Daily Horoscope: ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪತ್ತು ವ್ಯಯವಾಗುವ ಸಾಧ್ಯತೆ

|

Updated on: May 01, 2023 | 5:00 AM

(2023 ಮೇ​ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪತ್ತು ವ್ಯಯವಾಗುವ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 07:46 ರಿಂದ 09:20ರ ವರೆಗೆ, ಯಮಘಂಡ ಕಾಲ 10:55 ರಿಂದ 12:30 ವರೆಗೆ, ಗುಳಿಕ ಕಾಲ 02:04 ರಿಂದ 03:39 ರ ವರೆಗೆ.

ಮೇಷ: ಒಂಟಿತನವು ನಿಮಗೆ ಬಹಳ ಬೇಸರವಾಗಬಹುದು. ಸಂಗಾತಿಯನ್ನು ಮೆಚ್ಚಿಸಲು ಹೋಗಿ ಸೋಲುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಾಗೆ ದಿನವನ್ನು ರೂಪಿಸಿಕೊಳ್ಳಿ. ದುಸ್ಸಾಹಸವು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟರೂ ತಲೆಯ ಒಳಗೆ ಹೋಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪತ್ತು ವ್ಯಯವಾಗುವ ಸಾಧ್ಯತೆ ಇದೆ. ಹೆಚ್ಚಿನ ಕಡೆ ಗಮನಕೊಡಲು ಸಾಧ್ಯವಾಗದು. ಒಂದೇ ಕಡೆಯಲ್ಲಿ ಗಮನಹರಿಸಿದ ಕೆಲಸವು ಸರಿಯಾಗಿ ಹೋಗುವುದು.‌ ಸಮಯ ಮಿತಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ.

ವೃಷಭ: ನಿಮ್ಮ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರಲಿದೆ. ನಿಮ್ಮ ಬಗ್ಗೆ ಋಣಾತ್ಮಕವಾದ ಮಾತುಗಳು ಕೇಳಿ ಬರಬಹುದು. ಅದನ್ನು ಧನಾತ್ಮಕವಾಗಿ ಮಾಡುವ ಛಲವು ನಿಮಗೆ ಇರಬೇಕಿದೆ. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ನೀವು ಸ್ನೇಹಿತರ ಸಲಹೆಯನ್ನೂ ಪಡೆದರೆ ಒಳ್ಳೆಯದು‌. ಜ್ವರ ಬರುವ ಹಾಗಿದ್ದು ಬೇಕಾದ ಔಷಧವನ್ನು ಸ್ವೀಕರಿಸಿ. ಸುತ್ತಾಡುವ ಮನಃಸ್ಥಿತಿ ಇದ್ದರೂ ದೇಹವು ಸಹಕರಿಸದೇ ಹೋಗಬಹುದು. ವಾಹನವನ್ನು ನಿಧಾನವಾಗಿ ಚಲಾಯಿಸಿ. ಮನೆಯವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.

ಮಿಥುನ: ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ಕೆಲಸಗಳಿಂದ ಒತ್ತಡವು ಅತಿಯಾಗಬಹುದು, ಸಮಾಧಾನಚಿತ್ತದಿಂದ ಸ್ವೀಕರಿಸಿರಿ. ತಪ್ಪುಗಳಿಂದ ಪಶ್ಚಾತ್ತಾಪ ಆಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಕೆಲಸವು ಕಷ್ಟವೆಂದು ಕೈಬಿಡಬಹುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸವನ್ನು ಮಾಡಿ. ಅತಿಥಿ ಸತ್ಕಾರವನ್ನು ನೀವಿಂದು ಮಾಡುವಿರಿ. ಎದೆಯ ಭಾಗದಲ್ಲಿ‌ ನೋವು ನೋವು ಕಾಣಿಸಿಕೊಂಡೀತು. ಸಮಯಕ್ಕೆ ಗೌರವ ಕೊಡಿ.‌ ಅದನ್ನು ಹಾಗೇ ಸುಮ್ಮನೇ ಕಳೆಯಬೇಡಿ.

ಕಟಕ: ನೀವಿಂದು ಸುಳ್ಳಾಡುವಿರೆಂದು ಅನ್ನಿಸಬಹುದು. ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯವನ್ನು ಪಡೆಯುವಿರಿ. ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಯನ್ನು ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುವಿರಿ. ಮನಸ್ಸು ಸಂಕೋಚಗೊಂಡಿದ್ದು ಅದರ ವಿಕಾಸಕ್ಕೆ ಹೊರಗಡೆ ಸುತ್ತಾಟ ಮಾಡುವಿರಿ. ಖರ್ಚಿನ ಕಾರಣಕ್ಕೆ ಪತಿಯ ಜೊತೆ ಕಲಹವೂ ಆಗಬಹುದು. ಮೇಲಿಂದ‌ ಮೇಲೆ ಆರೋಗ್ಯವು ಹದ ತಪ್ಪುತ್ತಿರುವುದು ಬೇಸರದ ವಿಚಾರವಾಗಲಿದೆ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ.

ಸಿಂಹ: ಹತ್ತಿರವರನ್ನು ನಿಮ್ಮ ಮಾತುಗಳಿಂದ ದೂರಮಾಡಿಕೊಳ್ಳುವಿರಿ. ಎಷ್ಟೋ ವರ್ಷದ ಸ್ನೇಹವು ಬೇರೆಯಾದೀತು. ಕಲ್ಪನೆಗಳಿಗೆ ರೂಪವನ್ನು ಕೊಡಲು ಹೋದರೆ ಅದು ಅಸಾಧ್ಯವಾದೀತು. ನಿಮ್ಮನ್ನು ನಡತೆಯ ಮೂಲಕ ಅಳೆಯುವರು. ಕಛೇರಿಯ ಕೆಲಸವು ಭಾರವಾದರೂ ಅನಿವಾರ್ಯವಾಗಿ ಮಾಡಬೇಕಾದೀತು. ಮನೆಯ ಕೆಲಸವನ್ನು ಯುಕ್ತಿಯಿಂದ ಮಾಡಿ ಮುಗಿಸುವಿರಿ. ಆರೋಗ್ಯವು ಕೆಡದಂತೆ ನೋಡಿಕೊಳ್ಳಿ. ಬಂಧುಗಳ ಮನೆಗೆ ಹೋಗಲಿದ್ದೀರಿ. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು.

ಕನ್ಯಾ: ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಆದರೆ ತಾಳ್ಮೆಯ ಅಗತ್ಯವಿದೆ. ಖರ್ಚು ಮಾಡುವಾಗ ಲೆಕ್ಕಾಚಾರ ಇರಲಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಸಬಹುದು. ಬೇಸರಗೊಳ್ಳುವಿರಿ. ಗೊಂದಲಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಮಕ್ಕಳು ನಿಮ್ಮನ್ನು ಪ್ರೀತಿಸಬಹುದು. ದಾಂಪತ್ಯದಲ್ಲಿ ಬರುವ ವೈಮನಸ್ಯವನ್ನು ಆಗಿಂದಾಗಿಯೇ ಪರಿಹರಿಸಿಕೊಳ್ಳಬೇಕಾಗುವುದು. ಮುಂದವರಿಸಿ, ಅದರ ಬೇರನ್ನು ನಿಮ್ಮೊಳಗೆ ಇಟ್ಟುಕೊಳ್ಳಬೇಡಿ.

ತುಲಾ: ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಸುಮ್ಮನೇ ಕೈ ಹಾಕಬೇಡಿ. ಅಧಿಕಾರಿಗಳಿಂದ ಏನಾದರೂ ತೊಂದರೆಯಾದೀತು. ಲೆಕ್ಕಪತ್ರದ ವಿಚಾರದಲ್ಲಿ ಸರಿಯಾಗಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕಾದೀತು. ಬಂಧುಗಳಿಂದ ದೂರವಿರುವ ಮನಸ್ಸು ಮಾಡುವಿರಿ. ಹಣಕಾಸಿನ ತೊಂದರೆಯಿಂದ ಕೆಲವು ಕೆಲಸಗಳನ್ನು ಮುಂದೂಡುವಿರಿ. ಖರೀದಿಯ ವಿಚಾರದಲ್ಲಿಯೂ ಹಿಂಜರಿಯುವಿರಿ. ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಅಧಿಕ ಲಾಭಕ್ಕೆ ಯೋಜನೆಯನ್ನು ರೂಪಿಸುವುದು ಒಳ್ಳೆಯದು.

ವೃಶ್ಚಿಕ: ತಾಯಿಯ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗದವರಿಗೆ ಕಛೇರಿಯಲ್ಲಿ ಕಿರಿಕಿರಿಯಾಗಬಹುದು. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ನಿಮ್ಮ ಮಕ್ಕಳು ನಿಮಗೇ ತಿರುಗಿ ಉತ್ತರ ನೀಡುವರು. ಸ್ನೇಹಿತರ ಜೊತೆ ದೂರದ ಊರಿಗೆ ಕಾರಣಾಂತರಗಳಿಂದ ಪ್ರಯಾಣಮಾಡುವಿರಿ. ಊಹೆಗೂ ಮೀರಿದ ಧನಲಾಭವು ಆಗಬಹುದು. ಇನ್ನೊಬ್ಬರ ಬಗ್ಗೆ ಚಿಂತಿಸುವ ಬದಲು ನಿಮ್ಮ ಬಗ್ಗಯೇ ಆಲೋಚಿಸಿ. ಒಂದಿಷ್ಟು ಬದಲಾವಣೆಗಳು ಆಗಬಹುದು.

ಧನು: ನಿಮ್ಮ ಹಳೆಯ ವಾಹನವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಉದ್ಯೋಗದ ನಿಮಿತ್ತ ನೀವು ಹೊರದೇಶಕ್ಕೆ ಹೋಗಬಹುದು. ಅನೇಕ ವರ್ಷಗಳ ಅನಂತರ ಆದ ಸಂತಾನದಿಂದ ಸಂತಸ ಆಗಲಿದೆ. ವಿದ್ಯುತ್ ಉಪಕರಣವನ್ನು ನೀವು ಖರೀದಿಸುವಿರಿ. ವಿವಾಹ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಹಳೆಯ ಸ್ನೇಹಿತರು ಸಿಕ್ಕಿ ಹಳೆಯ ವಿಚಾರಗಳನ್ನು ಸ್ಮರಿಸಿಕೊಳ್ಳುವಿರಿ. ಸ್ವಂತ ಉದ್ಯೋಗವಿದ್ದರೆ ಹೆಚ್ಚು ಶ್ರಮ ಆದೀತು. ನೀವು ಊಹಿಸದಂತೆ ಘಟನೆಗಳು ನಡೆಯುವುದು. ಕಂಡ ಕನಸನ್ನು ಕನಸಾಗಿಯೇ ಇಟ್ಟುಕೊಳ್ಳಿ.

ಮಕರ: ಅಸಂಬದ್ಧ ಮಾತುಗಳನ್ನು ಕೇಳಿ ನಿಮಗೆ ಬೇಸರವಾದೀತು. ಕೋಪ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸುವಿರಿ. ವಾಹನದಿಂದ ಆಗುವ ಅಪಘಾತವು ಸಣ್ಣ ಅಂತರದಿಂದ ರಕ್ಷಣೆಯಾಗುವಿರಿ. ಪುಣ್ಯದ ಸ್ಮರಣೆ ನಿಮಗಾಗಲಿದೆ. ಗೃಹಪ್ರವೇಶಕ್ಕೆ ಮನೆಯು ಸಿದ್ಧವಾಗಿದ್ದು ಪ್ರವೇಶಕ್ಕೆಂದು ಒಳ್ಳೆಯ ದಿನವನ್ನು ಹುಡುಕುತ್ತಿರುವಿರಿ. ಸ್ನೇಹಿತರ ಅಥವಾ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಆರ್ಥಿಕವಾಗಿ ದುರ್ಬಲವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣವಂತೂ ಸಿಗದು.

ಕುಂಭ: ದಾಂಪತ್ಯವು ಸುಖವಾಗಿರಲು ಇಬ್ಬರೂ ಪ್ರಯತ್ನಿಸಬೇಕು. ಜಟಕಾ ಬಂದಿಯಂತಿದ್ದರೆ ಸರಸಜೀವನ. ಇಲ್ಲವಾದರೆ ವಿರಸವಾಗುವುದು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸಬಹುದು. ನಿಮ್ಮ ನಡೆಯು ಸುಲಭಕ್ಕೆ ತಿಳಿಯದು. ಐಷಾರಾಮಿಯಾಗಿ ಇರಲು ಈ ದಿನವನ್ನು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷ ಸಿಗಲಿದೆ. ಸ್ನೇಹಿತರಿಗೆ ಸಹಾಯವನ್ನು ಮಾಡುವಿರಿ. ಕಾರ್ಯವು ನಿಧಾನವಾಗಿದೆ ಎಂದು ಕಂಡರೂ ಚಿಂತೆ ಬೇಡ.‌ ಪೂರ್ಣವಾಗಲಿ ಸರಿಯಾಗಿ.

ಮೀನ: ಮನೆಯಲ್ಲಿಯೇ ಇರುವ ನಿಮಗೆ ಮನೆಯವರ ಮಾತುಗಳು ಕಿರಿಕಿರಿ‌ ಎನಿಸಬಹುದು. ಮನೆಯ ಕೆಲಸಗಳನ್ನು ಮಾಡಲು ನೀವು ಹಿಂಜರಿಯುವಿರಿ. ನೀವು ಇಂದು ನಡೆದಾಡಲೂ ಇಷ್ಟಪಡುವುದಿಲ್ಲ. ಒಂದು ಸಂದರ್ಭದಂತೆ ಮತ್ತೊಂದು ಸಂದರ್ಭವನ್ನು ಊಹಿಸಿಕೊಳ್ಳಬೇಡಿ. ನಿಮ್ಮ ವೇಗವನ್ನು ಹಿಮ್ಮೆಟ್ಟಿಸಲು ನಾನಾ ತಂತ್ರಗಳು ನಡೆಯಬಹುದು. ನಿಮ್ಮ ಕೆಲಸವೇ ಅವರಿಗೆ ಉತ್ತರವಾಗಲಿ. ಮಾತು ಆದಷ್ಟು ಕಡಿಮೆ ಇರುವುದೇ ಒಳ್ಳೆಯದು. ಅಸಹಜವಾದ ಖುಷಿಯಿಂದ ಇರುವಿರಿ. ಕಾಲಕ್ಕೆ ಆಗಬೇಕಾದುದು ಆಗುವುದು.

ಲೋಹಿತಶರ್ಮಾ 8762924271 (what’s app only)