Monthly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ ಮಾಸಭವಿಷ್ಯ

Numerology Prediction August 2023: ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Monthly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ ಮಾಸಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: Digi Tech Desk

Updated on:Aug 02, 2023 | 12:56 PM

ನಿಮ್ಮ ಜನ್ಮಸಂಖ್ಯೆಗೆ (Numerology) ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು (Monthly Predictions) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ತಿಂಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಹೊಸ ಹೂಡಿಕೆ ಮಾಡಬೇಕಾದ ಅಗತ್ಯ ಕಂಡುಬರಲಿದೆ. ಕುಟುಂಬ ವಿಚಾರಗಳಲ್ಲಿ ಹೆಚ್ಚು ಸಮಯ ಮೀಸಲಿಡಬೇಕಾದ ಅಗತ್ಯ ಕಂಡುಬರಲಿದೆ. ಔತಣ ಕೂಟಗಳಿಗೆ ಸಂಬಂಧಿಕರಿಂದ ಆಹ್ವಾನ ಬರಲಿದೆ. ಹೊಸ ವಾಹನ ಖರೀದಿ ಮಾಡುವುದಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಇನ್ನೇನು ಎಲ್ಲವೂ ಮುಗಿಯಿತು ಎಂದುಕೊಂಡ ಕೆಲಸ ಇನ್ನೂ ಸ್ವಲ್ಪ ಬಾಕಿ ಉಳಿದು, ಇನ್ನಷ್ಟು ದಿನಗಳಿಗೆ ಎಳೆದುಕೊಂಡು ಹೋಗುವಂಥ ಸೂಚನೆ ನಿಮಗೆ ದೊರೆಯುತ್ತದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಗುಂಪುಗೂಡಿರುವ ಕಡೆ ಮಾತನಾಡುವುದಕ್ಕೆ ಹೋಗದಿರಿ. ಸಹೋದ್ಯೋಗಿಗಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನನ್ನದೇ ಸರಿ ಎಂದು ವಾದಿಸುತ್ತಾ ಮುಂದುವರಿಸುವುದು ಒಳ್ಳೆಯದಲ್ಲ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಯೋ ಅಥವಾ ವಸ್ತುವೋ ಈ ತಿಂಗಳಲ್ಲಿ ದೊರೆಯುವ ಸಾಧ್ಯತೆಗಳಿವೆ. ಅತ್ತೆ- ಮಾವ ಅಥವಾ ತಂದೆ- ತಾಯಿಯ ಕನ್ನಡಕದ ಫ್ರೇಮ್, ಶ್ರವಣ ಸಾಧನ, ಪಾದರಕ್ಷೆಗಳಿಗೆ ಹೆಚ್ಚು ವೆಚ್ಚವಾಗುವಂಥ ಸಾಧ್ಯತೆ ಇದೆ. ಇನ್ನು ರಿಯಾಯಿತಿ ದೊರೆಯುತ್ತಿದೆ ಅಂತಲೋ ಅಥವಾ ಆಫರ್ ಗಳು ಇವೆ ಎಂಬ ಕಾರಣಕ್ಕೋ ಯಾವುದಾದರೂ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ವಾರಂಟಿ ಅವಧಿಯ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳುವುದು ಮುಖ್ಯ. ದ್ವಿಚಕ್ರ ವಾಹನ ಓಡಿಸುವಂಥವರು ಸಾಧ್ಯವಾದಷ್ಟೂ ನಿಧಾನವಾಗಿ ಚಲಾಯಿಸುವುದು ಕ್ಷೇಮ. ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಪ್ರಮಾಣವನ್ನು ಸರಿಯಾಗಿ ಅನುಸರಿಸಿ. ಸೌಂದರ್ಯ ಕಾಳಜಿ ಹೆಚ್ಚಾಗಲಿದ್ದು, ಇದರ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀರಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವಂಥ ದಾರಿಗಳು ಗೋಚರ ಆಗಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಅಧ್ಯಾತ್ಮ ವಿಚಾರಗಳಲ್ಲಿ ಈ ತಿಂಗಳು ನಿಮ್ಮ ಮನಸ್ಸು ಹೆಚ್ಚು ತೊಡಗಿಕೊಳ್ಳಲಿದೆ. ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಅಥವಾ ದೇವತಾ ಅನುಷ್ಠಾನಗಳಲ್ಲಿ ಭಾಗೀ ಆಗುವಂಥ ಯೋಗ ನಿಮ್ಮ ಪಾಲಿಗಿದೆ. ಸಣ್ಣ- ಪುಟ್ಟ ಸಂಗತಿಗಳಿಗೂ ಈ ದಿನ ಸಿಕ್ಕಾಪಟ್ಟೆ ಮಹತ್ವ ಬಂದುಬಿಡುತ್ತದೆ. ಆದ್ದರಿಂದ ಆಮೇಲೆ ಮಾಡಿದರಾಯಿತು ಅಥವಾ ಇಷ್ಟು ಸಣ್ಣ ಕೆಲಸವನ್ನು ಬೇರೆಯವರಿಗೆ ಹೇಳಿ ಮಾಡಿಸೋಣ ಅಂತೆಲ್ಲ ಯೋಚನೆ ಮಾಡದಿರಿ. ಏಕೆಂದರೆ ಇದರಿಂದ ನಿಮ್ಮ ವರ್ಚಸ್ಸಿಗೆ ಪೆಟ್ಟು ಬೀಳುವಂಥ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಾನು ನಿರ್ಧರಿಸಿದ ಮೇಲೆ ಇತರರು ಒಪ್ಪಿಯೇ ಒಪ್ಪುತ್ತಾರೆ ಎಂಬ ಧೋರಣೆ ಈ ತಿಂಗಳಲ್ಲಿ ಯಾವುದೇ ಕಾರಣಕ್ಕೂ ಬೇಡ. ಯಾವುದಾದರೂ ಕೆಲಸದ ನಿಮಿತ್ತವೋ ಅಥವಾ ವಸ್ತುಗಳಿಗೋ ಅಥವಾ ಕಾರ್ಯಕ್ರಮಕ್ಕೋ ನೀವೇ ತೀರ್ಮಾನ ಕೈಗೊಂಡು, ಅಂತಿಮಗೊಳಿಸದಿರುವುದು ಕ್ಷೇಮ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಬಹಳ ಹಿಂದೆ ನೀವು ಪ್ರಯತ್ನಿಸಿದ್ದ ಉದ್ಯೋಗವೋ, ಸೈಟೋ ಅಥವಾ ಇಂಥದ್ದು ಯಾವುದಾದರೂ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಡುವ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ನಿಮ್ಮ ವೈಯಕ್ತಿಕ ವಿಚಾರಗಳನ್ನೋ ಅಥವಾ ವ್ಯಾಪಾರ- ವ್ಯವಹಾರದ ರಹಸ್ಯಗಳನ್ನೋ ಹೊಸದಾಗಿ ಪರಿಚಿತರಾದವರ ಜತೆಗೆ ಹಂಚಿಕೊಳ್ಳದಿರಿ. ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಲ್ಲಿ ಹಿರಿಯರು, ಆಯಾ ವಿಷಯದಲ್ಲಿ ಪರಿಣತರಾದವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ. ಹೋಟೆಲ್ ಉದ್ಯಮದಲ್ಲಿ ಇರುವಂಥವರು ವ್ಯಾಪಾರ ವಿಸ್ತರಣೆ ಮಾಡುವುದರ ಸಲುವಾಗಿ ಹಣಕಾಸಿನ ಹೊಂದಾಣಿಕೆಗೆ ಪ್ರಯತ್ನಿಸುವ ಸಾಧ್ಯತೆ ಇದೆ. ಇನ್ನು ಆಗಸ್ಟ್ ತಿಂಗಳ ದ್ವಿತೀಯಾರ್ಧದಲ್ಲಿ ಏನಾಗುತ್ತದೆ ಅಂದರೆ, ಒಂದು ವೇಳೆ ನೀವೇನಾದರೂ ಇದೇ ಮೊದಲ ಬಾರಿಗೆ ಎಂಬಂತೆ ಆರಂಭಿಸಿದ ಕೆಲಸಗಳು ಇದ್ದಲ್ಲಿ ಅವುಗಳಲ್ಲಿ ಬೆಳವಣಿಗೆ ಆಗಿ, ಆ ಬಗ್ಗೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಸ್ವಭಾವದಲ್ಲಿ ತಪ್ಪುಗಳನ್ನು ಹೇಳುವವರು ಈ ತಿಂಗಳು ಹೆಚ್ಚಾಗಬಹುದು. ಸಣ್ಣ- ಪುಟ್ಟ ವೈಫಲ್ಯಕ್ಕೂ ನಿಮ್ಮ ನಿರ್ಧಾರ ಹಾಗೂ ಬೇಜವಾಬ್ದಾರಿ ಕಾರಣ ಎಂದು ಕೆಲವರು ದೂರಬಹುದು. ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈ ಹಿಂದೆ ನೀವು ಮಾಡಿದ್ದ ಕೆಲಸ ಹಾಗೂ ತೆಗೆದುಕೊಂಡಿದ್ದ ನಿರ್ಧಾರಗಳು ಮತ್ತು ಪಟ್ಟ ಶ್ರಮದ ಫಲವಾಗಿ ಈ ಸನ್ನಿವೇಶದಲ್ಲಿ ನಿಮ್ಮ ವರ್ಚಸ್ಸು ಉಳಿಯಲಿದೆ. ಎಲ್ಲಕ್ಕೂ ಪ್ರತಿಕ್ರಿಯೆ ನೀಡಬೇಕು, ಗಟ್ಟಿಯಾದ ಧ್ವನಿಯಲ್ಲಿ ಉತ್ತರ ನೀಡಬೇಕು ಎಂದು ಹೊರಡಬೇಡಿ. ಎಲ್ಲರನ್ನೂ ಒಪ್ಪಿಸಿ ಅಥವಾ ಮೆಚ್ಚಿಸಿ ಕೆಲಸ ಮಾಡುವುದು ಅಸಾಧ್ಯದ ಮಾತು. ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಾಗಿ. ದಾಕ್ಷಿಣ್ಯದ ಮಾತಿಗೆ ಸಿಲುಕಿಕೊಂಡು, ನಿಮ್ಮ ಕೈಯಿಂದ ಹಣ- ಸಮಯ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಸೆಕೆಂಡ್ ಹ್ಯಾಂಡ್ ಸ್ಕೂಟರ್, ಬೈಕ್ ಖರೀದಿ ಮಾಡುವಂತೆ ಸ್ನೇಹಿತರು, ಸಂಬಂಧಿಗಳು ಸಲಹೆ ನೀಡಿದರೆ ಅಥವಾ ನಿಮಗೇ ಆ ಆಲೋಚನೆ ಇದ್ದಲ್ಲಿ ಆಗಸ್ಟ್ ತಿಂಗಳ ಮೊದಲ ಹದಿನೈದು ದಿನಗಳ ಕಾಲ ಬೇಡ, ಅದನ್ನು ಮನಸ್ಸಿನಿಂದ ತೆಗೆದುಹಾಕಿ. ಯಾರು ಪಿಆರ್ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತೀರೋ ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಇದ್ದೀರೋ ಅಂಥವರಿಗೆ ನಿಮ್ಮ ಶ್ರಮಕ್ಕೂ ದೊರೆಯುತ್ತಿರುವ ಪ್ರತಿಫಲಕ್ಕೂ ತಾಳೆಯೇ ಆಗದಷ್ಟು ಕಡಿಮೆ ಇದೆ ಎಂದು ಬಲವಾಗಿ ಅನಿಸಲಿದೆ. ಇತರರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕಾಗಿ ಹೊಸ ಕೋರ್ಸ್ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ಸರಿಯಾಗಿ ವಿಚಾರಿಸಿ, ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ಆಸ್ತಿ ಅಥವಾ ಜಮೀನು ಖರೀದಿ ಮಾಡಬೇಕು ಎಂದು ಇರುವವರು ವ್ಯವಹಾರ ಅಂತಿಮಗೊಳ್ಳದೆ ಯಾವುದೇ ಕಾರಣಕ್ಕೂ ಬ್ಯಾಂಕ್ ಲೋನ್ ತೆಗೆದುಕೊಳ್ಳುವುದೋ ಅಥವಾ ಈಗಾಗಲೇ ಮಾಡಿರುವ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುವುದೋ ಮಾಡಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಆದ್ದರಿಂದ ಯಾವುದೇ ಕೆಲಸಕ್ಕೆ ಕೊನೆ ಕ್ಷಣದ ತನಕ ಕಾಯುತ್ತಾ ಕೂರಬೇಡಿ. ವಂಚಕರಿಂದ ಭಾರೀ ಎಚ್ಚರಿಕೆಯಿಂದ ಇರಬೇಕು. ಒಂದು ನಿಮ್ಮ ವಸ್ತುವನ್ನು ಖರೀದಿಸಿ, ಹಣ ನೀಡದೆ ವಂಚನೆ ಮಾಡುವುದು ಒಂದು ಬಗೆಯಲ್ಲಾದರೆ, ಕಳಪೆ ಅಥವಾ ನಕಲಿ ವಸ್ತುಗಳನ್ನು ನಿಮಗೆ ಮಾರಾಟ ಮಾಡುವಂಥ ಸಾಧ್ಯತೆಯೂ ಇದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ- ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಅಂಥ ಕೆಲಸಗಳು ಆಗಸ್ಟ್ ತಿಂಗಳ ಕೊನೆ ಹತ್ತು ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ. ಖಾಸಗಿ ಕಂಪನಿಗಳಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇರುವವರು ಹಾಗೂ ತಂಡಗಳನ್ನು ಮುನ್ನಡೆಸುತ್ತಿರುವಂಥವರು ಯಾವುದೇ ಭರವಸೆ ನೀಡುವ ಮುನ್ನ ಈಡೇರಿಸುವುದಕ್ಕೆ ಸಾಧ್ಯವಾ ಅಳೆದು ನೋಡಿ. ಏಕೆಂದರೆ, ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಥವಾ ಕೆಲಸ ಬಿಡುತ್ತಿದ್ದೇನೆ ಎಂದವರನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ನೀಡುವ ಮಾತಿನಿಂದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಬಹುದು. ಆದ್ದರಿಂದ ಜಾಗ್ರತೆ ವಹಿಸಬೇಕು. ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರುವಂಥ ಅವಕಾಶಗಳಿವೆ. ಇದಕ್ಕೆ ಸಂಬಂಧಿಸಿದಂಥ ಹಳೇ ಕಡತ, ಕಾಗದ- ಪತ್ರಗಳನ್ನು ಸರಿಯಾಗಿ ಹುಡುಕಿ ಇಟ್ಟುಕೊಳ್ಳಿ, ಹಾಗೆ ಮಾಡುವುದರಿಂದ ಅನುಕೂಲ ಆಗಲಿದೆ. ಅನಿರೀಕ್ಷಿತವಾಗಿ ದೂರ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ಆದ್ದರಿಂದ ಅಗತ್ಯ ಇರುವ ಎಲ್ಲ ವಸ್ತುಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೀರಾ ಎಂಬುದನ್ನು ಪರೀಕ್ಷೆ ಮಾಡಿಟ್ಟುಕೊಂಡಲ್ಲಿ ಉತ್ತಮ. ಇತರರ ವೈಯಕ್ತಿಕ ವಿಚಾರಗಳಿಗೆ ನಿಮ್ಮಿಂದ ಸಲಹೆ ಕೇಳಿಕೊಂಡು ಬಂದಲ್ಲಿ ಏನಾದರೂ ಕಾರಣ ನೀಡಿ, ಏನೂ ಅಭಿಪ್ರಾಯ ನೀಡದಂತೆ ಇದ್ದುಬಿಡುವುದು ಒಳ್ಳೆಯದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಲಿದೆ. ನಿಮ್ಮ ಪರವಾಗಿ ಕೆಲವರು ಶಿಫಾರಸು ಸಹ ಮಾಡುವ ಸಾಧ್ಯತೆಗಳಿವೆ. ನಿಂತ ನೀರಿನಂತಾಗಿದೆ ಜೀವನ ಅಂದುಕೊಳ್ಳುತ್ತಿದ್ದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಹಿಂದೆ ನೀವು ಬಹಳ ಆಸಕ್ತಿ ವಹಿಸಿ ಮಾಡಿದ್ದ ಕೆಲಸದ ಕಾರಣಕ್ಕೆ ಈಗ ಗೌರವ, ಮನ್ನಣೆ ಅಥವಾ ಹೊಸ ಜವಾಬ್ದಾರಿಯೊಂದು ಹುದ್ದೆಯ ಸಹಿತವಾಗಿ ದೊರೆಯುವಂತಹ ಅವಕಾಶಗಳಿವೆ. ಒಂದು ವೇಳೆ ಕುಟುಂಬದೊಳಗೆ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯುತ್ತಾ ಇದ್ದಲ್ಲಿ ಹಾಗೂ ಆ ಬಗ್ಗೆ ನಿಮ್ಮನ್ನು ಅಭಿಪ್ರಾಯ ಹೇಳುವಂತೆ ಕೇಳಿಕೊಂಡ ಪಕ್ಷದಲ್ಲಿ ಮನಸ್ಸಿನಲ್ಲಿರುವ ಸಂಗತಿಯನ್ನೆಲ್ಲ ಹೇಳಿಕೊಳ್ಳದೆ ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮ ವಿರುದ್ಧ ಹಗೆ ಅಥವಾ ಶತ್ರುತ್ವ ಸಾಧಿಸುವುದಕ್ಕೆ ಪ್ರಯತ್ನಿಸಿದವರು ನಾನಾ ರೀತಿಯಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಪ್ರೇಮ ಸಂಬಂಧವೇ ಮುರಿದುಬೀಳುವ ಮಟ್ಟದ ತನಕ ಹೋಗಬಹುದು. ಇನ್ನೇನು ಎಲ್ಲ ಕೆಲಸ ಮುಗಿದೇ ಹೋಯಿತು, ಕೈಗೆ ಹಣ ಬಂದೇ ಬಿಟ್ಟಿತು ಎಂದುಕೊಂಡು ಬೇರೆಯವರಿಗೆ ಮಾತು ಕೊಟ್ಟಿದ್ದಲ್ಲಿ ಆ ಹಣ ಬಾರದೇ ಹೋಗಿ ಅವಮಾನದ ಪಾಲಾಗುವಂತಹ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಇರುವವರು, ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವವರು, ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರು, ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು ವೃತ್ತಿಗೆ ಸಂಬಂಧಿಸಿದಂತೆ ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ. ಕುಟುಂಬ ವ್ಯವಹಾರ ನಡೆಸುತ್ತಾ ಇರುವವರು ಹೂಡಿಕೆಗಾಗಿ ಸಾಲ ಮಾಡುವಂಥ ಯೋಗ ಇದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗಿನ ಸೆಳೆತ ಬಂದಲ್ಲಿ ನಿಯಂತ್ರಣ ಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕಾರಣದಲ್ಲಿ ಇರುವವರಿಗೆ ಗುಂಪುಗಾರಿಕೆ ಮಾಡುತ್ತಿದ್ದೀರಿ ಎಂದು ಆರೋಪಗಳು ಬರಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಒಂದೇ ಕೆಲಸದ ಸಲುವಾಗಿ ಹಲವು ಸಲ ಪ್ರಯತ್ನಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಅಂದುಕೊಳ್ಳದ ಖರ್ಚು ತಲೆ ಎತ್ತಿ ನಿಲ್ಲಲಿದೆ. ನಿಮ್ಮ ವೈಯಕ್ತಿಕ ವಿಚಾರದಲ್ಲಿ ಇತರರು ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ನೇರ ನೇರವಾಗಿ ಮಾತನಾಡುವುದರಿಂದ ಸಮಸ್ಯೆಗೆ ಪರಿಹಾರ ಏನೂ ದೊರಕುವುದಿಲ್ಲ. ಲೋಕಾರೂಢಿಗೆ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಆದ್ದರಿಂದ ನಿಮಗೆ ಗೊತ್ತಿರುವ ಸಂಗತಿಯೇ ಆದರೂ ಮಿತಿಯನ್ನು ಅರಿತು, ವರ್ತಿಸುವುದು ಮುಖ್ಯವಾಗುತ್ತದೆ. ಹತ್ತಾರು ಜನರು ಇರುವ ಜಾಗದಲ್ಲಿ ಮಾತಿನ ಭರಾಟೆಯಲ್ಲಿ ಹೇಳಿಕೊಂಡ ವಿಷಯಗಳಿಗೆ ದೊಡ್ಡದಾಗಿ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗಬಹುದು. ನಿಮ್ಮ ಸಂಬಂಧಿಕರೋ ಅಥವಾ ಸ್ನೇಹಿತರೋ ಹಿಂದೆ ಯಾವಾಗಲೋ ಆಡಿದ ಮಾತಿನಿಂದ ಬೇಸರವಾಗಿದ್ದಲ್ಲಿ ಅದನ್ನು ಈ ದಿನ ಪ್ರತೀಕಾರ ಎಂಬಂತೆ ತೀರಿಸಿಕೊಳ್ಳಲಿದ್ದೀರಿ. ಹಾಲಿನ ವ್ಯಾಪಾರ ಮಾಡುವಂಥವರಿಗೆ ಆದಾಯದಲ್ಲಿ ಇಳಿಕೆ ಆಗುವ ಸಂಭವ ಇದೆ. ಲೆಕ್ಕಾಚಾರ ಹಾಕಿಕೊಳ್ಳದೆಯೇ ಹಣಕಾಸಿನ ವಿಚಾರದಲ್ಲಿ ಯಾವುದೇ ಮಾತನ್ನು ನೀಡಲಿಕ್ಕೆ ಹೋಗದಿರಿ. ನಿಮ್ಮಷ್ಟಕ್ಕೆ ನೀವು ಎಂದಿದ್ದರೂ ಯಾವುದಾದರೂ ವ್ಯಾಜ್ಯಕ್ಕೆ ಇತರರು ಎಳೆದು ತರುವ ಸಾಧ್ಯತೆ ಇದೆ. ಸಾರ್ವಜನಿಕ ಬದುಕಿನಲ್ಲಿ ಇರುವವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನವವಿವಾಹಿತರಿಗೆ ಸಂಗಾತಿ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಈ ತಿಂಗಳು ನಿಮ್ಮ ಹಣೆ ಅಥವಾ ತಲೆಯ ಭಾಗಕ್ಕೆ ಪೆಟ್ಟಾಗುವಂಥ ಸಾಧ್ಯತೆಗಳು ಕಂಡುಬರುತ್ತಿದೆ. ಆದ್ದರಿಂದ ಮೆಟ್ಟಿಲು ಹತ್ತುವಾಗ, ಇಳಿಯುವಾಗ ಅಥವಾ ವೇಗವಾಗಿ ಕೆಲಸ ಮಾಡುತ್ತಿದ್ದೀರಿ ಎಂದಾಗ ಜಾಗ್ರತೆ ಇರಿಸಿಕೊಳ್ಳಿ. ನನಗೆ ಎಲ್ಲ ಗೊತ್ತು ಎಂದು ಹೇಳುತ್ತಿರುವ ಗೆಳೆಯರೋ ಅಥವಾ ಇತರರೋ ಅಂಥವರ ಜತೆಗೆ ವಾದಕ್ಕೆ ಇಳಿಯದಿರುವುದು ಉತ್ತಮ. ನಿಮ್ಮ ಇನ್ ಟ್ಯೂಷನ್ ಬಹಳ ಜಾಗೃತವಾಗಿರುತ್ತದೆ. ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವಂಥವರು ಲಾಗಿನ್ ಐಡಿ, ಪಾಸ್ ವರ್ಡ್ ಜೋಪಾನವಾಗಿ ಇರಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿವೆ. ನಿರ್ಧಾರ ಮಾಡಿಕೊಂಡು, ಎಲ್ಲ ವಿಚಾರಗಳಲ್ಲೂ ಬಿಗಿ ಪಟ್ಟನ್ನು ಹಾಕಲಿದ್ದೀರಿ. ನಿಮ್ಮ ತಂತ್ರಗಾರಿಕೆ, ಆಲೋಚನೆಗಳು ಫಲ ನೀಡಲಿವೆ. ಆನ್ ಲೈನ್ ವ್ಯವಹಾರಗಳಲ್ಲಿ ತೊಡಗಿರುವವರು, ಯೂ ಟ್ಯೂಬರ್ ಗಳು, ಟ್ಯಾಟೂ ಹಾಕುವಂಥವರು, ಮನೆಗಳಿಗೆ ತೆರಳಿ ಸೌಂದರ್ಯ ವರ್ಧಕಕ್ಕೆ ಬೇಕಾದ ಸೇವೆಗಳನ್ನು ನೀಡುವಂಥವರು ಇವರಿಗೆಲ್ಲ ಆದಾಯದಲ್ಲಿ ಏರಿಕೆ ಆಗಲಿದೆ. ವೃತ್ತಿನಿರತರಾಗಿದ್ದಲ್ಲಿ ಸ್ವಂತ ಕಚೇರಿ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗೃಹಬಳಕೆ ವಸ್ತುಗಳನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಒಂದು ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಬಹಳ ಸಮಯದಿಂದ ಕಾಡುತ್ತಿದ್ದ ದೈಹಿಕ ಬಾಧೆಗಳು ನಿವಾರಣೆ ಆಗುವುದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ಪ್ರಭಾವಿಗಳ ಶಿಫಾರಸು ನಿಮ್ಮ ಪಾಲಿಗೆ ದೊರೆಯಲಿದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿದೆ. ಸಾಲ ಹೆಚ್ಚಾಗಿದ್ದು ಅಥವಾ ತುರ್ತಾಗಿ ಸಾಲದ ಹಣ ಹಿಂತಿರುಗಿಸಬೇಕಾದವರಿಗೆ ಅದು ನಿವಾರಣೆ ಮಾಡಿಕೊಳ್ಳಲು ಸೂಕ್ತ ಮಾರ್ಗೋಪಾಯಗಳು ದೊರೆಯಲಿವೆ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಹಣವನ್ನು ಮೀಸಲಿಡಬೇಕಾಗುತ್ತದೆ ಎಂಬ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹೊಸ ದಿರಿಸು ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸುವ ಯೋಗ ಇದೆ. ಇನ್ನು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಗೆಳೆಯರು ಅಥವಾ ಸಂಬಂಧಿಕರ ಮೂಲಕವಾಗಿ ಅಂಥದ್ದರ ಬಗ್ಗೆ ಮಾಹಿತಿ ದೊರೆಯುತ್ತದೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ವಧು/ವರಾನ್ವೇಷಣೆ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ಕಂಡುಬರಲಿದೆ. ಕ್ರಿಯೇಟಿವ್ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಕಡಿಮೆ ಆಗಿ, ಮುಂದೆ ಹೇಗೋ ಏನೋ ಎಂಬ ಆತಂಕ ಕಾಡಬಹುದು. ಯಾವುದೇ ನಿರ್ಧಾರ ಮಾಡುವ ಮುನ್ನ ಅದರ ಸಾಧಕ- ಬಾಧಕಗಳ ಬಗ್ಗೆ ಅಳೆದು- ತೂಗಿ ನೋಡಿ. ಸಿನಿಮಾ ಕ್ಷೇತ್ರದಲ್ಲಿ ಇರುವವರು, ಷೇರು ದಲ್ಲಾಳಿಗಳು, ಬ್ಯಾಂಗಲ್ ಸ್ಟೋರ್‌ಗಳನ್ನು ನಡೆಸುತ್ತಿರುವವರಿಗೆ ಲಾಭದ ಪ್ರಮಾಣದ ಬಗ್ಗೆ ಅಸಮಾಧಾನ ಮೂಡಲಿದೆ. ನಿಮ್ಮ ವ್ಯವಹಾರದ ಅಲ್ಪ ಭಾಗದ ಯಜಮಾನಿಕೆ ಬೇರೆಯವರಿಗೆ ಬಿಟ್ಟುಕೊಡುವ ಆಲೋಚನೆ ಮಾಡಲಿದ್ದೀರಿ. ಉದ್ಯೋಗದಲ್ಲಿ ಇರುವವರು, ಅದರಲ್ಲೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರು ನಿಮ್ಮ ಬಗ್ಗೆ ನೀವೇ ಹೇಳಿಕೊಂಡು ಒಳ್ಳೆ ಕೆಲಸಗಾರ ಎಂದೆನಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಈ ತಿಂಗಳು ವಾದ- ವಿವಾದಗಳಿಗೆ ಅವಕಾಶ ಮಾಡಿಕೊಡದಂತೆ ಹಾಗೂ ಯಾವುದೇ ಪ್ರಶ್ನೋತ್ತರಗಳು ದೀರ್ಘವಾಗಿ ಎಳೆಯದಂತೆ ಎಚ್ಚರಿಕೆಯನ್ನು ವಹಿಸಿ. ನಿಮಗೆ ಗೊತ್ತಿರುವ ಸಂಗತಿಗಳು, ವ್ಯಕ್ತಿಗಳೇ ನಿಮ್ಮ ಪರವಾಗಿ ಇರುವುದಿಲ್ಲ. ಆದ್ದರಿಂದ ಎಚ್ಚರಿಕೆ ಬಹಳ ಮುಖ್ಯವಾಗುತ್ತದೆ. ಹೊಸ ಕೆಲಸದ ಅವಕಾಶಗಳು ಅಂತ ಬಂದರೂ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಒಪ್ಪಿಗೆ ನೀಡಬೇಡಿ. ಮನೆ ನಿರ್ಮಾಣ, ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದು ಹಾಗೂ ಮನೆಯೊಳಗಿನ ಕೆಲ ವ್ಯವಸ್ಥೆಗಳಲ್ಲಿ ಮಾರ್ಪಾಟು ಮಾಡುವುದು ಇಂಥದ್ದರ ಬಗ್ಗೆ ಕುಟುಂಬಸ್ಥರ ಜತೆಗೆ ಚರ್ಚೆ ನಡೆಸಲಿದ್ದೀರಿ. ಈಗಾಗಲೇ ಸಂಬಂಧಿಗಳು, ಸ್ನೇಹಿತರಿಂದ ಸಾಲ ಪಡೆದುಕೊಂಡಿದ್ದೀರಿ ಎಂದಾದಲ್ಲಿ ಅವರು ಅದನ್ನು ಕೇಳಬಹುದು, ಒಂದಿಷ್ಟು ಗಟ್ಟಿಯಾಗಿ ಬೇಕೇಬೇಕು ಎಂದು ಕೇಳಬಹುದು. ಇದಕ್ಕೆ ತಯಾರಾಗಿರಿ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 2ರ ದಿನಭವಿಷ್ಯ

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ರಾಜಕಾರಣಿಗಳ ಜತೆಗೆ ಸಖ್ಯ ಇರುವಂತಹ ವ್ಯಕ್ತಿಗಳಿಗೆ ಒಂದಿಷ್ಟು ಪ್ರಾಜೆಕ್ಟ್ ಗಳು ದೊರೆಯುವಂಥ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಪ್ರಮುಖ ಸಂಘ- ಸಂಸ್ಥೆಗಳು, ನಿಗಮ- ಮಂಡಳಿಗಳಿಗೆ ನಿಮ್ಮನ್ನು ನೇಮಿಸುವುದಾಗಿ ಭರವಸೆ ಅಥವಾ ಮಾತು ನೀಡಬಹುದು. ಸುಮ್ಮನೆ ಒಂದು ಪ್ರಯತ್ನ ಅನ್ನೋ ಹಾಗೆ ಭೇಟಿ ಮಾಡುವ ವ್ಯಕ್ತಿಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಸಂವಹನ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರಿ, ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಈ ಹಿಂದೆ ನೀವು ಯಾರಿಗೆಲ್ಲ ಮಾತು ನೀಡಿದ್ದಿರಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಒಂದು ಪ್ರಯತ್ನ ಇರಲಿ, ಕೆಲಸ ಆದರೆ ಆಗಲಿ- ಆಗದಿದ್ದರೆ ಬೇಡ ಎಂದುಕೊಂಡಿದ್ದ ಕೆಲಸಗಳು ಆಗಿಬಿಡುವಂಥ ಯೋಗಗಳಿವೆ. ವೃತ್ತಿನಿರತರು ಇದ್ದಲ್ಲಿ ಹಲವು ರೀತಿಯಲ್ಲಿ ಅಚ್ಚರಿಯ ಬೆಳವಣಿಗೆಗಳು ಆಗಲಿವೆ. ಇಲ್ಲ ಎನ್ನಬೇಕಾದ ಹಲವು ಕಡೆಗೆ ಹೌದು ಎಂದು ಹೇಳಿ, ಆ ನಂತರ ಆಲೋಚಿಸುವಂತಾಗುತ್ತದೆ. ಆದ್ದರಿಂದ ಸಂಕೋಚಕ್ಕೆ ಸಿಲುಕದಂತೆ ನೋಡಿಕೊಳ್ಳಿ. ಹೆಣ್ಣುಮಕ್ಕಳು ವಸ್ತ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಮುಖ್ಯವಾಗಿ ಫ್ಯಾಷನ್ ದಿರಿಸುಗಳಿಗಾಗಿ ಖರ್ಚಾಗಲಿದೆ. ವನ್ಯಪ್ರಾಣಿಗಳ ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿರುವವರಿಗೆ ವರ್ಗಾವಣೆ ಅಥವಾ ಪದೋನ್ನತಿ ಆಗಬಹುದು ಅಥವಾ ಸಿಗುವ ಸುಳಿವು ದೊರೆಯಬಹುದು. ಹಳೇ ಕಾಗದ- ಪತ್ರಗಳು, ಫೋಟೋಗಳು, ಫೈಲ್ ಗಳು, ಎಕ್ಸ್ ಟರ್ನಲ್ ಹಾರ್ಡ್ ಡಿಸ್ಕ್ ನಲ್ಲಿ ಏನೇನಿದೆ ಎಂದೆಲ್ಲ ನೋಡಿಕೊಳ್ಳುವುದು ಉತ್ತಮ. ನಿಮ್ಮಲ್ಲಿ ಕೆಲವರು ಈಗಿರುವ ಕೆಲಸದ ಜತೆಗೆ ಮತ್ತಷ್ಟು ಹೊಸ ಕೆಲಸಗಳನ್ನು ಹೆಚ್ಚುವರಿ ಆದಾಯಕ್ಕಾಗಿಯೇ ಮಾಡಬೇಕು ಎಂದು ನಿರ್ಧರಿಸುತ್ತೀರಿ. ಮನೆ, ಫ್ಲ್ಯಾಟ್ ಖರೀದಿಗಾಗಿ ಪ್ರಯತ್ನ ಮಾಡುತ್ತಿರುವವರು ತಮ್ಮ ನಿರ್ಧಾರದಲ್ಲಿ ಮುಖ್ಯವಾದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಆಪ್ತರೊಬ್ಬರು ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದ್ದಾರೆ.

Published On - 10:42 am, Wed, 2 August 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್