
ವಿದೇಶದಲ್ಲಿ ವ್ಯಾಸಂಗ/ ಉದ್ಯೋಗ ಮಾಡಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಹೋಟೆಲ್ ಉದ್ಯಮವನ್ನು ನಡೆಸುತ್ತಿರುವವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ. ಇನ್ನು ಇದಕ್ಕಾಗಿಯೇ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇಲ್ಲಿಯವರೆಗೆ ನಾನಾ ಕಾರಣಗಳಿಂದ ವಿಳಂಬ ಆಗುತ್ತಿರುವ ಪ್ರಕ್ರಿಯೆಗೆ ವೇಗ ದೊರೆಯಲಿದೆ. ಚಿನ್ನದ ಬಾಂಡ್ ಅಥವಾ ಇಟಿಎಫ್ ನಲ್ಲಿ ಈಗಾಗಲೇ ಹಣ ಹಾಕಿದ್ದೀರಿ ಅಂತಾದಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮೂಡಲಿದೆ. ಮನೆಯಲ್ಲಿ ಮಾಡಿಸಬೇಕಾದ ಕೆಲಸಗಳು ಇದ್ದಲ್ಲಿ ಅದರ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಮಾತುಕತೆ ಆಡಲು ಮುಂದಾಗುತ್ತೀರಿ. ಅದೇ ರೀತಿ ಮನೆಯಲ್ಲಿ ಇರುವಂಥ ಹಾಗೂ ಸದ್ಯಕ್ಕೆ ಬಳಕೆ ಮಾಡದಿರುವಂಥ ಕೆಲವು ವಸ್ತುಗಳ ಮಾರಾಟ ಮಾಡುವ ಯೋಗ ಸಹ ಇದೆ. ವಿವಾಹ ವಯಸ್ಕರಿಗೆ ಮದುವೆ ಪ್ರಯತ್ನಗಳು ಫಲ ನೀಡುತ್ತವೆ.
ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ಸ್ವಲ್ಪ ಮುಂಚಿತವಾಗಿಯೇ ಬಂದು ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ಇನ್ನು ಮನೆಗೆ ಟೀವಿ, ಸ್ಪೀಕರ್ ಈ ರೀತಿಯಾದದ್ದನ್ನು ಖರೀದಿಸಬೇಕು ಎಂದು ತೀರ್ಮಾನವನ್ನು ಮಾಡಲಿದ್ದೀರಿ. ಅಧ್ಯಾತ್ಮ ವಿಚಾರಗಳಲ್ಲಿಯೂ ತೊಡಗಿಕೊಳ್ಳುವ ಯೋಗ ಬರಲಿದೆ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ಕೇಳಿಕೊಂಡು ಬಂದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು/ ನಿಮ್ಮಿಂದ ಸಾಧ್ಯವಾದದ್ದನ್ನು ನೀಡಿ. ಮನೆ ಅಥವಾ ಜಮೀನಿಗೆ ಸಂಬಂಧಿಸಿದ ಕಾಗದಪತ್ರ/ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಾ ಇದ್ದಲ್ಲಿ ನಿಮಗೆ ಮತ್ತೊಬ್ಬರ ಸಹಾಯದಿಂದ ದೊರೆಯಲಿದೆ. ಹಳೇ ಪರಿಚಯದ ವ್ಯಕ್ತಿಯೊಬ್ಬರು ಈ ಹಿಂದೆ ನೀವು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಹಣವನ್ನು ನೀಡಬಹುದು. ಟೈಲ್ಸ್- ಗ್ರಾನೈಟ್ ಹಾಕುವಂಥ ಕೆಲಸ ಮಾಡುವವರಿಗೆ ದೊಡ್ಡ ಮಟ್ಟದ ಕೆಲಸವೊಂದು ಹುಡುಕಿಕೊಂಡು ಬರುವ ಯೋಗ ಇದ್ದು, ಆದಾಯವೂ ಜಾಸ್ತಿಯಾಗಲಿದೆ.
ಜೊತೆಯಲ್ಲಿ ಇರುವ ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳು ಏನು ಆಲೋಚನೆ ಮಾಡುತ್ತಾರೆ ಹಾಗೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಲ್ಲಿ ಆದಾಯ ಹೆಚ್ಚಳ ಆಗಲಿದೆ. ಹೊಸದಾದ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಶ್ವಾಸಕೋಶದ ಸಮಸ್ಯೆ ಇರುವವರು ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಕಾರ್ಯಕ್ರಮಗಳಲ್ಲಿ ಭಾಗೀ ಆಗಬೇಕು ಎಂಬ ಕಾರಣಕ್ಕೆ ಹೊಸ ಬಟ್ಟೆ ಖರೀದಿ ಮಾಡುವಂಥ ಯೋಗ ಇದೆ. ದಂಪತಿ ಮಧ್ಯದ ಕಲಹದಲ್ಲಿ ರಾಜೀ- ಸಂಧಾನಕ್ಕೆ ನಿಮ್ಮನ್ನು ಯಾರಾದರೂ ಆಹ್ವಾನಿಸಿದಲ್ಲಿ ಅಥವಾ ಅಚಾನಕ್ ಆಗಿ ಅಂಥದ್ದೊಂದು ಸನ್ನಿವೇಶದಲ್ಲಿ ಸಿಲುಕಿಕೊಂಡಲ್ಲಿ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ವಕೀಲ ವೃತ್ತಿಯಲ್ಲಿ ಇರುವಂಥವರು ಹೊಸದಾಗಿ ಜನರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದಕ್ಕೆ ತೀರ್ಮಾನ ಮಾಡುವ ಸಾಧ್ಯತೆ ಇದೆ.
ನಿಮ್ಮ ಅಗತ್ಯಗಳಿಗೆ ಹಣಕಾಸು ಹೊಂದಿಸಿಕೊಳ್ಳುವ ಕಡೆಗೆ ಲಕ್ಷ್ಯ ನೀಡಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಈಗ ನಿಮ್ಮ ಬಳಿ ಇರುವ ವಾಹನವನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಆಲೋಚನೆಯನ್ನು ಮಾಡಲಿದ್ದೀರಿ. ಬ್ಯಾಂಕ್ ವ್ಯವಹಾರಗಳು ಬಾಕಿ ಉಳಿದಿದ್ದಲ್ಲಿ ಅದನ್ನು ಮುಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿದ್ದಲ್ಲಿ ಗೆಳೆಯ ಅಥವಾ ಗೆಳತಿ ಮೂಲಕವಾಗಿ ರೆಫರೆನ್ಸ್ ದೊರೆತು, ಇಂಟರ್ ವ್ಯೂ ಕೂಡ ನಿಗದಿ ಆಗಬಹುದು. ದೂರದ ಸಂಬಂಧಿಕರು ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿದ್ದಲ್ಲಿ ಹಿರಿಯರು- ಅನುಭವಿಗಳ ಮಾರ್ಗದರ್ಶನ ದೊರೆಯಲಿದೆ. ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವವರು ವಾಹನ ಹತ್ತುವಾಗ- ಇಳಿಯುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚು ಮುಂಜಾಗ್ರತೆಯನ್ನು ವಹಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ತರಚು ಗಾಯವಾದರೂ ಆಗುವ ಸಾಧ್ಯತೆಯಿದೆ.
ಕುಟುಂಬದ ಒಳಗೆ ಹಣಕಾಸಿನ ವಿಚಾರ, ಆಸ್ತಿ ಹಂಚಿಕೆ ಮಾತುಕತೆಗಳು ಜಗಳದ ಸ್ವರೂಪವನ್ನು ಪಡೆದುಕೊಳ್ಳಬಹುದು. ಈ ಹಿಂದೆ ಆಡಿದ ಮಾತು ಬೇರೆ ಈಗ ಹೇಳುತ್ತಿರುವುದೇ ಬೇರೆ ಅಂತ ಆಕ್ಷೇಪ ವ್ಯಕ್ತವಾಗಬಹುದು. ಈ ರೀತಿ ಮಾತುಕತೆ ಅಂದುಕೊಂಡ ಹಂತವು ಜಗಳ- ಕದನಕ್ಕೆ ತಿರುಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಯಾರು ಮೂವತ್ತೈದು ವರ್ಷ ದಾಟಿದ್ದೀರೋ ಅಂಥವರು ಅಗತ್ಯ ಇರುವ ಕೆಲವು ಚೆಕಪ್ ಗಳನ್ನು ಮಾಡಿಸಿಕೊಳ್ಳಬೇಕಾಗಬಹುದು. ಒಂದೋ ವೈದ್ಯರೇ ಈ ಬಗ್ಗೆ ಸೂಚಿಸಬಹುದು ಅಥವಾ ನಿಮಗೇ ಹಾಗನ್ನಿಸುವ ಅವಕಾಶ ಇದೆ. ಯಾರಿಗೆ ತೀವ್ರವಾದ ಹೊಟ್ಟೆಯ ಅನಾರೋಗ್ಯ ಸಮಸ್ಯೆ ಇದೆಯೋ ಅಂಥವರು ಅಲರ್ಜಿಗೆ ಕಾರಣ ಆಗಬಹುದಾದ ಆಹಾರಗಳಿಂದ ದೂರವಿರುವುದು ಕ್ಷೇಮ. ಲೇವಾದೇವಿ ವ್ಯವಹಾರ ಮಾಡುತ್ತಿರುವವರು ಇನ್ನಷ್ಟು ವ್ಯಾಪಾರ ವಿಸ್ತರಣೆ ಮಾಡಬೇಕು ಎಂದು ಇತರರ ಬಳಿ ನೆರವು- ಸಲಹೆ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಆಲೋಚಿಸಿ.
ತುಂಬ ಮುಖ್ಯವಾದ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಭೇಟಿ ಆಗುವಂಥ ಯೋಗ ಇದೆ. ನಿಮ್ಮ ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಬಹಳ ಪ್ರಮುಖ ಬೆಳವಣಿಗೆ ಆಗುವುದಕ್ಕೆ ಇದರಿಂದ ನೆರವಾಗಲಿದೆ. ಹಣಕಾಸು ವಿಚಾರವು ಮನೆಯಲ್ಲಿ ಚರ್ಚೆಯ ವಸ್ತುವಾಗಲಿದೆ. ಈ ಹಿಂದೆ ನೀವು ಹೀಗೆ ಹೇಳಿದ್ದಿರಿ, ಈಗ ಅದರಂತೆಯೇ ನಡೆದುಕೊಳ್ಳಬೇಕು ಎಂಬುದು ಕುಟುಂಬ ಸದಸ್ಯರ ಒತ್ತಾಯ ಆಗಲಿದೆ. ನನಗೆ ತೋಚಿದ್ದು ಮಾಡುತ್ತೇನೆ ಎಂಬ ಮಾತನ್ನು ಆಡಬೇಕು ಅಂದುಕೊಂಡರೂ ಪರಿಸ್ಥಿತಿಯು ಆ ಮಾತನ್ನು ಆಡುವುದಕ್ಕೆ ಧೈರ್ಯ ಸಾಲದಂತೆ ಮಾಡುತ್ತದೆ. ನಿಮ್ಮ ಒಳಗೊಂದು ಧೈರ್ಯ ಇಲ್ಲಿಯ ತನಕ ಇದ್ದಿದ್ದು ಸ್ವಲ್ಪ ಮಟ್ಟಿಗೆ ಅನುಮಾನವಾಗಿ ಬದಲಾಗಲಿದೆ. ಸ್ವಭಾವತಃ ಸ್ಪಷ್ಟ ಆಲೋಚನೆ ಇರುವಂಥವರಿಗೂ ಗೊಂದಲ ಕಾಡಬಹುದು. ನಿಮ್ಮಲ್ಲಿ ಕೆಲವರು ಸಣ್ಣ ಮೊತ್ತವಾದರೂ ಸಾಲವನ್ನು ಪಡೆದುಕೊಳ್ಳುವಂಥ ಯೋಗ ಕಂಡುಬರುತ್ತಿದೆ. ಎಷ್ಟು ಅಗತ್ಯವೋ ಅಷ್ಟು ಹಣವನ್ನು ಮಾತ್ರ ಸಾಲ ತೆಗೆದುಕೊಳ್ಳುವುದು ಕ್ಷೇಮ.
ನಿಮ್ಮ ಮನಸ್ಸಿಗೆ ಬಹಳ ಆಪ್ತರಾದವರು ಅಥವಾ ನೀವು ಇಷ್ಟಪಡುವಂಥ ವ್ಯಕ್ತಿಯ ಸಲುವಾಗಿ ಕೆಲವು ಉಡುಗೊರೆಗಳನ್ನು ಖರೀದಿಸುವಂಥ ಯೋಗ ಇದೆ. ನಿಮ್ಮಲ್ಲಿ ಯಾರು ವಿಲ್ಲಾ- ಗೇಟೆಡ್ ಕಮ್ಯುನಿಟಿಯಲ್ಲಿ ಸೈಟು ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಇನ್ನು ನೀವು ಇತರರ ಕೆಲಸದ ಸಲುವಾಗಿ ತೆರಳಿದ್ದಲ್ಲಿ ಅದೇ ಸಮಯಕ್ಕೆ ನಿಮ್ಮ ಕೆಲವು ಕೆಲಸಗಳು ಸಹ ಅನಿರೀಕ್ಷಿತವಾಗಿ ಮಾಡಿ ಮುಗಿಸುವಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಯಾರು ಸಾಕು ಪ್ರಾಣಿಗಳನ್ನು ಸಾಕುತ್ತಿರುವಿರೋ ಅಂಥವರು ಅವುಗಳ ಅನಾರೋಗ್ಯದ ಕಾರಣಕ್ಕೆ ವೈದ್ಯರ ಬಳಿ ಪರೀಕ್ಷೆಗೆ ಕರೆದುಕೊಂಡು ಹೋಗಬೇಕಾಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ನೀವು ಈ ಹಿಂದೆ ಹೂಡಿಕೆ ಮಾಡಿದ್ದ ಮ್ಯೂಚುವಲ್ ಫಂಡ್ ಅಥವಾ ಬಾಂಡ್ ಗಳಲ್ಲಿನ ಹಣವನ್ನು ಬೇರೆ ತುರ್ತು ಖರ್ಚಿಗಾಗಿ ವಾಪಸ್ ಪಡೆಯುವುದಕ್ಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸ್ನೇಹಿತರಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುವುದು ಈ ದಿನ ನಿಮಗೆ ಆದ್ಯತೆಯಾಗಲಿದೆ. ಕಟ್ಟಡ ನಿರ್ಮಾಣ, ರಿನೋವೇಷನ್ ಇಂಥದ್ದನ್ನು ಮಾಡಿಸುತ್ತಾ ಇರುವವರಿಗೆ ಏಕ ಕಾಲಕ್ಕೆ ಹಲವು ಕೆಲಸಗಳು ಹುಡುಕಿಕೊಂಡು ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಆಪ್ತರಾದವರು ಕೆಲಸ ಬಿಡುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ನೀವು ಮ್ಯಾನೇಜರ್ ಅಥವಾ ದೊಡ್ಡ ಹುದ್ದೆಯನ್ನು ನಿಭಾಯಿಸುತ್ತಿದ್ದೀರಿ ಅಂತಾದಲ್ಲಿ ನಿಮ್ಮ ಮೇಲೆ ಸಂಸ್ಥೆಗೆ ವಿಪರೀತ ನಿರೀಕ್ಷೆ ಇದೆ ಎಂಬುದು ಗಮನಕ್ಕೆ ಬರಲಿದೆ. ಸಮಯದೊಳಗೆ ಪೂರ್ಣಗೊಳಿಸಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ ಮುಗಿಸಿ. ಇನ್ನು ನೀವೇನಾದರೂ ಹಣ್ಣು- ಹೂವು, ತರಕಾರಿ ಇಂಥವುಗಳ ವ್ಯಾಪಾರವನ್ನು ಮಾಡುವವರಾದರೆ ಹೊಸದಾಗಿ ಹೂಡಿಕೆ ಮಾಡುವ ಕಡೆಗೆ ಆದ್ಯತೆಯನ್ನು ನೀಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ವಿಚಾರ ಪ್ರಸ್ತಾವ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಚಾಲಕ ವೃತ್ತಿಯಲ್ಲಿ ಇರುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ. ನೀವು ಓಡಿಸುವ ವಾಹನದ ಸರ್ವೀಸ್ ಆಗಿದೆಯಾ, ಅದು ಎಲ್ಲ ರೀತಿಯಲ್ಲೂ ಉತ್ತಮವಾದ ಸ್ಥಿತಿಯಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಕ್ಷೇಮ. ಈ ದಿನ ಸಾಧ್ಯವಾದಲ್ಲಿ ಹನುಮಂತ ದೇವರ ದೇವಾಲಯಕ್ಕೆ ತೆರಳಿ ದರ್ಶನವನ್ನು ಪಡೆಯಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಹೊಸ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರು ಅಲ್ಲಿಂದ ಮುಂದಿನ ಹಂತಕ್ಕೆ ಉದ್ದೇಶವನ್ನು ಒಯ್ಯುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ಹತೋಟಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಹಳೇ ಆಸ್ತಿ ವ್ಯಾಜ್ಯಗಳು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ ಎಂಬುದು ಖಚಿತವಾಗಲಿದೆ.
ಲೇಖನ- ಎನ್.ಕೆ.ಸ್ವಾತಿ