ನಿಮ್ಮ ಜನ್ಮಸಂಖ್ಯೆಗೆ (numerology prediction) ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 2ರ ಶುಕ್ರವಾರದ ದಿನ ಭವಿಷ್ಯ (daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ನಿಮ್ಮಿಂದ ಸಹಾಯವನ್ನು ಬಯಸಿ ಸ್ನೇಹಿತರು/ಸ್ನೇಹಿತೆಯರು ಬರುತ್ತಾರೆ. ಸಾಧ್ಯವಿರುವಂಥ ನೆರವಾದಲ್ಲಿ ಖಂಡಿತಾ ಮಾಡಿ. ಕಂಪ್ಯೂಟರ್ ಬಿಡಿಭಾಗಗಳ ವ್ಯವಹಾರ ಮಾಡುವವರಿಗೆ ಸವಾಲಿನ ದಿನ ಇದಾಗಿರುತ್ತದೆ. ಅಡುಗೆ ತೈಲ ವಿತರಣೆ ಮಾಡುವಂಥವರಿಗೆ ಹಣಕಾಸಿನ ಅಗತ್ಯ ಕಂಡುಬರುತ್ತದೆ. ಈ ದಿನ ಮಧ್ಯಾಹ್ನದ ಹೊತ್ತಿಗೆ ಕನಿಷ್ಠ ಹತ್ತು ನಿಮಿಷ ಧ್ಯಾನ ಮಾಡಿ.
ಜನ್ಮಸಂಖ್ಯೆ 2
ಸೀದಾ ಸಾದಾ ಸಂಗತಿಗಳು ನಿಮ್ಮ ಪಾಲಿಗೆ ಅನುಕೂಲವಾಗಿ ಮಾರ್ಪಡಲಿವೆ. ಈ ಹಿಂದಿನ ಪ್ರಾಜೆಕ್ಟ್‌ಗಳು ಈಗ ನಿಮಗೆ ಹಣ ತಂದುಕೊಂಡುವ ಸಾಧ್ಯತೆಗಳಿವೆ. ಆದರೆ ಸಣ್ಣ- ಪುಟ್ಟ ವಿಚಾರಗಳನ್ನೂ ಮರೆಯದಿರಿ. ಮಡ್‌ಬಾತ್, ಸ್ಟೀಮ್‌ಬಾತ್ ಹೀಗೆ ದೇಹಕ್ಕೆ ಆರಾಮದಾಯಕ ಆಗುವಂಥದ್ದನ್ನು ಮಾಡಿಸಲು ಸಾಧ್ಯವಾದಲ್ಲಿ ಮಾಡಿಸಿಕೊಳ್ಳಿ, ಏಕೆಂದರೆ ಮುಂಬರುವ ದಿನಗಳಲ್ಲಿ ಬಹಳ ಬಿಜಿ ಆಗಿಬಿಡುತ್ತೀರಿ.
ಜನ್ಮಸಂಖ್ಯೆ 3
ಹಳೇ ಪ್ರೇಮ ಪ್ರಕರಣಗಳಲ್ಲಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ ಭಾವನಾತ್ಮಕವಾಗಿ ಹಾಗೂ ನೈತಿಕವಾಗಿ ನೀವು ಗಟ್ಟಿಯಾಗಿ ನಿಲ್ಲುವುದು ಮುಖ್ಯವಾಗುತ್ತದೆ. ಖರ್ಚಿನ ವಿಚಾರದಲ್ಲಿ ಕೆಲವರಿಗೆ ಅಸಮಾಧಾನ ಆಗಲಿದೆ. ಕ್ರೀಡಾಪಟುಗಳಿಗೆ ಬಹಳ ಮುಖ್ಯವಾದ ದಿನ ಇದು.
ಜನ್ಮಸಂಖ್ಯೆ 4
ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 5
ಸಿನಿಮಾ ತಾರೆಯರು, ಧಾರಾವಾಹಿಗಳಲ್ಲಿ ನಟಿಸುವಂಥವರಿಗೆ ಯಾವುದೋ ದೊಡ್ಡ ಪ್ರಾಜೆಕ್ಟ್ ಬರುವಂಥ ಸಾಧ್ಯತೆ ಇದೆ. ಆದರೆ ಇದನ್ನು ಅಂದಾಜು ಮಾಡುವುದು ಬಹಳ ಮುಖ್ಯ. ನಿಮ್ಮಿಂದ ಇದು ಸಾಧ್ಯ ಆಗದಿದ್ದಲ್ಲಿ ಹಿರಿಯರು, ಅನುಭವಿಗಳ ಸಹಾಯ ಪಡೆಯಿರಿ. ರಫ್ತು ಉದ್ಯಮಿಗಳಿಗೆ ಸಾಲದ ಅಗತ್ಯ ಹೆಚ್ಚಾಗಲಿದೆ.
ಜನ್ಮಸಂಖ್ಯೆ 6
ಬಂದಿದ್ದೆಲ್ಲ ಬರಲಿ, ಆ ಭಗವಂತನ ದಯೆ ಇರಲಿ ಎಂದು ಮುನ್ನುಗ್ಗಿ. ಈಗ ಅಲ್ಲದಿದ್ದರೆ ಎಂದಿಗೂ ಇಲ್ಲ ಎಂಬುದು ಮನಸ್ಸಿನಲ್ಲಿರಲಿ. ಸ್ವಭಾವತಃ ತುಂಬ ಕ್ಯಾಲ್ಕುಲೇಟೆಡ್ ಜನ ನೀವು. ಆದರೆ ಈ ದಿನ ನಿಮ್ಮ ಸಾಮರ್ಥ್ಯದ ಸಂಪೂರ್ಣ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕಡಿಮೆ ಮಾಡಿಕೊಳ್ಳಬೇಡಿ. ಎಂಥ ಜವಾಬ್ದಾರಿಯನ್ನು ಧೈರ್ಯವಾಗಿ ವಹಿಸಿಕೊಳ್ಳಿ.
ಜನ್ಮಸಂಖ್ಯೆ 7
ಬಜೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಉದ್ಯೋಗ, ವೃತ್ತಿಯಿರಲಿ ಬಂದಿದ್ದೇನು- ಖರ್ಚಾಗಿದ್ದೆಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲಿಂದಲೋ ಬಂದು ನಿಮ್ಮ ಕೈ ಹಿಡಿದು ಮೇಲೆ ಎತ್ತುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಅಧ್ಯಾತ್ಮ ಮನೋಭಾವ ಸ್ಫೂರ್ತಿ ಆಗಬೇಕೇ ವಿನಾ ಯಾವುದೇ ಕೆಲಸಕ್ಕೆ ವಿರಕ್ತಿ ಆಗದಿರಲಿ.
ಜನ್ಮಸಂಖ್ಯೆ 8
ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ನಿಮ್ಮ ಧರ್ಮಾಚರಣೆ ಬೇರೆ ಆಗಿದ್ದಲ್ಲಿ ಬಿಳಿ ವಸ್ತ್ರವೊಂದನ್ನು ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 9
ಜ್ಯೋತಿಷಿಗಳು, ಪುರೋಹಿತರು, ಮ್ಯಾಜಿಷಿಯನ್‌ಗಳಿಗೆ ಉತ್ತಮವಾದ ದಿನ ಇದು. ದೂರದ ಸ್ಥಳಗಳಿಂದ ನಿಮಗೆ ಆಹ್ವಾನ ಬರಲಿದೆ. ಸನ್ಮಾನ ಆಗುವ ಸಾಧ್ಯತೆ ಇದೆ. ನೀವಾಗಿಯೇ ಕೆಲವು ಜವಾಬ್ದಾರಿಗಳನ್ನು ಅತ್ಯುತ್ಸಾಹದಲ್ಲಿ ಮೈಮೇಲೆ ಎಳೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ನೋಡಿ, ನಿರ್ಧರಿಸಿ.
ಲೇಖನ- ಎನ್.ಕೆ.ಸ್ವಾತಿ