
Weekly Numerology : ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 24ರಿಂದ 30ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕುಟುಂಬದಲ್ಲಿಯೇ ಆಗಲಿ, ಸ್ನೇಹ ವಲಯದಲ್ಲಿಯೇ ಆಗಲೀ ಅಥವಾ ಉದ್ಯೋಗ- ವ್ಯವಹಾರ ಸ್ಥಳದಲ್ಲಿಯೇ ಆಗಲಿ, ಏನು ಕೇಳಬೇಕು ಅಥವಾ ಏನು ಹೇಳಬೇಕು ಎಂದು ಬಯಸಿರುತ್ತೀರೋ ಅದನ್ನು ಯಾವುದೇ ಮುಲಾಜಿಲ್ಲದೆ ಹೇಳಿ ಮುಗಿಸಲಿದ್ದೀರಿ. ನಿಮ್ಮ ಆತ್ಮಸ್ಥೈರ್ಯ, ವಿಶ್ವಾಸ ಈ ವಾರ ಕೈ ಹಿಡಿಯಲಿದೆ. ನಿಮಗೇನೋ ಸಮಸ್ಯೆ ಮಾಡುತ್ತೇವೆ ಎಂದು ಶತ್ರುಗಳು ಮಾಡುವ ಪ್ರಯತ್ನಗಳು ನಿಮಗೆ ಆದಾಯಕ್ಕೆ ಮೂಲ ಆಗುತ್ತವೆ. ಪ್ರತಿಸ್ಪರ್ಧಿಗಳು, ಶತ್ರುಗಳು ಮಾಡುವ ತಪ್ಪಿನಿಂದ ಹಣಕಾಸು ಆದಾಯಕ್ಕೆ ದಾರಿ ಆಗುತ್ತದೆ. ಪದೇಪದೇ ತಮ್ಮ ಚುಚ್ಚು ಮಾತುಗಳಿಂದ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಗಟ್ಟಿ ಧ್ವನಿಯಲ್ಲಿ ಉತ್ತರ ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ರಿಸ್ಕ್ ಒಳಗೊಂಡ ವ್ಯವಹಾರಗಳಿಗೆ ಕೈ ಹಾಕಬಹುದು. ಅದಕ್ಕೆ ಕಾರಣ ಏನೆಂದರೆ, ಈಗಲ್ಲದೆ ಇನ್ಯಾವಾಗಲೂ ಇಲ್ಲ ಎಂಬ ಧೈರ್ಯವೊಂದು ಎದ್ದು ನಿಲ್ಲಲಿದೆ. ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಇದನ್ನು ನಿಮ್ಮ ಅನುಕೂಲವಾಗಿ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇರುತ್ತದೆ. ಇನ್ನು ಶುಭ ವಾರ್ತೆಗಳನ್ನು ಕೇಳಲಿದ್ದೀರಿ, ವಿವಾಹಕ್ಕೆ ಪ್ರಸ್ತಾವ ಇಟ್ಟಿದ್ದು, ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದವರು ಇದ್ದಲ್ಲಿ ಮಾತುಕತೆಯಲ್ಲಿ ಪ್ರಗತಿ ಇದೆ. ವಿದೇಶಗಳಿಗೆ ಯಾವುದಾದರೂ ಪ್ರಾಜೆಕ್ಟ್ ಗಾಗಿ ಅಲ್ಪಕಾಲಕ್ಕೆ ತೆರಳಬೇಕಾಗಬಹುದು. ಕೃಷಿಕರಾಗಿದ್ದು ಪಿತ್ರಾರ್ಜಿತವಾದ ಆಸ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಈ ವಿಚಾರದಲ್ಲಿ ಬೆಳವಣಿಗೆ ಕಾಣಬಹುದು. ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ ಸಿಗುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಭೂಮಿ ಮೂಲಕವಾಗಿ ಲಾಭವನ್ನಂತೂ ಕಾಣುವ ಯೋಗ ಇದೆ. ಸರ್ಕಾರದಿಂದ ಬರಬೇಕಾದ ಹಣಕಾಸು ವಿಚಾರಗಳು ಇಷ್ಟು ಸಮಯ ತಡೆಯಾಗಿ ನಿಂತಿದ್ದಲ್ಲಿ ಅದು ನಿಮಗೆ ದೊರೆಯುವ ಅವಕಾಶಗಳು ಹೆಚ್ಚಿವೆ. ವೃತ್ತಿನಿರತರಾಗಿದ್ದಲ್ಲಿ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರಗಳನ್ನು ಮಾಡುತ್ತಿರುವವರ ಮಧ್ಯೆ ಅಭಿಪ್ರಾಯ ಭೇದಗಳು ಉದ್ಭವಿಸಲಿವೆ. ಅದರಲ್ಲೂ ಯಾರು ಹೆಚ್ಚು ಶ್ರಮಿಸುತ್ತಿದ್ದಾರೆ ಎಂಬ ಚರ್ಚೆಯೇ ವಿಪರೀತಕ್ಕೆ ಹೋಗಲಿದೆ. ಇದೇ ಕಾರಣದಿಂದ ಮನಸ್ತಾಪ, ವಿರಸಗಳು ಉದ್ಭವಿಸಿ, ಇಷ್ಟು ಸಮಯ ಆಪ್ತರಾಗಿದ್ದವರೇ ದೂರ ಆಗುವ ಸಾಧ್ಯತೆ ಇದೆ. ದೈಹಿಕ ಆಯಾಸ ಜಾಸ್ತಿ ಆಗುತ್ತದೆ. ಇಷ್ಟು ಸಮಯ ತುಂಬ ಚಟುವಟಿಕೆಯಿಂದ ಇದ್ದೆ. ಈಗ ಸ್ವಲ್ಪ ಹೊತ್ತು ಕೆಲಸ ಮಾಡಿದರೂ ಸುಸ್ತಾಗುತ್ತಿದೆ ಎಂದೆನಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರಿಂದಲೇ ಅವಮಾನಗಳು, ತಿರಸ್ಕಾರ ಆಗುವಂತೆ ಮಾಡಿಸುತ್ತದೆ. ತಾಯಿಯೊಂದಿಗೆ ಮನಸ್ತಾಪ, ವಾಹನಗಳು ಪದೇ ಪದೇ ರಿಪೇರಿ ಇತ್ಯಾದಿ ಫಲಗಳನ್ನು ಕಾಣಲಿದ್ದೀರಿ. ಮಹಿಳೆಯರಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಮೇಲಧಿಕಾರಿಗಳ ಜತೆಗೆ ಅಭಿಪ್ರಾಯ ಭೇದಗಳು ಉಂಟಾಗುತ್ತದೆ. ಅವರು ನಿಮ್ಮ ಬೆನ್ನ ಹಿಂದೆ ಸಮಸ್ಯೆಗಳನ್ನು ಮಾಡಬಹುದು. ಆಪ್ತರು ನಿಮ್ಮಿಂದ ದೂರ ಆಗುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್ ಬರುವಂಥ ಕೆಲಸ ಮಾಡುವಂಥವರಿಗೆ ಒಳ್ಳೆ ಬೋನಸ್, ಕಮಿಷನ್ ಬರಬಹುದು. ಇನ್ನು ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೆ ನೀಡಿದ ಸಾಲವಿದ್ದಲ್ಲಿ ಆ ಹಣ ಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ಇದರ ಜತೆಗೆ ಪುಷ್ಕಳವಾದ ಭೋಜನವನ್ನು ಸವಿಯುವ ಯೋಗ ಇದೆ. ಮನೆ ದೇವರ ಪೂಜೆಯಲ್ಲಿ ಪಾಲ್ಗೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಕುಟುಂಬ ಸಮೇತವಾಗಿ ತೆರಳಿ ಹರಕೆಗಳಿದ್ದಲ್ಲಿ ತೀರಿಸುವಂಥ ಸಾಧ್ಯತೆಗಳು ಸಹ ಇವೆ. ಇನ್ನು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹಲವರು ಬೆನ್ನಿಗೆ ನಿಲ್ಲಲಿದ್ದಾರೆ. ನಿಮ್ಮ ಈ ಹಿಂದಿನ ಶ್ರಮಕ್ಕೆ ಫಲ ದೊರೆಯುತ್ತಿದೆ ಎಂಬ ಭಾವವೊಂದು ಮನೆ ಮಾಡಲಿದೆ. ಇತರರಿಗೆ ನೆರವು ನೀಡಿದ್ದರ ಫಲಿತಾಂಶವನ್ನು ಕಾಣಲಿದ್ದೀರಿ. ಇನ್ನು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗುವ ಸಾಧ್ಯತೆ ಇದ್ದು, ವ್ಯಾಪಾರ ಮಾಡುತ್ತಿದ್ದಲ್ಲಿ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಉದ್ಯಮಗಳು, ವ್ಯಾಪಾರಸ್ಥರಿಗೆ ಬರಬೇಕಾದ ಲಾಭ ಪ್ರಮಾಣ, ಹಣ ಬರುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಬಾರದಿರಬಹುದು ಅಥವಾ ನೀವು ಅಂದುಕೊಂಡ ಸಮಯದಲ್ಲಿ ದೊರೆಯದಿರಬಹುದು. ವ್ಯಾಪಾರಸ್ಥರಿಗೆ ನಿರ್ದಿಷ್ಟ ಎಚ್ಚರಿಕೆ ಏನೆಂದರೆ, ನೀವಾಗಿಯೇ ಮಾತಿಗೆ ಮಾತು ಕೊಟ್ಟು, ನಷ್ಟವನ್ನು ಮೈ ಮೇಲೆ ಎಳೆದುಕೊಳ್ಳುವುದಕ್ಕೆ ಹೋಗಬೇಡಿ. ಕುಟುಂಬದ ವ್ಯವಹಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೀರಿ ಅಂತಾದಲ್ಲಿ ತಂದೆಯೊಂದಿಗೆ ಮನಸ್ತಾಪ ಮಾಡಿಕೊಂಡು ನಿಮಗೆ ಬರಬೇಕಾದದ್ದು ಸಿಗದಂತೆ ಆಗುತ್ತದೆ. ಇನ್ನು ನಿಮ್ಮಲ್ಲಿ ಯಾರು ತಾತ್ಕಾಲಿಕ ಉದ್ಯೋಗಗಳಲ್ಲಿ ಇದ್ದೀರಿ, ಅಂಥವರು ಯಾವುದೇ ಕಾರಣಕ್ಕೂ ಉದ್ಯೋಗ ಬಿಡುವಂಥ ನಿರ್ಧಾರ ಮಾಡದಿರಿ. ಕೃಷಿಕರಾಗಿದ್ದಲ್ಲಿ ನಿಮ್ಮ ಹುಂಬತನದ ಕಾರಣಕ್ಕೆ ಖರ್ಚು- ವೆಚ್ಚದಲ್ಲಿ ಭಾರೀ ಏರುಪೇರುಗಳಾಗುತ್ತವೆ. ವೃಥಾ ಖರ್ಚು ಮಾಡಿಕೊಳ್ಳುತ್ತೀರಿ. ಆ ನಂತರ ಪರಿತಪಿಸುವಂತಾಗುತ್ತದೆ. ವೃತ್ತಿನಿರತರಾಗಿದ್ದಲ್ಲಿ ಯಾವುದಾದರೂ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದು, ಸುಮ್ಮನೆ ಹೇಗಿದೆ ಅಂತ ನೋಡೋಣ ಅಂತ ಟ್ರೈ ಮಾಡಿ, ಹಾಗೇ ದುಡ್ಡು ಕಟ್ ಆಗಿಬಿಡಬಹುದು. ಗೂಗಲ್ ಪೇ, ಫೋನ್ ಪೇ ಇಂಥ ವ್ಯಾಲೆಟ್ ಗಳಿಂದ ಹಣ ಕಳಿಸುವಾಗ ಸಂಖ್ಯೆ ಹೆಚ್ಚಾಗಿ, ಅದರಿಂದ ಪರಿಚಯವೇ ಇಲ್ಲದ ವ್ಯಕ್ತಿ ಖಾತೆಗೆ ಹಣ ಹೋಗಿ, ಬಾರದಂತೆ ಆಗಬಹುದು. ಒಟ್ಟಿನಲ್ಲಿ ಸೈಬರ್ ಕ್ರಿಮಿನಲ್ ಗಳಿಂದ ವಂಚನೆ ಆಗಬಹುದು, ಜಾಗ್ರತೆಯಿಂದ ಇರಿ. ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ವಾರ ಇದು. ಭವಿಷ್ಯದಲ್ಲಿ ಆಗುವ ಅತಿ ದೊಡ್ಡ ಅನುಕೂಲದ ಬಗ್ಗೆ ಮುನ್ಸೂಚನೆ ದೊರೆಯಲಿದೆ. ಮಹಿಳೆಯರಿಗೆ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಎಲ್ಲಿ ಯಾವ ಮಾತನ್ನು ಆಡಬಾರದೋ ಆ ಮಾತನ್ನು ಆಡಿ, ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತೀರಿ. ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆ ಇರಲಿ. ಅಲರ್ಜಿ ಸಮಸ್ಯೆಗಳು ಕಾಡಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹೊಸ ಹೂಡಿಕೆ, ವ್ಯವಹಾರ, ವ್ಯಾಪಾರ ಶುರು ಮಾಡಬೇಕು, ವ್ಯಾಪಾರ ವಿಸ್ತರಣೆ ಮಾಡಬೇಕು ಎಂದಿರುವವರಿಗೆ ಹಣಕಾಸು ಹರಿವು ಚೆನ್ನಾಗಿ ಆಗಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ನಿಮ್ಮಲ್ಲಿ ಯಾರು ವಿವಾಹ ವಯಸ್ಕರಾಗಿದ್ದೀರಿ, ಅಂಥವರಿಗೆ ಸಭೆ, ಸಮಾರಂಭ ಮೊದಲಾದ ಕಾರ್ಯಕ್ರಮದಲ್ಲಿ ಭಾಗೀ ಆಗಲು ಬಂದ ವ್ಯಕ್ತಿಯ ಪರಿಚಯವು ಸ್ನೇಹವಾಗಿ, ಅಲ್ಲಿಂದ ಅದು ಪ್ರೀತಿಯಾಗಿ ಮಾರ್ಪಟ್ಟು, ಮದುವೆಯಲ್ಲಿ ಕೊನೆಯಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಲೆಕ್ಕಾಚಾರ, ಬುದ್ಧಿ ಚಾತುರ್ಯ ಹಾಗೂ ಚಾಣಾಕ್ಷ ನಡೆಗಳಿಂದ ಅನುಕೂಲಗಳು ಒದಗಿಬರುತ್ತದೆ. ಏಕಾಏಕಿ ತುಂಬ ಚಟುವಟಿಕೆಯಿಂದ ಹಾಗೂ ಉತ್ಸಾಹದಿಂದ ಕೆಲಸ- ಕಾರ್ಯಗಳನ್ನು ಆರಂಭ ಮಾಡುತ್ತೀರಿ. ಇನ್ನು ಯಾರ ಬಳಿ ಹೇಳಿಕೊಳ್ಳುವುದು ಅಥವಾ ಹೇಗೆ ಈ ಸಮಸ್ಯೆಯಿಂದ ಹೊರಬರುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಹಣಕಾಸಿನ ಅಗತ್ಯ ತೀವ್ರವಾಗಿದೆ ಎಂದಿದ್ದಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆಗಳನ್ನು ಕಾಣಲಿದ್ದೀರಿ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ನಿಮ್ಮ ತಂದೆ ಅಥವಾ ತಂದೆ ಸಮಾನರಿಂದ ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ. ನೀವು ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿ, ಮರೆತೇ ಹೋಗಿದ್ದ ಹಣ ನಿಮ್ಮ ಕೈ ಸೇರುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವಂಥ ಯೋಗ ಇದೆ. ಇದಕ್ಕಾಗಿ ನೀವು ಹೆಚ್ಚಿನ ಓಡಾಟ ನಡೆಸಲಿದ್ದೀರಿ. ಕೃಷಿಕರು ಇದ್ದಲ್ಲಿ ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರಿರುವ ವ್ಯವಹಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ಜಮೀನು ವ್ಯಾಜ್ಯಗಳು ವಿಪರೀತಕ್ಕೆ ಹೋಗಬಹುದೇನೋ ಅಂದುಕೊಂಡಿದ್ದು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಷ್ಟು ಸಮಯ ನಿಮ್ಮ ಕೈ ಬಿಟ್ಟು ಹೋಗಬಿಡಬಹುದೇನೋ ಎಂದು ಆತಂಕಗೊಂಡಿದ್ದ ಪಿತ್ರಾರ್ಜಿತವಾದ ಭೂಮಿಯೋ ಅಥವಾ ಹಣವೋ ನಿಮ್ಮ ಕೈ ಸೇರುವಂಥ ಯೋಗ ಇದೆ. ಇದಕ್ಕೆ ನಿಮಗೆ ಸಲಹೆ- ಮಾರ್ಗದರ್ಶನದ ಅಗತ್ಯ ಇದೆ ಎಂದಾದರೆ, ಯಾವುದೇ ಸಂಕೋಚ ಮಾಡದಂತೆ ಪಡೆದುಕೊಳ್ಳಿ. ವೃತ್ತಿನಿರತರಾಗಿದ್ದಲ್ಲಿ ದಿಢೀರನೇ ಹಣಕಾಸು ಲಾಭ ಬರುವಂಥ ಯೋಗ ಇದೆ. ಜತೆಗೆ ಖ್ಯಾತಿ ಕೂಡ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಐಷಾರಾಮಿ ಕಾರು ಖರೀದಿಸುವಂಥ ಯೋಗ ಕಂಡುಬರುತ್ತಿದೆ. ಪಾರ್ಟನರ್ ಷಿಪ್ ವಹಿಸಿಕೊಳ್ಳುವುದಕ್ಕೆ ಕೆಲವರು ಪ್ರಸ್ತಾವವನ್ನು ಮುಂದಿಡಬಹುದು. ಆದರೆ ಇದನ್ನು ಉಳಿಸಿಕೊಳ್ಳುವುದು ಬಹಳ ಸವಾಲಿನ ಸಂಗತಿ ಆಗಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಬೇಕು. ವಿದ್ಯಾರ್ಥಿಗಳಾಗಿದ್ದಲ್ಲಿ ನಿಮ್ಮ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯಗಳು ಏರ್ಪಡಲಿವೆ. ಆದರೆ ಇದನ್ನೇ ವಿನಾಕಾರಣ ವಾದ- ವಾಗ್ವಾದ ಮುಂದವರಿಸಬೇಡಿ. ಮಹಿಳೆಯರಿಗೆ ತಂದೆಯ- ತಂದೆ ಸಮಾನರಾದವರ ಆರೋಗ್ಯ, ಅವರ ಆದಾಯ ತೆರಿಗೆ, ಸಾಲ ತೀರಿಸುವ ವಿಚಾರಗಳು ನಿಮಗೆ ಚಿಂತೆ ಉಂಟು ಮಾಡುತ್ತವೆ. ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಕಂಡುಬರಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ತಿಳಿದಿರುವಂಥ ವಿದ್ಯೆಗೆ ಇರುವ ಪರಿಣತಿಗೆ ಸಿಕ್ಕಾಪಟ್ಟೆ ಬೇಡಿಕೆ ಬರಲಿದೆ. ಚಿನ್ನದ ಕೆಲಸ ಮಾಡುವವರು, ಕಟ್ಟಡಗಳಲ್ಲಿ ರೇಲಿಂಗ್ ಮಾಡುವಂಥವರು ಹಾಗೂ ಇಂಟಿರೀಯರ್ ಡಿಸೈನಿಂಗ್ ವ್ಯವಹಾರ ಮಾಡುವಂಥವರಿಗೆ ಖ್ಯಾತಿ ಹೆಚ್ಚಾಗಲಿದೆ. ಹೊಸ ಹೊಸ ಆರ್ಡರ್ ಗಳು ಕೂಡ ಬರಬಹುದು. ನೀವೇನಾದರೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಾದರೆ, ಅಥವಾ ಮಾತು ಪ್ರಧಾನವಾದ ಕ್ಷೇತ್ರದಲ್ಲಿ ಇದ್ದೀರಿ ಅಂತಾದರೆ ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆ ಕೆಲಸಗಳು ಆಗಲಿವೆ. ವಿದೇಶಗಳಿಗೆ ಟ್ರಾನ್ಸಿಷನ್ ಗಾಗಿ ತೆರಳುವ ಸಾಧ್ಯತೆ ಇದೆ. ಅಂದರೆ ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಅಲ್ಪಾವಧಿಗೆ ತೆರಳಬಹುದು. ಈ ವಾರದಲ್ಲಿ ನಿಮ್ಮ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ. ಶುಭ ವಾರ್ತೆ ಕೇಳಿಬರಲಿದೆ. ಸಂತೋಷವಾಗಿ ಸಮಯ ಕಳೆಯುವುದಕ್ಕೆ ಬೇಕಾದ ವಾತಾವರಣ, ಬೆಳವಣಿಗೆಗಳು ಆಗಲಿವೆ. ಇದೇ ಮೊದಲು ಎಂಬಂತೆ ಪ್ರಯತ್ನಿಸಿದ ಕೆಲವು ವ್ಯವಹಾರಗಳಲ್ಲಿ ಉತ್ತಮವಾದ ಲಾಭ, ಪ್ರತಿಫಲ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಹೀಗೆ ಎಂದಾದರೂ ಆಗಬಹುದಾ ಎಂಬ ನಿರೀಕ್ಷೆಯಲ್ಲಿ ನೀವಿದ್ದಲ್ಲಿ ಅಂಥ ಬೆಳವಣಿಗೆ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಈ ವಾರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು, ಸ್ವಂತ ವ್ಯವಹಾರ, ವ್ಯಾಪಾರ ಮಾಡುತ್ತಿರುವವರು ಹೀಗೆ ಎಲ್ಲರೂ ಶುಭ ಫಲಗಳನ್ನು ಪಡೆಯಲಿದ್ದೀರಿ. ಪ್ರಭಾವಿಗಳು ಬೆಂಬಲಕ್ಕೆ ನಿಲ್ಲಲಿದ್ದಾರೆ. ಇನ್ನು ಆಗುವುದಿಲ್ಲ ಎಂದುಕೊಂಡ ಕೆಲಸಗಳು ಸಹ ಸಲೀಸಾಗಿ ಆಗುವುದಕ್ಕೆ ಇತರರ ಸಹಾಯ ದೊರೆಯಲಿದೆ. ಕೃಷಿಕರಾಗಿದ್ದಲ್ಲಿ ಆಸ್ತಿ ಮಾರಾಟದಿಂದ ಲಾಭ ಆಗಬಹುದು ಅಥವಾ ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಅದನ್ನು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳುವ ಅವಕಾಶ ದೊರೆಯಬಹುದು. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಅಸಮಾಧಾನ ಇದ್ದಲ್ಲಿ ಅದನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಲಿದ್ದೀರಿ. ಆದರೆ ಯಾವುದೇ ಕೆಲಸ ಮಾಡುವಾಗ ತಾಳ್ಮೆ- ಸಂಯಮ ಬಹಳ ಮುಖ್ಯ. ವೃತ್ತಿನಿರತರಿದ್ದಲ್ಲಿ ದೃಷ್ಟಿ ದೋಷವುಂಟಾಗಿ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ, ತಾಯಿ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗುವಂತಾಗುತ್ತದೆ. ಈ ಹಿಂದೆ ನೀವು ನೋಂದಣಿ ಮಾಡಿದ ಆಸ್ತಿಗೆ ಸಂಬಂಧಿಸಿದಂತೆ ಸರಿಯಾದ ಸ್ಟ್ಯಾಂಪ್ ಡ್ಯೂಟಿ ಅಥವಾ ತೆರಿಗೆ, ಶುಲ್ಕ ಲೆಕ್ಕಾಚಾರ ಕಟ್ಟಿಲ್ಲ ಎಂದು ನೋಟಿಸ್ ಬರುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ವಿರಸಗಳು ಸೃಷ್ಟಿ ಆಗಬಹುದು. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಕುಗ್ಗಲಿದೆ. ನಿಮಗೆ ಕೆಲವು ನಿರ್ದಿಷ್ಟ ವಿಷಯದಲ್ಲಿ ಏನೂ ಗೊತ್ತಿಲ್ಲ ಎಂದು ಎಲ್ಲರೆದುರು ಅವಮಾನಕ್ಕೆ ಗುರಿ ಆಗುವ ಯೋಗ ಇದೆ. ನೀವು ಬಹಳ ನಂಬಿರುವ ಸ್ನೇಹಿತರು ಸಮಯಕ್ಕೆ ನಿಮ್ಮ ನೆರವಿಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಮಹಿಳೆಯರು ಯಾರದೋ ಮಾತು ಕೇಳಿಕೊಂಡು ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದ್ದು, ಹಣಕಾಸು ನಷ್ಟವನ್ನು ಅನುಭವಿಸಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಪ್ರೇಮಿಗಳಿಗೆ, ದಂಪತಿಗೆ ವಿರಹ ಅನುಭವಿಸುವಂಥ ಯೋಗ ಇದೆ. ಒಂದು ವೇಳೆ ಮನಸ್ತಾಪ ಬಂದು ಪ್ರೇಮಿಯಿಂದ ದೂರವಾಗಿದ್ದಲ್ಲಿ ಆ ನೆನಪು ವಿಪರೀತವಾಗಿ ಕಾಡಲಿದೆ. ನೀವು ಮಾಡಿದ ಪ್ರಾಜೆಕ್ಟ್ ಗಳಿಗೆ ಮೆಚ್ಚುಗೆ ಮೂಲಕ ಬಹುಮಾನಗಳು ಬರಬಹುದು. ಟ್ಯಾಕ್ಸ್ ರೀಫಂಡ್ ಗಾಗಿ ಅರ್ಜಿ ಹಾಕಿಕೊಂಡಿದ್ದವರಿಗೆ, ಅಥವಾ ಈಗಾಗಲೇ ಸರ್ಕಾರಿ ಸಂಸ್ಥೆಯೊಂದಕ್ಕೆ ವಸ್ತುಗಳನ್ನು ಸರಬರಾಜು ಮಾಡಿಯಾಗಿದೆ, ಅದರಿಂದ ಹಣ ಬರಬೇಕಾಗಿದೆ ಎಂದಲ್ಲಿ ಅದು ಬರುವ ಅವಕಾಶ ಹೆಚ್ಚಿದೆ. ವಾರದ ಮಧ್ಯಭಾಗದ ನಂತರದಲ್ಲಿ ಮಾರ್ಕೆಟಿಂಗ್, ಜಾಹೀರಾತು ಅಥವಾ ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪರ್ಫಾರ್ಮೆನ್ಸ್ ಬೋನಸ್ ದೊರೆಯಬಹುದು. ಇನ್ನು ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆಯನ್ನು ವಹಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮಧುಮೇಹ, ರಕ್ತದೊತ್ತಡ ಇಂಥ ಸಮಸ್ಯೆಗಳಿಂದ ಬಳಲುತ್ತಿರುವವರು ಈ ವಾರ ನಿಮ್ಮ ದೇಹ ಸೌಖ್ಯ, ಅಂದರೆ ಆರೋಗ್ಯಕ್ಕೆ ಬೇಕಾದ ಕಾಳಜಿಯನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಸ್ನೇಹಿತರ ಅನಾರೋಗ್ಯ ಸಮಸ್ಯೆಯಿಂದಲೂ ನೀವು ಗಾಬರಿ ಆಗುವಂತೆ ಆಗುತ್ತದೆ. ಅದಕ್ಕೆ ನಿಮ್ಮ ಸುತ್ತಮುತ್ತಲ ಪರಿಸರ ಪ್ರೇರಣೆ ನೀಡುತ್ತವೆ. ನಿಮ್ಮಲ್ಲಿ ಯಾರು ಸೇಲ್ಸ್, ಮಾರ್ಕೆಟಿಂಗ್ ವಿಭಾಗದಲ್ಲಿ ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ಆದಾಯದಲ್ಲಿ ವೃದ್ಧಿ ಕಾಣಲಿದ್ದೀರಿ. ಸ್ನೇಹಿತರು ಇರುವ ಕಡೆಗೆ, ಮನೆಯಲ್ಲಿ, ಉದ್ಯೋಗ ಸ್ಥಳದಲ್ಲಿ ಸಂತೋಷ ಹೆಚ್ಚಾಗುತ್ತದೆ. ವಕೀಲರಿಗೆ ದೊಡ್ಡ ಮಟ್ಟದ ಜಯ ಸಿಕ್ಕು, ಕೀರ್ತಿ ಹೆಚ್ಚಾಗಬಹುದು. ಅಷ್ಟೇ ಅಲ್ಲ, ಯಾರೆಲ್ಲ ಸಾರ್ವಜನಿಕ ಜೀವನದಲ್ಲಿ ಇರುತ್ತಾರೋ ಮನ್ನಣೆ ಜಾಸ್ತಿ ಆಗುತ್ತದೆ. ಕೃಷಿಕರಾಗಿದ್ದಲ್ಲಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಭೂಮಿ ಲಾಭ ಆಗಬಹುದು. ನೆನಪಿಡಿ, ಒಂದು ವೇಳೆ ತುಂಬ ಕಡಿಮೆ ಮೊತ್ತಕ್ಕೆ ಭೂಮಿ ಭೋಗ್ಯಕ್ಕೆ ಸಿಕ್ಕರೂ ಅದು ಲಾಭವೇ. ವೃತ್ತಿನಿರತರಿಗೆ ನಿಮ್ಮ ಮಾತು, ನಡವಳಿಕೆ ಹಾಗೂ ಆತುರದ ತೀರ್ಮಾನಗಳು ಸಮಸ್ಯೆಯನ್ನು ತಂದೊಡ್ಡಲಿವೆ. ಕೆಲವು ದಂಡ ಶುಲ್ಕಗಳು ನಿಮ್ಮ ಮೇಲೆ ಬೀಳಬಹುದು. ಈ ಹಿಂದೆ ನೀವೇನೂ ಹಣ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದ ಕೆಲಸಕ್ಕೆ ಈಗ ಖರ್ಚು ಮಾಡಲೇಬೇಕಾದ ಸನ್ನಿವೇಶ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ವಿನಾಕಾರಣದ ಖರ್ಚು ಜಾಸ್ತಿ ಆಗುತ್ತದೆ. ಸಣ್ಣ ಜ್ವರ ಅಂತ ಡಾಕ್ಟರ್ ಹತ್ತಿರ ತೋರಿಸಿಕೊಳ್ಳುವುದಕ್ಕೆ ಹೋದರೂ ಹತ್ತಾರು ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಬರೆದುಕೊಟ್ಟು, ಅದಕ್ಕೆ ಖರ್ಚುಗಳಾಗಬಹುದು. ಮಹಿಳೆಯರಿಗೆ ಜಿಮ್, ಪ್ರಾಣಾಯಾಮ, ಯೋಗ ಮೊದಲಾದವುಗಳನ್ನು ಸೇರ್ಪಡೆ ಆಗುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಆಹಾರಪಥ್ಯಗಳನ್ನು ಅನುಸರಿಸುವುದಕ್ಕೆ ಶುರು ಮಾಡಬೇಕು ಎಂದು ನಿರ್ಧಾರ ಕೈಗೊಳ್ಳುತ್ತೀರಿ. ಸಾಲ ಬಾಧೆಗಳು ಉಂಟಾಗುತ್ತವೆ. ನಾನಾ ಬಗೆಯ ದುಃಖಗಳನ್ನು ಅನುಭವಿಸುತ್ತೀರಿ. ಇದು ನಿಮ್ಮದೇ ಕಾರಣದ ದುಃಖ ಆಗಬೇಕು ಅಂತಿಲ್ಲ. ಸ್ನೇಹಿತರು, ಸಂಬಂಧಿಕರ ಸಮಸ್ಯೆಗಳೂ ನಿಮಗೆ ದುಃಖ ತರಬಹುದು. ಚರ್ಮದ ವ್ಯಾಧಿಗಳು, ದೈವ ಶಾಪಗಳು ಅನುಭವಕ್ಕೆ ಬರುತ್ತವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮಗೆ ವಿರುದ್ಧವಾಗಿ ನಡೆಯುವಂಥ ಬೆಳವಣಿಗೆಗಳಿಂದ ವಿಚಲಿತರಾಗಬೇಡಿ. ಆತ್ಮವಿಶ್ವಾಸದಿಂದ ಇರುವುದು ಈ ಸಮಯದಲ್ಲಿ ತುಂಬ ಮುಖ್ಯ. ಉದ್ಯೋಗ ಬದಲಾವಣೆ ಮಾಡುವುದಕ್ಕೆ ಇತರರ ನೆರವು ನಿಮಗೆ ಸಿಗಲಿದೆ. ಆದರೆ ಯಾವುದೇ ಕಾರಣಕ್ಕೂ ಆಲಸ್ಯ ಮಾಡಬೇಡಿ ಹಾಗೂ ಸರಿಯಾದ ಫಾಲೋಅಪ್ ಮಾಡುವುದನ್ನು ಮರೆಯಬೇಡಿ. ಶತ್ರು ಬಾಧೆ ಕಡಿಮೆ ಆಗಲಿದೆ. ಆದರೆ ಅದಕ್ಕೂ ಮುನ್ನ ಶತ್ರುಗಳಿಂದ ನಾನಾ ಬಗೆಯಲ್ಲಿ ಹಿಂಸೆ ಆಗುತ್ತದೆ. ಈ ಹಿಂದೆ ಕೆಲಸ ಮಾಡಿದ್ದೀನಿ, ಇನ್ನೂ ಆ ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ. ನಿಮ್ಮ ಬಗ್ಗೆ ನಿಮಗೇ ಇರುವಂಥ ಆಕ್ಷೇಪಗಳನ್ನು ಹಾಗೂ ಕೊರತೆ ಎಂದೆನಿಸಿರುವುದನ್ನು ಸರಿ ಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಮುಖ್ಯವಾಗಿ ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಅದೇ ರೀತಿ ಟ್ರೆಂಡ್ ಗೆ ತಕ್ಕಂತೆ ಇರಬೇಕು, ಅದಕ್ಕೆ ತಕ್ಕಂತೆ ಅಲೋಚಿಸಬೇಕು ಎಂಬ ತಹತಹ ನಿಮ್ಮಲ್ಲಿ ಶುರುವಾಗಲಿದೆ. ಒಂದು ವೇಳೆ ನೀವೇ ಕೆಲಸ ಬಿಟ್ಟಿರಬಹುದು ಅಥವಾ ನೀವು ಕೆಲಸ ಮಾಡುವಂಥ ಸಂಸ್ಥೆಯವರೇ ಕೆಲಸದಿಂದ ತೆಗೆಯುವ ಮುನ್ಸೂಚನೆ ಸಿಗಬಹುದು, ಅಂಥವರು ಈ ವಾರ ಹೊಸ ಕೋರ್ಸ್ ಸೇರಬೇಕು ಅಂದುಕೊಂಡಲ್ಲಿ ಸೂಕ್ತ ಮಾರ್ಗದರ್ಶನ ಸಿಗಲಿದೆ. ಒಟ್ಟಿನಲ್ಲಿ ಹೇಳಬೇಕು ಅಂದಲ್ಲಿ ಈ ವರೆಗೆ ಇದ್ದ ನಿಮ್ಮ ವಿಷಯ ಜ್ಞಾನ ವೃದ್ಧಿ ಆಗಲಿದೆ. ಕೃಷಿಕರಾಗಿದ್ದಲ್ಲಿ ನಿಮ್ಮ ವಿರುದ್ಧ ಸರ್ಕಾರದ ಕಂದಾಯ ಇಲಾಖೆಗೆ ಕೆಲವರು ದೂರುಗಳನ್ನು ನೀಡುವ ಸಾಧ್ಯತೆ ಇದೆ. ಮೂಕರ್ಜಿಗಳನ್ನು ಸಲ್ಲಿಸಬಹುದು, ಇದರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಸರಿಯಾದ ಮಾರ್ಗವನ್ನೇ ಅನುಸರಿಸಿ. ಸಿಟ್ಟಿನ ಭರದಲ್ಲಿ ತಪ್ಪು ನಿರ್ಧಾರವನ್ನೋ ಅಥವಾ ಆಯ್ಕೆಗಳನ್ನೋ ಮಾಡಿಕೊಳ್ಳದಿರಿ. ವೃತ್ತಿನಿರತರಾಗಿದ್ದಲ್ಲಿ ಈ ಹಿಂದೆ ನೀವು ನೀಡಿದ್ದ ಮಾತು, ತೆಗೆದುಕೊಂಡಿದ್ದ ಜವಾಬ್ದಾರಿ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಗಳು ಈಗ ಕೈ ಕೊಡಲು ಆರಂಭ ಆಗುತ್ತದೆ. ಕಚೇರಿಯಲ್ಲಿ ಅಥವಾ ನೀವು ಇರುವಂಥ ಸ್ಥಳದಲ್ಲಿ ಅಗ್ನಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು. ನಿಮ್ಮ ಬೇಜವಾಬ್ದಾರಿಯಿಂದ ಯಾವುದಾದರೂ ಅನಾಹುತ- ಅವಘಡಗಳು ಆಗದಂತೆ ಎಚ್ಚರಿಕೆಯನ್ನು ವಹಿಸುವುದು ತುಂಬ ಮುಖ್ಯ. ವಿದ್ಯಾರ್ಥಿಗಳಿಗೆ ನಿಮ್ಮ ಸುತ್ತಲೂ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡಲಿದೆ. ನಿಮಗೆ ದೊರೆಯಬೇಕಾದ ಮನ್ನಣೆ, ಪುರಸ್ಕಾರ, ಸನ್ಮಾನಗಳು ಇತರರ ಪಾಲಾಗಬಹುದು. ಮಹಿಳೆಯರಿಗೆ ಸಂಗಾತಿ ನಡವಳಿಕೆ ಬಗ್ಗೆ ಅನುಮಾನ, ಅದರಲ್ಲೂ ಅವರಿಗೆ ಏನಾದರೂ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ಆಗಿದೆಯೋ ಎಂಬ ಅನುಮಾನ ಮೂಡಲಿದೆ. ಈ ವಾರ ಮನಸ್ಸಿನ ನಿಯಂತ್ರಣ ತುಂಬ ಮುಖ್ಯವಾಗುತ್ತದೆ. ಏನಾದರೂ ನಿರ್ಧಾರಗಳನ್ನು ಮಾಡುವಾಗ ಸಾವಿರ ಸಲ ಯೋಚನೆ ಮಾಡಿ. ಏಕೆಂದರೆ ತಪ್ಪಾದ ನಿರ್ಧಾರಗಳು ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ಹಿಂದೆ ಯಾವಾಗಲೋ ಮಾಡಿದ್ದ ಹೂಡಿಕೆಗೆ ಈಗ ಉತ್ತಮ ಬೆಲೆ ಬರುತ್ತದೆ. ನಿಮ್ಮ ಬುದ್ಧಿ ಚಾತುರ್ಯದಿಂದ ಅನುಕೂಲ ಪಡೆದುಕೊಳ್ಳಲಿದ್ದೀರಿ. ಅಂದರೆ ಸವಾಲುಗಳನ್ನೇ ನಿಮಗೆ ಅನುಕೂಲವಾಗಿ ಬದಲಾಯಿಸಿಕೊಳ್ಳಲಿದ್ದೀರಿ. ಮನೆಗಳನ್ನು ಕಟ್ಟುತ್ತಿರುವವರಿಗೆ ಹಣಕಾಸಿನ ಹರಿವು ಸರಾಗವಾಗಿ ಇರುತ್ತದೆ. ನೀವು ಇಷ್ಟು ಕಾಲ ಉಳಿಸಿಕೊಂಡು ಬಂದಿದ್ದ ಹೆಸರು, ವಿಶ್ವಾಸ, ನಿಷ್ಠೆಯ ಫಲವನ್ನು ಪಡೆಯುವಂಥ ಸಮಯ ಇದಾಗಿರುತ್ತದೆ. ಆ ಕಾರಣದಿಂದಾಗಿ ಒಂದು ಬಗೆಯ ಸಾರ್ಥಕ್ಯ ಭಾವ ನಿಮ್ಮನ್ನು ಆವರಿಸಲಿದೆ. ಬಾಯಿಬಿಟ್ಟು ಕೇಳುವ ಅಗತ್ಯವೇ ಇಲ್ಲದೆ ಕೆಲವು ಕೆಲಸಗಳು ಸರಾಗವಾಗಿ ಆಗಲಿವೆ. ಅಗತ್ಯವಾಗಿ ಬೇಕಾಗುವಂಥ ಹಣವನ್ನು ಬಾಯಿ ಬಿಟ್ಟು ಕೇಳುವ ಮುಂಚೆಯೇ ಅಥವಾ ಈ ಹಿಂದೆ ಮಾತಿನ ಮಧ್ಯೆ ಪ್ರಸ್ತಾವ ಮಾಡಿರುವುದನ್ನು ಗಮನದಲ್ಲಿ ಇಟ್ಟುಕೊಂಡು, ನಿಮ್ಮ ತಾಯಿಯವರು ಅಥವಾ ತಾಯಿ ಸಮಾನರಾದವರು ತಮ್ಮ ಒಡವೆಯನ್ನೇ ನೀಡಿ, ಅದನ್ನು ಮಾರಿ ಹಣ ಪಡೆಯುವಂತೆ ಹೇಳಬಹುದು ಅಥವಾ ನಿಮ್ಮಲ್ಲಿ ಕೆಲವರಿಗೆ ಅವರು ಹಣ ನೀಡಿ, ಏನನ್ನಾದರೂ ಖರೀದಿಸು ಅಂತ ಹೇಳಬಹುದು. ಅಥವಾ ಅದನ್ನು ನಿಮ್ಮ ಖಾತೆಯಲ್ಲಿ ಎಫ್ ಡಿ ಮಾಡಿಕೊಳ್ಳುವಂತೆ ತಿಳಿಸಬಹುದು. ಅಥವಾ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಹಣಕಾಸು ಹರಿವು ಹೆಚ್ಚಾಗಬಹುದು. ಆದರೆ ಸಂಗಾತಿ ಜತೆಗೆ ಮಾತನಾಡುವಾಗ ಜಾಗ್ರತೆ ಇರಬೇಕು. ಈಗೋ ಕ್ಲಾಶ್ ಆಗಿ, ದಿನಗಟ್ಟಲೆ ಮಾತು ಬಿಡುವಂತಾಗಬಹುದು. ಸಿಟ್ಟು ಮಾಡಿಕೊಂಡು, ನಿರೀಕ್ಷೆ ಮಾಡಿರದಂಥ ಕಠಿಣ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಕೃಷಿಕರಿಗೆ ಪ್ರಭಾವಿ ವ್ಯಕ್ತಿಗಳ ಸಹಾಯದಿಂದಾಗಿ ಸರ್ಕಾರದಿಂದ ಹಲವು ಯೋಜನೆಗಳ ಪ್ರಯೋಜನ ಪಡೆಯುವಂಥ ಸಾಧ್ಯತೆ ಇದೆ. ನಿಧಾನಕ್ಕೆ ಆಗಬಹುದು ಎಂದುಕೊಂಡಿದ್ದ ವ್ಯವಹಾರಗಳು ಬಹಳ ವೇಗವನ್ನು ಪಡೆದುಕೊಳ್ಳಲಿವೆ. ಈ ಹಿಂದಿಗಿಂತ ಹೆಚ್ಚು ಉತ್ಸಾಹದಲ್ಲಿ ಕೆಲಸ- ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಲಿದೆ. ವೃತ್ತಿನಿರತರು ನಿಮಗೆ ವಹಿಸಿದ ಜವಾಬ್ದಾರಿಗಳು, ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ, ಅಂದರೆ ಡೆಡ್ ಲೈನ್ ನಲ್ಲಿ ಮುಗಿಸದೆ ನೀವು ಹಣ ಕಟ್ಟಿಕೊಡುವಂತೆ ಆಗಬಹುದು ಅಥವಾ ಬರಬೇಕಾದ ಹಣ ಬಾರದಂತೆ ಆಗಬಹುದು. ತೆರಿಗೆ ಕಟ್ಟುವುದು, ತೆರಿಗೆ ರೀಫಂಡ್ ಪಡೆಯುವುದು ಇಂಥ ವ್ಯವಹಾರಗಳಲ್ಲಿ ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ಇನ್ನು ನಿಮ್ಮಲ್ಲಿ ಯಾರು ಭೂಮಿ ವ್ಯವಹಾರ ಮಾಡುತ್ತಾ ಇದ್ದೀರಿ, ಅಂದರೆ ಕಚೇರಿಗಾಗಿ ಭೂಮಿ ಹುಡುಕುತ್ತಿದ್ದೀರಿ ಅಂಥವರು ನಷ್ಟ ಕಾಣಲಿದ್ದೀರಿ. ಆದ್ದರಿಂದ ಆಸ್ತಿ ವ್ಯವಹಾರ ಮಾಡುವಾಗ ಆತುರ ಮಾಡಬೇಡಿ. ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಈ ಹಿಂದೆ ನಿಮ್ಮ ನಿರ್ಲಕ್ಷ್ಯದಿಂದ ನಷ್ಟ ಆಯಿತು ಎಂದು ಪರಿಹಾರ ಕೇಳಿಕೊಂಡು ಬರಬಹುದು. ವಿದ್ಯಾರ್ಥಿಗಳಾಗಿದ್ದಲ್ಲಿ ತಂದೆಯವರಿಗೆ ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ನಿಮ್ಮ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರುವ ಎಲ್ಲ ಸಾಧ್ಯತೆ ಇದೆ. ಮಹಿಳೆಯರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೆಚ್ಚಾಗಲಿದೆ. ಜಾಹೀರಾತು ಏಜೆನ್ಸಿಗಳಲ್ಲಿ ಕೆಲಸ ಮಾಡುವಂಥವರಿಗೆ ಆದಾಯ ಹೆಚ್ಚಳ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಪ್ರಮೋಷನ್ ಸಹ ಆಗಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಬುದ್ಧಿ ಉಪಯೋಗಿಸಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ನಿಮಗೆ ಬರಬೇಕಾದ ಹಣಕ್ಕೆ ಗಟ್ಟಿಯಾದ ಪ್ರಯತ್ನ ಹಾಕಬೇಕು. ನೆನಪಿರಲಿ, ಮೊದಲೇ ಹೇಳಿದಂತೆ ತುಂಬ ಗಟ್ಟಿಯಾದ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸೋದರ- ಸೋದರಿಯರ ಮೂಲಕ ಹಣಕಾಸಿನ ಹರಿವಿಗೆ ಮಾರ್ಗ ಕಂಡುಬರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರಿಗೆ ವಾರದ ಮೊದಲಾರ್ಧದಲ್ಲಿ ಲಾಭ ಆಗಲಿದೆ. ಬಹು ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಪ್ರಿಯವಾದ ವಾರ್ತೆಯನ್ನು ಕೇಳಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವಂಥ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ಆಲೋಚನೆಯನ್ನು ಮಾಡುವಿರಿ. ನಿಮ್ಮ ಓದು, ಅನುಭವ, ಕಲಿಕೆ ಹಾಗೂ ಸ್ನೇಹಿತರ ವಲಯದ ಅತ್ಯುತ್ತಮವಾದ ಉಪಯೋಗವು ದೊರೆಯಲಿದೆ. ಇದರಿಂದ ನಿಮ್ಮ ಉದ್ಯೋಗ- ವ್ಯವಹಾರ, ವ್ಯಾಪಾರಗಳಿಗೆ ಅನುಕೂಲವನ್ನು ಮಾಡಿಕೊಳ್ಳಲಿದ್ದೀರಿ. ಯಾರು ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರ ಹೀಗೆ ಅಥವಾ ಇಂಥ ವ್ಯವಹಾರಗಳನ್ನು ಮಾಡುತ್ತಿರುವಿರೋ ಅಂಥವರು ಬಹಳ ಉತ್ತಮವಾದ ಸಮಯವನ್ನು ಕಾಣಲಿದ್ದೀರಿ. ಏಕೆಂದರೆ ಈ ವಾರ ನಿಮ್ಮ ನಿರೀಕ್ಷೆಗೂ ಮೀರಿದಂಥ ಧನ ಲಾಭ ಆಗಲಿದೆ. ಆದರೆ ತಾಳ್ಮೆ ಹಾಗೂ ಸಂಯಮದಿಂದ ವ್ಯವಹರಿಸಿ. ದೊರೆಯಬೇಕಾದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಒಂದು ವೇಳೆ ಎಫ್.ಡಿ. ಮಾಡಿದ್ದಲ್ಲಿ ಅದನ್ನು ಮುರಿಸುವ ಆಲೋಚನೆ ಮಾಡಬಹುದು. ಅಥವಾ ನಿಮ್ಮಲ್ಲಿ ಕೆಲವರು ಇರುವ ಚಿನ್ನವನ್ನು ಮಾರಿ, ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಸಾಲವನ್ನು ತೀರಿಸುವುದಕ್ಕೆ ನಿರ್ಧಾರ ಮಾಡುತ್ತೀರಿ. ಕೃಷಿಕರಾಗಿದ್ದಲ್ಲಿ ನಿಮ್ಮ ಜತೆಗೆ ಒಡನಾಟ ಇರುವಂಥ ವ್ಯಕ್ತಿಯೊಬ್ಬರು (ಪುರುಷರಾದರೆ ಸ್ತ್ರೀ, ಸ್ತ್ರೀಯರಾದರೆ ಪುರುಷರು) ಹತ್ತಿರ ಆಗಬಹುದು. ಆದರೆ ಸ್ನೇಹವನ್ನು, ಪ್ರೀತಿಗೆ, ಆ ನಂತರ ಮುಂದಿನ ಹಂತಕ್ಕೆ ಒಯ್ಯಲು ಸ್ವಲ್ಪ ಸಮಯವನ್ನು ನೀಡಿ, ಆತುರ ಮಾಡಬೇಡಿ. ನಿಮ್ಮ ಮಾತು, ನಡವಳಿಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ವಿವಾಹ ವಯಸ್ಕರಿಗೆ ಶುಭ ಸುದ್ದಿ ಕೇಳಿಬರಲಿದೆ. ಕೆಲವರಿಗೆ ಸಂಬಂಧದಲ್ಲಿಯೇ ಮದುವೆ ನಿಶ್ಚಯ ಕೂಡ ಆಗುವ ಯೋಗವಿದೆ. ವೃತ್ತಿನಿರತರಾಗಿದ್ದಲ್ಲಿ ನಿಮ್ಮ ವರ್ತನೆ, ನಡವಳಿಕೆ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹೇಳಿ, ಹೆಸರಿಗೆ ಮಸಿ ಬಳಿಯುವಂಥ ಕೆಲಸ ಆಗಬಹುದು. ಇನ್ನು ಕಣ್ಣು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿದೆ. ಸಂಸಾರದಲ್ಲಿ ಗೊಂದಲ, ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವಾಗ ಹಿನ್ನಡೆ, ವಿದೇಶ ಪ್ರಯಾಣ, ವ್ಯವಹಾರಗಳಲ್ಲಿ ಅಂದುಕೊಂಡಂತೆ ಬೆಳವಣಿಗೆಗಳು ಆಗದಿರುವುದು ಚಿಂತೆಗೆ ಕಾರಣ ಆಗುತ್ತದೆ. ದಕ್ಷಿಣಾಮೂರ್ತಿಯ ಆರಾಧನೆಯನ್ನು ಮಾಡಿಕೊಳ್ಳಿ. ವಿದ್ಯಾರ್ಥಿಗಳು ನಿಮ್ಮ ಕೋಪದಿಂದಾಗಿ ಆಗಬೇಕಾದ ಕೆಲಸ ಆಗದಂತೆ ಮಾಡಿಕೊಳ್ಳುತ್ತೀರಿ. ನಿಮಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗದಂತಾಗುತ್ತದೆ. ಒಂದು ವೇಳೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಗೋ ಅಥವಾ ಪ್ರವೇಶಕ್ಕಾಗಿಯೋ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಅದರಲ್ಲಿ ಹಿನ್ನಡೆ ಆಗುವ ಅವಕಾಶಗಳು ಹೆಚ್ಚಿವೆ. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಶುಭ ಫಲಗಳನ್ನು ಕಾಣಲಿದ್ದೀರಿ. ಸಾಮಾಜಿಕ ಬದುಕಿನಲ್ಲಿ ಹೆಚ್ಚು ಚಟುವಟಿಕೆಯಿಂದ ತೊಡಗಿಕೊಳ್ಳುವಿರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವಾರದ ಮಧ್ಯಭಾಗದಿಂದ ಆಚೆಗೆ ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ. ವಿವಿಧ ಆದಾಯ ಮೂಲಗಳಿಂದ ಆದಾಯ ಹರಿದು ಬರುವುದಕ್ಕೆ ಶುರುವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಆದಾಯ ಬರುವುದಕ್ಕೆ ದಾರಿಗಳು ಗೋಚರಿಸತೊಡಗುತ್ತವೆ. ನಿಮ್ಮ ಶತ್ರುಗಳೇ ನಿಮಗೆ ಪ್ರಚಾರ ನೀಡಲಿದ್ದಾರೆ. ಬೇರೆಯವರು ಎಸೆಯುವ ಕಲ್ಲಲ್ಲಿ ಮನೆ ಕಟ್ಟಿಕೊಳ್ಳುವವರು ಅಂತಾರಲ್ಲ, ಹಾಗೆ ಅದನ್ನೇ ನಿಮ್ಮ ಆದಾಯಕ್ಕೆ ಬಳಸಿಕೊಳ್ಳಲಿದ್ದೀರಿ. ಆಸ್ತಿ ವ್ಯವಹಾರಗಳನ್ನು ಮಾಡಬೇಕು ಎಂದು ಹಣಕಾಸನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಹಣಕಾಸಿನ ಹರಿವು ನೀವು ಅಂದುಕೊಂಡ ಮಟ್ಟಕ್ಕೆ ಇರುವುದಿಲ್ಲ. ಹಣ ಇಲ್ಲದಿದ್ದರೂ ಹೇಗೋ ಹೊಂದಿಸಿಕೊಳ್ಳಬಹುದು, ಆದರೆ ಸಾಂಸಾರಿಕವಾಗಿ ಸಂತೋಷ ಇರಬೇಕು, ನೆಮ್ಮದಿಯೊಂದು ಇದ್ದರೆ ಸಾಕು ಎಂದು ಆಲೋಚಿಸುತ್ತಿದ್ದವರಿಗೆ ಇಷ್ಟು ಸಾಲುವುದಿಲ್ಲ ಎಂದೆನಿಸುವುದಕ್ಕೆ ಶುರುವಾಗುತ್ತದೆ. ನಿಮಗೆ ಈಗ ಮಾಡುತ್ತಿರುವ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಈ ವಾರ ಬಲವಾಗಿ ಅನಿಸಲಿದೆ. ಇದೇ ವೇಳೆ ಅದೃಷ್ಟಕ್ಕೆ ಎಂಬಂತೆ ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವುದಕ್ಕೆ, ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ಸಿಗಲಿದೆ. ನಿಮ್ಮಲ್ಲಿ ಯಾರು ವ್ಯಾಪಾರ- ವ್ಯವಹಾರದಲ್ಲಿ ತೊಡಗಿಕೊಂಡಿದ್ದೀರಿ ಅಂಥವರಿಗೆ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲಿಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದ ಅಸಮಾಧಾನಕ್ಕೆ ಕಾರಣ ಆಗುತ್ತದೆ. ಕೃಷಿಕರಾದವರಿಗೆ ನಿಮ್ಮ ತಂದೆಯವರು ಅಥವಾ ಪಿತೃ ಸಮಾನರಾದವರ ಜತೆಗೆ ಸಿಟ್ಟಿನಿಂದ ಮಾತುಕತೆ ಆಡುತ್ತೀರಿ. ಅಥವಾ ಅವರು ನಿಮಗೆ ಕೊಡುತ್ತೇನೆ ಎಂದಿದ್ದನ್ನು ಕೊಡದೇ ಹೋಗಬಹದು. ಅದು ಭೂಮಿ, ಹಣ ಯಾವುದಾದರೂ ಆಗಿರಬಹುದು. ಕೆಲ ಸಮಯವಾದರೂ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಇರಬೇಕಾದಂಥ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ವೃತ್ತಿನಿರತರಿಗೆ ಸ್ವಯಂಕೃತ ತಪ್ಪುಗಳು ದೊಡ್ಡ ಮಟ್ಟದಲ್ಲಿ ಕಾಡುವುದಕ್ಕೆ ಆರಂಭಿಸುತ್ತದೆ. ನಿಮ್ಮ ಕೆಲಸದ ವೈಖರಿ ಹಾಗೂ ಪದ್ಧತಿಯ ವಿರುದ್ಧ ಕೆಲವರು ದೂರು ನೀಡಲಿದ್ದಾರೆ. ನೀವು ಮಾಡಿರದ ತಪ್ಪು ಕೆಲಸಗಳು ಕೆಲವನ್ನು ನೀವೇ ಮಾಡಿದ್ದೀರಿ ಎಂದು ಹೇಳಿಕೊಂಡು ಬರುವ ಮೂಲಕ ವಿಶ್ವಾಸಾರ್ಹತೆ ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಪಾರದರ್ಶಕವಾಗಿ ನಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ ಪರಿಸ್ಥಿತಿ. ನೀವು ಈ ತನಕ ಶ್ರಮ ವಹಿಸಿ ಮಾಡಿದ ಪ್ರಯತ್ನಗಳಿಗೆ ಎಷ್ಟು ರಿಟರ್ನ್ ಬರುತ್ತದೆ ಎಂದು ಅಂದಾಜು ಮಾಡಿರುತ್ತೀರೋ ಅಷ್ಟು ಬರುವುದಿಲ್ಲ. ಇತರರ ಮಾರ್ಗದರ್ಶನ ಪಡೆದುಕೊಳ್ಳುವುದಕ್ಕೆ ನಿರ್ಧರಿಸುವುದಕ್ಕೂ ಮೊದಲು ಅವರ ಸಾಮರ್ಥವನ್ನು ಅರಿತುಕೊಳ್ಳಿ. ಮಹಿಳೆಯರಾಗಿದ್ದಲ್ಲಿ ನೀವು ಯಾರಿಂದಾದರೂ ಹೂಡಿಕೆ ಮಾಡಿಸಿದ್ದಲ್ಲಿ ಅವರಿಂದ ಮೂದಲಿಕೆ, ಬೈಗುಳ ಕೇಳಬೇಕಾಗುತ್ತದೆ. ನಿಮ್ಮಿಂದಲೇ ಹಣ ಕಳೆದುಕೊಳ್ಳುವಂತಾಯಿತು, ಅದನ್ನು ನೀವು ಕಟ್ಟಿಕೊಡಿ ಅಂತ ಒತ್ತಡ ಹಾಕುವ ಸಾಧ್ಯತೆಗಳಿವೆ.