Number 8 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 8ಕ್ಕೆ 2025ರ ವರ್ಷಭವಿಷ್ಯ

| Updated By: Digi Tech Desk

Updated on: Dec 31, 2024 | 6:30 PM

ಜನ್ಮ ಸಂಖ್ಯೆ 8ರ ವರ್ಷ ಭವಿಷ್ಯ 2025: ಜನ್ಮಸಂಖ್ಯೆ 8 ಅಂದರೆ, ವರ್ಷದ ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 8 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.

Number 8 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 8ಕ್ಕೆ 2025ರ ವರ್ಷಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ಜನ್ಮಸಂಖ್ಯೆ 8 ಅಂದರೆ, ವರ್ಷದ ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 8 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.

ಗುಣ- ಸ್ವಭಾವ

ಜನ್ಮಸಂಖ್ಯೆ 8ರ ವ್ಯಕ್ತಿಗಳಿಗೆ ಅಧಿಪತಿ ಶನಿ ಗ್ರಹ ಆಗಿರುತ್ತದೆ. ಇವರು ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡುವವರು. ಈ ಸಂಖ್ಯೆಯವರು ಶ್ರಮ ಜೀವಿಗಳು. ಇವರು ಬದುಕುವ ಶೈಲಿ, ಗುಣ- ಧರ್ಮ, ಆರಿಸಿಕೊಳ್ಳುವ ವೃತ್ತಿ ಹಾಗೂ ಕ್ಷೇತ್ರ ಹೀಗೆ ಯಾವುದರಲ್ಲೂ ಹಾಗೂ ಯಾವುದನ್ನೂ ಸುಲಭವಾಗಿ ಆಗಲಿ ಎಂದು ಬಯಸುವ ಜನರು ಇವರಲ್ಲ. ಈ ವ್ಯಕ್ತಿಗಳ ಜೊತೆಗಿನ ಶತ್ರುತ್ವ ಬಹಳ ಅಪಾಯಕಾರಿ. ಮೇಲುನೋಟಕ್ಕೆ ಎಲ್ಲವನ್ನೂ ಮರೆತಂತೆ ತೋರಿಸಿಕೊಳ್ಳುವ ಇವರು, ಸಮಯ ಸಿಕ್ಕಾಗ ತಮಗೆ ತೊಂದರೆ ನೀಡಿದ್ದ ಅಥವಾ ಅವಮಾನ ಮಾಡಿದ್ದವರನ್ನು ಜೆಸಿಬಿ ಯಂತ್ರದ ಕೆಳಗಿನ ಹಪ್ಪಳದಂತೆ ಮಾಡಿಬಿಡುತ್ತಾರೆ. ಧರ್ಮ- ಕರ್ಮ ವಿಚಾರಗಳನ್ನು ನಂಬುವವರು ಈ ಸಂಖ್ಯೆಯಲ್ಲಿ ಹುಟ್ಟಿದವರು ಹೆಚ್ಚು. ಈ ಜನರು ಕೆಲಸ ಮಾಡುವುದನ್ನು ನೋಡುವುದಕ್ಕಿಂತ ಅದಕ್ಕಾಗಿ ಸಿದ್ಧತೆಯನ್ನು ನಡೆಸುತ್ತಾರಲ್ಲಾ ಅದನ್ನು ನೋಡಿಬಿಟ್ಟರೆ, ಸಣ್ಣ- ಪುಟ್ಟ ಕೆಲಸ ಕಾರ್ಯಗಳಿಗೂ ಏಕಿಷ್ಟು ಅತಿ ಮಾಡುತ್ತಾರೆ ಎಂಬ ಭಾವನೆ ಇತರರಿಗೆ ಬರುತ್ತದೆ. ಆದರೆ ಈ ಜನರು ತಮ್ಮ ಅದೃಷ್ಟದ ಪ್ರಮಾಣಕ್ಕಿಂತ ಶ್ರಮವನ್ನೇ ಹೆಚ್ಚು ನಂಬುತ್ತಾರೆ.

ಸಾಮಾನ್ಯ ಸಂಗತಿಗಳು

ಕುಟುಂಬ ಸದಸ್ಯರ ಏಳ್ಗೆ, ಅವರ ಶಿಕ್ಷಣ, ಮದುವೆ, ಉದ್ಯೋಗ, ವ್ಯಾಪಾರ- ವ್ಯವಹಾರ ಇಂಥವುಗಳಿಗೆ ನೀವು ಶ್ರಮ ಹಾಕಿ, ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಕುಟುಂಬದಲ್ಲಿನ ಶುಭ ಕಾರ್ಯಗಳನ್ನು ನೀವೇ ಮುಂದೆ ನಿಂತು ನಡೆಸಿಕೊಡ ಬೇಕಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡುವಂತೆ ಹಾಗೂ ಇರುವ ಹಣವನ್ನು ನಿರ್ವಹಿಸುವಂತೆ ನಿಮಗೇ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಆಸಕ್ತಿ ಜಾಸ್ತಿಯಾಗಲಿದೆ. ದೂರ ಪ್ರಯಾಣಗಳಿಗೆ ಈ ವರ್ಷ ಹೆಚ್ಚಿನ ಖರ್ಚು, ಶ್ರಮ ಹಾಗೂ ಸಮಯ ಹೋಗುತ್ತದೆ. ಮನೆಯ ಅಲಂಕಾರಕ್ಕಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನಿಮ್ಮ ಆಪ್ತರು ಅಥವಾ ಸಂಬಂಧಿಗಳು ಯಾವುದಾದರೂ ಕಾರಣಕ್ಕಾಗಿ ತಾವು ಬಳಸುವಂಥ ವಾಹನವನ್ನು ನಿಮ್ಮ ಬಳಿ ಇಟ್ಟುಕೊಂಡಿರಿ, ಅದನ್ನು ನೀವು ಬಳಸುತ್ತಾ ಇರಿ ಅಂತ ಹೇಳುವ ಸಾಧ್ಯತೆ ಹೆಚ್ಚಿದೆ. ಸೈಟು ಖರೀದಿ, ಜಮೀನು ಖರೀದಿ ಇಂಥವುಗಳು ಈ ವರ್ಷ ನಿಮ್ಮಿಂದ ಆಗಲಿದೆ.

ಆರೋಗ್ಯ

ಆರೋಗ್ಯದ ಕಾರಣಕ್ಕೆ ಉದ್ಯೋಗದಿಂದ ತಾತ್ಕಾಲಿಕವಾದ ಬಿಡುವು ತೆಗೆದುಕೊಳ್ಳಬೇಕು ಎಂಬ ಚಿಂತನೆಯು ನಿಮ್ಮಲ್ಲಿ ಕೆಲವರಿಗೆ ಮೂಡಲಿದೆ. ಹೊಟ್ಟೆಯುಬ್ಬರ ಗ್ಯಾಸ್ಟ್ರಿಕ್, ಎದೆಯುರಿ, ಹುಳಿ ತೇಗು, ಸೊಂಟದ ಸುತ್ತ ಬೊಜ್ಜಿನ ಶೇಖರಣೆ ಈ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ದೇಹದ ತೂಕ ಇಳಿಕೆಗೋ ಅಥವಾ ಕೊಬ್ಬಿನ ಪ್ರಮಾಣ ಕಡಿಮೆ ಆಗಲಿ ಎಂಬ ಕಾರಣಕ್ಕೋ ನೀವೇನಾದರೂ ಶಸ್ತ್ರಚಿಕಿತ್ಸೆ ಅಥವಾ ಬೇರೆ ಯಾವುದಾದರೂ ಚಿಕಿತ್ಸಾ ಕ್ರಮವನ್ನು ಅನುಸರಿಸಲಿದ್ದೀರಿ ಅಂತಾದರೆ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ, ತೀರ್ಮಾನವನ್ನು ಕೈಗೊಳ್ಳಿ. ಲಿವರ್, ಕಿಡ್ನಿ ಅಥವಾ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಕೂಡ ನಿಮ್ಮಲ್ಲಿ ಕೆಲವರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆಸ್ತಿ-ಹಣ- ಹೂಡಿಕೆ

ನಿಮ್ಮಲ್ಲಿ ಯಾರು ಫಾರ್ಮ್ ಹೌಸ್ ಗಳನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಪಡುತ್ತಿದ್ದೀರಿ ಅಥವಾ ಈಗ ಪ್ರಯತ್ನ ಪಡುತ್ತೀರಿ ಅಂಥವರಿಗೆ ಒಳ್ಳೆ ಜಮೀನು ಸಿಗಲಿದೆ. ಈಗಾಗಲೇ ಸೈಟ್ ಗಾಗಿ ಹೌಸಿಂಗ್ ಸೊಸೈಟಿ ಅಂಥ ಕಡೆಗಳಲ್ಲಿ ಅರ್ಜಿ ಸಲ್ಲಿಸಿ, ಕಾಯುತ್ತಿದ್ದೀರಿ ಅಂತಾದರೆ ಅಲಾಟ್ ಆಗುವ ಸಾಧ್ಯತೆಗಳು ತುಂಬ ಹೆಚ್ಚಾಗಿವೆ. ಸ್ಕೂಟರ್, ಕಾರು ಇಂಥ ವಾಹನಗಳನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಈಗಾಗಲೇ ವಾಹನ ಇದೆ ಎಂದಾದಲ್ಲಿ ಅದಕ್ಕಿಂತ ದುಬಾರಿ ಅಥವಾ ವಿಲಾಸಿ ವಾಹನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಈ ತನಕ ಮಾಡಿದ್ದ ಉಳಿತಾಯದ ಹಣವನ್ನು ತೆಗೆದು, ಷೇರು ಅಥವಾ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡುವ ಕುರಿತು ಗಂಭೀರ ಆಲೋಚನೆಯನ್ನು ಮಾಡಲಿದ್ದೀರಿ.

ಪ್ರೇಮ-ಮದುವೆ ಇತ್ಯಾದಿ

ಒಂದು ವೇಳೆ ನೀವು ವಿವಾಹ ವಯಸ್ಕರಾಗಿದ್ದಲ್ಲಿ ನಿಮ್ಮಲ್ಲಿ ಕೆಲವರಿಗೆ ಸಂಬಂಧಿಕರಲ್ಲೇ ವಧು/ವರ ದೊರೆತು, ಅಚಾನಕ್ ಆಗಿ ಮದುವೆ ಆಗಲಿದೆ. ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಒಂದು ವೇಳೆ ಐವಿಎಫ್ ನಂಥ ಕೃತಕ ಗರ್ಭಧಾರಣೆ ಮೂಲಕ ಪ್ರಯತ್ನ ಮಾಡಬೇಕು ಎಂದಿದ್ದಲ್ಲಿ ಸಹ ಇದು ಉತ್ತಮ ಸಮಯ ಆಗಿದೆ. ಈಗಾಗಲೇ ಪ್ರೀತಿಯಲ್ಲಿ ಇದ್ದೀರಿ ಅಂದರೆ ಸಂಗಾತಿ ಜೊತೆಗೆ ಮಾತುಕತೆ ಆಡುವಾಗ ಬಳಸುವ ಪದಗಳನ್ನು ಅಳೆದು- ತೂಗಿ ಆಡುವುದು ಒಳ್ಳೆಯದು. ಇನ್ನು ನೀವು ಯಾವ ವಿಚಾರವನ್ನು ತಮಾಷೆಗೆ ಅಂತ ಹೇಳಿರುತ್ತೀರಿ, ಅದನ್ನು ತಪ್ಪಾಗಿ ಅರ್ಥೈಸುವ ಅವಕಾಶಗಳಿವೆ. ಇನ್ನು ಸಣ್ಣ- ಪುಟ್ಟ ವಿಚಾರಗಳಿಗೂ ಉಪನ್ಯಾಸ ಮಾಡುವುದಕ್ಕೆ ನಿಲ್ಲಬೇಡಿ. ಹೀಗೆ ಮಾಡುವುದರಿಂದ ನೀವು ಪ್ರೀತಿಸುವ ವ್ಯಕ್ತಿಯನ್ನು ದೂರ ಮಾಡಿಕೊಳ್ಳಲಿದ್ದೀರಿ.

ಉದ್ಯೋಗ- ವೃತ್ತಿ

ಐಟಿ- ಬಿಪಿಒ, ಬಿಟಿ ಇಂಥ ಕ್ಷೇತ್ರಗಳಲ್ಲಿ ಇರುವವರು ಅಥವಾ ಸರ್ಕಾರಿ ಕೆಲಸದಲ್ಲೇ ಇರುವವರಾದರೂ ಕೆಲವು ವಾರದಿಂದ ತಿಂಗಳುಗಳ ತನಕ ತರಬೇತಿಗಾಗಿ ಅಥವಾ ಅಲ್ಲಿನ ಪ್ರಾಜೆಕ್ಟ್ ತಾವು ಉದ್ಯೋಗ ಮಾಡುತ್ತಿರುವ ಸ್ಥಳಕ್ಕೆ ತರುವುದಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾಗುತ್ತದೆ. ಸರ್ಕಾರಿ ಕಾಂಟ್ರಾಕ್ಟ್ ಗಳನ್ನು ಪಡೆಯುವಂಥವರು, ಅಥವಾ ಅಂಥ ವೃತ್ತಿಯನ್ನು ಈಗಷ್ಟೇ ಶುರು ಮಾಡಿದ್ದರೂ ಪ್ರಭಾವಿಗಳ ಪರಿಚಯ, ನೆರವಿನಿಂದಾಗಿ ದೊಡ್ಡ ಮೊತ್ತದ ಟೆಂಡರ್ ಅಥವಾ ಕೆಲಸಗಳು ನಿಮಗೆ ದೊರೆಯಬಹುದು. ಈ ಹಿಂದೆ ಯಾವಾಗಲೋ ನೀವು ಸಹಾಯ ಮಾಡಿದ್ದಂಥ ವ್ಯಕ್ತಿಗಳು ನಿಮಗೆ ನೆರವು ನೀಡಲಿದ್ದಾರೆ. ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕೆಲಸ- ಕಾರ್ಯಗಳಲ್ಲಿ ತೊಡಗಿರುವವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ.

ಸ್ವಾತಿ ಎನ್.ಕೆ.

Published On - 3:57 pm, Tue, 31 December 24