೈವ್ ಗೆ ತೆರಳುವಂಥ ಯೋಗ ಇದೆ. ಇಷ್ಟು ಸಮಯ ನಿಮ್ಮ ಮನಸ್ಸಲ್ಲಿ ಇಟ್ಟುಕೊಂಡು, ಹೇಳದೇ ಇದ್ದಂಥ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿದ್ದೀರಿ. ಹೊಸ ಕೋರ್ಸ್ ಸೇರಿಕೊಳ್ಳುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ವೃತ್ತಿಪರರು ನೀವಾಗಿದ್ದರೆ ನಿಮಗೆ ಗೊತ್ತಿರುವ ಮಾಹಿತಿಯೇ ಇದ್ದರೂ ಅದರ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೆಯದು. ಕುಟುಂಬದ ಸದಸ್ಯರು ಹೇಳುವ ಕೆಲವು ವಿಚಾರಗಳಿಗೆ ಖರ್ಚು- ವೆಚ್ಚದ ಕಾರಣ ನೀಡಿ, ಅದು ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ. ಇತರರ ವೈಯಕ್ತಿಯ ವಿಷಯಗಳಿಗೆ ಯಾವುದೇ ಸಲಹೆ- ಸೂಚನೆ ನೀಡುವುದಕ್ಕೆ ಹೋಗಬೇಡಿ. ಮನೆಯಲ್ಲಿ ಹೆಣ್ಣುಮಕ್ಕಳಿರುವವರು ಅವರ ಸಲುವಾಗಿ ಕೆಲವು ಒಡವೆಗಳನ್ನು ಮಾಡಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಈ ದಿನ ಮರೆವಿನ ಸಮಸ್ಯೆ ಕಾಡಲಿದೆ.
ಎತ್ತರದ ಸ್ಥಳಕ್ಕೆ ಹತ್ತುವಾಗ- ಇಳಿಯುವಾಗ ಎಚ್ಚರಿಕೆ ವಹಿಸಬೇಕು. ನಿಮ್ಮ ಉದ್ಯೋಗವೇ ಈ ರೀತಿಯಾದದ್ದು ಎಂದಾದಲ್ಲಿ ಸಾಮಾನ್ಯ ದಿನಗಳಲ್ಲಿ ನೀವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಆಪತ್ಕಾಲಕ್ಕೆ ಎಂದುಕೊಂಡು ನೀವು ಕೂಡಿಟ್ಟಿದ್ದ ಹಣವನ್ನು ತೆಗೆದುಕೊಳ್ಳಬೇಕು ಎಂಬ ಸ್ಥಿತಿ ಉದ್ಭವಿಸಲಿದೆ. ಸಂಗಾತಿಯಿಂದ, ನೀವು ಯಾರನ್ನು ಬಹಳ ಪ್ರೀತಿ- ಗೌರವದಿಂದ ಕಾಣುತ್ತಾ ಇರುತ್ತೀರೋ ಅಂಥವರಿಂದ ನಿಂದನೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಅಗಲಿದೆ. ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ವ್ಯಕ್ತಿಗಳಿಂದ ಹಣದ ನಷ್ಟ ಆಗಲಿದೆ. ಪೂರ್ತಿ ವಿಷಯ ತಿಳಿದುಕೊಳ್ಳುವ ಮುನ್ನ ಯಾರಿಗೂ ಹಣ ನೀಡಬೇಡಿ. ಇನ್ನು ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಖರೀದಿ ಮಾಡಬೇಕು ಎಂದು ಹುಡುಕುತ್ತಾ ಇರುವವರು ಈ ದಿನ ಖರೀದಿ ಮಾಡುವಂಥ ಯೋಗ ಇದೆ.
ತಮಾಷೆಗೆ ಎಂದು ಆರಂಭಿಸಿದ ಮಾತು ಹೊಸ ವ್ಯವಹಾರವನ್ನೋ ವ್ಯಾಪಾರವನ್ನೋ ಆರಂಭಿಸುವ ಮಟ್ಟಕ್ಕೆ ಒಯ್ಯಲಿದೆ. ನಿಮ್ಮ ಗುಣ- ಸ್ವಭಾವಕ್ಕೆ ಶಿಸ್ತಿನ ಚೌಕಟ್ಟು ಹಾಕಲು ಮುಂದಾಗಲಿದ್ದೀರಿ. ಹಿಂದೆಲ್ಲ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಒಪ್ಪಿಕೊಂಡು ಬಿಡುತ್ತಿದ್ದ ಕೆಲಸ- ಕಾರ್ಯಗಳಂಥ ಸುಳಿಗೆ ಇನ್ನು ಮುಂದೆ ಸಿಕ್ಕಿಹಾಕಿಕೊಳ್ಳಬಾರದು ಎಂಬ ದೃಢವಾದ ನಿಶ್ಚಯ ಮಾಡುತ್ತೀರಿ. ಆದಾಯದಲ್ಲಿ ಏರಿಕೆ ಮಾಡಿಕೊಳ್ಳಲು ದೊರೆಯುವ ಅವಕಾಶಗಳ ಪೈಕಿ ಯಾವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಸ್ಪಷ್ಟತೆ ತುಂಬ ಮುಖ್ಯ ಆಗಲಿದೆ. ನೀವು ಮುಂಚೆಯೇ ಊಹೆ ಮಾಡಿದ ರೀತಿಯಲ್ಲಿ ಸಂಬಂಧಗಳಲ್ಲಿ ಕೆಲವು ಬೆಳವಣಿಗೆಗಳು ಆಗಲಿವೆ. ಊಟ- ತಿಂಡಿ ರುಚಿಯಾಗಿಲ್ಲ ಎಂದು ಕುಟುಂಬ ಸದಸ್ಯರು ರಂಪ- ರಾದ್ಧಾಂತ ಮಾಡುತ್ತಾರೆ. ಆದ್ದರಿಂದ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚು ಏಕಾಗ್ರತೆಯಿಂದ ಇರುವುದು ಒಳ್ಳೆಯದು.
ಹೆಚ್ಚಿನ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಮನವೊಲಿಸಲು ಕೆಲವು ಸ್ನೇಹಿತರು ನೀಡುವ ಕಾರಣಗಳನ್ನು ವಿಶ್ಲೇಷಣೆ ಮಾಡದೆ ಒಪ್ಪಿಕೊಂಡು ಬಿಟ್ಟರೆ ಆ ನಂತರ ಪರಿತಪಿಸುವಂತೆ ಆಗಲಿದೆ. ದಂಪತಿ ಮಧ್ಯೆ ಹಣಕಾಸಿನ ವಿಚಾರಕ್ಕೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಿಲ್ಲದ ಸ್ಥಳಕ್ಕೆ ಯಾರದೋ ಬಲವಂತಕ್ಕೆ ತೆರಳಿ, ಅಲ್ಲಿ ಅವಮಾನ ಪಡುವಂತೆ ಆಗಲಿದೆ. ಕೆಲವು ಕೆಲಸ- ಕಾರ್ಯಗಳು ನಿಧಾನವಾಗಿಯೇ ಆದರೂ ಪರವಾಗಿಲ್ಲ, ಆತುರ ಮಾಡುವುದಕ್ಕೆ ಹೋಗಬೇಡಿ. ಸ್ವಂತ ಮನೆ ನಿರ್ಮಾಣಕ್ಕೆ ಹಣಕಾಸಿನ ಹೊಂದಾಣಿಕೆ ಮಾಡುತ್ತಾ ಇರುವವರಿಗೆ ಬೇರೆ ಉದ್ದೇಶಕ್ಕೆ ಆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವವರು ದೂರದ ಸ್ಥಳಗಳಿಗೆ ಪ್ರಯಾಣ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ.
ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ಮೂಡುವ ಅಸಮಾಧಾನದ ಮನಸ್ಥಿತಿಯಿಂದ ಆಚೆ ಬರುವುದಕ್ಕೆ ನಾನಾ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮಗೆ ಬರಬೇಕಾದ ಹಣಕ್ಕೆ ಏನಾದರೊಂದು ಕಾರಣ ಒಡ್ಡಿ, ಅಡ್ಡಗಾಲು ಹಾಕಿದವರು ಯಾರು ಎಂಬ ಮಾಹಿತಿ ದೊರೆಯಲಿದೆ. ಕೆಲವು ಉದ್ಯೋಗಾವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನಿಮ್ಮ ಮಾತಿನ ಮೂಲಕ ಕೆಲವು ಕೆಲಸ- ಕಾರ್ಯ ಮಾಡಿಸಿಕೊಳ್ಳಲಿದ್ದೀರಿ. ದಾನ- ಧರ್ಮಕ್ಕಾಗಿ ಹಣದ ವಿನಿಯೋಗ ಆಗಲಿದೆ. ನಿಮಗೆ ಬಹಳ ಪರಿಚಿತರಾದ ವ್ಯಕ್ತಿಯೊಬ್ಬರು ಹಣಕಾಸಿನ ಸಹಾಯವನ್ನು ಮಾಡುವಂತೆ ಕೇಳಿಕೊಂಡು ಬರಲಿದ್ದಾರೆ. ಅಥವಾ ಸಾಲವನ್ನಾದರೂ ಕೊಡಿಸುವಂತೆ ಕೇಳಬಹುದು. ಮನೆ ನಿರ್ಮಾಣ ಮಾಡುತ್ತಾ ಇರುವವರು ಈಗಿನ ನಿಮ್ಮ ಪ್ಲಾನ್ ನಲ್ಲಿ ಕೆಲವು ಬದಲಾವಣೆ ಮಾಡಲು ಮುಂದಾಗಲಿದ್ದೀರಿ. ಹೂವು- ಹಣ್ಣು ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ