Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 17ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಹಣಕಾಸು, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಸಂಬಂಧಗಳ ಕುರಿತು ಪ್ರತಿದಿನದ ಭವಿಷ್ಯವಾಣಿಗಳನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಿಳಿಯಿರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಫಾಲೋಅಪ್ ಪರೀಕ್ಷೆಗಳನ್ನು ಮಾಡಿಸಬೇಕಿತ್ತು, ಆದರೆ ನಾನಾ ಕಾರಣಗಳಿಗೆ ಮಾಡಿಸದೆ ಹಾಗೇ ಇದ್ದುಬಿಟ್ಟಿದ್ದಿರಿ ಅಂತಾದಲ್ಲಿ ಅದಕ್ಕೆ ಪರಿತಪಿಸುವಂತೆ ಆಗಲಿದೆ. ಸರ್ಕಾರದ ಮಟ್ಟದಲ್ಲಿ ತುಂಬ ಮುಖ್ಯವಾದ ಹುದ್ದೆಯನ್ನು ನಿರ್ವಹಿಸುತ್ತಾ ಇರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಬೇಕಾಗಲಿದೆ. ನೀವು ಬಹಳ ಸಮಯದಿಂದ ಹುಡುಕಾಟ ನಡೆಸುತ್ತಾ ಇದ್ದ ದಾಖಲೆಗಳು- ಮುಖ್ಯ ಮಾಹಿತಿಗಳನ್ನು ತಿಳಿದುಕೊಂಡ ವ್ಯಕ್ತಿಯ ಬಗ್ಗೆ ವಿವರವು ತಿಳಿದುಬರಲಿದ್ದು, ಇದರಿಂದಾಗಿ ಮನಸ್ಸಿನಲ್ಲಿ ಸಮಾಧಾನ ಮೂಡಲಿದೆ. ಊಟ- ತಿಂಡಿ, ನಿದ್ರೆ ಸಮಯಕ್ಕೆ ಸರಿಯಾಗಿ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಕೆಲಸದ ಒತ್ತಡದ ಕಾರಣಕ್ಕೆ ಇವುಗಳ ನಿರ್ಲಕ್ಷ್ಯ ಮಾಡಿದಲ್ಲಿ ಬೇರೆ ರೀತಿಯ ತೊಂದರೆಗಳನ್ನು ಅನುಭವಿಸುವಂತೆ ಆಗಲಿದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮೂಗು ತೂರಿಸುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನೀವು ಹೇಗೆ ಕಾಣಿಸಿಕೊಳ್ಳಬೇಕು, ವೃತ್ತಿಪರವಾಗಿ- ಉದ್ಯೋಗ ದೃಷ್ಟಿಯಿಂದ ಹೇಗೆ ಆಕರ್ಷಕವಾಗಿ ಪ್ರಸೆಂಟೇಷನ್ ಇರಬೇಕು ಎಂಬ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಈ ಹಿಂದೆ ಯಾರಿಗೆ ಸಹಾಯ ಮಾಡಿದ್ದಿರಿ, ಅಂಥವರು ಈಗ ನಿಮ್ಮ ಅಗತ್ಯಕ್ಕೆ ನೆರವು ನೀಡಲಿದ್ದಾರೆ. ಮನೆಯ ಮಟ್ಟಿಗೆ ಕಾರ್ಯಕ್ರಮ ಮಾಡಲೇಬೇಕು ಎಂಬುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಅದಕ್ಕಾಗಿ ಖರ್ಚು- ವೆಚ್ಚಕ್ಕೆ ಹಣ ಹೊಂದಾಣಿಕೆ ಮಾಡಬೇಕಾಗುತ್ತದೆ. ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಕೆಲವು ಕಡೆಯಿಂದ ನಕಾರಾತ್ಮಕ ಉತ್ತರ ಬರಲಿದ್ದು, ಇದರಿಂದ ಮಾನಸಿಕವಾಗಿ ಕುಗ್ಗಬೇಕಿಲ್ಲ. ಏಕೆಂದರೆ ಬಹಳ ಹಿಂದೆ ನೀವು ಪ್ರಯತ್ನ ಪಟ್ಟು, ಆಗ ಯಾವುದೇ ಉತ್ತರ ದೊರೆಯದಿದ್ದ ಸಂಸ್ಥೆಯಿಂದ ಈಗ ಹೊಸದಾಗಿ ಆಫರ್ ಬರಬಹುದು. ನಿಮ್ಮಲ್ಲಿ ಕೆಲವರಿಗೆ ಖಿನ್ನತೆ ಕಾಡಬಹುದು, ಅದರಲ್ಲಿಯೂ ಮಕ್ಕಳು ಕೇಳಿದ್ದನ್ನು ಕೊಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹೀಗಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಸಂಗೀತ – ನೃತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನ ಇದಾಗಿರುತ್ತದೆ. ಪ್ರತಿಷ್ಠಿತ ವೇದಿಕೆಯೊಂದರಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ಹುಡುಕಿಕೊಂಡು ಬರಲಿದೆ. ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ಮನೆ ನಿರ್ಮಾಣಕ್ಕಾಗಿ ಆರ್ಕಿಟೆಕ್ಟ್- ಎಂಜಿನಿಯರ್ ಭೇಟಿ ಮಾಡಿ, ಚರ್ಚೆ ನಡೆಸಲಿದ್ದೀರಿ. ದಿನಸಿ ಅಂಗಡಿ ನಡೆಸುತ್ತಾ ಇರುವವರಿಗೆ ರಿನೋವೇಷನ್, ಅಲಂಕಾರಕ್ಕಾಗಿ ಹಣ ಹೂಡಿಕೆ ಮಾಡಬೇಕಾಗುತ್ತದೆ ಎಂಬ ಆಲೋಚನೆ ಬರಲಿದೆ. ವಾಹನ ಚಾಲನೆ ಮಾಡುವಾಗ ವೇಗದ ಡ್ರೈವಿಂಗ್ ಬೇಡ. ತೆರಳಬೇಕಾದ ಸ್ಥಳದಲ್ಲಿ ಹತ್ತು ನಿಮಿಷ ಮುಂಚಿತವಾಗಿಯೇ ಇರುವಂತೆ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಶೀತ- ಕೆಮ್ಮು- ಕಫದ ಸಮಸ್ಯೆ ಇರುವವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣ ಆಗಿ, ಕಿರಿಕಿರಿ ಆಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಅನಿರೀಕ್ಷಿತವಾಗಿ ಆದಾಯ ಬರುವ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವಾಗಿಯೇ ಬೇಡ ಎಂದುಕೊಂಡು ಬಿಟ್ಟಂಥ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಈ ಹಿಂದಿಗಿಂತ ಹೆಚ್ಚಿನ ಹಣವನ್ನು ನೀಡುವುದಾಗಿ ಹುಡುಕಿಕೊಂಡು ಬರಲಿದ್ದಾರೆ. ಮಕ್ಕಳ ಶಿಕ್ಷಣವನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ವ್ಯವಸ್ಥೆಗಳನ್ನು ಮಾಡಿಕೊಡಲಿದ್ದೀರಿ. ನಿಮಗೆ ಈ ದಿನ ಸಿಗುವ ಅತಿ ಸಣ್ಣ ಅವಕಾಶದ ಸಾಧ್ಯತೆಯನ್ನು ಸಹ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಲಕ್ಷ್ಯವನ್ನು ನೀಡಿ. ಕಮ್ಯುನಿಕೇಷನ್ ಗ್ಯಾಪ್ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಸಹ ಬಹಳ ಮುಖ್ಯವಾಗಲಿದೆ. ನೀವೇ ಹೇಳಿದ ವಿಚಾರವನ್ನು “ನಾನು ಹಾಗೆ ಹೇಳಿಲ್ಲ, ಆ ಅರ್ಥದಲ್ಲಿ ಹೇಳಿಲ್ಲ” ಎಂದು ವಾದ ಹೂಡುತ್ತಾ ಪಟ್ಟು ಹಿಡಿಯಬೇಡಿ. ವಾಹನಗಳ ಖರೀದಿಗಾಗಿ, ಅದರಲ್ಲೂ ಸೆಕೆಂಡ್ ಹ್ಯಾಂಡ್ ವಾಹನ ಕೊಳ್ಳಬೇಕು ಎಂದಿರುವವರು ಅದಕ್ಕಾಗಿ ಹಣವನ್ನು ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಇಷ್ಟು ಕಾಲ ಯಾವ ವಿಚಾರದಲ್ಲಿ ನಿರ್ಧಾರ ಮಾಡುವುದಕ್ಕೆ ಹಿಂಜರಿಕೆ ಮಾಡುತ್ತಿದ್ದರೋ ಆ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಿಕೊಳ್ಳಲಿದ್ದೀರಿ. ಉದ್ಯೋಗದಿಂದ ಬಿಡುವು ತೆಗೆದುಕೊಂಡು ಬಹಳ ಕಾಲ ಆಯಿತು ಎಂದಿದ್ದಲ್ಲಿ ಮತ್ತೆ ಕೆಲಸ ಹುಡುಕಿಕೊಳ್ಳುವುದಕ್ಕೆ ಶುರು ಮಾಡಲಿದ್ದೀರಿ. ಬಾಡಿಗೆ ಮನೆಯಲ್ಲಿ ವಾಸ ಇರುವವರು ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ತಾತ್ಕಾಲಿಕವಾಗಿ ನಿರ್ಧಾರವನ್ನು ಮುಂದಕ್ಕೆ ಹಾಕಿಲಿದ್ದೀರಿ. ನೀವು ಯಾವ ಮಾತನ್ನು ಕೇಳಿಸಿಕೊಳ್ಳಬಾರದು, ಆಡಿಸಿ ಕೊಳ್ಳಬಾರದು ಎಂದುಕೊಳ್ಳುತ್ತಾ ಇರುತ್ತೀರೋ ಅಂಥವನ್ನು ನಿಮ್ಮ ಆಪ್ತರು ಆಡುವ ಮೂಲಕ ಕಿರಿಕಿರಿ ಮಾಡುತ್ತಾರೆ. ನಿಮಗೆ ಆದಾಯ ಬರುವಂಥ ರೆಫರೆನ್ಸ್ ಗಳನ್ನು ಕುಟುಂಬ ಸದಸ್ಯರೇ ಮಾಡಲಿದ್ದು, ಇದು ದೀರ್ಘಾವಧಿಗೂ ಸಹಾಯ ಆಗುವಂಥ ಆರ್ಡರ್ ಗಳು, ಅವಕಾಶಗಳನ್ನು ತರಬಹುದು. ಈ ದಿನ ಸಾಧ್ಯ ಆದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡುವುದಕ್ಕೆ ಆದ್ಯತೆ ನೀಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ವೃತ್ತಿನಿರತರು, ಉದ್ಯೋಗಿಗಳು ವಿರಾಮ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ದೀರ್ಘ ಕಾಲದ ರಜಾ ತೆಗೆದುಕೊಂಡು ಕುಟುಂಬ ಸದಸ್ಯರ ಜತೆಗೂ ನಾಲ್ಕಾರು ದಿನ ಪ್ರವಾಸಕ್ಕೆ ತೆರಳಲು ತರಾತುರಿಯಲ್ಲಿ ಕೊನೆ ಕ್ಷಣದ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಲೇವಾದೇವಿ ವ್ಯವಹಾರ ಮಾಡುತ್ತಿರುವವರಿಗೆ ತುರ್ತಾಗಿ ಹಣ ಹೊಂದಿಸಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಮೊದಮೊದಲಿಗೆ ತುಂಬ ನಯವಾಗಿ ಮಾತನಾಡುತ್ತಾ, ನೀವು ಹೇಳಿದಂತೆಯೇ ನಡೆದುಕೊಳ್ಳುತ್ತೇನೆ ಎಂದೆನ್ನುತ್ತಿದ್ದ ವ್ಯಕ್ತಿಯೊಬ್ಬರು ನಿಮ್ಮ ಫೋನ್ ಕಾಲ್ ಕೂಡ ರಿಸೀವ್ ಮಾಡುತ್ತಿಲ್ಲ ಎಂಬ ಸಂಗತಿ ಆತಂಕ ಸೃಷ್ಟಿಸಲಿದೆ. ಸ್ನೇಹಿತರು- ಸಂಬಂಧಿಕರು ನಿಮಗೆ ಸಲಹೆ ನೀಡುವುದಕ್ಕೆ ಬಂದಲ್ಲಿ ಸಿಟ್ಟಿನಲ್ಲಿ ಉತ್ತರಿಸುವುದಕ್ಕೆ ಹೋಗಬೇಡಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಸದ್ಯದಲ್ಲೇ ಆಯೋಜಿಸಬೇಕಾದ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಾನು ಮಾಡಿದ್ದು ಎಂದು ಹೇಳುವ ಮುನ್ನ ಅದರ ಪರಿಣಾಮಗಳ ಬಗ್ಗೆ ಸಾವಿರ ಬಾರಿ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಈ ವಿಚಾರವು ಹಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಡಲಿದೆ. ನೀವು ನಿಜ ಹೇಳುತ್ತಿದ್ದೀರೋ ಇಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಅದು ಇಷ್ಟವಾಗುತ್ತೋ ಇಲ್ಲವೋ ಎಂದು ಆಲೋಚಿಸುವಂತೆ ಆಗಲಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೇ ಆದರೂ ಆದಾಯ ಪ್ರಮಾಣದಲ್ಲಿನ ಇಳಿಕೆ ನಿಮ್ಮಲ್ಲಿ ಒಂದು ಬಗೆಯಬ ಆತಂಕವನ್ನು ಸೃಷ್ಟಿ ಮಾಡಲಿದೆ. ಜ್ಯೋತಿಷಿಗಳು, ಪುರೋಹಿತರು, ಅಧ್ಯಾತ್ಮ ಚಿಂತಕರಿಗೆ, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ, ಲೆಕ್ಕ ಪರಿಶೋಧಕರಿಗೆ ಒಬ್ಬರಲ್ಲ ಒಬ್ಬ ವ್ಯಕ್ಯಿಯಿಂದ ಮನಸ್ಸಿಗೆ ಬೇಸರ ಆಗುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಕ್ಕು ಮನಸ್ಸು ಹಗುರ ಮಾಡಿಕೊಳ್ಳೋಣ ಎಂದುಕೊಂಡ ಬಹಳ ಆಪ್ತರಾದ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿರ್ಧಾರ ಮಾಡಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಹಕ್ಕು- ಬಾಧ್ಯತೆಗಳ ವಿಚಾರ ತುಂಬ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಲಿವೆ. ಕುಟುಂಬ ಸದಸ್ಯರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂಬ ಭಾವನೆ ಮೂಡುವಂತೆ ಕೆಲವು ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಇತರರಿಂದ ನಿಂದನೆ- ಬಯ್ಗುಳ ಕೇಳಿಸಿಕೊಂಡ ನಂತರವೂ ನೀವು ಯಾವುದೇ ಸಮಜಾಯಿಷಿ ಅಥವಾ ಸಮರ್ಥನೆ ನೀಡಬಾರದು ಎಂಬುದು ಎದುರಿಗೆ ಇರುವವರ ನಿರೀಕ್ಷೆ ಆಗಿರಲಿದೆ. ದೇವರ ಪೂಜಾ ಕಾರ್ಯಕ್ರಮ, ಜಾತ್ರೆ, ವಾರ್ಷಿಕೋತ್ಸವ ಇಂಥವುಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ- ತೃಪ್ತಿ ಸಿಗಲಿದೆ. ಇದೇ ಕೊನೆ ಎಂದುಕೊಂಡು ನೀವು ಮಾಡಿದಂಥ ಪ್ರಯೋಗ ಯಶಸ್ಸು ಕಾಣಲಿದೆ. ಬಾರ್- ರೆಸ್ಟೋರೆಂಟ್, ಹೋಟೆಲ್, ಪೆಟ್ರೋಲ್ ಬಂಕ್, ಕಲ್ಲು ಕ್ವಾರಿ ವ್ಯವಹಾರ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಲೈಸೆನ್ಸ್ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣವೊಂದು ದೊರೆಯಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಇತರರ ಬಗ್ಗೆ ದಯೆ- ಕಾರುಣ್ಯ, ಅಂತಃಕರಣದಿಂದ ನಡೆದುಕೊಳ್ಳಲು ಆದ್ಯತೆಯನ್ನು ನೀಡಿ. ಉದ್ಯೋಗ ಸ್ಥಳದಲ್ಲಿ ಇನ್ನೊಬ್ಬರು ಆ ಹುದ್ದೆಯಲ್ಲಿ ಮುಂದುವರಿಯಬೇಕಾ ಅಥವಾ ಕೆಲಸದಿಂದ ತೆಗೆಯಬೇಕಾ ಎಂಬ ಪ್ರಶ್ನೆಯನ್ನು ನಿಮ್ಮನ್ನು ಕೇಳಿ, ಆ ನಿರ್ಧಾರವನ್ನು ನಿಮಗೇ ಬಿಟ್ಟಲ್ಲಿ ತುಂಬ ಎಚ್ಚರಿಕೆಯಿಂದ ತೀರ್ಮಾನವನ್ನು ಮಾಡಿ. ದೀರ್ಘಾವಧಿಗೆ ಪ್ರಯೋಜನ ಆಗುವಂಥ ಕೆಲಸಗಳಿಗೆ ಹೆಚ್ಚು ಸಮಯವನ್ನು ಮೀಸಲಿಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಅಧ್ಯಾತ್ಮ ಜೀವನದಲ್ಲಿ ತುಂಬ ದೊಡ್ಡ ಬದಲಾವಣೆ ತರುವಂಥ ಘಟನೆ ಈ ದಿನ ನಡೆಯಲಿದೆ. ಅದು ಅಂಥ ವ್ಯಕ್ತಿಯೊಬ್ಬರ ಭೇಟಿ ಇರಬಹುದು, ಅಂಥದ್ದೊಂದು ಪ್ರವಚನ ಕೇಳಿಸಿಕೊಳ್ಳುವಂಥ ಅವಕಾಶ ಇರಬಹುದು, ಅಥವಾ ನಿಮ್ಮದೇ ಜೀವನದಲ್ಲಿನ ಘಟನೆಯಿಂದಾಗಿ ಮಾರ್ಪಾಡು ಆಗಲಿದೆ. ಚಿನ್ನ- ಬೆಳ್ಳಿ ಇಂಥ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡಿರುವಂಥವರು ಸ್ವಲ್ಪ ಮೊತ್ತವನ್ನಾದರೂ ಹಿಂಪಡೆಯುವುದಕ್ಕೆ ತೀರ್ಮಾನ ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ




