ಈ ವರ್ಷ ಕಳೆದ ವರ್ಷದಂತೆ ಕುಂಟುವ ಕಾಲವಲ್ಲ. ವೇಗವಾಗಿ ಸಾಗುವುದು. ಅನೇಕ ಶುಭ ಕಾರ್ಯಗಳನ್ನು ಮಾಡಲು ಈ ವರ್ಷ ಬಹಳ ಶುಭ. ಈ ವರ್ಷ ಬರುವ ಗುರು ಬಲವು ನಿಮ್ಮ ಜೀವನದ ದಿಕ್ಕನ್ನು ಬದಲಿಸಲಿದೆ. ಇನ್ನೂ ಶನಿಯು ಅಷ್ಟಮಕ್ಕೂ ಕೇತುವು ಸ್ವರಾಶಿಗೂ ರಾಹುವು ಸಪ್ತಮದಲ್ಲಿ ಇರಲಿದ್ದಾರೆ. ದಾಂಪತ್ಯದಲ್ಲಿ ಒತ್ತಡ ಇರಿಸುಮುರಿಸಿನ ಸಂದರ್ಭವು ಬರಲಿದೆ. ತಾಳ್ಮೆಯನ್ನು ಪರೀಕ್ಷಿಸುವ ಸನ್ನಿವೇಶಗಳು ಎದರಾಗಲಿವೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರುವುದು.
ನಿಮಗೆ ಈ ವರ್ಷ ಆರೋಗ್ಯ ಹದ ತಪ್ಪುವುದು ಹೆಚ್ಚು. ಷಷ್ಠಾಧಿಪತಿ ಅಷ್ಟಮದಲ್ಲಿ ಇದ್ದು ನಾನಾ ವಿಧದ ಪೀಡೆಗಳನ್ನು ಕೊಡುವನು. ಮಾನಸಿಕವಾದ ಒತ್ತಡವೂ ಇದರಲ್ಲಿ ಸೇರಿ ಒಂದು ರೀತಿ ಜಿಗುಪ್ಸೆಯ ಮನೋಭಾವ ಇರುವುದು. ಶನಿ ದಶೆ ನಡೆಯುತ್ತಿದ್ದವರಿಗೆ ಪ್ರತಿಕೂಲತೆ ಹೆಚ್ಚು.
ವೈವಾಹಿಕ ಜೀವನದಲ್ಲಿ ಸಂಗಾತಿಯ ನಡುವೆ ಮನಸ್ತಾಪ ಕಾಣಿಸುವುದು. ಹೊಂದಾಣಿಕೆಯನ್ನು ಕಾಣಲು ಸೋಲುವಿರಿ. ಯಾರಾದರೂ ಒಬ್ಬರು ಬಗ್ಗಿ ನಡೆಯುವುದು ಉತ್ತಮ. ಇಬ್ಬರ ನಡುವೆ ಆಗುವ ಅಸಮಾಧಾನವನ್ನು ಮುಂದುವರಿಸಲು ಹೋಗುವುದು ಬೇಡ. ವಿವಾಹಕ್ಕೆ ಉತ್ತಮ ವರ್ಷವಾಗಿದೆ. ಗುರುಬಲದ ಕಾರಣ ಬಹು ವರ್ಷದ ಕನಸನ್ನು ನನಸು ಮಾಡಿಕೊಳ್ಳಬಹುದು. ರಾಹುದಶೆಯವರು ಯಾವುದೇ ಅನವಶ್ಯಕ ಮಾತು, ಕಾರ್ಯಗಳಿಗೆ ಹಾದಿ ಮಾಡಿಕೊಡುವುದು ಬೇಡ.
ವಿನ್ಯಾಸದ ಉದ್ಯಮ, ನೂತನ ವಸ್ತುಗಳ ನಿರ್ಮಾಣ, ಭೋಗ ವಸ್ತುಗಳ ನಿರ್ಮಾಣ ಮಾಡುವವರಿಗೆ ಲಾಭವಿರುವುದು. ಆರ್ಥಿಕ ಮಟ್ಟ ಊರ್ಜಿತವಾಗಲಿದೆ. ಆರ್ಥಿಕತೆಯು ವರ್ಷಾರಂಭದಲ್ಲಿ ಹಿನ್ನಡೆಯನ್ನು ಪಡೆಯುವುದು.
ಚತುರ್ಥದ ಅಧಿಪತಿ ಕೋಮು ವರ್ಷಾರಂಭದಲ್ಲಿ ನೀಚನಾದ ಕಾರಣ ಮನೆ ನಿರ್ಮಾಣವಾಗದು. ಆಗುತ್ತಿರುವ ಮನೆಯೂ ಕಾರಣಾಂತರಗಳಿಂದ ನಿಲ್ಲುವುದು. ಮನೆಯ ವಿಚಾರದಲ್ಲಿ ಒತ್ತಡವಿರುವುದು.
ಶತ್ರುಬಾಧೆ ಇಲ್ಲದಿದ್ದರೂ ನೀವಾಗಿಯೇ ಶತ್ರುಗಳನ್ನು ಮಾಡಿಕೊಳ್ಳುವಿರಿ. ನಿಮ್ಮ ಯೋಚನೆಯು ಶತ್ರುಗಳು ಆಗುವಂತೆ ಮಾಡುವುದು. ನಿಮಗಿಂತ ಹಿರಿಯರ ಜೊತೆ ವೈರವನ್ನು ಸಾಧಿಸುವಿರಿ. ಬೇಕೋ ಬೇಡವೋ ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ವರ್ಷದ ಮಧ್ಯಾವಧಿಯ ತನಕ ನಿಮ್ಮ ಅದೃಷ್ಟ ಕೆಲಸಮಾಡದು. ಅಧಿಕ ಶ್ರಮ, ಅಥವಾ ನೀಚ ಮಾರ್ಗದಿಂದ ಅಧರ್ಮದ ಮಾರ್ಗದಿಂದ ಅದೃಷ್ಟವನ್ನು ತಂದುಕೊಳ್ಳಬೇಕಷ್ಟೇ. ಅನಂತರ ಹಂತವಾಗಿ ಸರಿಯಾಗುವುದು.
ಈ ವರ್ಷ ನಿಮಗೆ ಗುರುಬಲವಿದ್ದರೂ ಇದರಿಂದ ಅತಿಯಾದ ಅನುಕೂಲತೆಗಳು ಕಾಣಿಸದು. ದೊಡ್ಡ ತೊಂದರೆಗಳನ್ನು ಗುರುವು ಸಣ್ಣದನ್ನಾಗಿಸಿವನು. ಆದ್ದರಿಂದ ದೇವತಾರಾಧನೆ ಬಹಳ ಮುಖ್ಯ. ವಿಶೇಷವಾಗಿ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿಬೇಕು. ಸೂರ್ಯೋಪಾಸನೆ, ಸೂರ್ಯನಮಸ್ಕಾರಗಳನ್ನು ಪ್ರಾತಃಕಾಲದಲ್ಲಿ ಸೂರ್ಯನಿಗೆ ಅಭಿಮುಖವಾಗಿ ಮಾಡಿ. ಅವನಿಂದ ಬರುವ ಅರೋಗ್ಯ ಕವಚವನ್ನು ಧರಿಸಿ. ನಿಮ್ಮ ಎಲ್ಲ ಕಾರ್ಯಗಳನ್ನು ಉತ್ಸಾಹದಿಂದ ಮಾಡಿ.
-ಲೋಹಿತ ಹೆಬ್ಬಾರ್, ಇಡುವಾಣಿ