ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ.
ಮೇಷ: ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು. ಮನೆಯಿಂದ ಸಮೀಪದ ದೇವರ ದರ್ಶನಕ್ಕೆ ನೀವು ಹೋಗಲಿದ್ದೀರಿ. ಗೋವುಗಳ ಸಹವಾಸ ನಿಮಗೆ ಹಿತವೆನಿಸೀತು. ಸಂಗಾತಿಯನ್ನು ನಿಮ್ಮ ಹಿಡಿತಕ್ಕೆ ತಂದುಕೊಳ್ಳಲು ಪ್ರಯತ್ನಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಲಾಭವೂ ನಷ್ಟವೂ ಅಷ್ಟಾಗಿ ಇರದು. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಂಡೀತು. ನೀವು ಊಹಿಸದಂತೆ ಆಯಿತೆಂಬ ಸಂತೋಷವು ಆಗಬಹುದು. ಇಂದು ಆಗುವ ಬದಲಾವಣೆಯನ್ನು ಸಂತೋಷದಿಂದ ಸ್ವಾಗತಿಸಿ.
ವೃಷಭ: ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಅವರಿಗೆ ವೃಥಾ ಖರ್ಚು ಮಾಡುವುದು ಎಂಬ ಭಾವ ಪೋಷಕರಿಗೆ ಉಂಟಾಗಬಹುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ ಮಾಡಿದ ಸಹಾಯಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ. ಎಂದೂ ಊಹಿಸದ ಘಟನೆಯೊಂದು ಇಂದು ನಡೆಯಬಹುದು. ಸಂದರ್ಭಗಳನ್ನು ನಿಭಾಯಿಸಲು ಕಲಿಯುವ ಅನಿವಾರ್ಯತೆ ಬರಬಹುದು. ಅನಗತ್ಯ ಅಲೆದಾಟವು ನಿಮಗೆ ಕಷ್ಟವಾದೀತು.
ಮಿಥುನ: ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಕುಟುಂಬದಲ್ಲಿ ಕೆಲಸಗಳು ಹೆಚ್ಚಿರಬಹುದು. ಪ್ರಯಾಣದಿಂದ ಆಯಾಸವಾಗಬಹುದು. ವಿಶ್ರಾಂತಿಯನ್ನು ಪಡೆಯಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಹೊಸ ಆದಾಯಗಳು ನಿಮಗೆ ವಿದೇಶದಿಂದ ಬರಲಿದೆ. ನಿಮ್ಮ ಶಾಂತಸ್ವಭಾವವನ್ನು ದುರುಪಯೋಗ ಮಾಡಿಕೊಂಡಾರು. ತಂತ್ರಜ್ಞಾನಕ್ಷೇತ್ರದವರಿಗೆ ಸ್ವಲ್ಪ ಹಿನ್ನಡೆಯಾದೀತು. ನಿಮ್ಮ ಸರ್ಜನ ಶೀಲತೆಯನ್ನು ತೋರಿಸಬೇಕಾದೀತು.
ಕಟಕ: ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಧಾರ್ಮಿಕ ಸ್ಥಳಗಳ ದರ್ಶನವನ್ನು ಮಾಡಿ ಬರುವಿರಿ. ಇಂದೇ ಮುಗಿಸುವ ಕೆಲಸಗಳನ್ನು ನಾಳೆಗೆ ಇಟ್ಟುಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡದವರು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ಒಬ್ಬರೇ ವಾಹನದಲ್ಲಿ ಸವಾರಿಮಾಡಬೇಡಿ. ತಾಯಿಯ ಕಡೆಯವರಿಂದ ಸಹಾಯವು ಸಿಗಬಹುದು. ಒಳ್ಳೆಯ ಭೋಜನವನ್ನು ಮಾಡುವ ಅವಕಾಶ ತಪ್ಪಿ ಹೋಗಬಹುದು.
ಸಿಂಹ: ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು. ನೂತನ ದಾಂಪತ್ಯದಲ್ಲಿ ಅನ್ಯೋನ್ಯತೆ ಇದ್ದರೂ ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯು ಇಬ್ಬರ ಮೇಲೂ ಇರಲಿದೆ. ವೃಥಾ ಖರ್ಚನ್ನು ಹೆಚ್ಚುಮಾಡಿಕೊಳ್ಳುವ ಕೆಲಸಕ್ಕೆ ಹೋಗಬೇಡಿ. ಅನಿವಾರ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗಿರಿ. ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ.
ಕನ್ಯಾ: ಇಂದು ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ನಿಮ್ಮ ಪ್ರಭಾವವು ಉದ್ಯೋಗವಲಯಕ್ಕೆ ಗೊತ್ತಾಗಲಿದೆ. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ಎಚ್ಚರದಿಂದ ಇರವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಬೇಸರ ಬಂದರೂ ಬಿಡದೇ ಮುಂದುವರಿಸುವುದು ಅನಿವಾರ್ಯವಾದೀತು. ಶುಭದ ನಿರೀಕ್ಷೆಯಲ್ಲಿ ಇರುವುದು ಬಹಳ ಯೋಗ್ಯ.
ತುಲಾ: ಇಡಿಯ ದಿನವನ್ನು ಸಂತೋಷದಿಂದ ಕಳೆಯುವ ಯೋಜನೆಯನ್ನು ರೂಪಿಸಿಕೊಂಡಿರುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ಹಠವಿರಲಿದೆ. ಭೂಮಿಯ ವ್ಯವಹಾರದಲ್ಲಿ ಅನುಕೂಲಗಳು ಅಧಿಕವಾಗಿರಲಿವೆ. ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ತಂದೆಯ ಆರೋಗ್ಯವು ದೃಢವಾಗಿರಲಿದೆ. ಸಹೋದರನು ನಿಮ್ಮ ಬಗ್ಗೆ ಪ್ರೀತಿ ಉಳ್ಳವನಾಗುವನು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕೆನಿಸೀತು. ದೈವವನ್ನು ನಂಬಿ, ನಿಮ್ಮ ಪ್ರಯತ್ನವನ್ನು ಮಾಡಿ.
ವೃಶ್ಚಿಕ: ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರಬಹುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇಂದು ಮಾಡಬೇಕಾದ ಕೆಲಸದ ಬಗ್ಗೆ ಗಮನವಿರಲಿ. ಮೊದಲು ಅದರ ಪಟ್ಟಿಯನ್ನು ಆದ್ಯತೆಯ ಪ್ರಕಾರ ರಚಿಸಿಕೊಳ್ಳಿ. ಕಲಾವಿದರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಒಂಟಿತನವನ್ನು ಇಷ್ಟಪಡುವ ನಿಮಗೆ ನಿಮ್ಮವರು ಹಾಗೆ ಇರಲು ಬಿಡಲಾರರು. ಬಂಧುಗಳು ಆಸ್ತಿಯ ವಿಚಾರವನ್ನು ಕೆದಕಿ ಕೇಳುವರು. ಸರಿಯಾದ ಉತ್ತರವನ್ನು ಹೇಳದೇ ಅವರನ್ನು ನಂಬಿಸುವಿರಿ.
ಧನುಸ್ಸು: ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ. ಅಪಘಾತವಾಗುವ ಸಾಧ್ಯತೆ ಇದೆ. ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಸಜ್ಜನರ ಅಥವಾ ಸಾಧುಗಳ ದರ್ಶನವಾಗಬಹುದು. ಅವರ ಮಾತುಗಳು ನಿಮಗೆ ಹಿತವೆನಿಸಬಹುದು. ಸ್ನೇಹಿತರ ಇಂದು ನಿಮ್ಮ ಮನೆಗೆ ಬರಬಹುದು. ಒಳ್ಳೆಯ ಆತಿಥ್ಯವನ್ನು ಮಾಡಿ. ಮಧುರವಾದ ಆಹಾರವನ್ನು ಇಂದು ಹೆಚ್ಚು ಸೇವಿಸುವಿರಿ. ಮನೆಯವರ ಅತಿಯಾದ ಪ್ರೀತಿಯಿಂದ ಬಂಧಿತರಾಗಬಹುದು. ಗುರು ರಾಯರ ದರ್ಶನವನ್ನು ಮಾಡಿ ಬನ್ನಿ.
ಮಕರ: ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವುದು ಉಚಿತ. ನಿಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಿ. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಸರನ್ನು ಬಯಸುವಿರಿ. ಕಣ್ಣಿನ ದೋಷವು ಅಧಿಕವಾಗಬಹುದು. ಸ್ತ್ರೀಯರಿಗೆ ಸಂಬಂಧಿಸಿದಂತೆ ಖರ್ಚುಗಳನ್ನು ಅಧಿಕ ಮಾಡುವಿರಿ. ಮನಸ್ಸು ನಿಮ್ಮ ಹಿಡಿತದಲ್ಲಿ ಇರದಿದ್ದರೆ ಸ್ವಲ್ಪ ಕಾಲ ಧ್ಯಾನವನ್ನು ಮಾಡಿ. ಕರಕುಶಲದಲ್ಲಿ ಆಸಕ್ತಿಯನ್ನು ತೋರಿಸುವಿರಿ. ಕ್ಷುಲ್ಲಕ ಕಾರಣಕ್ಕೆ ದುಃಖಿಸುವ ಅವಶ್ಯಕತೆ ಇಲ್ಲ.
ಕುಂಭ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ಹೆಚ್ಚು ಅನನುಕೂಲದ ಸ್ಥಿತಿಯು ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಸಾಮರ್ಥ್ಯವನ್ನು ಯಾರೂ ತಿಳಿಯರು. ನೀವೇ ಖುದ್ದಾಗಿ ತಿಲಕಿಸಬೇಕಾದ ಪರಿಸ್ಥಿತಿಯೂ ಇರಬಹುದು. ಸ್ವತಂತ್ರವಾದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗಬೇಡಿ. ವಿವಾಹ ಜೀವನವು ಡೋಲಾಯಮಾನವಾಗಿ ಸಾಗಲಿದೆ. ನಂಬಿಕೆಯನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು, ಜಾಗರೂಕತೆಯಿಂದ ಅದನ್ನು ನಿಭಾಯಿಸಬೇಕಾಗಬಹುದು.
ಮೀನ: ಇಂದು ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟಕೊಳ್ಳಿ. ಉನ್ನತ ಸ್ಥಾನ, ಮಾನಗಳು ಪ್ರಭಾವದಿಂದ ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಹೆಚ್ಚು ಅನುಕೂಲತೆಗಳ ಇರುವ ಕಡೆ ನೀವು ಸೇರಿಕೊಳ್ಳಿ. ಹೆಚ್ಚಿನ ಆದಾಯದ ಜೊತೆ ಖರ್ಚೂ ಅಧಿಕವಾಗಿದೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬವು ನಿಮ್ಮ ಜೊತೆಗಿದ್ದು ನಿಮಗೆ ಧೈರ್ಯವನ್ನು ತುಂಬಬಹುದು. ಸಾಮಾನ್ಯ ಜ್ಞಾನದ ಕೊರತೆ ಕಾಣಬಹುದು. ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುವಿರಿ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್-8762924271)