Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?

Guru Transition 2021: ಮಕರ ರಾಶಿಯಲ್ಲಿ ಗುರು ಸಂಚರಿಸುವಾಗ ಗೋಚಾರ ರೀತಿಯಾಗಿ ಉತ್ತಮ ಸ್ಥಾನವೇ ಆದರೂ ಒಳ್ಳೆ ಫಲ ನೀಡುವುದಿಲ್ಲ. ಆದರೆ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆ ಹಲವು ರಾಶಿಯವರು ಅತ್ಯುತ್ತಮ ಫಲಗಳನ್ನು ನಿರೀಕ್ಷೆ ಮಾಡಬಹುದು.

  • TV9 Web Team
  • Published On - 6:40 AM, 26 Mar 2021
Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?
ಗುರು ಗ್ರಹ

2021ರ ಏಪ್ರಿಲ್ 6ನೇ ತಾರೀಕಿನಂದು ಗುರು ಗ್ರಹವು ಮಕರದಿಂದ ಕುಂಭ ರಾಶಿಗೆ ಪ್ರವೇಶ ಆಗುತ್ತಿದೆ. ಅಲ್ಲಿಂದ ಮುಂದಿನ ಏಪ್ರಿಲ್ 13, 2022ರ ತನಕ ಕುಂಭ ರಾಶಿಯಲ್ಲಿ ಸಂಚರಿಸಲಿದ್ದು, ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 21ರ ತನಕ ಮತ್ತೆ ಮಕರ ರಾಶಿಯಲ್ಲಿ ಸಂಚರಿಸಲಿದೆ. ಈ ಅವಧಿಯನ್ನು ಹೊರತುಪಡಿಸಿದರೆ ಮುಂದಿನ ಒಂದು ವರ್ಷದ ಕಾಲ ಯಾವ ರಾಶಿಯವರ ಮೇಲೆ ಗುರು ಗ್ರಹ ಯಾವ ಪರಿಣಾಮ ಬೀರಲಿದೆ ಎಂಬ ಮಾಹಿತಿಯನ್ನು ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9ಕನ್ನಡ ಡಿಜಿಟಲ್ ಓದುಗರಿಗಾಗಿ ಹಂಚಿಕೊಂಡಿದ್ದಾರೆ. ಮಕರ ರಾಶಿಯಲ್ಲಿ ಗುರು ಸಂಚರಿಸುವಾಗ ಗೋಚಾರ ರೀತಿಯಾಗಿ ಉತ್ತಮ ಸ್ಥಾನವೇ ಆದರೂ ಒಳ್ಳೆ ಫಲ ನೀಡುವುದಿಲ್ಲ. ಆದರೆ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆ ಹಲವು ರಾಶಿಯವರು ಅತ್ಯುತ್ತಮ ಫಲಗಳನ್ನು ನಿರೀಕ್ಷೆ ಮಾಡಬಹುದು.

ವಿವಾಹ ಅಪೇಕ್ಷಿತರು, ಸಂತಾನ ಅಪೇಕ್ಷಿತರು, ಉದ್ಯೋಗಾಕಾಂಕ್ಷಿಗಳು, ವಿದೇಶ ಪ್ರಯಾಣಕ್ಕಾಗಿ ಈಗಾಗಲೇ ಪ್ರಯತ್ನಿಸಿರುವವರು, ಉನ್ನತ ವ್ಯಾಸಂಗ ಇತ್ಯಾದಿ ಶುಭ ವಿಚಾರಗಳಿಗೆ ಗುರುವಿನ ಅನುಗ್ರಹ ಬಹಳ ಮುಖ್ಯ. ಇನ್ನು ಉಪನಯನಾದಿ ಶುಭ ಕಾರ್ಯಕ್ರಮಗಳಿಗೆ ಗುರು ಬಲವನ್ನು ಕಾಯುತ್ತಿದ್ದಲ್ಲಿ ಮೇಷ, ಮಿಥುನ, ಸಿಂಹ, ತುಲಾ, ಮಕರ ಈ ಐದು ರಾಶಿಗಳಿಗೆ ಗುರುಬಲ ಬರುತ್ತದೆ. ಈ ಎಲ್ಲ ದೃಷ್ಟಿಯಿಂದ ಗುರುವಿನ ಈ ಸಂಚಾರದಿಂದ ಮೇಷದಿಂದ ಮೀನದ ತನಕ ಯಾವ ರಾಶಿಗೆ ಏನು ಫಲ ಎಂಬುದರ ವಿವರವನ್ನು ತಿಳಿಯಲು ಮುಂದೆ ಓದಿ.

ಮೇಷ
ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಾದ ಲಾಭ ಸ್ಥಾನಕ್ಕೆ ಗುರುವಿನ ಪ್ರವೇಶ ಆಗುತ್ತದೆ. ಇದರಿಂದ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ವಿದೇಶ ಪ್ರಯಾಣದ ಯೋಗ ಬರಲಿದೆ. ವಿವಾಹಕ್ಕಾಗಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ನಿಮ್ಮ ಈಗಿನ ಆದಾಯದ ಜತೆಗೆ ಇತರ ಮೂಲಗಳು ಸೃಷ್ಟಿಯಾಗಲಿವೆ. ನಾನಾ ಬಗೆಯಲ್ಲಿ ಲಾಭದ ಫಲಗಳನ್ನು ಕಾಣಲಿದ್ದು, ವ್ಯಾಪಾರ- ವ್ಯವಹಾರದಲ್ಲಿ ಆದಾಯ ಹೆಚ್ಚಳ ಆಗಲಿದೆ. ಸಂತಾನ ಅಪೇಕ್ಷಿತರು ಶುಭ ಸುದ್ದಿ ನಿರೀಕ್ಷೆ ಮಾಡಬಹುದು. ಭೂಮಿ ಲಾಭ- ಅನಿರೀಕ್ಷಿತ ಧನಾಗಮ ಆಗಲಿದೆ.

ವೃಷಭ
ನಿಮ್ಮ ರಾಶಿಯಿಂದ ಹತ್ತನೇ ಮನೆಯಾದ ಕರ್ಮ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಅಲ್ಲಿಂದ ಐದು, ಏಳು ಹಾಗೂ ಒಂಬತ್ತನೇ ಮನೆ ಮೇಲೆ ಗುರು ಗ್ರಹದ ದೃಷ್ಟಿ ಇರುತ್ತದೆ. ಈ ಅವಧಿಯಲ್ಲಿ ವೃಷಭ ರಾಶಿಯವರ ತಾಯಂದಿರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಬಡ್ತಿಯನ್ನು ನಿರೀಕ್ಷೆ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಹಾಗಂತ ಉದ್ಯೋಗ ಬದಲಾವಣೆ ಬಹಳ ಸಲೀಸಾಗಿ ಆಗಿಬಿಡುವುದಲ್ಲ. ಕೊನೆ ಕ್ಷಣದ ತನಕ ಯಾವುದೇ ಖಾತ್ರಿ ಇಲ್ಲದಂತೆ ಇದ್ದು, ದಿಢೀರನೆ ಕೆಲಸ ಆಗುತ್ತದೆ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ.

ಮಿಥುನ
ಅಷ್ಟಮ ಶನಿ ಹಾಗೂ ಅಷ್ಟಮ ಗುರು ಸಂಚಾರದಿಂದ ಹೈರಾಣಾಗಿರುವ ಮಿಥುನ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ಗುರು ಪ್ರವೇಶ ಮಾಡುತ್ತಿದ್ದಂತೆ ಸ್ವಲ್ಪ ಮಟ್ಟಿಗೆ ಉಸಿರಾಡುವಷ್ಟು ನೆಮ್ಮದಿ ಸಿಗುತ್ತದೆ. ಹಿರಿಯರಿಂದ ಮನಸಿಗೆ ಸ್ವಲ್ಪ ಮಟ್ಟಿಗೆ ಬೇಸರ ಆಗಬಹುದು ಎಂಬುದು ಬಿಟ್ಟರೆ ಕೆಲಸ- ಕಾರ್ಯಗಳಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಮಾನಸಿಕ ಕಿರಿಕಿರಿ ದೂರವಾಗಿ, ಆತ್ಮವಿಶ್ವಾಸ ಮೂಡಲಿದೆ. ಆದರೆ ನೆನಪಿನಲ್ಲಿಡಿ, ಯಾವುದೇ ಕಾರಣಕ್ಕೂ ಹೊಸ ವ್ಯಾಪಾರಕ್ಕೆ ಹಣ ಹೂಡಿಕೆ ಮಾಡಬಾರದು.

ಕರ್ಕಾಟಕ
ನಿಮಗೆ ಎಂಟನೇ ಮನೆಯಲ್ಲಿ ಗುರು ಪ್ರವೇಶ ಮಾಡುವುದರಿಂದ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು. ಪಿತ್ರಾರ್ಜಿತ ಆಸ್ತಿ ವಿಚಾರಗಳು ಕೋರ್ಟ್- ಕಟಕಟೆ ಮೆಟ್ಟಿಲೇರದಂತೆ ನೋಡಿಕೊಳ್ಳಿ. ನಿಮಗೆ ಸಂಬಂಧಪಡದ ವಿಚಾರದಲ್ಲಿ ವಿನಾಕಾರಣ ಮೂಗು ತೂರಿಸಬೇಡಿ. ಇನ್ನು ಕರ್ಕಾಟಕ ರಾಶಿಯ ಮಹಿಳೆಯರು ಆಸ್ಪತ್ರೆಗಳಿಗೆ ದಾಖಲಾಗುವ ಸನ್ನಿವೇಶ ನಿರ್ಮಾಣ ಆಗಲಿದೆ. ಇನ್ನು ಈ ರಾಶಿಯ ಸ್ತ್ರೀಯರಿದ್ದಲ್ಲಿ ಇವರ ಪತಿಯ ಅನಾರೋಗ್ಯ ಸಮಸ್ಯೆಗಳು ದೂರಾಗಲಿವೆ.

ಸಿಂಹ
ಗುರುವಿನ ಏಳನೇ ಮನೆ ಸಂಚಾರ ಶುರುವಾಗುವುದರೊಂದಿಗೆ ತುಂಬ ಅನುಕೂಲಗಳನ್ನು ಅನುಭವಿಸುವವರು ನೀವು. ವಿವಾಹಾದಿ ಶುಭ ಕಾರ್ಯಗಳು ನಡೆಯಲಿವೆ. ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿವೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಇದೆ. ಇನ್ನು ಹೊಸ ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕೆ, ಭೂಮಿ ಖರೀದಿಗೆ, ವಾಹನ ಖರೀದಿಗೆ ಎಲ್ಲದಕ್ಕೂ ಅನುಕೂಲಕರವಾದ ಸನ್ನಿವೇಶ ಇದು. ಈ ಸಮಯದಲ್ಲಿ ಒಳ್ಳೆ ಕಾರ್ಯಗಳನ್ನೆಲ್ಲ ಅನುಷ್ಠಾನಕ್ಕೆ ತನ್ನಿ. ನಾಳೆಗೆ ಮಾಡಿದರಾಯಿತು ಎಂಬ ಧೋರಣೆ ಸರಿಯಲ್ಲ.

ಕನ್ಯಾ
ನಿಮ್ಮ ರಾಶಿಯವರಿಗೆ ಮೊದಲೇ ಪಂಚಮ ಶನಿಯ ಪ್ರಭಾವ ಇತ್ತು. ಈಗ ಆರನೇ ಮನೆಗೆ ಗುರುವಿನ ಪ್ರವೇಶ ಆಗುತ್ತದೆ. ಆದ್ದರಿಂದ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ನಿಮಗೆ ಆಗದವರು ಚಾಡಿ ಹೇಳಿ, ಕುಟುಂಬದಲ್ಲಿ ನೆಮ್ಮದಿ ಹಾಳು ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಇನ್ನು ವಾಹನಗಳ ದುರಸ್ತಿಗಾಗಿ ಹೆಚ್ಚಿನ ಖರ್ಚು ಬರಲಿದೆ. ವೃಥಾ ತಿರುಗಾಟದಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಕನ್ಯಾ ರಾಶಿಯವರು ಯಾವುದೇ ಕಾರಣಕ್ಕೂ ವಿದೇಶ ಪ್ರಯಾಣ ಮಾಡಬಾರದು. ಅದರಲ್ಲೂ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಉದ್ಯೋಗ ಮೊದಲಾದ ಉದ್ದೇಶಗಳಿಗೆ ತೆರಳಬೇಕು ಎಂದಿರುವವರು ಹೋಗದಿರುವುದು ಉತ್ತಮ.

ತುಲಾ
ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಗುರು ಪ್ರವೇಶ ಆಗಲಿದೆ. ಸಂತಾನ ಅಪೇಕ್ಷಿತ ದಂಪತಿಯನ್ನು ಹೊರತುಪಡಿಸಿ, ಉಳಿದವರಿಗೆ ಉತ್ತಮ ಫಲಗಳನ್ನು ಹೇಳಬಹುದು. ಏಕೆಂದರೆ ಕಾರಕೋ ಭಾವನಾಶಾಯ ಅಂತ ಸಂತಾನವನ್ನು ದಯಪಾಲಿಸುವಂಥ ಗುರು ಗ್ರಹವು ಐದನೇ ಮನೆಯಲ್ಲೇ ಸಂಚರಿಸುವುದರಿಂದ ಇದರಲ್ಲಿ ಉತ್ತಮ ಫಲ ಅಥವಾ ಅನುಗ್ರಹವನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಉದ್ಯೋಗ ಬದಲಾವಣೆ ಇವುಗಳಿಗೆ ಸಂಬಂಧಿಸಿದಂತೆ ಶುಭ ಫಲ ದೊರೆಯಲಿದೆ.

ವೃಶ್ಚಿಕ
ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಮಾಡಲಿದ್ದು, ನಿಮಗೆ ಎರಡು ಹಾಗೂ ಐದನೇ ಮನೆ ಅಧಿಪತಿಯಾದ ಗುರುವು ಉತ್ತಮ ಫಲಗಳನ್ನೇ ನೀಡಲಿದ್ದಾನೆ. ವಾಹನ ಸೌಖ್ಯ, ಉತ್ತಮ ಆಹಾರ ಸೇವನೆ, ಸೌಖ್ಯವೃದ್ಧಿ ಆಗಲಿದೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ದೈವ ಭಕ್ತಿಯನ್ನು ನೀಡಲಿದ್ದಾನೆ. ಪರಿಣಾಮಕಾರಿಯಾದ ಮಾತಿನ ಮೂಲಕ ಆಕರ್ಷಣೆಯ ಕೇಂದ್ರಬಿಂದು ಆಗಲಿದ್ದೀರಿ. ಕೋರ್ಟ್-ಕಚೇರಿ ವ್ಯಾಜ್ಯಗಳು ಅಥವಾ ಕುಟುಂಬದೊಳಗಿನ ವ್ಯಾಜ್ಯಗಳನ್ನು ಸಮಾಧಾನವಾಗಿ ಬಗೆಹರಿಸಿಕೊಳ್ಳಲಿದ್ದೀರಿ.

ಧನುಸ್ಸು
ಧನ ಹಾಗೂ ವಾಕ್ ಮತ್ತು ಕುಟುಂಬ ಸ್ಥಾನದಲ್ಲಿ ನೀಚನಾಗಿದ್ದ ಗುರು ಗ್ರಹವು ಮುಂದಿನ ಸ್ಥಾನಕ್ಕೆ ಹೋಗುತ್ತಿರುವುದರಿಂದ ದೊಡ್ಡ ಮಟ್ಟದ ನೆಮ್ಮದಿಯನ್ನು ಕಾಣುತ್ತೀರಿ. ಸೋದರ- ಸೋದರಿಯರ ಬೆಂಬಲ ನಿಮಗೆ ದೊರೆಯಲಿದೆ. ನೀವು ಏನು ಹೇಳಿದರೂ ತಪ್ಪಾಗಿ ಅರ್ಥೈಸಲಾಗುತ್ತಿತ್ತು ಎಂದು ಇನ್ನು ಹಳಹಳಿಸುವ ಅಗತ್ಯ ಇಲ್ಲ. ಸಿಕ್ಕಾಪಟ್ಟೆ ಖರ್ಚಾಗುತ್ತಿದೆ, ಆದರೆ ಆದಾಯದ ಮೂಲವೇ ಗೊತ್ತಾಗುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದ ನಿಮಗೆ ಈ ಸಮಸ್ಯೆಯಿಂದ ಹೊರಬರುವುದಕ್ಕೆ ದಾರಿ ಗೋಚರ ಆಗುತ್ತದೆ.

ಮಕರ
ಸಾಡೇಸಾತ್ ಶನಿ ಹಾಗೂ ಜನ್ಮ ಗುರುವಿನ ಪ್ರಭಾವಕ್ಕೆ ಸಿಲುಕಿ, ಹೈರಾಣಾಗಿದ್ದ ಮಕರ ರಾಶಿಯವರಿಗೆ ಎರಡನೇ ಮನೆಯ ಗುರುವು ಆರ್ಥಿಕವಾಗಿ ಬಲ ತುಂಬುತ್ತಾನೆ. ಕುಟುಂಬದಲ್ಲಿ ನೆಮ್ಮದಿ ಕಾಣಿಸಿಕೊಳ್ಳುತ್ತದೆ. ಆದಾಯ ಮೂಲದಲ್ಲಿ ಹೆಚ್ಚಳ ಕಾಣಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ಬಂದ ಹಣದಲ್ಲಿ ನೀವು ಅದೆಷ್ಟು ಉಳಿಸುತ್ತೀರಿ ಎಂಬುದನ್ನು ಜಾತಕ ಪರಾಮರ್ಶೆ ನಂತರವೇ ತಿಳಿದುಕೊಳ್ಳುವುದಕ್ಕೆ ಸಾಧ್ಯ. ಇನ್ನು ಒಂದು ವರ್ಷದಲ್ಲಿ ಒಂದಿಷ್ಟು ಹಣ ಕೂಡಿಸಿಟ್ಟುಕೊಳ್ಳಿ. ಆಲಸ್ಯ ಬಿಟ್ಟು ಕೆಲಸ- ಕಾರ್ಯಗಳನ್ನು ಚುರುಕಾಗಿ ಮಾಡಿ.

ಕುಂಭ
ನಿಮ್ಮ ಜನ್ಮ ರಾಶಿಗೇ ಗುರು ಗ್ರಹದ ಪ್ರವೇಶ ಆಗುತ್ತಿದೆ. ಒಂದು ಕಡೆ ಸಾಡೇ ಸಾತ್ ಪ್ರಭಾವ, ಮತ್ತೊಂದು ಕಡೆ ಜನ್ಮದಲ್ಲಿ ಗುರು. ನಿಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿಯೂ ಹೆಚ್ಚಿನ ನಿಗಾ ವಹಿಸಬೇಕು. ಇನ್ನು ಆರೋಗ್ಯದ ಕಾರಣಕ್ಕೆ ನಿಮ್ಮ ಮಾನಸಿಕ ನೆಮ್ಮದಿಯೂ ಹಾಳಾಗಬಹುದು. ಕಡ್ಡಾಯವಾಗಿ ಗುರು ಗ್ರಹದ ಆರಾಧನೆಯನ್ನು ಮಾಡಿ. ಅಲರ್ಜಿ ಮೊದಲಾದ ಆರೋಗ್ಯ ಸಮಸ್ಯೆಗಳು ಎದುರಾದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಅಗತ್ಯಕ್ಕೆ ಮೀರಿದ ಸಾಲ ಮಾಡಬೇಡಿ.

ಮೀನ
ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಗುರು ಗ್ರಹದ ಪ್ರವೇಶ ಆಗುತ್ತಿದ್ದಂತೆ ವಿಪರೀತ ಒಂಟಿತನ ನಿಮ್ಮನ್ನು ಕಾಡಲಿದೆ. ನನ್ನ ಪಾಲಿಗೆ ಯಾರೂ ಇಲ್ಲ ಎಂಬ ಭಾವ ನಿಮ್ಮನ್ನು ಖಿನ್ನತೆಗೆ ದೂಡುತ್ತದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಜನರ ಮಧ್ಯೆ ಬೆರೆಯಿರಿ. ಖರ್ಚಿನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಒಳಿತಿಗೆ ಯಾರಾದರೂ ಮಾತು ಹೇಳಿದರೆ ಅದನ್ನು ಗುರುತಿಸಿ, ಅನುಸರಿಸಿ. ಇನ್ನು ಗುರು ಗ್ರಹದ ಅನುಗ್ರಹಕ್ಕಾಗಿ ಹಳದಿ ಬಟ್ಟೆಯಲ್ಲಿ ಕಡಲೇಕಾಳನ್ನು ಗಂಟು ಕಟ್ಟಿ, ವೀಳ್ಯದೆಲೆ- ದಕ್ಷಿಣೆ ಸಹಿತ ದಾನ ಮಾಡಿ.

ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ: 63613 35497.