Daily Horoscope: ಈ ರಾಶಿಯವರು ಇಂದು ಆಧ್ಯಾತ್ಮದತ್ತ ವಾಲುವರು

|

Updated on: May 08, 2023 | 5:00 AM

ಇಂದಿನ (2023 ಮೇ​ 8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಈ ರಾಶಿಯವರು ಇಂದು ಆಧ್ಯಾತ್ಮದತ್ತ ವಾಲುವರು
ಪ್ರಾತಿನಿಧಿಕ ಚಿತ್ರ
Image Credit source: herzindagi.com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖಮ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ.

ಮೇಷ: ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗ ಮಾಡಬೇಡಿ. ಅಸೂಯೆ ಪಟ್ಟಾರು. ಅದು ನಿಮಗೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಸಹೋದರನ ಭೇಟಿಯಿಂದ ಖುಷಿ ಸಿಗಲಿದೆ. ವ್ಯಾಪರವು ಅಲ್ಪ ಲಾಭವನ್ನು ತಂದೀತು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿಡಿತವಿರಲಿ. ಯಥೇಚ್ಛವಾದ ಖರ್ಚು ಬೇಡ. ವಾಹನ ಓಡಾಟವನ್ನು ಕಡಿಮೆ ಮಾಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಹಂತದಲ್ಲಿ ಬಗೆ ಹರಿಯುವ ಸಮಸ್ಯೆಗಳನ್ನು ಮೇಲಕ್ಕೆ ಒಯ್ಯವುದು ಬೇಡ. ಅದು ಇನ್ನೊಂದು ಮುಖವನ್ನೂ ತೋರಿಸೀತು. ಎಚ್ಚರಿಕೆಯಿಂದ ಇರಿ.

ವೃಷಭ: ನಿಮಗೆ ಅನಾರೋಗ್ಯವಿದ್ದರೆ ವಿಶ್ರಾಂತಿ ಪಡೆಯುವುದು ಉತ್ತಮ. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಯೋಗ್ಯತೆ ಇದ್ದರು ಯೋಗದ ಬಲ ಅಲ್ಪವಿದೆ. ಹಾಗಾಗಿ ಹೆಚ್ಚು ಪ್ರಯತ್ನದ ಅವಶ್ಯಕತೆ ಇದೆ. ಫಲವನ್ನೂ ಅತಿಯಾಗಿ ನಿರೀಕ್ಷಿಸಬೇಡಿ. ಒತ್ತಾಯದಿಂದ ನೀವಿಂದು ಪ್ರಯಾಣ ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆಯನ್ನು ಬಿಡಿ. ನಿಮಗೆ ಬೇಕಾದ ಹಾಗೆ ಎಲ್ಲವೂ ಲಭ್ಯವಾಗದು. ಸಿಕ್ಕಿದ್ದನ್ನು ಸದುಪಯೋಗ ಮಾಡಿಕೊಳ್ಳುವುದು ಜಾಣ್ಮೆ. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಮಿಥುನ: ಎಲ್ಲರನ್ನೂ ಒಗ್ಗೂಡಿಸಲು ನೀವು ಶ್ರಮಪಡಬೇಕಾದೀತು. ಆವರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಉಳಿಸಿದ ಹಣವು ನಿಮ್ಮ ಆಪತ್ತಿಗೆ ನೆರವಾಗುವುದು. ಕಷ್ಟವಾದರೂ ಕಛೇರಿಯಲ್ಲಿ ಕೆಲಸವನ್ನು ಮಾಡಬೇಕಾದೀತು. ಸರ್ಕಾರಿ ನೌಕರರು ಬಡ್ತಿ ಪಡೆಯಬಹುದು. ಸಂದರ್ಭಕ್ಕೆ ಅನುಸಾರವಾಗಿ ನಿಮ್ಮ ಮಾತುಗಳಿರಲಿ. ಏನನ್ನಾದರೂ ಕೇಳಿ ಬಂದರೆ ಇಲ್ಲ ಎನದೇ ಏನನ್ನಾದರೂ ಕೊಟ್ಟು ಕಳುಹಿಸಿ. ಕೆಲಸದಿಂದ ಹೆಚ್ಚು ದಣಿವಾದೀತು. ಕುಟುಂಬ ಜೊತೆ ಆರೋಗ್ಯದ ಬಗ್ಗೆ ಹಂಚಿಕೊಳ್ಳಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ.

ಕಟಕ: ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡು ವಾದಗಳನ್ನು ಮಾಡಬಹುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲಿದ್ದೀರಿ. ಧ್ಯಾನ, ಭಜನೆಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಬೆಳಗಿನ ಉತ್ಸಾಹವು ಸಂಜೆಯ ತನಕ ಇರಲಿದೆ. ಸ್ನೇಹಿತರಿಂದ ಅಮೂಲ್ಯವಾದ ಉಡುಗೊರೆ ಸಿಗಲಿದೆ.

ಸಿಂಹ: ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಕಛೇರಿಯಲ್ಲಿ ಕೆಲಸದ ಸಮಯದಲ್ಲಿ ಅಡ್ಡಾಡುತ್ತಿರುವುದನ್ನು ಕಂಡು ಸೂಚನೆ ಕೊಟ್ಟಾರು. ಪತಿಯಿಂದ ಕೆಲವು ವಿಷಯಗಳು ಮುಚ್ಚಿಡಲ್ಪಡುತ್ತವೆ. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಕೊರಗುವ ಅವಶ್ಯಕತೆ ಇಲ್ಲ. ಬಂದ ಹಣವನ್ನು ಖಾಲಿ ಮಾಡದೇ ರಕ್ಷಣೆ ಮಾಡಿ. ಭವಿಷ್ಯದ ಸಂಪತ್ತಾಗಬಹುದು. ಯಾರನ್ನೂ ಅತಿಯಾಗಿ ಕಾಯಿಸಬೇಡಿ.

ಕನ್ಯಾ: ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಅನಾರೋಗ್ಯವು ಹೆಚ್ಚಾಗಿ ದಿನಚರ್ಯೆಯನ್ನೇ ಬದಲಿಸುವ ತೀರ್ಮಾನಕ್ಕೆ ಬರಬಹುದು. ಸಾಮರ್ಥ್ಯವಿದ್ದರೂ ಅವಕಾಶದ ಕೊರತೆ ಇರಲಿದೆ. ಹಿರಿಯರ‌ ಮಾತಿಗೆ ಗೌರವ ಕೊಡಿ. ತಂದೆಗೆ ಎದುರಾಡಬೇಕಾದ ಸ್ಥಿತಿಯನ್ನು ತಂದುಕೊಳ್ಳಬೇಡಿ. ತಾಯಿಯ ಕಡೆಯಿಂದ ಉದ್ಯೋಗಕ್ಕೆ ಬೇಕಾದ ಸಹಾಯ ಸಿಗಬಹುದು. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು.

ತುಲಾ: ಮನಸ್ಸಿಲ್ಲದ‌ ಮನಸ್ಸಿನಿಂದ ಇಂದು ನೀವು ಆಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಳ್ಳಬೇಕಾಗಬಹುದು. ಶುಭವಾರ್ತೆಯು ನಿಮ್ಮ ಕೆಲಸಕ್ಕೆ ಬೆಂಬಲವನ್ನು ಕೊಡುವುದು‌. ಜವಾಬ್ದಾರಿಯುತ ಸ್ಥಾನವು ನಿಮಗೆ ಬರಬಹುದು. ಜಾಗರೂಕತೆಯಿಂದ ಅದನ್ನು ನಿರ್ವಹಿಸಬೇಕಾಗಬಹುದು. ಮನಸ್ಸಿಗೆ ಕೆಲವು ಮಾತುಗಳು ಕಿರಿಕಿರಿಯನ್ನು ಉಂಟುಮಾಡಬಹುದು. ವಿನಮ್ರತೆಯು ನಿಮ್ಮ ಕೆಲಸಕ್ಕೆ ಜಯವನ್ನು ಕೊಟ್ಟೀತು. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡಿ ಮುಗಿಸಿ. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ.

ವೃಶ್ಚಿಕ: ವೃತ್ತಿಯಲ್ಲಿ‌ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಚೌಕಟ್ಟಿನಲ್ಲಿ ಕೆಲಸ ಮಾಡುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಇಂದಿನ ಸಂಭ್ರಮಕ್ಕೆ ಕಾರಣ ಬೇಕಾಗಿರುವುದಿಲ್ಲ. ಆನಾರೋಗ್ಯದ ಸಮಸ್ಯೆಯನ್ನು ಬೇಗ ಪರಿಹರಿಸಿಕೊಳ್ಳುವಿರಿ. ದೂರದ ಬಂಧುಗಳ ಆಗಮನವಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ.

ಧನುಸ್ಸು: ಎಲ್ಲದಕ್ಕೂ ಸಿಟ್ಟುಗೊಳ್ಳುವ ಅಗತ್ಯವಿಲ್ಲ. ಕೆಲವೊಂದನ್ನು ಹಾಗಯೇ ಬಿಡುವುದು ಒಳ್ಳೆಯದು. ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ. ಹಣವನ್ನು ಹೊಂದಿಸಲು ಹೆಚ್ಚು ಕಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ ಉಳ್ಳವರಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮನ್ನು ನಾಸ್ತಿಕರು ಎಂದುಕೊಂಡಾರು. ವಿವಾದಕ್ಕೆ ಆದಷ್ಟು ಆಸ್ಪದ ಕೊಡದಿದ್ದರೇ ಉತ್ತಮ. ಕೆಲಸದಿಂದ ನೀವು ನಿರೀಕ್ಷಿಸಿರುವುದು ಸಾಕಾರಗೊಳ್ಳಬಹುದು. ವೇತನದ ಹೆಚ್ಚಳಕ್ಕೆ ನಿಮ್ಮ ವಿನಂತಿಯು ಪುರಸ್ಕಾರ್ಯವಾಗವಬಹುದು. ಸಾಲವನ್ನು ತೀರಿಸುವ ಭರದಲ್ಲಿ ಖರ್ಚಿಗೂ ಹಣವನ್ನು ಇಟ್ಟುಕೊಳ್ಳುವುದನ್ನು ಮರೆಯಬಹುದು.

ಮಕರ: ನಿಮ್ಮ ತೊಂದರೆಗಳೇ ಸಾವಿರವಿದ್ದರೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಧಿಕ ಅಧ್ಯಯನವನ್ನು ಮಾಡಬೇಕಿದೆ. ತಂದೆಯವರಿಗೆ ಎದುರು ಮಾತನಾಡುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ನಿಮ್ಮ ಅಂತರಂಗದಲ್ಲಿ ನಿಮ್ಮ ಕೆಲಸಕ್ಕೆ ಪಶ್ಚಾತ್ತಾಪಭಾವವು ಮೂಡಬಹುದು. ಯಾರ ಸಹಾಯವನ್ನೂ ಒಡೆಯದೇ ಸ್ವತಂತ್ರವಾಗಿ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ದಾಂಪತ್ಯದಲ್ಲಿ ಮುನಿಸು ಕಡಿಮೆಯಾದರೂ ಮಾತನಾಡಲು ಇಬ್ಬರೂ ತಯಾರಿರದೇ ಮೌನವೇ ಮುಂದುವರಿಯಲಿದೆ.

ಕುಂಭ: ನಿಮ್ಮ ನೆಚ್ಚಿನವರ ಭೇಟಿಯಾಗಬಹುದು. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅವಕಾಶಗಳಿದ್ದರೂ ಬಳಸಿಕೊಳ್ಳುವ ಮನಸ್ಸು ಇರದು. ಆರ್ಥಿಕ ಸಮಸ್ಯೆಗೆ ನಿಮ್ಮ ಆಪ್ತರು ಸಹಾಯ ಮಾಡುವರು. ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ವಿದ್ಯಾರ್ಥಿಗಳು ಉತ್ತಮವಾದ ಲಕ್ಷ್ಯವನ್ನು ಇಟ್ಟುಕೊಂಡಿದ್ದರೂ ನಿಮಗೆ ತಲುಪಲು ಕಷ್ಟವಾದೀತು. ಕೃಷಿಯೇ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬರಬಹುದು. ರುದ್ರಾಭಿಷೇಕವನ್ನು ಶಿವನಿಗೆ ಮಾಡಿಸಿ.

ಮೀನ: ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟನ್ನು ತರಿಸಬಹುದು. ಆತ್ಮೀಯರ ಸಲಹೆಯನ್ನು ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ನಿಮ್ಮ ಹೆಸರು ಬರಬೇಕೆಂದು ಬಹಳ ಶ್ರಮವಹಿಸುವಿರಿ. ಆದರೆ ಅದೆಲ್ಲವೂ ವ್ಯರ್ಥವಾಗಬಹುದು. ಇರುವುದನ್ನು ಹಾಗೆಯೇ ಹೇಳಿದ್ದರಿಂದ ನೀವು ನಿಷ್ಠುರರಾಗುವಿರಿ. ದಾಂಪತ್ಯದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲಿದ್ದೀರಿ. ಹಣಕಾಸಿನ ತೊಂದರೆಗಳು ಹೆಚ್ಚು ಕಾಣಿಸಿಕೊಳ್ಳಬಹುದು. ಜಲೋದ್ಯಮದಲ್ಲಿ ತೊಡಗಿದವರಿಗೆ ಅಲ್ಪ ಲಾಭ ಆಗಲಿದೆ.

ಲೋಹಿತಶರ್ಮಾ 8762924271 (what’s app only)