ಜನ್ಮಸಂಖ್ಯೆ 9 ಅಂದರೆ, ವರ್ಷದ ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 9 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಜನ್ಮಸಂಖ್ಯೆ 9ರ ವ್ಯಕ್ತಿಗಳನ್ನು ಮುನ್ನಡೆಸುವ ಗ್ರಹ ಕುಜ. ಇವರನ್ನು ಸೈನಿಕರಿಗೆ ಹೋಲಿಸಲಾಗುತ್ತದೆ. ಯಾವುದೇ ವಿಚಾರಕ್ಕೂ ಸುಲಭಕ್ಕೆ ಪಟ್ಟು ಬಿಡುವವರಲ್ಲ. ಇನ್ನು ತಮಗೆ ಏನಾದರೂ ಸಿಗದೇ ಹೋದರೆ ಬಹಳ ಬೇಗ ಸಿಟ್ಟು ಮಾಡಿಕೊಳ್ಳುತ್ತಾರೆ. ಎಚ್ ಆರ್ ಏಜೆನ್ಸಿ, ಪೊಲೀಸ್ ಇಲಾಖೆ, ಸೈನ್ಯ, ವಿದ್ಯುಚ್ಛಕ್ತಿ ಮಂಡಳಿ ಉದ್ಯೋಗಿಗಳು, ಡಿಟೆಕ್ಟಿವ್ ಏಜೆನ್ಸಿ ಏಜೆಂಟ್ ಗಳು, ಬಾಡಿಗಾರ್ಡ್ ಗಳು ಈ ಸಂಖ್ಯೆಯವರೇ ಆಗಿರುತ್ತಾರೆ. ಎಲೆಕ್ಟ್ರಿಕಲ್ ವಸ್ತುಗಳ ಮಾರಾಟವನ್ನು ಮಾಡಬೇಕು ಎಂದು ನಿರ್ಧಾರ ಮಾಡಿದಲ್ಲಿ ಒಳ್ಳೆ ಲಾಭ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈ ಸಂಖ್ಯೆಯ ಜನರಿಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಆಗಾಗ ಕಾಡುತ್ತದೆ ಅಥವಾ ಒಂದಲ್ಲಾ ಒಂದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಇರುತ್ತದೆ. ಕೆಲವು ಸಲ ಇವರಾಗಿಯೇ ಕಷ್ಟಗಳು- ಸವಾಲುಗಳನ್ನು ಹುಡುಕಿಕೊಂಡು ಹೋಗುತ್ತಾರೇನೋ ಎಂಬಷ್ಟರ ಮಟ್ಟಿಗೆ ಕೊರಳಿಗೆ- ತಲೆ ಮೇಲೆ ತೊಂದರೆಗಳನ್ನು ಹಾಕಿಕೊಳ್ಳುತ್ತಾ ಇರುತ್ತಾರೆ. ಯಾವುದೇ ನಿರ್ಧಾರ ಇರಬಹುದು ಇವರು ವಿವೇಚನೆ ಬಳಸಬೇಕು.
ಕೈಲಿ ಇರುವುದು, ಆಪತ್ಕಾಲಕ್ಕೆ ಎಂದು ಕೂಡಿಟ್ಟುಕೊಂಡಿದ್ದು, ಮಕ್ಕಳ ಶಿಕ್ಷಣ- ಮದುವೆ ಹೀಗೆ ವಿವಿಧ ಕಾರಣಗಳಿಗಾಗಿ ಸೇರಿಸಿಟ್ಟುಕೊಂಡಿದ್ದ ಹಣವನ್ನೆಲ್ಲ ತೆಗೆಯಲಿದ್ದೀರಿ. ಇದಕ್ಕೆ ಕಾರಣ ಆಗುವುದು ಸಹ ನಿಮ್ಮದೇ ಪ್ಲಾನಿಂಗ್. ನಿಮ್ಮಲ್ಲಿ ಒಂದು ಬಗೆಯ ಅಭದ್ರತೆ ಕಾಡುವುದಕ್ಕೆ ಶುರು ಆಗಲಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಹಾಗಿರುವುದಿಲ್ಲ. ನಿಮಗೆ ನೀವೇ ಅಂದುಕೊಳ್ಳಲಿದ್ದೀರಿ: ಆದಾಯ ಮೂಲಗಳು ಜಾಸ್ತಿ ಮಾಡಿಕೊಳ್ಳಬೇಕು, ನಿರಂತರವಾಗಿ ಆದಾಯವನ್ನು ತರುವಂಥ ಹೂಡಿಕೆಗಳನ್ನು ಮಾಡಬೇಕು, ಭೂಮಿ ಮೇಲೆ ಹಣವನ್ನು ಹಾಕಬೇಕು. ನೀವು ಹೀಗೆ ನಾನಾ ಆಲೋಚನೆಗೆ ಬಿದ್ದು, ಇಷ್ಟು ಸಮಯದ ನಿಮ್ಮ ವೇಗದಲ್ಲೇ ಬದಲಾವಣೆಯನ್ನು ತಂದುಕೊಂಡು, ಇತರರು ಆಶ್ಚರ್ಯ ಪಡುವಂತೆ ಬದಲಾಗುತ್ತೀರಿ. ವಿದ್ಯಾರ್ಥಿಗಳಿಗೆ ಮೊದಲಿಗಿಂತ ಉತ್ಸಾಹ ಹಾಗೂ ಆಸಕ್ತಿ ಹೆಚ್ಚಾಗಲಿದೆ. ಕ್ರೀಡೆಗಳಲ್ಲಿ ಹೆಸರು- ಯಶಸ್ಸು ದೊರೆಯಲಿದೆ. ಸ್ವಂತ ಉದ್ಯಮ- ವ್ಯವಹಾರ ಮಾಡುತ್ತಿರುವವರು ಅದರ ವಿಸ್ತರಣೆಗಾಗಿ ಪ್ರಯತ್ನವನ್ನು ಮಾಡಲಿದ್ದೀರಿ. ಈ ವೇಳೆ ನಿಮ್ಮ ಬಾಲ್ಯದ ಸ್ನೇಹಿತರು ಹಲವು ಬಗೆಯಲ್ಲಿ ಸಹಾಯವನ್ನು ಮಾಡಲಿದ್ದಾರೆ.
ನಿಮ್ಮಲ್ಲಿ ಕೆಲವರಿಗೆ ಕುತ್ತಿಗೆ ನೋವು ತೀವ್ರವಾಗಿ ಕಾಡಲಿದೆ. ಭಾರವಾದ ವಸ್ತುಗಳನ್ನು ಎತ್ತುವಾಗ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುತ್ತಿದ್ದೀರಿ ಎಂದಾಗ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸುವುದು ಒಳ್ಳೆಯದು. ನಿಮ್ಮಲ್ಲಿ ಯಾರು ನಿಂತು ಮಾಡುವಂಥ ಕೆಲಸಗಳಲ್ಲಿ ಇದ್ದೀರಿ, ಅಂದರೆ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವವರು, ಶಿಕ್ಷಕರು- ಉಪನ್ಯಾಸಕರು ಹೀಗೆ. ಜೊತೆಗೆ ಮಹಿಳೆಯರು ಸಹ ಅಡುಗೆ ಮನೆಯಲ್ಲಿ ಹೆಚ್ಚಿನ ಸಮಯ ನಿಂತು ಕೆಲಸ ಮಾಡುತ್ತಾರೆ ಅಂಥವರಿಗೆ ಕಾಲಿನ ನೋವು ಆಪರೇಷನ್ ಮಾಡಿಸಬೇಕಾದ ಪರಿಸ್ಥಿತಿಯ ತನಕ ಹೋಗಬಹುದು. ಆದ್ದರಿಂದ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಬಗೆಹರಿಸಿಕೊಳ್ಳುವುದು ಒಳ್ಳೆಯದು.
ಯಾರು ಆಸ್ತಿಗೆ ಸಂಬಂಧಿಸಿದಂತೆ ಕೋರ್ಟ್- ಕಚೇರಿ ವ್ಯಾಜ್ಯಗಳನ್ನು ನಡೆಸುತ್ತಿದ್ದೀರಿ, ಅಂಥವರಿಗೆ ಅವುಗಳನ್ನು ಬಗೆಹರಿಸಿಕೊಳ್ಳುವಂಥ ವೇದಿಕೆಗಳು ದೊರೆಯಲಿವೆ. ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡದೆ ಸಮಾಧಾನದಿಂದ ಬಗೆಹರಿಸಿಕೊಳ್ಳಿ. ಇನ್ನು ಯಾರು ಸೈಟು, ಫ್ಲ್ಯಾಟ್ ಅಥವಾ ಕೃಷಿ ಜಮೀನು ಖರೀದಿಸಬೇಕು ಎಂದಿದ್ದೀರಿ, ಅಂಥವರಿಗೆ ಉದ್ದೇಶ ಈಡೇರಲಿದೆ. ಒಂದು ವೇಳೆ ಈ ಹಿಂದೆ ನಿಮ್ಮ ಮನಸ್ಸಿಗೆ ಒಪ್ಪಿದ್ದಂಥದ್ದನ್ನು ನಾನಾ ಕಾರಣಗಳಿಗೆ ವ್ಯವಹಾರ ಮುಂದುವರಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದೇ ಹೋಗಿದ್ದಲ್ಲಿ ಅಂಥದ್ದು ಮತ್ತೆ ನಿಮ್ಮ ಬಳಿ ಪ್ರಸ್ತಾವ ಬರಲಿದೆ. ಈ ಬಾರಿ ಅದನ್ನು ಕೊಳ್ಳುವುದಕ್ಕೆ ಯಾವುದೇ ಅಡೆ-ತಡೆಗಳು ಇರುವುದಿಲ್ಲ. ಷೇರು, ಮ್ಯೂಚುವಲ್ ಫಂಡ್, ಸರ್ಕಾರಿ ಬಾಂಡ್ ಗಳು ಅಥವಾ ಚಿನ್ನದ ಮೇಲಿನ ಹೂಡಿಕೆಗಳು ನಿಮಗೆ ಲಾಭ ತಂದುಕೊಡಲಿವೆ. ನಿಯಮಿತವಾಗಿ ಆದಾಯ ತರುವಂಥ ಮೂಲವನ್ನು ಸೃಷ್ಟಿ ಮಾಡಿಕೊಳ್ಳಲಿದ್ದೀರಿ.
ಸಂಗಾತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡಬಹುದು. ಒಂದಕ್ಕಿಂತ ಹೆಚ್ಚು ಕಡೆಗೆ ವೈದ್ಯರ ಬಳಿ ತಪಾಸಣೆಗೆ ತೋರಿಸಬೇಕಾದ ಹಾಗೂ ಔಷಧೋಪಚಾರ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುವುದರಿಂದ ಸ್ವಲ್ಪ ಮಟ್ಟಿಗೆ ವಿಚಲಿತರಾಗುತ್ತೀರಿ. ದಂಪತಿ ಮಧ್ಯೆ ಇರುವಂಥ ಭಿನ್ನಾಭಿಪ್ರಾಯ- ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ಸಮಯ ಇದಾಗಿರಲಿದೆ. ವಿವಾಹ ವಯಸ್ಕರಿಗೆ ಸ್ನೇಹಿತರು- ಸಂಬಂಧಿಕರಲ್ಲಿಯೇ ಉತ್ತಮ ಸಂಬಂಧ ದೊರೆಯಲಿದೆ. ಈಗಾಗಲೇ ಪ್ರೀತಿಯಲ್ಲಿ ಇರುವಂಥವರು ಉದ್ಯೋಗ ಅಥವಾ ಮತ್ಯಾವುದಾದರೂ ಕಾರಣದಿಂದ ಕೆಲವು ಸಮಯ ದೂರ ಇರಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಆ ಕಾರಣದಿಂದ ಅಭದ್ರತೆಯ ಭಾವನೆಯನ್ನು ಸಹ ಅನುಭವಿಸಬೇಕಾಗುತ್ತದೆ.
ಉದ್ಯೋಗ ಬದಲಾವಣೆ ಮಾಡಬೇಕು ಎಂದು ಆಲೋಚಿಸುತ್ತಿರುವವರು ವರ್ಷದ ಮೊದಲ ಆರು ತಿಂಗಳಲ್ಲಿ ಪ್ರಯತ್ನಿಸಿ. ವಿದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು, ಕೃಷಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವವರು ದಾಖಲೆ- ಪತ್ರಗಳು, ಆದಾಯ ತೆರಿಗೆ ವಿಚಾರಗಳಲ್ಲಿ ಜಾಗ್ರತೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಬಳಿ ಇದೆ ಅಂದುಕೊಂಡು ಸುಮ್ಮನಾಗಿಬಿಟ್ಟರೂ ಅಥವಾ ಇನ್ನೂ ಸಮಯವಿದೆ ಆಮೇಲೆ ಯೋಚಿಸಿದರಾಯಿತು ಎಂಬ ಧೋರಣೆಯನ್ನು ತಳೆದರೆ ಆ ನಂತರ ಬಹಳ ಪರಿತಪಿಸುವಂಥ ಸ್ಥಿತಿ ಬರುತ್ತದೆ, ಜಾಗ್ರತೆಯನ್ನು ವಹಿಸಿ. ವೃತ್ತಿನಿರತರಿಗೆ ಸಾಮಾಜಿಕವಾದ ಮನ್ನಣೆಯು ದೊರೆಯಲಿದೆ. ನಿಮ್ಮದೇ ವೃತ್ತಿಯಲ್ಲಿನ ಸಂಘ- ಸಂಸ್ಥೆಗಳಲ್ಲಿ ಹುದ್ದೆಗಳು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಯಾರು ಈವೆಂಟ್ ಮ್ಯಾನೇಜ್ ಮೆಂಟ್ ಅನ್ನು ವೃತ್ತಿಯಾಗಿ ಮಾಡುತ್ತಿದ್ದೀರಿ ಅಂಥವರಿಗೆ ಈ ವರ್ಷ ದೊಡ್ಡ ಪ್ರಮಾಣದ ಆರ್ಡರ್ ಗಳು ದೊರೆಯಲಿವೆ. ಇವು ನಿಮ್ಮ ನಿರೀಕ್ಷೆಗೂ ಮೀರಿದ ಹೆಸರು ಹಾಗೂ ಹಣ ತಂದುಕೊಡಲಿವೆ.
ಸ್ವಾತಿ ಎನ್.ಕೆ.
Published On - 4:36 pm, Tue, 31 December 24