ಏಪ್ರಿಲ್ 22, 2023ರ ಶನಿವಾರದಂದು ಗುರು ಗ್ರಹ ತನ್ನ ಸ್ವಕ್ಷೇತ್ರವಾದ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತದೆ. ಮೇ 1, 2024ರ ತನಕ ಇದೇ ರಾಶಿ (Horoscope) ಯಲ್ಲಿ ಗುರು ಸಂಚರಿಸುತ್ತದೆ. ಯಾವ್ಯಾವ ರಾಶಿಗೆ ಗುರು ಎರಡು, ಐದು, ಏಳು, ಒಂಬತ್ತು ಹಾಗೂ ಹನ್ನೊಂದನೇ ಮನೆಯಲ್ಲಿ ಸಂಚಾರ ಮಾಡುತ್ತದೋ ಅಂಥವರಿಗೆ ಗುರು ಬಲ ಇದೆ ಎಂದು ಅರ್ಥ. ವಿವಾಹ, ಉಪನಯನ, ಸಂತಾನ, ವಿದೇಶ ಪ್ರವಾಸ, ವಾಹನ ಸೌಖ್ಯ ಇತ್ಯಾದಿಗಳಿಗೆ ಗುರು ಬಲವನ್ನು ಗಮನಿಸಲಾಗುತ್ತದೆ. ಈಗಿನ ಈ ಗ್ರಹ ಬದಲಾವಣೆಯೊಂದಿಗೆ ಮೇಷಾದಿ ಹನ್ನೆರಡು ರಾಶಿಗಳ ಮೇಲೆ ಏನು ಪರಿಣಾಮ ಆಗುತ್ತದೆ ಅಂತ ನೋಡೋಣ.
ಮೇಷ: ಜನ್ಮ ಗುರು ನರೋ ದುಃಖ ಎಂಬ ಮಾತಿದೆ. ನಿಮ್ಮ ಜನ್ಮ ರಾಶಿಗೆ ಗುರು ಗ್ರಹದ ಪ್ರವೇಶ ಆಗುವುದರಿಂದ ನಾನಾ ಬಗೆಯಲ್ಲಿ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಇಷ್ಟು ಸಮಯ ನಿಮ್ಮ ವ್ಯಯ ಸ್ಥಾನದಲ್ಲಿ ಗುರು ಗ್ರಹ ಇತ್ತು. ಈಗ ನಿಮ್ಮ ಜನ್ಮ ರಾಶಿ ಅಥವಾ ಒಂದನೇ ಮನೆಯಲ್ಲಿ ಸಂಚರಿಸುವುದರಿಂದ ಯಾವ್ಯಾವ ರೀತಿಯಲ್ಲಿ ಸಂಕಟಗಳು ಎದುರಾಗುತ್ತವೆ ಅಂತ ನೋಡುವುದಾದರೆ, ಶಾರ್ಟ್ ಸರ್ಕೀಟ್ ಆಗಿ ಭಾರೀ ನಷ್ಟ ಆಗಬಹುದು, ಅಗ್ನಿ ಅವಘಡಗಳು ಸಂಭವಿಸಬಹುದು. ಬಹಳ ಆಪ್ತರ ಜತೆಗೆ ಮನಸ್ತಾಪಗಳು ಆಗುತ್ತದೆ. ಮುಖ್ಯವಾಗಿ ಭೂ ವ್ಯಾಜ್ಯಗಳು ಎದುರಾಗುತ್ತವೆ. ನಿಮಗೇನೋ ಕಷ್ಟ ಅಂತಲೋ ಅಥವಾ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಬೇಕೋ ಅಂತಲೋ ಭೂ ಮಾರಾಟಕ್ಕೆ ಪ್ರಯತ್ನಿಸಿದಲ್ಲಿ ಅದರಲ್ಲಿ ನಾನಾ ಎಡರು ತೊಡರುಗಳನ್ನು ಅನುಭವಿಸಬೇಕಾಗುತ್ತದೆ.
ವೃಷಭ: ನಿಮ್ಮ ರಾಶಿಗೆ ಹನ್ನೆರಡನೇ ಮನೆ, ಅಂದರೆ ವ್ಯಯ ಸ್ಥಾನದಲ್ಲಿ ಗುರು ಸಂಚಾರ ಆಗಲಿದೆ. ಮನೆಯನ್ನು ಕಟ್ಟಿಸಿಯಾಗಿದೆ, ಇಂಟಿರೀಯರ್ ಡೆಕೊರೇಷನ್ ಮಾಡಿಸಬೇಕು ಅಂತಿದ್ದೀನಿ ಎನ್ನುವವರು, ಮನೆಯ ನವೀಕರಣ, ದುರಸ್ತಿ ಮಾಡಬೇಕು ಎಂದಿರುವವರು, ಇನ್ನು ಸೌಂದರ್ಯ ವರ್ಧಕ ಚಿಕಿತ್ಸೆಗಳನ್ನು ಪಡೆಯಬೇಕು ಎಂದಿರುವವರು, ತೂಕ ಕಡಿಮೆ ಮಾಡಿಕೊಳ್ಳಬೇಕು, ಅದಕ್ಕೋಸ್ಕರ ಕೆಲವು ಚಿಕಿತ್ಸೆ ಪಡೆಯಬೇಕು ಎಂದಿರುವವರು ಒಂದಕ್ಕೆ ಹತ್ತು ಬಾರಿ ಆಲೋಚನೆಯನ್ನು ಮಾಡಿ. ಅದೇ ರೀತಿ ನಿಮ್ಮ ಕೆಲಸದಲ್ಲಿ ಯಾರು ರೇಟಿಂಗ್ ನೀಡಬೇಕೋ ಅಥವಾ ಬಡ್ತಿ ಇತ್ಯಾದಿಗಳನ್ನು ನಿರ್ಧಾರ ಮಾಡಬೇಕೋ ಅಂಥವರ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ನಿಮಗೆ ಈ ಬಾರಿ ಏನೇ ಕೊಟ್ಟರೂ ಕೊಡದಿದ್ದರೂ ನಷ್ಟವೇ. ಕೊಟ್ಟರೆ ಒಂದು ರೀತಿಯಲ್ಲಿ ಸಮಸ್ಯೆ, ಕೊಡದಿದ್ದರೆ ಇನ್ನೊಂದು ರೀತಿಯಲ್ಲಿ ಸಮಸ್ಯೆ ನಿಶ್ಚಿತ.
ಮಿಥುನ: ನಿಮಗೆ ಹನ್ನೊಂದು ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಲಾಭಗಳನ್ನು ಸೂಚಿಸುತ್ತದೆ. ಸ್ಥಾನ ಲಾಭ, ಧನ ಲಾಭ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳಿವೆ. ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜ ನಿಮಗೇ ಆಗಲಿದೆ. ಉದ್ಯೋಗದಲ್ಲಿ ಪದೋನ್ನತಿ ಆಗಿ, ಕಂಪನಿಯ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ಉದ್ಯಮ, ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವೈಟ್ ಗೂಡ್ಸ್ ಗಳ ಖರೀದಿ ಮಾಡುತ್ತಿರುವವರಿಗೆ ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.
ಕರ್ಕಾಟಕ: ನಿಮ್ಮ ರಾಶಿಗೆ ಹತ್ತನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ಇದು ಕರ್ಮ ಸ್ಥಾನ. ನಿಮಗೆ ಉದ್ಯೋಗ ಸ್ಥಳದಲ್ಲಿ ಹೆಸರು ಹಾಗೂ ಆಪಾದನೆ ಎರಡನ್ನೂ ಅನುಭವಿಸಬೇಕಾಗುತ್ತದೆ. ನಿಮಗೆ ಆಸ್ತರಾದವರು ದೂರವಾಗುವಂಥ ಯೋಗ ಇದೆ. ಪ್ರಯಾಣಗಳನ್ನು ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ದಾಖಲೆ- ಪತ್ರಗಳು, ಮೊಬೈಲ್- ಗ್ಯಾಜೆಟ್ ಗಳು, ಲಗ್ಗೇಜ್ ಕಳೆದುಕೊಂಡು ನಷ್ಟವನ್ನು ಅನುಭವಿಸುತ್ತೀರಿ. ಹೊಸದಾಗಿ ಕೆಲಸ ಹುಡುಕುತ್ತಿರುವವರು, ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರು ಗುರು ಗ್ರಹ ಶಾಂತಿ ಮಾಡಿಸಿಕೊಂಡು, ಆ ನಂತರ ನಿಮ್ಮ ಪ್ರಯತ್ನವನ್ನು ಮುಂದುವರಿಸಿರಿ. ಇನ್ನು ಜನ್ಮ ಜಾತಕದಲ್ಲಿ ಬೃಹಸ್ಪತಿ ಸ್ಥಾನ ಎಲ್ಲಿದೆ ಎಂಬುದನ್ನು ಜ್ಯೋತಿಷಿಗಳಲ್ಲಿ ಪರೀಕ್ಷಿಸಿಕೊಳ್ಳಿರಿ. ಯಾವುದಾದರೂ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುತ್ತಾ ಸರ್ಕಾರಿ ಕೆಲಸಗಳನ್ನು ಮಾಡುವವರು ಕೊನೆ ದಿನಾಂಕದ ತನಕ ಕಾಯದೆ ಮುಂಚಿತವಾಗಿಯೇ ಕೆಲಸ ಮುಗಿಸಿ.
ಸಿಂಹ: ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಗುರು ಸಂಚರಿಸುತ್ತದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬಲ ಇರುತ್ತದೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅದು ಬಗೆಹರಿಸಿಕೊಳ್ಳುವ ಮಾರ್ಗ ದೊರೆಯುತ್ತದೆ. ವಿದೇಶದಲ್ಲಿ ವ್ಯಾಸಂಗ, ಉದ್ಯೋಗ ಮಾಡಬೇಕು ಎಂದು ಪ್ರಯತ್ನಗಳು ಮಾಡುತ್ತಿದ್ದು, ಅಡೆತಡೆಗಳು ಎದುರಾಗಿದ್ದಲ್ಲಿ ಅವುಗಳು ನಿವಾರಣೆ ಆಗುತ್ತವೆ. ಹೌಸಿಂಗ್ ಸೊಸೈಟಿಗಳಲ್ಲಿ, ಸರ್ಕಾರದ ಮೂಲಕವಾಗಿ ಮನೆ- ಸೈಟು ವಿತರಣೆಗಾಗಿ ಅರ್ಜಿ ಹಾಕಿಕೊಂಡು, ಕಾಯುತ್ತಿದ್ದಲ್ಲಿ ಅದು ವಿತರಣೆ ಆಗುವ ಅವಕಾಶ ಇದೆ. ಷೇರು- ಮ್ಯೂಚುವಲ್ ಫಂಡ್ ಗಳು ಅಥವಾ ಇನ್ಯಾವುದಾದರೂ ಹೂಡಿಕೆ ಮಾಡಿದ್ದಲ್ಲಿ, ಅವುಗಳು ಈಗ ಲಾಭ ತಂದುಕೊಡಲಿವೆ. ಸಂತಾನ ಅಪೇಕ್ಷಿತರು ಈ ಅವಧಿಯಲ್ಲಿ ಶುಭ ಸುದ್ದಿಯನ್ನು ನಿರೀಕ್ಷೆ ಮಾಡಬಹುದು. ನೀವು ಪಡುವ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.
ಕನ್ಯಾ; ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಈ ಅವಧಿಯಲ್ಲಿ ಕೈ ಹಾಕುವ ಕೆಲಸಗಳಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಆತುರದ ತೀರ್ಮಾನದಿಂದ ಹಣವನ್ನು ಕಳೆದುಕೊಳ್ಳಲಿದ್ದೀರಿ. ಈ ಅವಧಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಸ ವ್ಯವಹಾರಗಳನ್ನು ಶುರು ಮಾಡಿದ್ದಲ್ಲಿ ಆಗಬೇಕಾದ ಅಥವಾ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದ್ದರಿಂದ ಲೆಕ್ಕಾಚಾರ ಹಾಗೂ ಬಜೆಟ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಈ ಗೋಚಾರ ಆರಂಭದ ಅವಧಿಯಲ್ಲಿ ಗುರು ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಗುರುಗಳ ಆರಾಧನೆಯನ್ನು ಮಾಡುವುದರಿಂದ ಸಮಸ್ಯೆಯ ಪರಿಣಾಮ ಕಡಿಮೆ ಆಗುತ್ತದೆ. ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿ ಮಠ, ಶಿರಡಿ ಸಾಯಿ ಬಾಬ ಮಂದಿರ, ಶಂಕರ ಮಠ ಒಟ್ಟಿನಲ್ಲಿ ಗುರುಗಳ ಸಾನ್ನಿಧ್ಯಕ್ಕೆ ತೆರಳಿ ದರ್ಶನ ಪಡೆಯಿರಿ.
ತುಲಾ: ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ಈ ಅವಧಿಯಲ್ಲಿ ದಂಪತಿ ಮಧ್ಯೆ ಇರುವಂಥ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬಹಳ ಒಳ್ಳೆ ಸಮಯ. ಒಂದು ವೇಳೆ ಪ್ರೇಮಿಗಳಾಗಿದ್ದು, ಇದಕ್ಕಿಂತ ಮುಂಚೆ ಮನಸ್ತಾಪಗಳು, ಅಭಿಪ್ರಾಯ ಭೇದಗಳು ಮೂಡಿ ದೂರವಾಗಿದ್ದಲ್ಲಿ ಈಗ ಒಗ್ಗೂಡುವಂಥ, ಸಂತೋಷವಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಸ್ಥಿರತೆ ಕಂಡುಬರಲಿದೆ. ಯಾವುದೇ ವಿಚಾರಗಳಲ್ಲಿ ಒಮ್ಮತ ಈ ತನಕ ಆಗಿಲ್ಲ ಎಂದಾದರೆ ಈಗ ಮೂಡಿಬರಲಿದೆ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೂಡಿ ಒಂದು ವ್ಯವಹಾರಕ್ಕೆ ಅಂತ ಕೈ ಹಾಕಿದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಇನ್ನು ಅವಿವಾಹಿತರಿಗೆ ಸೂಕ್ತವಾದ ವಿವಾಹ ಸಂಬಂಧಗಳು ದೊರೆಯುವಂಥ ಅವಕಾಶಗಳಿವೆ. ಆದರೆ ಇದಕ್ಕಾಗಿ ಒಮ್ಮೆ ಜನ್ಮಜಾತಕವನ್ನು ಪರಿಶೀಲಿಸಿಕೊಳ್ಳಿ.
ವೃಶ್ಚಿಕ: ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ಈ ಅವಧಿಯಲ್ಲಿ ಉದ್ಯೋಗ ಸ್ಥಳದಲ್ಲಿ ವಿರೋಧಿಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಆರೋಗ್ಯ ಸಮಸ್ಯೆಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೈನಂದಿನ ದಿನಚರಿ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೊಸ ಉದ್ಯೋಗಾವಕಾಶಗಳು, ಬಡ್ತಿಗಳು ಅಥವಾ ಮಾಡುವ ಕೆಲಸದಲ್ಲಿ ಹಾಕುವ ಪ್ರಯತ್ನಗಳಿಗೆ ನಿರೀಕ್ಷಿತವಾದ ಫಲಿತಾಂಶ ದೊರೆಯುವುದು ಕಷ್ಟ. ಇನ್ನು ಉದ್ಯೋಗ ಅಥವಾ ವೃತ್ತಿ ವಿಚಾರದಲ್ಲಿ ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುವ ಕಡೆಗೆ ನಿಗಾ ಕೊಡಬೇಕು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ ಮತ್ತು ಸಹೋದ್ಯೋಗಿಗಳೊಂದಿಗೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇದೆ ಹೀಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯ, ಸಾಲ ಪಡೆಯುವುದು, ಸಾಲ ನೀಡುವುದು ಎರಡರಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲಿದೆ.
ಧನುಸ್ಸು: ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಫಲ ದೊರೆಯಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿ ಆಗಲಿದೆ. ನಿಮ್ಮ ಕ್ರಿಯೇಟಿವ್ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶಗಳಿವೆ ಮತ್ತು ಈ ಹಿಂದಿಗಿಂತಲೂ ಈಗ ಆತ್ಮವಿಶ್ವಾಸ, ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಿಮ್ಮ ಪ್ರತಿಭೆ ಮತ್ತು ಕೌಶಲವನ್ನು ಪ್ರದರ್ಶಿಸುವುದಕ್ಕೆ ವೇದಿಕೆಗಳು ದೊರೆಯಲಿವೆ. ಇಷ್ಟು ಸಮಯ ಹವ್ಯಾಸವಾಗಿ ಇರುವಂಥದ್ದು ಈಗ ಆದಾಯ ತರುವಂಥ ವೃತ್ತಿಯಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಹಳೆಯ ವೈಫಲ್ಯಗಳನ್ನು ಮರೆತು, ಮುಂದಕ್ಕೆ ಹೆಜ್ಜೆ ಇಡುವ ಕಡೆಗೆ ಗಮನವನ್ನು ನೀಡಿ. ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಆದ್ದರಿಂದ ಕೈಗೆತ್ತಿಕೊಳ್ಳುವ ಪ್ರಾಜೆಕ್ಟ್, ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಿದ್ದೀರಿ. ಮಕ್ಕಳ ಏಳ್ಗೆಯಿಂದ ಸಮಾಧಾನ. ನಿಮ್ಮಲ್ಲಿ ಕೆಲವರಿಗೆ ಪ್ರೀತಿ- ಪ್ರೇಮ ಸಂಗತಿಗಳಲ್ಲಿ ಸಂತೋಷವಿದೆ.
ಮಕರ: ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಆಗಲಿದೆ. ಈ ಅವಧಿಯಲ್ಲಿ ಮನೆಯ ದುರಸ್ತಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಅಥವಾ ಬಾಡಿಗೆ ಮನೆಯಲ್ಲಿ ಇರುವವರು ಹೆಚ್ಚಿನ ಬಾಡಿಗೆಯ ಅಥವಾ ಖರ್ಚು ಹೆಚ್ಚಾಗುವಂಥ ಮನೆಗೆ ತೆರಳುವಂಥ ಸಾಧ್ಯತೆ ಇದೆ. ಯಾವುದೇ ಖರ್ಚು- ವೆಚ್ಚದ ಸಂಗತಿಗಳಲ್ಲಿ ಜಾಗ್ರತೆಯಿಂದ ಇರಬೇಕು. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದಲ್ಲಿ ಅಗತ್ಯ ಮೀರಿದ ಖರ್ಚುಗಳನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಉದ್ಯೋಗಸ್ಥರು ಮೇಲಧಿಕಾರಿಗಳ ಜತೆಗೆ ಮನಸ್ತಾಪ ಮಾಡಿಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಆದ್ದರಿಂದ ಯಾವುದೇ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗದಿರಿ. ಆಪ್ತರ ಜತೆಗೇ ಭಿನ್ನಾಭಿಪ್ರಾಯ, ಮನಸ್ತಾಪ ಸೃಷ್ಟಿ ಆಗಬಹುದು. ಬಂಧುಗಳಿಂದ ಅವಮಾನ, ಪ್ರಾಣಿಗಳ ಕಡಿತ ಅನುಭವಿಸಬೇಕಾಗುತ್ತದೆ. ವಾಹನಗಳ ದುರಸ್ತಿ, ಸರ್ವೀಸ್ ಇಂಥದ್ದಕ್ಕೆ ಕೈ ಮೀರಿದ ಖರ್ಚುಗಳು ಬರಲಿವೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಬೇಕು ಎಂದಿದ್ದಲ್ಲಿ ಆ ಆಲೋಚನೆಯನ್ನು ಕೈ ಬಿಡುವುದು ಉತ್ತಮ.
ಕುಂಭ: ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಗುರು ಸಂಚರಿಸಲಿದೆ. ಈ ಅವಧಿಯಲ್ಲಿ ಪ್ರಮುಖ ಹುದ್ದೆ, ಸ್ಥಾನ- ಮಾನಗಳಲ್ಲಿ ಇರುವವರು ಅದನ್ನು ಕಳೆದುಕೊಳ್ಳಲಿದ್ದಾರೆ. ಆಪ್ತರು, ಪ್ರೀತಿಪಾತ್ರರು ದೂರವಾಗುವಂಥ ಯೋಗ ಇದೆ. ಹೊಸದಾಗಿ ವ್ಯಾಪಾರ- ವ್ಯವಹಾರ ಮಾಡಬೇಕು ಎಂದಿರುವವರಿಗೆ ನಾನಾ ವಿಧದಲ್ಲಿ ವಿಘ್ನಗಳು ಎದುರಾಗಲಿವೆ. ಮುಖ್ಯವಾಗಿ ಸರ್ಕಾರದಿಂದ ದೊರೆಯಬೇಕಾದ ಪರವಾನಗಿ, ಅನುಮತಿಗಳು ಸಿಗದೆ ಇರಬಹುದು. ಅಥವಾ ನಿರೀಕ್ಷಿತ ಅವಧಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದರೆ ಅಷ್ಟರಲ್ಲಿ ಆತುರಪಟ್ಟು ವ್ಯವಹಾರಕ್ಕೆ ಇಳಿದಲ್ಲಿ ಇದರಿಂದ ನಷ್ಟವನ್ನು ಎದುರಿಸಬೇಕಾದೀತು. ಸೋದರ- ಸೋದರಿಯರ ಶಿಕ್ಷಣ, ಮದುವೆ, ಕೆಲಸ ಇಂಥವುಗಳಿಗೆ ಖರ್ಚುಗಳು ಹೆಚ್ಚಾಗಲಿವೆ. ನಿಮ್ಮ ದುಡಿಮೆ ಹಾಗೂ ಖರ್ಚುಗಳ ಮಧ್ಯೆ ಅಂತರ ಹೆಚ್ಚಾಗಿ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಆರೋಗ್ಯದಲ್ಲಿ ಆಗಾಗ ಏರುಪೇರಾಗಿ ಅದಕೆಕ ಖರ್ಚುಗಳು ಆಗಲಿವೆ. ಮುಖ್ಯವಾಗಿ ಕೆಲಸ ಬಿಡುವಂಥ ಯೋಚನೆ ಬೇಡ.
ಮೀನ: ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗಲಿದೆ. ಈ ಅವಧಿಯಲ್ಲಿ ವಿವಿಧ ಮೂಲಗಳಿಂದ ಧನಪ್ರಾಪ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಹೂಡಿಕೆ ಮಾಡಿ, ಲಾಭದ ಪ್ರಮಾಣ ಕಡಿಮೆ ಆಗಿರುತ್ತದೋ ಅಥವಾ ಬರುವುದೇ ಅನುಮಾನ ಎಂದುಕೊಂಡಿರುವಂಥ ಮೊತ್ತ ನಿಮ್ಮ ಕೈ ಸೇರುವಂಥ ಯೋಗ ಇದೆ. ಅದೇ ರೀತಿ ವಿವಾಹಿತರಿಗೆ ಸಂತೋಷವಾಗಿ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಮಾತಿಗೆ ತೂಕ ಬರಲಿದೆ. ಶಿಫಾರಸುಗಳನ್ನು ಮಾಡಿ, ಇತರರಿಗೆ ಅನುಕೂಲ ಮಾಡಿಕೊಡಲಿದ್ದೀರಿ. ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದುಕೊಂಡು ಪ್ರಯತ್ನಿಸುತ್ತಿರುವವರಿಗೆ ಹಣಕಾಸಿನ ಅನುಕೂಲಗಳು ಕೂಡಿಬರಲಿವೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರು ಈ ಅವಧಿಯಲ್ಲಿ ಪ್ರಯತ್ನ ಪಟ್ಟರೆ ಉತ್ತಮ ಸಂಸ್ಥೆಯಲ್ಲಿ ಕೆಲಸ ದೊರೆಯಲಿದೆ. ಅದರ ಜತೆಗೆ ಸ್ಥಾನ- ಮಾನ, ಉತ್ತಮ ವೇತನ ಸಹ ಸಿಗಲಿದೆ.
ಶಾಂತಿ ಪರಿಹಾರ
ಮೇಷ- ವೃಶ್ಚಿಕ ರಾಶಿ: ಅರಿಶಿಣದ ಬಟ್ಟೆಯಲ್ಲಿ ಕಡ್ಲೇಕಾಳು (ಅರ್ಧ ಕೇಜಿ ಅಥವಾ ಒಂದು ಕೇಜಿ) ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು, ದಕ್ಷಿಣೆ ಸಹಿತ ಪುರೋಹಿತರಿಗೆ ದಾನ ಮಾಡಿ.
ವೃಷಭ ರಾಶಿ: ಗುರುಗಳ ಸಾನ್ನಿಧ್ಯದಲ್ಲಿ ಯಥಾ ಶಕ್ತಿ ಆರಾಧನೆಯನ್ನು ಮಾಡಬೇಕು. ಗುರು ಸ್ತೋತ್ರ, ಜಪಗಳನ್ನು ಕೇಳಬೇಕು ಮತ್ತು ಸಾಧ್ಯವಾದಲ್ಲಿ ಹೇಳಬೇಕು.
ಕನ್ಯಾ ರಾಶಿ: ಗುರುಗಳಿಗೆ (ರಾಘವೇಂದ್ರ ಸ್ವಾಮಿಗಳು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಶಿರಡಿ ಸಾಯಿಬಾಬ ದೇಗುಲದಲ್ಲಿ) ವಸ್ತ್ರ ಸಮರ್ಪಣೆಯನ್ನು ಮಾಡಬೇಕು ಯಾರಿಗೆ ಅಶುಭ ಫಲವಿದೆಯೋ ಅಂಥವರು ತಮ್ಮಿಂದ ಆದಲ್ಲಿ ಗುರು ಶಾಂತಿ ಹೋಮವನ್ನು ಮಾಡಿಸಿಕೊಳ್ಳಬಹುದು.
ಲೇಖನ- ಎನ್.ಕೆ.ಸ್ವಾತಿ
Published On - 10:36 pm, Thu, 20 April 23