Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 9ರ ದಿನಭವಿಷ್ಯ
ಡಿಸೆಂಬರ್ 9ರ ಮಂಗಳವಾರದ ದಿನ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ದಿನಭವಿಷ್ಯವನ್ನು ತಿಳಿಯಿರಿ. ವೃತ್ತಿ, ಆರ್ಥಿಕತೆ, ಸಂಬಂಧಗಳು ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಯಾವ ಗ್ರಹಗಳು ನಿಮ್ಮನ್ನು ಹೇಗೆ ಪ್ರಭಾವಿಸುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ. ನಿಮ್ಮ ಅದೃಷ್ಟ ಸಂಖ್ಯೆಗಳ ಆಧಾರದ ಮೇಲೆ ಈ ದಿನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಕಾರಿ.

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 9ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಇತರರ ಜೊತೆಗೆ ಸ್ಪರ್ಧಿಸಬೇಕಿಲ್ಲ, ಆದರೆ ನಿಮ್ಮ ಸ್ಪರ್ಧೆ ಇರುವುದು ಈ ಹಿಂದೆ ಮಾಡಿದ ತಪ್ಪುಗಳಿಂದ ಆಚೆ ಬರುವುದರಲ್ಲಿ, ನಿರ್ಧಾರ ಮಾಡಿದಂತೆಯೇ ಬದುಕುವುದರಲ್ಲಿ ಎಂಬ ವಿಷಯ ಈ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಆಗಿದ್ದರೂ ಹೆಚ್ಚಿನ ಶ್ರಮವನ್ನು ಹಾಕಲೇಬೇಕಾಗುತ್ತದೆ. ದಂಪತಿಗಳು- ಪ್ರೀತಿ, ಪ್ರೇಮದಲ್ಲಿ ಇರುವವರು ನಿಮ್ಮ ಒಳಗಿನ ಪ್ರೀತಿಯನ್ನು ಸಾಬೀತು ಮಾಡುವುದಕ್ಕೆ ಅಂತಲೇ ಹೆಚ್ಚು ಸಮಯವನ್ನು ಮೀಸಲಿಡುತ್ತೀರಿ. ನೆನಪಿನಲ್ಲಿಡಿ, ಹೇಳದ ಮಾತುಗಳು ಸಹ ಅನುಭವಕ್ಕೆ ಬರುವಂಥ ನಿಮ್ಮ ವರ್ತನೆಯೇ ಎಲ್ಲವನ್ನೂ ದಾಟಿಸುತ್ತದೆ. ಬೇರೆಯವರು ಮಾಡಿದ ತಪ್ಪನ್ನು ದೊಡ್ಡದು ಮಾಡುವುದಕ್ಕೆ ಹೋಗಬೇಡಿ. ಇತರರ ಮಿತಿಯನ್ನು ಅರಿತು, ಕ್ಷಮಿಸಿ- ನಿಮ್ಮಿಂದ ಸಾಧ್ಯವಾಗುವ ಸಹಾಯ ಮಾಡುವುದಕ್ಕೆ ಪ್ರಯತ್ನಿಸಿ. ದುಡ್ಡಿನ ವಿಚಾರದಲ್ಲಿ ಪಟ್ಟು ಹಿಡಿದು ಕೂರದೆ, ಹೊಂದಾಣಿಕೆ ಮಾಡಿಕೊಂಡು ಮುಂದುವರಿದಲ್ಲಿ ಮುಂದೆ ಅನುಕೂಲವಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಉದ್ಯಮಿಗಳಿಗೆ ಹಾಗೂ ಉದ್ಯೋಗಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮ ಯೋಜನೆಗಳು ಹಾಗೂ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಏನು ಮಾಡಬೇಕು ಎಂಬುದನ್ನು ಹೇಳುವ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ. ನಿಮ್ಮ ಜಡ್ಜ್ ಮೆಂಟ್ ಬಹಳ ಚೆನ್ನಾಗಿರುತ್ತದೆ. ಆದ್ದರಿಂದ ಅನಿಸಿದ್ದನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಷೇರು ಮಾರುಕಟ್ಟೆ- ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಸಣ್ಣ ಹೂಡಿಕೆ ಒಳ್ಳೆ ಲಾಭ ತಂದುಕೊಡಲಿದೆ. ಮನೆಯಲ್ಲಿನ ವಾತಾವರಣ ಪ್ರಶಾಂತವಾಗಿ ಇರುವಂತೆ ನೋಡಿಕೊಳ್ಳಿ. ನೀವು ಪ್ರೀತಿಸುವವರು ಏನು ಹೇಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೋ ಅದನ್ನು ಅರ್ಥ ಮಾಡಿಕೊಂಡಲ್ಲಿ ಸಂಬಂಧ ಗಾಢವಾಗುತ್ತದೆ- ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸೂರ್ಯನ ಬೆಳಕಲ್ಲಿ ಸ್ವಲ್ಪವಾದರೂ ಸಮಯವನ್ನು ಕಳೆಯಿರಿ. ಉದ್ಯೋಗ ಸ್ಥಳದಲ್ಲಿ ತೋರಿದ ಬುದ್ಧಿವಂತಿಕೆಗೆ ಗೌರವವನ್ನು ಪಡೆಯಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ನಿಯಂತ್ರಣದಲ್ಲಿ ಇರುವಂಥ ವಿಷಯಗಳನ್ನು ಮಾತ್ರ ಕಾಳಜಿ ಮಾಡಿ. ಕೈ ಅಳತೆ ಮೀರಿದ ವಿಚಾರಗಳ ತಲೆ ಕೆಡಿಸಿಕೊಳ್ಳಬೇಡಿ. ನೀವು ಸಮಸ್ಯೆಗಳು ಅಂತ ಏನನ್ನು ಅಂದುಕೊಂಡಿರುತ್ತೀರೋ ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂಬುದು ಗಮನಕ್ಕೆ ಬರಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ದುಡ್ಡಿನ ಖರ್ಚು ಮಾಡುವಾಗ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬ ಸ್ಪಷ್ಟತೆ ಇರಲಿ. ಇನ್ನು ಇತರರು ನಿಮಗೆ ನೀಡುವ ಗೌರವವನ್ನು ಸಾಧನೆ ಎಂದುಕೊಳ್ಳುವ ಮುನ್ನ ಅದರಿಂದ ನಿಮ್ಮ ಮೇಲೆ ಆಗುವ ಪ್ರಭಾವ ಏನು ಎಂಬುದನ್ನು ಆಲೋಚಿಸಿ. ಈ ದಿನ ಸಾಧ್ಯವಾದಷ್ಟೂ ಕೋಪವನ್ನು ಮಾಡಿಕೊಳ್ಳಬೇಡಿ ಹಾಗೂ ಅಹಂಕಾರ ನಿಮ್ಮ ತಲೆಗೆ ಏರದಂತೆ ನೋಡಿಕೊಳ್ಳಿ. ಈ ಎರಡೂ ನೋಡಿಕೊಂಡರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ದೇವತಾ ಕಾರ್ಯಗಳಿಗಾಗಿ ಸ್ನೇಹಿತರು- ಸಂಬಂಧಿಗಳ ಮನೆಗೆ ಆಹ್ವಾನ ಬರಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ದಿನ ನಿಮ್ಮ ಮಾತು ಮತ್ತು ನಿರ್ಧಾರಗಳು ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಕೆಲಸದ ಗತಿಯನ್ನೇ ಬದಲಿಸಲಿದೆ. ವ್ಯಾಪಾರ- ವ್ಯವಹಾರ ಅಂತ ಬಂದಲ್ಲಿ ಭವಿಷ್ಯವನ್ನು ಗಮನ ಇಟ್ಟುಕೊಂಡು ಜಾಣ್ಮೆಯಿಂದ ಮಾತನಾಡಿ. ಸಹೋದ್ಯೋಗಿಗಳು ಸಹ ನಿಮ್ಮ ಅಭಿಪ್ರಾಯಕ್ಕೆ ಸಮ್ಮತ ನೀಡುವ ಸಾಧ್ಯತೆಯಿದೆ. ಹಣಕಾಸಿನ ನಿರ್ಧಾರಗಳಲ್ಲಿ ಸಂಯಮದಿಂದ ವರ್ತಿಸಿದರೆ ಲಾಭ ತಂದು ಕೊಡಲಿದೆ. ಕುಟುಂಬ ಸದಸ್ಯರಿಗೆ ನೀವು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ಇರುವಂಥ ಕಾಳಜಿಯನ್ನು ವ್ಯಕ್ತಿಪಡಿಸುವಾಗ ಅದು ಪೊಸೆಸಿವ್ ನೆಸ್ ಅನಿಸದಂತೆ ನೋಡಿಕೊಳ್ಳಿ. ಬಾಯಿರುಚಿಗೆ ಬಿದ್ದು, ಅಧಿಕ ಪ್ರಮಾಣದ ಆಹಾರ ಸೇವನೆ ಮಾಡುವುದಕ್ಕೆ ಹೋಗಬೇಡಿ. ದೇಹದ ತೂಕ ಮತ್ತು ನಿಮ್ಮ ಆರೋಗ್ಯ ಪರಿಸ್ಥಿತಿಯ ಕಡೆಗೂ ಲಕ್ಷ್ಯವನ್ನು ನೀಡಿ. ಅಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಮೌನ- ಧ್ಯಾನಕ್ಕೆ ಒತ್ತು ನೀಡಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಹಾಗೂ ಒಳಿತು ಆಗುವಂಥ ಹೊಸ ವಿಚಾರಗಳನ್ನು ಹೊಸ ಜನರು ತೆಗೆದುಕೊಂಡು ಬರಲಿದ್ದಾರೆ. ಇಷ್ಟು ಸಮಯ ನಿಮ್ಮ ಮಾತನ್ನು ಯಾರು ಕೇಳಿಸಿಕೊಳ್ಳುತ್ತಾರೆ ಅಂತೇನಾದರೂ ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಇಂಥ ಸಂದರ್ಭದಲ್ಲಿ ನೀವು ಮಾತನಾಡುವ ವಿಷಯ ಹಾಗೂ ಬಳಸುವ ಪದಗಳ ಕಡೆಗೆ ಗಮನವನ್ನು ನೀಡಿ. ಕೆಲಸಗಳು ನಿಧಾನ ಗತಿಯಲ್ಲಿಯೇ ಸಾಗಿದರೂ ಫಲಗಳು ಉತ್ತಮ ರೀತಿಯಲ್ಲಿ ದೊರೆಯಲಿದೆ. ಆರ್ಥಿಕ ವಿಷಯಗಳಲ್ಲಿ ನಿಮ್ಮ ಬುದ್ಧಿವಂತಿಕೆ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಅನುಕೂಲಕ್ಕೆ- ಲಾಭಕ್ಕೆ ಕಾರಣ ಆಗಲಿವೆ. ನಿಮ್ಮ ಸಹನೆ ಹಾಗೂ ಎಷ್ಟು ಮಾತನಾಡಬೇಕೋ ಅಷ್ಟನ್ನು ಮಾತ್ರ ಮಾತನಾಡುವ ರೀತಿಯಿಂದಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಎಲ್ಲರ ಬಗ್ಗೆ ನೀವು ತೋರುವ ಗೌರವ ಹಾಗೂ ತೆಗೆದುಕೊಳ್ಳುವ ಕಾಳಜಿಯಿಂದ ಇತರರಿಗೆ ನಿಮ್ಮ ಮೇಲೆ ಪ್ರೀತಿ- ಗೌರವ ಹೆಚ್ಚಿಸುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಣ್ಣ- ಸಣ್ಣ ಸಂಗತಿಗಳಿಗೂ ನೀವು ನೀಡುವ ಪ್ರಾಮುಖ್ಯ, ಕೆಲಸಗಳಲ್ಲಿ ಕಾಣುವ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಶಿಸ್ತು ಹಾಗೂ ಯಾವುದೇ ವಿಚಾರದಲ್ಲಿಯೂ ಇರುವ ಸ್ಪಷ್ಟತೆಗೆ ಫಲಿತಾಂಶಗಳು ನಿದರ್ಶನ ಆಗುತ್ತವೆ. ಇತರರಿಗೆ ಚಿಕ್ಕದು ಎನಿಸಿದಂಥ ಹಣಕಾಸಿನ ವಿಚಾರದ ನಿರ್ಧಾರವೊಂದು ದೊಡ್ಡ ಬದಲಾವಣೆಯನ್ನೇ ತರಲಿದೆ. ಭವಿಷ್ಯಕ್ಕೂ ಸಹಾಯಕ ಆಗಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆಗೆ ನೀವು ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಇದರಿಂದಾಗಿಯೇ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. ತಲೆ ಸುತ್ತುವುದು- ಕಣ್ಣು ಮಂಜು ಬಂದಂತಾಗುವುದು ಈ ರೀತಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಬಿ.ಪಿ. ಇರುವವರು ಮಾತ್ರೆ- ಔಷಧ ತೆಗೆದುಕೊಂಡಿದ್ದೀರಾ ಎಂಬುದು ಖಾತ್ರಿ ಮಾಡಿಕೊಳ್ಳಿ. ಅಗತ್ಯ ಬಿದ್ದಲ್ಲಿ ವೈದ್ಯರ ಬಳಿಗೆ ತೆರಳಿ. ವಿದ್ಯಾರ್ಥಿಗಳಿಗೆ ಈ ದಿನ ಅಲೆದಾಟ ಜಾಸ್ತಿ ಇರುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮಲ್ಲಿ ಏನೋ ಬದಲಾವಣೆ ಮಾಡಿಕೊಳ್ಳಬೇಕಿದೆ ಅಂತೇನಾದರೂ ಅನಿಸಿದಲ್ಲಿ ಮೊದಲಿಗೆ ನಿಮ್ಮ ದಿನಚರಿಯಲ್ಲಿ ಏನೇನು ಬದಲಾಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಿ. ಸಣ್ಣ- ಪುಟ್ಟ ಹೊಸ ಅಭ್ಯಾಸಗಳು ಸಹ ಅತಿ ದೊಡ್ಡ ಜಾದೂ ಮಾಡಿಬಿಡುತ್ತವೆ. ನಿಮ್ಮ ಮನಸ್ಸಿನಲ್ಲಿ ಇರುವಂಥ ನೋವನ್ನು ಮಾತಿನಲ್ಲಿ ತೋರಿಸಿಕೊಳ್ಳಬೇಡಿ. ಅದರಿಂದ ಸಮಸ್ಯೆ ಮತ್ತೂ ಹೆಚ್ಚಾಗುತ್ತದೆ. ಬೇರೆಯವರ ನಿರ್ಧಾರದ ಕಾರಣಗಳಿಗೆ ನಿಮ್ಮ ಸಂತೋಷ ಹಾಳಾಗಬಾರದು. ಆದ್ದರಿಂದ ಸಾಧ್ಯವಿಲ್ಲ ಎಂಬಂಥ ಕೆಲಸ- ಕಾರ್ಯಗಳನ್ನು ನೇರವಾಗಿ ಹೇಳಿ. ದುಡ್ಡಿನ ವಿಚಾರದಲ್ಲಿ ಪ್ಲಾನಿಂಗ್ ಮಾಡಿರುವ ರೀತಿಯಲ್ಲಿಯೇ ಮುಂದಕ್ಕೆ ಹೆಜ್ಜೆಯನ್ನು ಇಡಿ. ನೀವು ಕಠಿಣವಾದ ವಿಷಯಗಳನ್ನೇ ಹೇಳುವಾಗಲೂ ಬಳಕೆ ಮಾಡುವ ಪದ ಹಾಗೂ ಧ್ವನಿಯ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ದಿನ ನೀವು ಮಾಡುವ ಕೆಲಸದಲ್ಲಿ ಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಆದ್ಯತೆಯನ್ನು ನೀಡಿ. ಇದರಿಂದಾಗಿ ನೀವು ಇಡುವಂಥ ಚಿಕ್ಕ ಹೆಜ್ಜೆಗಳು ಸಹ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು. ಬೀರುತ್ತವೆ. ಉದ್ಯೋಗಸ್ಥರು ತಮ್ಮ ಜತೆಗೆ ಕೆಲಸ ಮಾಡುವವರೊಂದಿಗೆ ಸರಿಯಾದ ಸಮನ್ವಯ ಸಾಧಿಸಿದಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಕಾಣಬಹುದು. ನೀವು ನಿರೀಕ್ಷೆ ಮಾಡುತ್ತಿರುವುದು ಏನು ಎಂಬ ಬಗ್ಗೆ ಸ್ಪಷ್ಟವಾದ ಪದಗಳಲ್ಲಿ ವಿವರಿಸಿ. ಇನ್ನು ಕೌಟುಂಬಿಕವಾಗಿ ಸರಳವಾಗಿ ಬಗೆಹರಿಸಬಹುದಾದ ಸಮಸ್ಯೆಯನ್ನು ನೀವಾಗಿಯೇ ಕಗ್ಗಂಟು ಮಾಡಿಬಿಡುವ ಸಾಧ್ಯತೆಯಿದೆ. ಆದ್ದರಿಂದ ತಾಳ್ಮೆಯಿಂದ ಎದುರಿಗೆ ಇರುವವರ ಮಾತುಗಳನ್ನು ಕೇಳಿಸಿಕೊಳ್ಳುವುದು ಪರಿಹಾರ ಕಂಡುಕೊಳ್ಳಲು ಮೊದಲ ಹಂತವಾಗುತ್ತದೆ. ಎಷ್ಟೇ ಕೆಲಸ- ಕಾರ್ಯ ಎಂದು ಬಿಡುವಿಲ್ಲದಂಥ ಸ್ಥಿತಿ ಇದ್ದರೂ ಊಟ- ತಿಂಡಿ- ನಿದ್ದೆ ಇದರಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ಸಂಗತಿ ಎಂಬುದು ಗಮನದಲ್ಲಿ ಇರಲಿ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಮಾನಸಿಕ ಶಾಂತಿಗೆ ಹೊರಗಿನ ಒತ್ತಡ- ಬೆಳವಣಿಗೆ ಕಾರಣ ಎಂಬ ಆಕ್ಷೇಪದಿಂದ ಹೊರಗೆ ಬರುವ ದಿನ ಇದಾಗಿರುತ್ತದೆ. ಪ್ರತಿ ಸಣ್ಣ ವಿಚಾರವನ್ನು ದೊಡ್ಡ ಸಮಸ್ಯೆಯಾಗಿ ನೋಡುವ ಮನೋಭಾವದಿಂದ ಹೊರಗೆ ಬರಲಿದ್ದೀರಿ. ನಿಮ್ಮ ಹಲವು ಸಮಸ್ಯೆಗಳ ಮೂಲ ಇರುವುದು ಸಿಟ್ಟಿನಲ್ಲಿ. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಸಮಯದಲಿ ಮಾತೇ ಆಡದಂತೆ ಸುಮ್ಮನಾಗಿಬಿಟ್ಟರೆ ಹೇಗೆ? ಕಾಲಿನ ನೋವು ಕಾಡಲಿದೆ. ಒಂದು ವೇಳೆ ಈಗಾಗಲೇ ಆ ಸಮಸ್ಯೆಯಿಂದ ಬಳಲುತ್ತಾ ಇದ್ದೀರಿ ಅಂತಾದಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನ ನೀಡಿ. ನಿಮಗೆ ಹೊಸದಾದ ಕ್ಷೇತ್ರದಲ್ಲಿ ಹಣ ಹೂಡಿಕೆ ಗೋಜಿಗೆ ಹೋಗಬೇಡಿ. ಇನ್ನು ನಿಮಗೆ ಗೊತ್ತಿರುವಂಥದ್ದೇ ಆಗಿದ್ದರೂ ಅದರಲ್ಲಿ ಏನಾದರೂ ನಿಯಮ ಬದಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ಕಲಿಕೆ ಹಾಗೂ ಪರಿಣತರಿಂದ ಮಾರ್ಗದರ್ಶನ ಪಡೆದುಕೊಳ್ಳುವುದಕ್ಕೆ ಹಿಂಜರಿಕೆ ಬೇಡ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




