ಕುಜ- ಕೇತು ಯುತಿಯ ಪ್ರಭಾವ; ಜುಲೈ 24ರಿಂದ 30ರ ಮಧ್ಯೆ ಹಿಂಸಾಚಾರ, ದಾಳಿ ಸಾಧ್ಯತೆ

ಕುಜ- ಕೇತು ಗ್ರಹ ಐವತ್ತೈದು ವರ್ಷಗಳ ನಂತರ ಸಿಂಹ ರಾಶಿಯಲ್ಲಿ ಯುತಿ ಆಗಿವೆ. ಇನ್ನೇನು ಕನ್ಯಾ ರಾಶಿಗೆ ಕುಜ ಪ್ರವೇಶ ಆಗುವ ಮುನ್ನ ಒಂದೇ ಡಿಗ್ರಿಯಲ್ಲಿ ಕೇತುವಿನೊಟ್ಟಿಗೆ ಇರುತ್ತದೆ. ಈ ಸಮಯದಲ್ಲಿ ಪ್ರಾಕೃತಿಕವಾಗಿ ಹಾಗೂ ಅದೇ ಸಮಯಕ್ಕೆ ಮನುಷ್ಯರ ಮೇಲೆಯೂ ಪ್ರಭಾವಗಳು ಆಗುತ್ತವೆ. ಅದೇನು ಆಗಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಇನ್ನು ಇದರ ಜೊತೆಗೆ ವಕ್ರೀ ಶನಿಯ ಪ್ರಭಾವ ಸಹ ಇರುತ್ತದೆ.

ಕುಜ- ಕೇತು ಯುತಿಯ ಪ್ರಭಾವ; ಜುಲೈ 24ರಿಂದ 30ರ ಮಧ್ಯೆ ಹಿಂಸಾಚಾರ, ದಾಳಿ ಸಾಧ್ಯತೆ
Prakash Ammannaya And Leo Zodiac Sign
Updated By: Digi Tech Desk

Updated on: Jul 03, 2025 | 11:36 AM

ಆ ಸಮಯ ಇನ್ನೇನು ಬಂದೇಬಿಡಲಿದೆ. ಕುಜ ಹಾಗೂ ಕೇತು ಸಿಂಹ ರಾಶಿಯಲ್ಲಿ ಒಂದೇ ಡಿಗ್ರಿಯಲ್ಲಿ ಬರಲಿದ್ದಾರೆ. ಸಿಂಹ ರಾಶಿಯಲ್ಲಿ ಈ ಎರಡೂ ಗ್ರಹಗಳು ಒಗ್ಗೂಡಿ ಐವತ್ತೈದು ವರ್ಷಗಳಾಗಿರಬೇಕು. 1970ನೇ ಇಸವಿಯ ಸೆಪ್ಟೆಂಬರ್ ತಿಂಗಳಲ್ಲಿ ಈ ಎರಡು ಗ್ರಹಗಳು ರವಿ ಗ್ರಹದ ಆಧಿಪತ್ಯ ಇರುವಂಥ ಸಿಂಹ ರಾಶಿಯಲ್ಲಿ ಇದ್ದವು. ಹೀಗಿರುವಾಗ ಕುಜ ಗ್ರಹದ ಬೆಂಕಿಯನ್ನು ಕೇತು ಇನ್ನಷ್ಟು ಉದ್ದೀಪಿಸುತ್ತದೆ. ಆಕ್ರಮಣಕಾರಿ ಸ್ವಭಾವಕ್ಕೆ ಉತ್ತೇಜನ ದೊರೆತು, ಪರಿಣಾಮವನ್ನು ಆಲೋಚಿಸದೆ ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ. ಇದು ಹಿಂಸಾಚಾರಕ್ಕೆ ಪ್ರಚೋದನೆ ಸಿಗುವಂಥ ಸಮಯ ಆಗಿರುತ್ತದೆ. ಜುಲೈ ತಿಂಗಳ 24ರಿಂದ 30ನೇ ತಾರೀಕಿನ ಮಧ್ಯೆ ಹಿಂಸಾಚಾರ, ದಾಳಿ, ಪ್ರತಿದಾಳಿಗೆ ಪ್ರಚೋದನೆ, ಯುದ್ಧದ ಸನ್ನಿವೇಶ ಇವೆಲ್ಲಕ್ಕೂ ಸಾಕ್ಷಿ ಆಗುವ ಮುನ್ಸೂಚನೆ ಇದಾಗಿರುತ್ತದೆ.

ಕುಜ- ಕೇತು ಯುತಿಯ ಪ್ರಭಾವ ಹೇಗಿರಲಿದೆ?

ಭಾವನೆಗಳ ಏರು-ಪೇರು

ಯಾವಾಗ ಚಂದ್ರನ ಪ್ರಭಾವ ಈ ಕುಜ- ಕೇತು ಗ್ರಹ ಯುತಿಯ ಮೇಲೆ ಆಗುತ್ತದೋ ಆಗ ಆಕ್ರೋಶಕ್ಕೆ- ಆಕ್ರಮಣಕ್ಕೆ ದಿಕ್ಕು- ದೆಸೆ ಇಲ್ಲದಂತೆ ಹೊರಹಾಕುವ ಕ್ರಿಯೆ ನಡೆಯುತ್ತದೆ. ತಾವು ಮಾಡುವ ಕಾರ್ಯದ ನಂತರ ಏನಾಗಬಹುದು ಎಂಬ ವಿವೇಚನೆ ಇಲ್ಲದ ಕಾರಣಕ್ಕೆ ಆತಂಕದ ಸನ್ನಿವೇಶ ನಿರ್ಮಾಣ ಆಗುತ್ತದೆ.

ಇದನ್ನೂ ಓದಿ: ರಾಜ್ಯ, ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ

ಗೊಂದಲ- ಸ್ವೇಚ್ಛಾಚಾರ

ಕೇತು ಗ್ರಹ ಅಂದರೆ ದೇಹವನ್ನು ಮಾತ್ರ ಹೊಂದಿರುವ, ತಲೆ ಇಲ್ಲದ ಸ್ವರೂಪ. ಕುಜ ಗ್ರಹ ನೀಡುವಂಥ ಆಕ್ರಮಣಕಾರಿ ಆಲೋಚನೆಯನ್ನು ತಲೆಯಿಂದ ಚಿಂತಿಸದೆ ಏಕಾಏಕಿ ಮೇಲೆರಗುವ ಭಾವ ಉದ್ದೀಪನೆ ಆಗುತ್ತದೆ. ಕುಜನು ಶಕ್ತಿಯನ್ನು- ಸಾಮರ್ಥ್ಯವನ್ನು ನೀಡಿದರೆ, ಉದ್ದೇಶ- ಗುರಿಯೇ ಇಲ್ಲದೆ ಬಳಕೆ ಮಾಡುವಂತೆ ಕೇತು ಗ್ರಹ ಮಾಡುತ್ತದೆ.

ಕಾನೂನು ಸಮಸ್ಯೆಗಳು

ಭೂಮಿ ವ್ಯಾಜ್ಯಗಳನ್ನು ಕಾನೂನು ಸಮಸ್ಯೆಯಾಗಿ ಮಾಡುತ್ತದೆ ಈ ಗ್ರಹ ಯುತಿ. ಆದ್ದರಿಂದ ಭಾರತ- ಪಾಕಿಸ್ತಾನವೂ ಒಳಗೊಂಡಂತೆ ಯಾವ್ಯಾವ ದೇಶದ ಮಧ್ಯೆ ಭೂಮಿಗೆ ಸಂಬಂಧಿಸಿದ ವಿವಾದಗಳು ಇವೆಯೋ ಅವುಗಳ ಮಧ್ಯೆ ಕಾನೂನು ಸಂಘರ್ಷ ತೀವ್ರವಾಗುತ್ತದೆ.

ಇದನ್ನೂ ಓದಿ: ಸಿಂಹ ರಾಶಿಯಲ್ಲಿ ಕುಜ-ಕೇತು ಯುತಿ ಮತ್ತು ಪ್ರಪಂಚದ ಉದ್ವಿಗ್ನತೆ; ಜ್ಯೋತಿಷ್ಯ ವಿಶ್ಲೇಷಣೆ

ವಕ್ರೀ ಶನಿಯ ಪ್ರಭಾವ

ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಗ್ರಹ ವಕ್ರೀ ಆಗುತ್ತದೆ. ಆ ಮೂಲಕ ಅದರ ಬಲ ವೃದ್ಧಿ ಆಗುತ್ತದೆ. ಕುಂಭ ರಾಶಿಯ ಸಂಚಾರ ಕಾಲದಲ್ಲಿ ಏನೇನು ಫಲ ನೀಡುತ್ತದೋ ಅದನ್ನು ನೀಡುವುದಕ್ಕೆ ಶನಿ ಆರಂಭಿಸುತ್ತದೆ. ಶತ್ರುಗಳಾಗಿ ಈಗ ಕಾಣುತ್ತಿರುವವರು ತಮ್ಮ ಲಾಭದ ಚಿಂತನೆಗಾಗಿ ಒಟ್ಟಾಗುವುದನ್ನು ಕಾಣಬಹುದು.

ಕುಜ- ರಾಹು ಪರಸ್ಪರ ವೀಕ್ಷಣೆ

ರಾಹು ಗ್ರಹ ಹಾಗೂ ಕುಜ ಪರಸ್ಪರ ವೀಕ್ಷಣೆ ಮಾಡುವುದರಿಂದಾಗಿ ರಾಹುವು ಪ್ರತಿನಿಧಿಸುವ ಧರ್ಮದಿಂದ ದಾಳಿ ಆಗಬಹುದು ಎಂಬುದನ್ನು ಹೇಳಬಹುದು. ಸಿಂಹದಲ್ಲಿ ಇರುವಂಥ ಕುಜ ಗ್ರಹವು ಕುಂಭ ರಾಶಿಯಲ್ಲಿ ಇರುವ ರಾಹು ಪರಸ್ಪರ ವೀಕ್ಷಣೆ ಮಾಡುತ್ತವೆ. ಇನ್ನು ಕುಜ ಗ್ರಹದ ಫಲವನ್ನೇ ನೀಡುವಂಥ ಕೇತು ಸಹ ಸಿಂಹ ರಾಶಿಯಲ್ಲಿ ಇರುವುದರಿಂದ ಧರ್ಮದ ಆಧಾರದಲ್ಲಿನ ದಾಳಿಗಳಾಗಬಹುದು, ಈ ಬಗ್ಗೆ ಎಚ್ಚರಿಕೆ ಅಗತ್ಯ.


ಇದನ್ನೂ ಓದಿ: ಜುಲೈ 2025ರಲ್ಲಿ ಈ 5 ರಾಶಿಯವರಿಗೆ ವಿವಾಹದ ಅನುಕೂಲ!

ಯುದ್ಧ‌ ಸಾಮಗ್ರಿಗಳ ಮಾರಾಟ

ಇನ್ನು ಯುದ್ಧ ಸನ್ನಿವೇಶಕ್ಕೆ ಇನ್ನಷ್ಟು ಬೆಂಕಿ ಹಚ್ಚುವಂತೆ ಯುದ್ಧ ಸಾಮಗ್ರಿಗಳ ಪೂರೈಕೆ ಹೆಚ್ಚಾಗುತ್ತದೆ. ತಮ್ಮ ಬತ್ತಳಿಕೆಯಲ್ಲಿ ಇನ್ನು ಯಾವುದೇ ಅಸ್ತ್ರಗಳಿಲ್ಲ ಎಂದು ಸುಮ್ಮನಾಗಬೇಕು ಎಂದುಕೊಳ್ಳುವ ದೇಶಕ್ಕೆ ಯುದ್ಧ ಸಾಮಗ್ರಿಗಳ ಪೂರೈಕೆ ಮಾಡಿ, ಯುದ್ಧ ಮುಂದುವರಿಸುವಂತೆ ಮಾಡಲಾಗುತ್ತದೆ.

ರವಿಯ ಆಧಿಪತ್ಯದ ಪ್ರಭಾವ

ಯುದ್ಧ ಸೂಚಕ ಕುಜ ಹಾಗೂ ಅದನ್ನು ಉದ್ದೀಪಿಸುವ ಕೇತು ಈ ಎರಡೂ ರವಿಯ ಆಧಿಪತ್ಯದ ಸಿಂಹ ರಾಶಿಯಲ್ಲಿ ಒಟ್ಟಾಗುವುದರಿಂದ ಅಧಿಕಾರ ಹಾಗೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ದಾಳಿ- ಯುದ್ಧ- ಹಿಂಸಾಚಾರಗಳನ್ನು ಮಾಡುವುದಕ್ಕೆ ಮುಂದಾಗುವುದನ್ನು ಕಾಣಬಹುದು.


-ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)