Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 4ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ಬಹಳ ಉತ್ಸಾಹದಿಂದ ಇರುತ್ತೀರಿ. ಪುಷ್ಕಳವಾದ ಭೋಜನ, ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಕೆಲಸ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹಳೇ ಸ್ನೇಹಿತರು, ಪರಿಚಿತರ ಸಹಾಯ ನಿಮಗೆ ದೊರೆಯಲಿದೆ. ಹಣ ಹೂಡಿಕೆ ಬಗ್ಗೆ ನಿರ್ಧಾರ ಮಾಡುವಂತಿದ್ದರೆ ಸ್ವಲ್ಪ ಕಾಲ ಮುಂದೂಡುವುದು ಉತ್ತಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಸಂಗಾತಿ ಜತೆಗೆ ಮಾತನಾಡುವಾಗ ಗೌರವ ನೀಡಿ. ಆಡುವ ಮಾತಿನ ಜತೆಗೆ, ಬಳಸುವ ಶಬ್ದಗಳ ಆಯ್ಕೆಯಲ್ಲೂ ಎಚ್ಚರಿಕೆ ತುಂಬ ಮುಖ್ಯ. ಏಕೆಂದರೆ ಭಿನ್ನಾಭಿಪ್ರಾಯಗಳು, ಕೌಟುಂಬಿಕ ಕಲಹ ಬಾರದಂತೆ ಗಮನ ಹರಿಸಿ. ಆದರೆ ಈ ದಿನ ನಿಮ್ಮ ಪಾಲಿಗೆ ಅನುಕೂಲ ಏನೆಂದರೆ, ವಿದೇಶಗಳಿಂದ ಅಥವಾ ದೂರದ ಪ್ರದೇಶಗಳಿಂದ ಶುಭ ಸುದ್ದಿಯನ್ನು ನೀವು ನಿರೀಕ್ಷೆ ಮಾಡುತ್ತಿದ್ದಲ್ಲಿ ಬರಲಿದೆ. ಆದಾಯ ಮೂಲ ಹೆಚ್ಚು ಮಾಡಿಕೊಳ್ಳುವ ದಾರಿ ಗೋಚರಿಸಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಅಂದ ಹಾಗೆ ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ನಿಮ್ಮ ಕೆಲಸ ಪೂರ್ಣಗೊಳಿಸುವ ಬಗ್ಗೆ ಇತರರು ಆಸಕ್ತಿ ವಹಿಸಲಿದ್ದಾರೆ. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ವಿದ್ಯಾರ್ಥಿಗಳು ನಿಮ್ಮ ವೈಫಲ್ಯವಿದ್ದಲ್ಲಿ ಬೇರೆಯವರನ್ನು ದೂರಬೇಡಿ. ಮಹಿಳೆಯರಿಗೆ ಹಳೆ ಸ್ನೇಹಿತ- ಸ್ನೇಹಿತೆಯರನ್ನು ಭೇಟಿ ಆಗುವ ಯೋಗ ಇದೆ. ದೇಹದ ತೂಕದ ಕಡೆಗೆ ಗಮನವನ್ನು ನೀಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಈ ದಿನ ನಿಮ್ಮಂತೆ ನೀವಿದ್ದರೆ ಸಾಕು. ಏನೋ ಮಹತ್ತರವಾದದ್ದು ಸಂಭವಿಸಲಿದೆ. ಅದು ಕೂಡ ಸಂಬಂಧದ ವಿಷಯದಲ್ಲಿ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷ ಆಗಲಿದೆ. ಗೊಂದಲಗಳು ಪರಿಹಾರ ಆಗುತ್ತದೆ. ಪ್ರೀತಿ- ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತದೆ. ನೀವು ಮಾಡಬೇಕಾದ್ದೆಲ್ಲ ಇಷ್ಟೇ, ಬಿಗುಮಾನ ಬಿಡಿ, ಮುಕ್ತ ಮನಸ್ಸಿನಿಂದ ಇರಿ. ಮನರಂಜನೆಗಾಗಿ, ರೆಸ್ಟೋರೆಂಟ್ ಇಂಥವುಗಳಿಗಾಗಿ ಖರ್ಚು ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಹಳ ನಿರೀಕ್ಷೆ ಇರಿಸಿಕೊಂಡಿದ್ದ ಫಲಿತಾಂಶವೊಂದು ಅಂದುಕೊಂಡಂತೆ ಬರುವುದಿಲ್ಲ. ಎಲ್ಲರೂ ಒಪ್ಪುವಂಥ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದುಕೊಳ್ಳಬೇಡಿ, ಯಾಕೆಂದರೆ ಎಲ್ಲರನ್ನೂ ಮೆಚ್ಚಿಸುವಂಥ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ದಿನ ಎಲ್ಲರ ಮೇಲೂ ನಂಬಿಕೆ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗುತ್ತದೆ. ಏಕಾಂಗಿ ಆಗಿಬಿಟ್ಟಿರೇನೋ ಎಂದು ಬಲವಾಗಿ ಅನಿಸಿಕೆ ಮೂಡುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿಯ ಸೂಚನೆ ದೊರೆಯಲಿದೆ. ಹೊಸದಾಗಿ ಕೆಲಸಗಳನ್ನು ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟನ್ನು ಮಾಡಿಕೊಳ್ಳದಿರಿ, ಏಕೆಂದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ತನಗೆ ಒಳಿತನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ವ್ಯಕ್ತಿ ಇತರರಿಗೆ ಹೇಗೆ ನೆರವು ನೀಡುವುದಕ್ಕೆ ಸಾಧ್ಯ? ಆದ್ದರಿಂದ ಮೊದಲಿಗೆ ನಿಮ್ಮ ಸಮಸ್ಯೆಗಳು, ಸವಾಲುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಹೊಸ ವಸ್ತ್ರಾಭರಣಗಳ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಯಾರು ಮಾನಸಿಕ ಒತ್ತಡ ಎದುರಿಸುತ್ತಿದ್ದೀರೋ ಕಡ್ಡಾಯವಾಗಿ ಮನಶ್ಶಾಸ್ತ್ರಜ್ಞರನ್ನು ಭೇಟಿ ಆಗಬೇಕು. ಕುಟುಂಬಸ್ಥರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ಹಿಂದೆ ನೀವು ಮಾಡಿದ ತಪ್ಪು ಇವತ್ತು ವಿಪರೀತ ಕಾಡಲಿದೆ. ಯಾರದೋ ಸ್ನೇಹ ಯಾಕಾದರೂ ಮಾಡಿದೆ ಎಂದು ಪರಿತಪಿಸುವಂತಾಗುತ್ತದೆ. ಒಂದು ವೇಳೆ ನಿಮ್ಮ ತಪ್ಪನ್ನು ಯಾರಾದರೂ ಎತ್ತಾಡಿದಲ್ಲಿ ನೀವು ಮಾಡಿದ್ದು ಸರಿ ಅಂತ ವಾದ ಮಾಡುತ್ತಾ ಕೂರದಿರಿ. ಇನ್ನು ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚು ಲಕ್ಷ್ಯ ಕೊಟ್ಟು ಜವಾಬ್ದಾರಿ ಪೂರ್ತಿ ಮಾಡಿ. ದುರ್ಗಾ ದೇವಿ ಆರಾಧನೆ ಮಾಡಿದಲ್ಲಿ ಸಮಸ್ಯೆಗಳ ಪರಿಣಾಮ ಕಡಿಮೆ ಆಗುತ್ತದೆ.
ಲೇಖನ- ಎನ್.ಕೆ.ಸ್ವಾತಿ