ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:16 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:36 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:56 ರಿಂದ 09:23ರ ವರೆಗೆ.
ಮೇಷ ರಾಶಿ: ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಸೇರಿಕೊಳ್ಳುವಿರಿ. ನಿಮ್ಮ ಕಾರ್ಯವನ್ನು ಮಿತ್ರರ ಮೂಲಕ ಮಾಡಿಕೊಳ್ಳುವಿರಿ. ನಿರ್ದಿಷ್ಟ ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು. ನಿಮ್ಮ ಒತ್ತಡಗಳನ್ನು ಮರೆತು ನಿಶ್ಚಿಂತೆಯಿಂದ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ಇಂದಿನ ಕೆಲವು ಜವಾಬ್ದಾರಿಯನ್ನು ಕೊಡುವಿರಿ. ಸಂಗಾತಿಯು ಕಡೆಗಣನೆಗೆ ನಿಮ್ಮ ಮೇಲೆ ಬೇಸರವಾಗಬಹುದು. ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ ಕಳುಹಿಸುವಿರಿ.
ವೃಷಭ ರಾಶಿ: ದೂರ ಪ್ರಯಾಣದಿಂದ ಆರೋಗ್ಯವು ಕೆಡಬಹುದು. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ನೌಕರರು ನಿಮ್ಮ ಮೇಲೆ ಸಿಟ್ಟಾಗಬಹುದು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ನಿಮ್ಮ ಸಂಗಾತಿಯಿಂದ ಭವಿಷ್ಯಕ್ಕೆ ಸಲಹೆಯು ಸಿಗಬಹುದು. ನಿಮ್ಮ ಮನೆ ನಿರ್ಮಾಣದ ಕೆಲಸವು ಅರ್ಧಕ್ಕೆ ನಿಲ್ಲಬಹುದು. ಸತ್ಕಾರ್ಯಕ್ಕೆ ನಿಮ್ಮಿಂದ ಕೊಡುಗೆ ಇರುವುದು.
ಮಿಥುನ ರಾಶಿ: ಕೆಲಸಗಳು ಪೂರ್ಣವಾಗದೇ ಇರುವುದು ನಿಮಗೆ ಆಂತಕವಾಗಬಹುದು. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ಹೊಸ ಕೆಲಸಗಳನ್ನು ನಿರ್ವಹಿಸಲು ಧೈರ್ಯ ಸಾಲದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಬರಬಹುದು. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು. ಹಂಚಿಕೊಂಡು ಮಾಡುವ ಕೆಲಸವು ವೇಗವಾಗಿ ಮುಗಿಯುವುದು.
ಕಟಕ ರಾಶಿ: ಅಧಿಕಾರಿಗಳ ವರ್ಗದವರು ನಿಮ್ಮ ವ್ಯವಹಾರದ ಮೇಲೆ ಕಣ್ಣಿಡುವರು. ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳಬಹುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ. ಪೋಷಕರು ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅವಶ್ಯ. ನೆರಮನೆಯರ ಜೊತೆ ಮಾತಿಗೆ ಮಾತು ಬೆಳೆದು ಕಲಹವಾಗಬಹುದು. ನಿಮ್ಮ ವಸ್ತುವಿನ ಮೇಲೆ ವ್ಯಾಮೋಹವು ಅಧಿಕವಾಗಬಹುದು. ಚಿತ್ತವು ಚಾಂಚಲ್ಯದಿಂದ ಇರುವುದು. ಅಪರಿಚಿತರ ಜೊತೆ ವ್ಯವಹಾರವನ್ನು ಹಂಚಿಕೊಳ್ಳುವಿರಿ.
ಸಿಂಹ ರಾಶಿ: ಇಂದು ಹಣದ ಬಗ್ಗೆ ನಿಮಗೆ ಲೆಕ್ಕವೇ ಸಿಗದೇ ಖರ್ಚಾಗುವುದು. ಆಪ್ತರಿಗೆ ಕೊಟ್ಟ ಹಣವು ಮರಳಿ ಬಾರದೇ ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸುವಿರಿ. ನಿಮ್ಮ ಬಗ್ಗೆ ಮಾತನಾಡುವವರಿಗೆ ಈಗಲೇ ಉತ್ತರ ಕೊಡುವುದು ಬೇಡ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು. ಬಂಧುಗಳಿಂದ ಉಡುಗೊರೆ ಸಿಗಲಿದೆ. ನಿಮ್ಮ ಮಾತಿನ ಮೇಲೆ ನಂಬಿಕೆಯು ಕಷ್ಟವಾದೀತು. ಅಪಘಾತ ಭೀತಿಯು ಕಾಡಬಹುದು. ಕಲಾವಿದರು ಅವಕಾಶವನ್ನು ಹೆಚ್ಚು ಪಡೆಯಬಹುದು. ಹೂಡಿಕೆಯನ್ನು ಮಿತಿಯಲ್ಲಿ ಮಾಡುವುದು ಸೂಕ್ತ. ಅತಿಯಾದ ಓಡಾಟದಿಂದ ಆಯಾಸವಾಗುವುದು.
ಕನ್ಯಾ ರಾಶಿ: ನಿಮ್ಮ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಹಾಗೂ ಓದಿನ ಕಡೆ ಗಮನವು ಇಲ್ಲದಿರುವುದು ಪಾಲಕರಿಗೆ ಗೊತ್ತಾಗಿ ಬೇಸರವಾಗಬಹುದು. ಯಾವುದೇ ಉದ್ಯಮಕ್ಕೂ ಕಾನೂನಿನ ವಿಷಯದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದು ಮುಂದುವರಿಯಿರಿ. ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ಚಂಚಲಗೊಳಿಸಬಹುದು. ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು. ಪ್ರೀತಿಯು ಅಪನಂಬಿಕೆಯಿಂದ ನಾಶವಾಗಬಹುದು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಲಿದೆ. ಭವಿಷ್ಯದ ಯೋಜನೆಯನ್ನು ಸರಿಯಾಗಿ ತೀರ್ಮಾನಿಸಿಕೊಳ್ಳುವಿರಿ. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ ಅನುಮಾನವನ್ನು ದೂರಮಾಡುವುದು.
ತುಲಾ ರಾಶಿ: ಹಳೆಯ ವ್ಯಾಧಿಯು ಮತ್ತೆ ಕಾಣಸಿಕೊಳ್ಳುವುದು. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು. ಆರಂಭಿಸಿದ ಉದ್ಯೋಗದಲ್ಲಿ ಯಾವ ವಿಘ್ನವೂ ಬಾರದಂತೆ ಪ್ರಾರ್ಥಿಸಿ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ಬಹಳ ದಿಗಳಿಂದ ಅನುಭವಿಸುತ್ತಿರುವ ರೋಗಕ್ಕೆ ಔಷಧವು ಸಿಗುವುದು. ಸಹೋದ್ಯೋಗಿಗಳಿಗೆ ಸಿಕ್ಕ ಪ್ರಶಂಸಯಿಂದ ಅಸೂಯೆಯಾಗಬಹುದು.
ವೃಶ್ಚಿಕ ರಾಶಿ: ಮನಮೋಹಕ ಸ್ಥಳಗಳಿಗೆ ಹೋಗುವಿರಿ. ಅನಿರೀಕ್ಷಿತವಾಗಿ ಸಿಕ್ಕ ಬಂಧುಗಳನ್ನು ಮನೆಗೆ ಆಮಂತ್ರಿಸುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು. ಮಕ್ಕಳ ವಿವಾಹಕ್ಕೆ ಅತಿಯಾದ ಪ್ರಯತ್ನದಿಂದ ಫಲವನ್ನು ಕಾಣುವಿರಿ. ಸಹೋದರನ ಆರೋಗ್ಯವು ಕೆಡಬಹುದು.
ಧನು ರಾಶಿ: ದಾಂಪತ್ಯದ ಮೇಲೆ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಯಲ್ಲಿ ಮಗ್ನರಾಗುವಿರಿ. ತುರ್ತು ಕಾರ್ಯಕ್ಕಾಗಿ ಅವಸರವಸರವಾಗಿ ಪ್ರಯಾಣ ಮಾಡಬೇಕಾಗಬಹುದು. ಶುಭ ಸಮಯವು ನಿಮ್ಮ ದಿಕ್ಕನ್ನು ಬದಲಿಸೀತು. ಮಾನಸಿಕವಾಗಿ ನೀವು ಬಲಗೊಳ್ಳುವ ಅವಶ್ಯಕತೆ ಇದೆ. ಆಸ್ತಿಯ ಖರೀದಿಗಾಗಿ ಹಣಕೊಟ್ಟು ಕಳೆದುಕೊಳ್ಳುವಿರಿ.
ಮಕರ ರಾಶಿ: ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ಸಿಗಬೇಕಾದ ಸ್ಥಾನಕ್ಕೆ ತೊಂದರೆಯಾಗಬಹುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಔದಾರ್ಯ ಗುಣವು ದುರುಪಯೋಗವಾಗಬಹುದು. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ. ಹಿರಿಯರ ಶುಶ್ರೂಷೆಗೆ ಅವಕಾಶ ಸಿಗುವುದು. ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಡಿ ಇಡುವುದು ಸೂಕ್ತ. ಹೊಸ ಉದ್ಯೋಗವನ್ನು ಆರಂಭಿಸುವತ್ತ ನಿಮ್ಮ ಆಲೋಚನೆಯು ಗಾಢವಾಗಿ ಇರುವುದು. ಮಕ್ಕಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವು ಕಂಡು ಉದ್ವಿಗ್ನವಗಬಹುದು. ಚಿತ್ತವು ನಾನಾ ಬಗೆಯ ಆಲೋಚನೆಯಲ್ಲಿ ಮಗ್ನವಾಗುವುದು.
ಕುಂಭ ರಾಶಿ: ಹಿರಿಯರ ಮಾತನ್ನು ನಿರಾಕರಿಸಿದ್ದ ನಿಮಗೆ, ಅದೇ ಉಪಯೋಗಕ್ಕೆ ಬರಲಿದೆ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಕೃಷಿಯಿಂದ ಲಾಭ ಗಳಿಸಲು ತಜ್ಞರ ಸಲಹೆ ಸಿಗಲಿದೆ. ಶತ್ರುಗಳ ಚಲನವಲನಗಳ ಮೇಲೆ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ. ಕುಟುಂಬದಲ್ಲಿ ನಿಮ್ಮಿಂದ ಸಂತೋಷವನ್ನು ಇರುವುದು. ಬಂಧುಗಳ ಪ್ರೀತಿಯೂ ಸಿಗುವುದು. ಅತಿಥಿ ಸತ್ಕಾರವನ್ನು ಮಾಡಲು ಉತ್ಸುಕತೆ ಇರುವುದು. ನಿಮ್ಮ ಚಿಂತೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಸಂಪತ್ತಿನ ರಕ್ಷಣೆಯ ವಿಚಾರದಲ್ಲಿ ನಿಮಗೆ ಆತಂಕವಿರುವುದು.
ಮೀನ ರಾಶಿ: ಇಂದಿನ ನಿಮ್ಮ ವ್ಯವಹಾರವು ಹತ್ತಾರು ಗೊಂದಲಗಳಿಂದ ಇರಲಿದ್ದು ಮುಂದುವರಿದರೆ ನಷ್ಟವಾಗುವ ಭಯವೂ ಇರಲಿದೆ. ದ್ವಿಚಕ್ರ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕು. ಅಧ್ಯಾತ್ಮದಲ್ಲಿ ಮನಸ್ಸನ್ನು ಇಡುವಿರಿ. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಳ್ಳಲು ತಂತ್ರಗಳನ್ನು ಹೂಡಬಹುದು. ನಿರುದ್ಯೋಗಿ ಮಿತ್ರನಿಗೆ ನೀವು ಸಹಾಯ ಮಾಡುವಿರಿ. ನಿಮ್ಮ ಉದ್ಯಮಕ್ಕೆ ಹೊಸ ಸ್ಪರ್ಶವನ್ನು ಕೊಡುವಿರಿ.
ಲೋಹಿತಶರ್ಮಾ 8762924271 (what’s app only)