
ಶುಭ ಕಾರ್ಯ- ಸಮಾರಂಭ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಣ ಕಾಸಿನ ವಿಚಾರದಲ್ಲಿ ಇಲ್ಲಿಯ ತನಕ ಕಾಡುತ್ತಿದ್ದ ಒತ್ತಡಗಳು ಏನಾದರೂ ಇದ್ದಲ್ಲಿ ಅವು ನಿವಾರಣೆ ಮಾಡಿಕೊಳ್ಳುವ ಮಾರ್ಗ ಉಪಾಯಗಳು ಗೋಚರಿಸಲಿವೆ. ನಿಮ್ಮಂತೆಯೇ ಆಲೋಚನೆ ಮಾಡುವ ವ್ಯಕ್ತಿಗಳ ಭೇಟಿಯಿಂದ ಒಂದು ಹೊಸ ವಿಶ್ವಾಸ ಮೂಡಲಿದೆ. ವಿರಾಮದ ಸಲುವಾಗಿ ಪ್ರವಾಸ ಹೋಗಬೇಕು ಅಂದುಕೊಂಡವರಿಗೆ ಕೆಲಸ- ಜವಾಬ್ದಾರಿಗಳ ಕಾರಣಕ್ಕೆ ಸದ್ಯಕ್ಕೆ ಇದು ಸಾಧ್ಯವಿಲ್ಲ ಎಂದೆನಿಸಲಿದೆ. ವಿದೇಶಗಳಲ್ಲಿ ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಮಾಹಿತಿಗಳು ದೊರೆಯಲಿವೆ. ಸ್ವಂತ ಮನೆ ನಿರ್ಮಾಣ ಮಾಡಬೇಕು ಅಥವಾ ಈಗಾಗಲೇ ಕಟ್ಟಿದ ಮನೆಯ ನವೀಕರಣ ಆಗಬೇಕು ಎಂದುಕೊಳ್ಳುತ್ತಾ ಇರುವವರು ಸಂಬಂಧ ಪಟ್ಟವರನ್ನು ಕರೆಸಿ, ಹಣಕಾಸಿನ ವೆಚ್ಚ, ಎಷ್ಟು ಸಮಯ ಹಿಡಿಸುತ್ತದೆ ಮೊದಲಾದ ವಿವರ ಕಲೆಹಾಕಲಿದ್ದೀರಿ.
ಜಿಮ್- ಯೋಗ- ಪ್ರಾಣಾಯಾಮ, ಸೈಕ್ಲಿಂಗ್ ಇಂಥ ಅಭ್ಯಾಸಗಳನ್ನು ಈಗಾಗಲೇ ಮಾಡಿಕೊಂಡವರಿಗೆ ಕೆಲ ಸಮಯ ಇದರಿಂದ ದೂರ ಇರಲೇಬೇಕಾದ ಅನಿವಾರ್ಯ ಎದುರಾಗಬಹುದು. ಮುಖ್ಯವಾಗಿ ಕೆಲ ಕಾಲ ಬೇರೆ ಪ್ರದೇಶಕ್ಕೆ ಉದ್ಯೋಗ ಅಥವಾ ವೃತ್ತಿ ನಿಮಿತ್ತವಾಗಿ ತೆರಳಬೇಕಾದ ಸೂಚನೆ ಅಥವಾ ಸುಳಿವು ದೊರೆಯಲಿದೆ. ಮೊದಲಿಗೆ ನೀವು ಅಷ್ಟೇನೂ ಉತ್ಸಾಹ ತೋರದಿದ್ದರೂ ನಂತರದಲ್ಲಿ ಒಪ್ಪಿಕೊಳ್ಳುವಂಥ ಕೆಲಸ- ಕಾರ್ಯಗಳು ಒತ್ತಡವಾಗಿ ಪರಿಣಮಿಸಲಿದೆ. ಹಾಲು- ತುಪ್ಪ ಇಂಥ ಡೇರಿ ಪದಾರ್ಥಗಳ ಸೇವನೆ ಮಾಡುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಈ ದಿನ ನಿಮ್ಮ ಪೈಕಿ ಕೆಲವರಿಗೆ ಅಲರ್ಜಿ ಆಗಬಹುದು. ಇನ್ನು ವೈದ್ಯರೇ ಕೆಲವು ಆಹಾರ ಪಥ್ಯಗಳನ್ನು ನಿಮಗೆ ಹೇಳಿದ್ದಾರೆ ಅಂತಾದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿರಿ. ನಿಮಗೆ ಬರಬೇಕಾದ ಸಾಲ ಬಾಕಿಯನ್ನು ವಸೂಲಿ ಮಾಡುವುದರಲ್ಲಿ ಹೈರಾಣಾಗುವಂತೆ ಆಗಲಿದೆ.
ಇತರರ ವಸ್ತುಗಳನ್ನು ಅಪೇಕ್ಷಿಸುವುದೋ ಅಥವಾ ಅದನ್ನು ನಿಮಗೆ ನೀಡುವಂತೆ ಒತ್ತಾಯ ಮಾಡುವುದೋ ಯಾವ ಕಾರಣಕ್ಕೂ ಈ ದಿನ ಬೇಡ. ನಿಮಗೆ ಎಷ್ಟೇ ಆಪ್ತರು ಅಂತಾದರೂ ಸಲುಗೆ ಬೇಡ. ಇನ್ನು ನಿಮ್ಮ ಉಳಿತಾಯ- ಹೂಡಿಕೆ ಮೊತ್ತ ಎಷ್ಟಿದೆ ಎಂಬುದನ್ನು ಯಾರ ಜೊತೆಗೆ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಉದ್ಯೋಗ ಸ್ಥಳದಲ್ಲಿ ತಮಾಷೆಗೆ ಎಂದು ಆರಂಭಿಸಿದ ಮಾತುಕತೆ ಗಂಭೀರ ಸ್ವರೂಪ ಪಡೆದುಕೊಂಡು, ಇತರರಿಗೆ ಬೇಸರ ಉಂಟು ಮಾಡಬಹುದು. ಆದ್ದರಿಂದ ಮಿತಿಯನ್ನು ಅರಿತು ಮಾತುಗಳನ್ನು ಆಡಿ ಹಾಗೂ ಪದಗಳ ಬಳಕೆ ವಿಚಾರದಲ್ಲೂ ಎಚ್ಚರಿಕೆಯನ್ನು ವಹಿಸುವುದು ಕ್ಷೇಮ. ಕುಟುಂಬದ ಸದಸ್ಯರ ಜೊತೆಗೂಡಿ ಹೋಟೆಲ್- ರೆಸ್ಟೋರೆಂಟ್ ಗೆ ತೆರಳುವ ಯೋಗ ಈ ದಿನ ಇದ್ದು, ಅದೇ ಸಂದರ್ಭದಲ್ಲಿ ಬಹು ಸಮಯದಿಂದ ನೀವು ಪ್ರಸ್ತಾವ ಮಾಡಬೇಕು ಎಂದುಕೊಂಡಿದ್ದ ಕೆಲವು ವಿಚಾರಗಳನ್ನು ಹೇಳುವ ಸಾಧ್ಯತೆ ಇದೆ.
ಸ್ವಚ್ಛತೆ ವಿಚಾರಕ್ಕೋ ಅಥವಾ ಪಾರ್ಕಿಂಗ್ ಕಾರಣಕ್ಕೋ ನೆರೆಮನೆಯವರು- ಅಪರಿಚಿತರ ಜೊತೆಗೆ ಜೋರು ಮಾತುಕತೆ, ವಾದ- ವಾಗ್ವಾದ ಆಗುವ ಯೋಗ ಈ ದಿನ ಇದೆ. ಸಮಸ್ಯೆಯ ಮೂಲದ ಅರಿವಿಲ್ಲದೆ ನೀವು ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಬಹುದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವಿಷಯಗಳು, ಸಾರ್ವಜನಿಕ ವೇದಿಕೆಯಲ್ಲಿ ನೀವಾಡುವ ಮಾತುಗಳ ಮೇಲೆ ನಿಗಾ ಇರಿಸಿಕೊಳ್ಳಬೇಕು. ನಿಮ್ಮಲ್ಲಿ ಕೆಲವರು ದೊಡ್ಡ ಹುದ್ದೆಗೆ ನೇಮಕ ಆಗುವ ಬಗ್ಗೆ ಸ್ನೇಹಿತರು- ಆಪ್ತರ ಮೂಲಕ ಮಾಹಿತಿ ದೊರೆಯಬಹುದು. ಖಚಿತವಾದ ಮಾಹಿತಿ ಅಥವಾ ಖಾತ್ರಿಯಾಗಿ ನಿಮಗೇ ತಿಳಿಸುವ ತನಕ ಈ ವಿಚಾರವನ್ನು ಎಲ್ಲಿಯೂ ಮಾತನಾಡಲು ಹೋಗಬೇಡಿ. ಈ ಹಿಂದೆ ನೀವು ಸಂಕಷ್ಟದಲ್ಲಿ ಇದ್ದಾಗ ನೆರವು ನೀಡಿದ್ದಂಥ ಕೆಲವು ವ್ಯಕ್ತಿಗಳು ಈ ದಿನ ನಿಮ್ಮಿಂದ ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಿಂದ ಸಾಧ್ಯವಾದಷ್ಟೂ ಪ್ರಯತ್ನಿಸಿ, ನೆರವು ನೀಡಿ.
ನಿಮ್ಮ ಖ್ಯಾತಿ, ಜನಪ್ರಿಯತೆ ಹೆಚ್ಚಾಗುವ ದಿನ ಇದಾಗಿರುತ್ತದೆ. ಉದ್ಯೋಗ- ವೃತ್ತಿ- ವ್ಯಾಪಾರ ಹೀಗೆ ನೀವು ಯಾವುದೇ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದರೂ ಆದಾಯ ಹಾಗೂ ಆದಾಯ ಮೂಲ ಎರಡೂ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ದುಬಾರಿ ಗ್ಯಾಜೆಟ್ ಖರೀದಿ ಮಾಡುವ ಯೋಗ ಈ ದಿನ ಇದೆ. ಸಣ್ಣದಾಗಿ ಅಥವಾ ಮನೆ ಮಟ್ಟಿಗೆ ಮಾಡಬೇಕು ಅಂದುಕೊಳ್ಳುತ್ತಾ ಇದ್ದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ. ಚರ್ಮ ಅಥವಾ ಕೂದಲಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಗೆ ಔಷಧೋಪಚಾರ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಫಾಲೋ ಅಪ್ ಪರೀಕ್ಷೆಗಳನ್ನು ಮಾಡಿಸುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ತಲೆ ಹೊಟ್ಟು ಒಳಗೊಂಡಂತೆ ಚರ್ಮ ಕಾಯಿಲೆಗಳು ಈಗಾಗಲೇ ಇದ್ದಲ್ಲಿ ಈ ದಿನ ಆತಂಕಕ್ಕೆ ಕಾರಣ ಆಗುವಷ್ಟು ಉಲ್ಬಣ ಆಗಬಹುದು, ಎಚ್ಚರಿಕೆ ತೆಗೆದುಕೊಳ್ಳಿ.
ಕಲಾವಿದರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಬಹುದು. ಅಥವಾ ನಿಮಗೆ ಸನ್ಮಾನ, ಗೌರವ ದೊರೆಯುವ ಬಗ್ಗೆ ಮಾಹಿತಿ ಸಹ ಸಿಗಬಹುದು. ನಿಮ್ಮಲ್ಲಿ ಯಾರು ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದೀರಿ ಅಂಥವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವ ಅವಕಾಶ ಇದೆ. ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ದೂರ ಪ್ರಯಾಣಕ್ಕೆ ನಿಮ್ಮಲ್ಲಿ ಕೆಲವರು ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಮೊದಲ ಬಾರಿಗೆ ಎಂಬಂತೆ ನೀವು ಆರಂಭ ಮಾಡಿದ ಉದ್ಯೋಗ, ವ್ಯವಹಾರ, ವ್ಯಾಪಾರದಲ್ಲಿ ಸಮಾಧಾನ ಆಗುವಂತಹ ಬೆಳವಣಿಗೆಯನ್ನು ಕಾಣಲಿದ್ದೀರಿ. ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾ ಇದ್ದೀರಿ ಅಂತಾದಲ್ಲಿ ಹತ್ತುವಾಗ ಹಾಗೂ ಇಳಿಯುವಾಗ ಎಚ್ಚರಿಕೆಯನ್ನು ವಹಿಸಿ. ಏಕೆಂದರೆ ಈ ದಿನ ಸಣ್ಣದಾದರೂ ಗಾಯ ಆಗುವಂಥ ಸಾಧ್ಯತೆ ಇದೆ. ಆತುರ ಯಾವ ಕಾರಣಕ್ಕೂ ಮಾಡಬೇಡಿ.
ಇಲ್ಲಿಯವರೆಗಿನ ಆದಾಯ- ಖರ್ಚು ಹಾಗೂ ಭವಿಷ್ಯದಲ್ಲಿ ಮಾಡಿಕೊಳ್ಳಬೇಕಾದ ಉಳಿತಾಯ, ಹೂಡಿಕೆ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲಿದ್ದೀರಿ. ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ನಿಮಗೆ ಬಹಳ ಆಪ್ತರಾದ ವ್ಯಕ್ತಿಗಳಿಗೆ ಕೆಲವು ಉಡುಗೊರೆ ನೀಡುವ ಚಿಂತನೆ ಮಾಡಲಿದ್ದೀರಿ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿವಾದ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ಸಿಗಲಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಇನ್ನು ನಿಮ್ಮಲ್ಲಿ ಯಾರು ಸಂಬಂಧಿಗಳಿಂದ ಸಾಲ ಪಡೆದು ಕೊಂಡಿರುವಿರೋ ಅಂಥವರಿಗೆ ಕೂಡಲೇ ಹಣವನ್ನು ಹಿಂತಿರುಗಿಸಲು ಕೇಳಬಹುದು. ಅಥವಾ ನೀವಾಗಿಯೇ ಅಂಥ ಸಾಲಗಳನ್ನು ಹಿಂತಿರುಗಿಸಲು ಬೇಕಾದ ವ್ಯವಸ್ಥೆ ಮಾಡುವುದು ಉತ್ತಮ. ಬಾಡಿಗೆ ಮನೆಯಲ್ಲಿ ಇದ್ದು, ಬದಲಾವಣೆಗೆ ಮನೆಯ ಹುಡುಕಾಟದಲ್ಲಿ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಈ ದಿನ ಇದೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ
ವಿವಾಹಿತರಿಗೆ ಮಾವನ ಮನೆಯ ಕಡೆಯವರಿಂದ ಮುಜುಗರ ಎದುರಿಸುವ ಸನ್ನಿವೇಶ ಬರಲಿದೆ. ಇನ್ನು ಸಾಕು ಎಂದುಕೊಂಡು ನೀವಾಗಿಯೇ ನಿಲ್ಲಿಸಿದ್ದ ಕೆಲಸ- ಕಾರ್ಯಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ದೂರ ಪ್ರಯಾಣವೋ ಅಥವಾ ತೀರ್ಥಕ್ಷೇತ್ರಕ್ಕೆ ಅಂತ ಹೊರಟಿದ್ದೀರಿ ಅಂತಾದಲ್ಲಿ ಸಾಮಾನ್ಯವಾಗಿ ತೆಗೆದುಕೊಂಡು ಹೋಗುವುದಕ್ಕಿಂತ ಹೆಚ್ಚಿನ ಹಣವನ್ನು ಕೈಲಿಟ್ಟುಕೊಂಡು ಹೊರಡಿ. ಒಂದು ವೇಳೆ ಸ್ವಂತ ವಾಹನದಲ್ಲಿ ತೆರಳುತ್ತಿದ್ದೀರಿ ಅಂತಾದಲ್ಲಿ ವಾಹನ ಉತ್ತಮ ಸ್ಥಿತಿಯಲ್ಲಿ ಇದೆಯಾ ಹಾಗೂ ಸರ್ವೀಸ್ ಆಗಿದೆಯಾ ಎಂಬುದನ್ನು ಸರಿಯಾಗಿ ಪರಿಶೀಲಿಸಿದ ನಂತರಷ್ಟೇ ಹೊರಡಿ. ನಿಮ್ಮಲ್ಲಿ ಕೆಲವರಿಗೆ ತಂದೆಯ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆ ಆತಂಕಕ್ಕೆ ಕಾರಣ ಆಗಬಹುದು. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುನ್ನಕ್ಕೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ತೀರ್ಮಾನ ಕೈಗೊಳ್ಳಿ.
ಕುಟುಂಬ ವಿಚಾರಗಳು ವಿಪರೀತ ಪ್ರಾಮುಖ್ಯ ಪಡೆದುಕೊಳ್ಳಲಿವೆ. ಸಂಗಾತಿಯ ಆರೋಗ್ಯ, ಮಕ್ಕಳ ಶಿಕ್ಷಣ, ತಂದೆ- ತಾಯಿಯ ಪರಿಸ್ಥಿತಿ ಹೀಗೆ ನಾನಾ ವಿಚಾರಗಳು ಏಕ ಕಾಲಕ್ಕೆ ಮುನ್ನೆಲೆಗೆ ಬರಲಿವೆ. ನಿಮ್ಮ ಕೆಲವು ಸಿದ್ಧಾಂತ- ನಂಬಿಕೆಗಳ ಜೊತೆಗೆ ರಾಜೀ ಮಾಡಿಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಬಹುದು. ನಿಮ್ಮಲ್ಲಿ ಯಾರು ಕಾಲಿನ ಮೀನಖಂಡದ ಸಮಸ್ಯೆಯಿಂದ ಈಗಾಗಲೇ ಬಳಲುತ್ತಾ ಇದ್ದೀರಿ, ಅಂಥವರಿಗೆ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಒಂದು ವೇಳೆ ಇದಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾ ಇದ್ದೀರಿ, ಮಾತ್ರೆ- ಔಷಧ ಬದಲಾವಣೆ ಮಾಡಿ ಕೊಡಲಾಗಿದೆ ಅಥವಾ ಹೊಸ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಹೆಚ್ಚಿನ ನಿಗಾ ವಹಿಸುವುದು ಮುಖ್ಯವಾಗುತ್ತದೆ. ನಿಮ್ಮದಲ್ಲದ ತಪ್ಪಿಗೆ- ವಿಷಯಗಳಿಗೆ ಸಮಸ್ಯೆ ಬಗೆಹರಿಸುತ್ತೀನಿ ಎಂದುಕೊಂಡು ಈ ದಿನ ಹೊರಡಬೇಡಿ.
ಲೇಖನ- ಎನ್.ಕೆ.ಸ್ವಾತಿ