ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 11ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾರೋ ಹೊಸಬರು ಬಂದು, ತಾವಾಗಿಯೇ ದುಂಬಾಲು ಬಿದ್ದು, ನಿಮಗೆ ಕೆಲಸ ಒಪ್ಪಿಸಿದ್ದು ಈಗ ತಲೆ ನೋವಾಗಿ ಪರಿಣಮಿಸಲಿದೆ. ಕೆಲವರು ನಿಮ್ಮ ಸಾಮರ್ಥ್ಯದ ಬಗ್ಗೆಯೇ ತಪ್ಪು ತಪ್ಪಾಗಿ ಪ್ರಚಾರ ಮಾಡಿಕೊಂಡು ಬರಲಿದ್ದಾರೆ. ಸುಲಭಕ್ಕೆ ಮಾಡಿ ಮುಗಿಸಿಬಿಡ್ತೀನಿ ಎಂದು ನಿಮಗೂ ಅನಿಸಿದ್ದ ಕೆಲಸ ಭಾರೀ ಒತ್ತಡ ಎಂದೆನಿಸುವುದಕ್ಕೆ ಶುರು ಆಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ ಎಂದಾದಲ್ಲಿ ಮನಸ್ಸಿನಲ್ಲಿ ಹನ್ನೊಂದು ಬಾರಿ ಓಂ ನಮೋ ನಾರಾಯಣಾಯ ಎಂದು ಪಠಿಸಿ. ಇದರಿಂದ ಒತ್ತಡ ಕಡಿಮೆ ಆಗುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರಾದರೂ ತೀರಾ ಒತ್ತಡ ಹಾಕಿದರೂ ಅಂತ ಒಪ್ಪಿಕೊಳ್ಲುವುದಕ್ಕೆ ಹೋಗದಿರಿ.
ಬಹಳ ಸಮಯದಿಂದ ನೀವು ನಿರೀಕ್ಷೆ ಮಾಡುತ್ತಿದ್ದ ವಾತಾವರಣ, ಸನ್ನಿವೇಶವೊಂದು ಸೃಷ್ಟಿ ಆಗಲಿದೆ. ಅದನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ತುಂಬ ಮುಖ್ಯವಾಗುತ್ತದೆ. ಏಕೆಂದರೆ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬೆಂಬಲ ಚೆನ್ನಾಗಿರುತ್ತದೆ. ಮೇಲಧಿಕಾರಿಗಳಿಗೆ ನಿಮ್ಮ ಶ್ರಮ ಕಾಣುತ್ತದೆ, ಅವರು ಹೇಳುವ ಮೆಚ್ಚುಗೆ ಮಾತುಗಳಿಂದ ಇನ್ನಷ್ಟು ಉತ್ಸಾಹ, ಉಲ್ಲಾಸ ಮೂಡಲಿದೆ. ದೂರ ಪ್ರಯಾಣ ಮಾಡಬೇಕೆಂದು ಸಿದ್ಧತೆ ನಡೆಸುತ್ತಿರುವವರಿಗೆ ಇದು ಇನ್ನಷ್ಟು ಸಮಯ ಮುಂದೆ ಹೋಗುವ ಸಾಧ್ಯತೆ ಇದೆ. ಈ ಹಿಂದೆ ನೀವು ಸಹಾಯ ಮಾಡಿದ್ದ ವ್ಯಕ್ತಿಯಿಂದ ಈಗ ನಿಮಗೆ ನೆರವು ಒದಗಿ ಬರುವಂಥ ಯೋಗ ಇದೆ.
ಮುಂದೆ ಯಾವಾಗಲೋ ಬರಬೇಕಾದ ಹಣವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡಲು ಹೋಗದಿರಿ. ಏಕೆಂದರೆ ನೀವೇನೋ ಇನ್ನೇನು ಎಲ್ಲ ಕೆಲಸಗಳು ಮುಗಿದಿದೆ, ಹಣ ಕೈಗೆ ತಲುಪಬೇಕು ಎಂಬ ಸ್ಥಿತಿಯಲ್ಲಿ ನಾಳೆ- ನಾಡಿದ್ದು ಕೊಡ್ತೀನಿ ಎಂದು ಸಂಬಂಧಪಟ್ಟವರು ಹೇಳಬಹುದು. ಆದರೆ ಆ ಮಾತಿನಂತೆ ನಡೆದುಕೊಳ್ಳುವುದು ಕಷ್ಟವಾದೀತು. ಮಕ್ಕಳಿಗೆ ನೀವು ಏನಾದರೂ ಕೆಲಸ ಅಥವಾ ಜವಾಬ್ದಾರಿ ವಹಿಸಿದ್ದಲ್ಲಿ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದ್ದಾರೆ. ನಾಲ್ಕಾರು ವ್ಯವಹಾರಗಳನ್ನು ಮಾಡುತ್ತಿರುವವರು ಸ್ವಲ್ಪ ಪ್ರಮಾಣದ ಉದ್ಯಮ ವ್ಯವಹಾರವನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಒಂದು ವೇಳೆ ನೀವೇ ಮಾಲೀಕರಾಗಿದ್ದಲ್ಲಿ ಕೆಲವರಿಗೆ ಸಂಬಳಕ್ಕೆ ಕತ್ತರಿ ಬೀಳಬಹುದು ಅಥವಾ ಹುದ್ದೆಯಿಂದಲೇ ತೆಗೆಯುವಂಥ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯ ವರ್ತನೆ, ಧೋರಣೆ ನಿಮ್ಮಲ್ಲಿ ಚಿಂತೆ ಹಾಗೂ ಸಿಟ್ಟು ಉಂಟು ಮಾಡಬಹುದು. ಇದನ್ನು ಎಲ್ಲರ ಮೇಲೂ ತೋರಿಸದಿರಿ.
ಉದ್ಯಮ, ಸ್ವಂತ ಉದ್ಯೋಗ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ, ಬಡ್ಡಿಗೆ ಹಣ ಸಿಗಬಹುದಾ ಎಂದು ಪ್ರಯತ್ನ ಮಾಡುತ್ತಿರುವವರಿಗೆ ಒತ್ತಡದ ಸ್ಥಿತಿ ಸೃಷ್ಟಿ ಆಗಲಿದೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತರು- ಸಂಬಂಧಿಕರಿಂದ ಅವಮಾನ ಆಗಬಹುದು. ಮೇಲುನೋಟಕ್ಕೆ ಕಾಣುವ ವರ್ತನೆ, ಮಾತು, ಭರವಸೆಯನ್ನು ನಂಬಿಕೊಂಡು ದೊಡ್ಡ ದೊಡ್ಡ ಯೋಜನೆಗಳಿಗೆ ಕೈ ಹಾಕದಿರಿ. ಸಮಾಧಾನದಿಂದ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ಹೇಗಾದರೂ ಸಮಯ ಮಾಡಿಕೊಂಡು ಹತ್ತು ನಿಮಿಷವಾದರೂ ಧ್ಯಾನ ಮಾಡಿ.
ನಿಮ್ಮ ಒಳ ಮನಸ್ಸು ಹೇಳುವಂತೆ ಕೇಳಿ. ದೊಡ್ಡ ಯೋಜನೆಗಳನ್ನು ಮುನ್ನಡೆಸುವಂತೆ ನಿಮಗೆ ಆಫರ್ ಬರಬಹುದು ಅಥವಾ ಹೊಸ ಉದ್ಯೋಗ ಮತ್ತು ಸಂಬಳದ ಬಗ್ಗೆ ಸ್ನೇಹಿತರೋ ಅಥವಾ ಈ ಹಿಂದೆ ನಿಮ್ಮ ಜತೆಗೆ ಕೆಲಸ ಮಾಡಿದವರೇ ಹೇಳುವಂಥ ಯೋಗ ಇದೆ. ತುಂಬ ಆಪ್ತರೊಂದಿಗೆ ಸಂತೋಷದಿಂದ ಸಮಯ ಕಳೆಯುವಂಥ ಯೋಗ ಇದ್ದು, ಈ ದಿನ ಬಹಳ ದಿನಗಳ ತನಕ ನೆನಪಿನಲ್ಲಿ ಉಳಿಯುವಂಥ ಸಾಧ್ಯತೆ ಇದೆ. ಹೆಣ್ಣುಮಕ್ಕಳು ಕೆಲಸದ ಬ್ರೇಕ್ ತೆಗೆದುಕೊಂಡು, ಮತ್ತೆ ಉದ್ಯೋಗ ಹುಡುಕುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿಯನ್ನು ಕೇಳುವಂಥ ಸಾಧ್ಯತೆಗಳಿವೆ. ಮನೆಯಿಂದ ಹೊರಕ್ಕೆ ಹೋಗುವಾಗ ಗಣಪತಿಯ ಪೂಜೆಯನ್ನು ಮಾಡಿ, ಹೊರಡಿ.
ನಿಮ್ಮ ಭಾವನೆಗಳಿಗೆ ಆಪ್ತರೇ ಗೌರವ ನೀಡುತ್ತಿಲ್ಲ ಎಂದು ಬಲವಾಗಿ ಅನಿಸುತ್ತದೆ. ತಮಗೆ ಅಗತ್ಯ ಇದ್ದಾಗ ನಿಮ್ಮನ್ನು ಭಾವನಾತ್ಮಕವಾಗಿ ದುರ್ಬಲರನ್ನಾಗಿ ಮಾಡಿ, ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಯಾರದೋ ಮೇಲಿನ ಕೋಪ ಇನ್ಯಾರ ಮೇಲೋ ತೋರಿಸಿ, ನಿಮ್ಮ ಮೇಲೆ ಇತರರಿಗೆ ಇರುವ ಗೌರವ ಕಳೆದುಕೊಳ್ಳುವಂತಾಗುತ್ತದೆ. ಹಳೇ ಕಹಿ ಸಂಗತಿಗಳನ್ನೇ ನೆನಪಿಸಿಕೊಂಡು, ಮಾನಸಿಕ ಹಿಂಸೆ ಮಾಡಿಕೊಳ್ಳಬೇಡಿ. ಮನೆಯ ಹೊರಗಿನ ಆಹಾರ ಪದಾರ್ಥಗಳ ಸೇವನೆಯನ್ನು ಈ ದಿನ ಯಾವುದೇ ಕಾರಣಕ್ಕೂ ಮಾಡಬೇಡಿ. ದ್ವಿಚಕ್ರ ವಾಹನದಲ್ಲಿ ತೆರಳುವಾಗ ಏಕಾಗ್ರತೆಯಿಂದ ಓಡಿಸುವುದು ಮುಖ್ಯವಾಗುತ್ತದೆ.
ನಿಮ್ಮ ನಿರ್ಧಾರಗಳ ಬಗ್ಗೆ ಹೆಮ್ಮೆ ಎನಿಸುವಂತಹ ಬೆಳವಣಿಗೆ ಆಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ನೀವು ಹಾಕಿರುವ ಪೋಸ್ಟ್ ವೈರಲ್ ಆಗುವುದು, ಮೆಚ್ಚುಗೆ ವ್ಯಕ್ತವಾಗುವುದು ಆಗುತ್ತದೆ. ಏಕಾಏಕಿ ಎಲ್ಲ ಕೆಲಸಗಳು ಒಂದು ಕಡೆಯಿಂದ ಮುಗಿಯುತ್ತಾ ಬರುತ್ತಿದ್ದಂತೆ ಮನಸ್ಸಿಗೆ ನೆಮ್ಮದಿ ಆಗುತ್ತದೆ. ಹೊಸ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹಣಕಾಸಿನ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಣೆ ಆಗುತ್ತದೆ. ಹೊಸದಾಗಿ ಪರಿಚಯ ಆಗುವ ವ್ಯಕ್ತಿಯ ಮೂಲಕ ವೃತ್ತಿ ಬದುಕಿಗೆ ನೆರವಾಗಲಿದೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹಲವು ಕೆಲಸಗಳಲ್ಲಿ ಯಶಸ್ಸು ದೊರಕಲಿದೆ. ವೈಯಕ್ತಿಕವಾಗಿ ದಣಿವು ಅಂತಾದರೂ ತೃಪ್ತಿ ಸಿಗುತ್ತದೆ.
ನಿಮ್ಮ ಬಗ್ಗೆ, ನಿಮ್ಮ ಲಾಭ- ನಷ್ಟದ ಬಗ್ಗೆ ಮಾತ್ರ ಹೆಚ್ಚೆಚ್ಚು ಯೋಚನೆ ಮಾಡಲಿದ್ದೀರಿ. ಹೀಗೆ ನಿಮ್ಮ ಬಗ್ಗೆ ಆಲೋಚನೆ ಮಾಡುತ್ತಿದ್ದೀರಿ ಎಂಬುದು ಇತರರಿಗೆ ಗಮನಕ್ಕೆ ಬಾರದಂತೆ ಜಾಗ್ರತೆಯನ್ನು ವಹಿಸಿ. ಏಕೆಂದರೆ ಈ ಗುಣದ ಕಾರಣಕ್ಕೆ ಬಹಳ ಆಪ್ತರಾದವರಿಗೆ ಬೇಸರ ಆಗಲಿದೆ. ಇತರರ ವೈಯಕ್ತಿಕ ಭಾವನೆಗಳನ್ನು ಸಹ ಗೌರವಿಸುವುದು ಮುಖ್ಯ ಆಗುತ್ತದೆ. ವಾಹನ, ಆಭರಣ, ಹೊಸ ಗ್ಯಾಜೆಟ್ ಗಳು, ಟೀವಿ, ಲ್ಯಾಪ್ ಟಾಪ್ ಇಂಥವುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದೇ ಮೊದಲ ಸಲ ಮಾಡುವಂಥ ಕೆಲಸ ಆಗಿದ್ದಲ್ಲಿ ಒಪ್ಪಿಕೊಳ್ಳುವ ಮುನ್ನ ಅದನ್ನು ನಿಮ್ಮಿಂದ ಮಾಡಲು ಸಾಧ್ಯವೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ.
ಲೇಖನ- ಎನ್.ಕೆ.ಸ್ವಾತಿ