Number 7 Yearly Numerology 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 7ಕ್ಕೆ 2025ರ ವರ್ಷಭವಿಷ್ಯ
ಜನ್ಮ ಸಂಖ್ಯೆ 7ರ ವರ್ಷ ಭವಿಷ್ಯ 2025: ಜನ್ಮಸಂಖ್ಯೆ 7ಕ್ಕೆ ಈ 2025ರಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲು ಶುಭಾಸಮಯವಾಗಿದೆ. ಈ ವರ್ಷದಲ್ಲಿ ನೀವು ಮಾಡಬೇಕಾದ ಕಾರ್ಯಗಳೇನು? ಅದಕ್ಕಾಗಿ ನೀವು ಮಾಡಬೇಕದ ಕ್ರಮಗಳೇನು? ಈ ವರ್ಷ ನಿಮ್ಮ ಜನ್ಮಸಂಖ್ಯೆ 7ರ ಪ್ರಕಾರ ಆರೋಗ್ಯ, ಆಸ್ತಿ-ಹಣ- ಹೂಡಿಕೆ, ಪ್ರೇಮ-ಮದುವೆ, ಉದ್ಯೋಗ- ವೃತ್ತಿ ಎಲ್ಲ ಹೇಗಿರಲಿದೆ ಎಂಬ ಬಗ್ಗೆ ತಿಳಿಸಲಾಗಿದೆ.
ಜನ್ಮಸಂಖ್ಯೆ 7 ಅಂದರೆ, ವರ್ಷದ ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 7 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ- ಸ್ವಭಾವ
ಯಾವ ವ್ಯಕ್ತಿಯ ಜನ್ಮ ಸಂಖ್ಯೆ 7 ಆಗಿರುತ್ತದೋ ಅಂಥವರಿಗೆ ಅಧಿಪತಿ ಕೇತು. ಇವರಲ್ಲಿ ವಯಸ್ಸಿಗೆ ಮೀರಿದ ಪ್ರಬದ್ಧತೆ, ಯೋಚನೆ- ಆಲೋಚನೆಗಳು ಇರುತ್ತವೆ. ಈ ವ್ಯಕ್ತಿಗಳು ಪ್ರತಿ ಮಾತಿನಲ್ಲೂ ಅದರ ಹಿಂದಿನ ಧ್ವನಿ ಹಾಗೂ ಪ್ರತಿ ಧ್ವನಿಯ ಹಿಂದಿರುವ ಮಾತಿನ ಅರ್ಥವನ್ನೇ ಹೆಚ್ಚಾಗಿ ಹುಡುಕುತ್ತಾರೆ. ಅಧ್ಯಾತ್ಮ ಜೀವನದ ಕಡೆಗೆ ಸೆಳೆತ ಹೆಚ್ಚಿರುತ್ತದೆ. ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲೇ ಅದರ ಕಡೆಗೆ ದಾರಿಯಲ್ಲಿ ಸಾಗುತ್ತಾರೆ. ಮತ್ತೆ ಕೆಲವರು ಮಧ್ಯ ವಯಸ್ಸಿನ ನಂತರ ಪೂರ್ಣ ಪ್ರಮಾಣದಲ್ಲಿ ಅದರಲ್ಲಿ ತೊಡಗಿಕೊಳ್ಳುತ್ತಾರೆ. ಇತರರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವುದರಲ್ಲಿ ಇವರು ನಿಸ್ಸೀಮರು. ಅದೇ ತಮಗೆ ಅಂತ ಒಂದು ಸಮಸ್ಯೆ ಬಂದಲ್ಲಿ ಆ ಬಗ್ಗೆ ಮಾತನಾಡುವುದಕ್ಕೆ ಸಹ ಹಿಂಜರಿದುಕೊಳ್ಳುತ್ತಾರೆ. ವೈವಾಹಿಕ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆಯನ್ನು ಎದುರಿಸುವ ಇವರಲ್ಲಿ ಕೆಲವರು ಅವಿವಾಹಿತರಾಗಿಯೋ ಅಥವಾ ಮದುವೆ ಆದ ನಂತರ ಕೆಲವೇ ವರ್ಷಗಳಲ್ಲಿ ಡೈವೋರ್ಸ್ ಪಡೆದು ಏಕಾಂಗಿಯಾಗಿ ಜೀವನ ಸಾಗಿಸುತ್ತಾರೆ. ತಮ್ಮ ಜೀವನದ ಪ್ರಮುಖ ನಿರ್ಧಾರಗಳಿಗೆ ಸ್ನೇಹಿತರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ.
ಸಾಮಾನ್ಯ ಸಂಗತಿಗಳು
ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೇವತಾ ಧ್ಯಾನ, ತೀರ್ಥಯಾತ್ರೆ, ಪೂಜೆ- ಪುನಸ್ಕಾರಗಳ ಕಡೆಗಿನ ಸೆಳೆತ ಹಾಗೂ ಭಾಗವಹಿಸುವಿಕೆ ಜಾಸ್ತಿ ಆಗಲಿದೆ. ಇಲ್ಲಿಯವರೆಗಿನ ಸರಿ- ತಪ್ಪುಗಳು ಯಾವುವು ಎಂಬ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಲಿದ್ದೀರಿ. ನಿಮ್ಮ ಸ್ನೇಹಿತರಿಂದ ಹಲವು ರೀತಿಯಲ್ಲಿ ಅನುಕೂಲಗಳು ಆಗಲಿವೆ. ನೀವು ಯಾವ ರೀತಿಯ ಪರಿಸರ- ವಾತಾವರಣದಲ್ಲಿ ಮನೆ ಮಾಡಿಕೊಂಡು ಇರಬೇಕು ಎಂದು ಬಯಸುತ್ತೀರೋ ಅಂಥಲ್ಲಿಯೇ ವಾಸ ಮಾಡುವಂಥ ಅವಕಾಶಗಳು ಸಿಗಲಿವೆ. ಇನ್ನು ವಿದ್ಯಾರ್ಥಿಗಳು ತಾವು ಸೇರಿದ ಕೋರ್ಸ್ ಪದೇಪದೇ ಬದಲಿಸಿಕೊಳ್ಳುವಂತೆ ಆಗುತ್ತದೆ. ಇದರಿಂದ ತಂದೆ- ತಾಯಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೋಗುವಂತಾಗಬಹುದು. ಆದ್ದರಿಂದ ನಿರ್ಧಾರ ಮಾಡುವಾಗಲೇ ಸರಿಯಾದ ರೀತಿಯಲ್ಲಿ ಆಲೋಚಿಸಿ. ಈ ವರ್ಷ ವಿಪರೀತ ಸುತ್ತಾಟ- ಓಡಾಟ ಇದೆ. ಸಂಬಂಧಿಗಳಿಗೆ ಏನಾದರೂ ಈಗಾಗಲೇ ಸಾಲ ಕೊಡಿಸಿದ್ದಲ್ಲಿ ಅಥವಾ ಕೊಟ್ಟಿದ್ದಲ್ಲಿ ಜಗಳ- ಕಲಹ ಆಗಿಯೇ ಅದನ್ನು ವಾಪಸ್ ಪಡೆದುಕೊಳ್ಳುವಂತಾಗುತ್ತದೆ.
ಆರೋಗ್ಯ
ಈ ವ್ಯಕ್ತಿಗಳು ಸಾಮಾನ್ಯವಾಗಿಯೇ ತಮ್ಮ ಭಾವನೆಗಳನ್ನು ಇತರರ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಅದರಲ್ಲೂ ಈ ವರ್ಷ ಅದೇ ಕಾರಣಕ್ಕಾಗಿ ಮಾನಸಿಕ ಒತ್ತಡ, ಮಾನಸಿಕ ಖಿನ್ನತೆಯಂಥ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಚಿಕಿತ್ಸೆ ಪಡೆಯುವಂತಾಗುತ್ತದೆ. ನಿಮ್ಮಲ್ಲಿ ಯಾರಿಗೆ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಈಗಾಗಲೇ ಇದೆಯೋ ಅಂಥವರು ಸಣ್ಣದಾದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಒಟ್ಟಾರೆ ಕಣ್ಣಿನ ಆರೋಗ್ಯಕ್ಕಾಗಿಯೇ ಖರ್ಚು ಮಾಡುವಂಥ ಯೋಗ ಇದೆ. ಚೂಪಾದ ವಸ್ತುಗಳಿಂದ ಗಾಯಗಳಾದಲ್ಲಿ ಅಂಥ ಗಾಯಗಳು ಬಹಳ ದಿನಗಳ ಕಾಲ ವಾಸಿಯಾಗುತ್ತಿಲ್ಲ ಎಂದಾದಲ್ಲಿ ತಕ್ಷಣವೇ ವೈದ್ಯರ ಬಳಿ ತೋರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಆ ನಂತರ ಬಹಳ ಪರಿತಪಿಸಬೇಕಾದ ಮಟ್ಟಕ್ಕೆ ಸನ್ನಿವೇಶ ಹೋಗುತ್ತದೆ.
ಆಸ್ತಿ-ಹಣ- ಹೂಡಿಕೆ
ಹಣಕಾಸಿನ ವಿಚಾರದಲ್ಲಿ ಮುಂಚಿಗಿಂತ ಶಿಸ್ತು ಹೆಚ್ಚಾಗಲಿದೆ. ಇನ್ನು ಈಗಾಗಲೇ ಮಾಡಿರುವ ಕೆಲವ ಉಳಿತಾಯ, ಹೂಡಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನಿಮ್ಮ ಮೇಲೆ ನೀವು ಹಣ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಲಿದ್ದೀರಿ. ಸೋಷಿಯಲ್ ಮೀಡಿಯಾಗಳ ಮೂಲಕ ಆದಾಯ ಬರುವುದಕ್ಕೆ ಬೇಕಾದಂಥ ಕೆಲವು ಚಟುವಟಿಕೆಗಳನ್ನು ಆರಂಭಿಸಲಿದ್ದೀರಿ. ಇಲ್ಲಿಯ ತನಕ ನಿಮಗೆ ಯಾವುದು ಕೇವಲ ಹವ್ಯಾಸವಾಗಿ ಮಾತ್ರ ಇರುತ್ತದೋ ಅಂಥವುಗಳನ್ನು ಆದಾಯವಾಗಿ ಪರಿವರ್ತಿಸುವುದಕ್ಕೆ ಬೇಕಾದಂಥದ್ದನ್ನು ಮಾಡಲಿದ್ದೀರಿ. ಕುಟುಂಬ ದೊಡ್ಡದಾಯಿತು, ಅದಕ್ಕೆ ತಕ್ಕಂತೆ ಮನೆ ಖರೀದಿ ಮಾಡಬೇಕು ಎಂದೇನಾದರೂ ಯೋಜನೆ ಹಾಕಿಕೊಂಡಿದ್ದಲ್ಲಿ ಈ ವರ್ಷ ಅದು ಈಡೇರುವ ಸಾಧ್ಯತೆ ಹೆಚ್ಚಿದೆ. ಇನ್ನು ಷೇರು- ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವಂಥವರು ಶಿಸ್ತು- ಲೆಕ್ಕಾಚಾರದ ಹೂಡಿಕೆಯನ್ನು ಮಾಡಲಿದ್ದೀರಿ.
ಪ್ರೇಮ-ಮದುವೆ ಇತ್ಯಾದಿ
ನಿಮ್ಮಲ್ಲಿ ಕೆಲವರಿಗೆ ವಯಸ್ಸಿನ ಅಂತರ ಬಹಳ ಹೆಚ್ಚಾಗಿ ಇರುವಂಥವರ ಮೇಲೆ ಪ್ರೇಮ ಮೂಡಿ, ಈ ವಿಚಾರಕ್ಕೆ ಮನೆಯಲ್ಲಿ ಆಕ್ಷೇಪಗಳು, ಜಗಳ- ಕಲಹಗಳು ಆಗಬಹುದು. ಈಗಾಗಲೇ ನಿಶ್ಚಿತಾರ್ಥ ಆಗಿದೆ ಎನ್ನುವವರು ಹಿಂದಿನ ಪ್ರೇಮ ಪ್ರಕರಣಗಳ ಬಗ್ಗೆ ಪ್ರಸ್ತಾವವನ್ನು ಮಾಡಬೇಡಿ. ಇನ್ನು ನೀವು ಮದುವೆ ಆಗಬೇಕು ಎಂದಿರುವವರಿಗೆ ಏನಾದರೂ ಅದಕ್ಕೂ ಮುಂಚೆ ಪ್ರೀತಿ- ಪ್ರೇಮ ಇತ್ತೇ ಎಂಬ ಪ್ರಶ್ನೆಯನ್ನು ಸಹ ಎತ್ತದಿರುವುದು ಉತ್ತಮವಾಗುತ್ತದೆ. ನಿಮ್ಮಲ್ಲಿ ಯಾರಿಗೆ ದಾಂಪತ್ಯದಲ್ಲಿ ವಿರಸ ಇರುತ್ತದೋ ಅಥವಾ ಈಗಾಗಲೇ ಜಗಳ- ಕದನ- ಕಲಹಗಳು ಇರುತ್ತವೋ ಅದು ಡೈವೋರ್ಸ್ ತನಕ ಹೋಗಲಿವೆ. ಆದ್ದರಿಂದ ಸಾಧ್ಯವಿದ್ದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಒಳ್ಳೆಯದು. ಕುಟುಂಬ ಸದಸ್ಯರಿಗೆ ಹೆಚ್ಚಿನ ಸಮಯವನ್ನು ನೀಡುವುದಕ್ಕೆ ಆದ್ಯತೆ ನೀಡಿದಲ್ಲಿ ಉತ್ತಮ.
ಉದ್ಯೋಗ- ವೃತ್ತಿ
ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ತೊಂದರೆಗಳು ಅಥವಾ ಉದ್ಯೋಗ ಕಳೆದುಕೊಂಡಿದ್ದೀನಿ, ಮತ್ತೆ ಸಿಗುತ್ತಿಲ್ಲ ಎಂದು ಆಲೋಚಿಸುತ್ತಿರುವವರಿಗೆ ಚಿಂತೆ ದೂರವಾಗಲಿದೆ. ಈಗಾಗಲೇ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ಅಲ್ಲಿಂದ ತಮ್ಮ ತಾಯ್ನಾಡಿಗೆ ಮರಳಬೇಕು ಎಂದು ತೀರ್ಮಾನ ತೆಗೆದುಕೊಳ್ಳುವಂತೆ ಆಗುತ್ತದೆ. ಇದರಿಂದ ಭವಿಷ್ಯದಲ್ಲಿ ಅನುಕೂಲವೇ ಆಗಲಿದೆ. ಇಂಥ ವಿಚಾರದಲ್ಲಿ ತಕ್ಷಣಕ್ಕೆ ದೊಡ್ಡ ಮಟ್ಟದ ಆದಾಯವನ್ನು ನಿರೀಕ್ಷೆ ಮಾಡದಿರುವುದು ಉತ್ತಮ. ಆಗ ನೆಮ್ಮದಿಯಾಗಿ ಇರಬಹುದು. ನಿಮ್ಮಲ್ಲಿ ಯಾರು ಚಿತ್ರಕಲೆ, ಕಾರ್ಟೂನ್, ಗ್ರಾಫಿಕ್ಸ್ ಇಂಥದ್ದನ್ನು ವೃತ್ತಿಯನ್ನಾಗಿ ಮಾಡಿಕೊಂಡು, ಅದರಿಂದ ಆದಾಯ ಪಡೆಯುತ್ತಿದ್ದೀರಿ, ಅಂಥವರು ಇನ್ನೂ ಕೆಲವು ಜನರನ್ನು ಜೊತೆಗೂಡಿಸಿಕೊಂಡು ಸಂಸ್ಥೆಯ ರೂಪವನ್ನು ನೀಡಿ ವೃತ್ತಿಯ ವಿಸ್ತರಣೆ ಮಾಡುವುದಕ್ಕೆ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.
-ಸ್ವಾತಿ ಎನ್.ಕೆ.