Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ 

| Updated By: ರಮೇಶ್ ಬಿ. ಜವಳಗೇರಾ

Updated on: Dec 20, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಮಾತಿನಿಂದಲೇ ಈ ದಿನ ಹಲವು ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ. ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು ಎಂದು ಆ ನಂತರ ಅನ್ನಿಸಿದರೂ ಏನೂ ಪ್ರಯೋಜನ ಆಗುವುದಿಲ್ಲ. ನಿಮ್ಮ ಈ ಹಿಂದಿನ ತೀರ್ಮಾನಗಳ ಬಗ್ಗೆ ಈಗ ಕುಟುಂಬದಲ್ಲಿ ಅಸಮಾಧಾನ ವ್ಯಕ್ತವಾಗಲಿದೆ. ನೀವು ಅಂದಾಜು ಕೂಡ ಮಾಡದಷ್ಟು ಖರ್ಚುಗಳು ಹೆಗಲ ಮೇಲೆ ಬೀಳಲಿವೆ. ನಿಮಗೆ ಮಾಹಿತಿ ಇಲ್ಲದ ವಿಚಾರಗಳು ಎಂದು ಗೊತ್ತಾದಲ್ಲಿ ಅಂಥದ್ದರ ಬಗ್ಗೆ ಏನೂ ಮಾತಾಡದಿರುವುದು ಉತ್ತಮ. ನನ್ನದು ಒಂದು ಅಭಿಪ್ರಾಯ ಇರಲಿ ಎಂದು ಏನಾದರೂ ಹೇಳಿದಿರೋ ಸಮಸ್ಯೆಗೆ ಸಿಕ್ಕಿಕೊಳ್ಳಲಿದ್ದೀರಿ. ಇಷ್ಟು ಸಮಯ ನೀವು ಹುಡುಕಾಡುತ್ತಿದ್ದ ದಾಖಲೆ- ಪತ್ರಗಳು ಅಥವಾ ವ್ಯಕ್ತಿಗಳು ಈ ದಿನ ದಿಢೀರನೆ ಸಿಕ್ಕಿಬಿಡುವ ಅವಕಾಶಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಏಕಾಏಕಿ ನಿಮ್ಮ ಮಾತಿಗೆ ವಿಪರೀತ ಬೆಲೆ ಬಂದು ಬಿಡಲಿದೆ. ರಾಜಕಾರಣದಲ್ಲಿ ಇರುವಂತಹವರು ಪದೋನ್ನತಿ ಅಥವಾ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷೆ ಮಾಡಬಹುದು. ಅಥವಾ ನಿಮ್ಮಲ್ಲಿ ಕೆಲವರಿಗೆ ತಾತ್ಕಾಲಿಕವಾಗಿ ಎಂದು ನೀಡಿದಂತಹ ದೊಡ್ಡ ಹುದ್ದೆಯನ್ನೇ ದೀರ್ಘಕಾಲಕ್ಕೆ ಮುಂದುವರಿಸುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ. ದೊಡ್ಡ ಅಳತೆಯ ಸೈಟು, ಮನೆ ಅಥವಾ ಕುಟುಂಬಕ್ಕಾಗಿ ವಾಹನವನ್ನು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ನಿಮಗಾಗಿಯೇ ಖರೀದಿಸಬೇಕು ಎಂದುಕೊಂಡಿದ್ದ ಕೆಲವು ವಸ್ತುಗಳು ಬೇರೆಯವರು ತಮಗಾಗಿ ಬಿಟ್ಟು ಕೊಡುವಂತೆ ಕೇಳುವ ಸಾಧ್ಯತೆಗಳಿವೆ. ಇಂಥ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಆಲೋಚಿಸಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮಗೆ ದೇವತಾ ದರ್ಶನ ಆಗುವ ಯೋಗ ಇದೆ. ತಮ್ಮ ಬಳಿ ಹೆಚ್ಚುವರಿ ಟಿಕೆಟ್ ಇದೆ ಅಂತಲೋ ಅಥವಾ ತಮ್ಮ ವಾಹನದಲ್ಲಿ ಜಾಗ ಇದೆ ಅಂತಲೋ ಅಥವಾ ಇನ್ಯಾರೋ ಬರಬೇಕಾದದ್ದು ಅವರು ಬರಲಿಲ್ಲ, ಅವರ ಬದಲಿಗೆ ನೀವು ಬನ್ನಿ ಅಂತಲೋ ಕರೆಯುವ ಸಾಧ್ಯತೆಗಳಿವೆ. ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯ ಎನಿಸುವಂತಹ ನಿರ್ಧಾರ ಒಂದನ್ನು ಈ ದಿನ ನೀವು ತೆಗೆದುಕೊಳ್ಳಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯವೋ ಅಥವಾ ಹೂಡಿಕೆಯನ್ನೋ ಆರಂಭಿಸುವ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಅಥವಾ ಪರವಾನಗಿ ಶುಲ್ಕಗಳು ಪಾವತಿ ಆಗಿದೆಯೇ ಎಂಬುದನ್ನು ಒಮ್ಮೆ ಖಾತ್ರಿ ಮಾಡಿಕೊಳ್ಳುವುದು ಕ್ಷೇಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಪಡೆದುಕೊಂಡಂಥ ಸಾಲ ಎಷ್ಟು, ಈ ತನಕ ಕಟ್ಟಿರುವ ಬಡ್ಡಿ ಎಷ್ಟು, ಇನ್ನೂ ಎಷ್ಟು ಹಣವನ್ನು ಪಾವತಿಸಬೇಕಿದೆ ಎಂಬ ಬಗ್ಗೆ ಈ ದಿನ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ. ಬಹಳ ಹಿಂದೆ ನಿಮ್ಮ ಜೊತೆ ಕೆಲಸ ಮಾಡಿದವರೋ ಅಥವಾ ನಿಮ್ಮ ಜೊತೆ ಓದಿದವರು ದಿಢೀರನೆ ಭೇಟಿ ಆಗಲಿದ್ದು, ಅವರ ಜೊತೆಗೆ ಮಾತುಕತೆ ನಡೆಸಿದ ನಂತರದಲ್ಲಿ ನಿಮ್ಮ ಆಲೋಚನೆಯಲ್ಲೇ ದೊಡ್ಡ ಬದಲಾವಣೆ ಆಗಲಿದೆ. ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದಿರುವವರು ತಾತ್ಕಾಲಿಕವಾಗಿ ಈ ನಿರ್ಧಾರವನ್ನು ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಂಥವರಾಗಿದ್ದರೆ ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನೀವು ತೆಗೆದುಕೊಳ್ಳುವ ತೀರ್ಮಾನಗಳಿಂದ ದೀರ್ಘಾವಧಿಯಲ್ಲಿ ಅನುಕೂಲಗಳು ಆಗಲಿವೆ. ನಿಮ್ಮಲ್ಲಿ ಕೆಲವರು ಹೊಸ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬೇಕು ಎಂದು ತೀರ್ಮಾನ ಮಾಡಲಿದ್ದೀರಿ ಅಥವಾ ಈ ದಿನ ಅಡ್ವಾನ್ಸ್ ಸಹ ಪಾವತಿಸುವಂತಹ ಸಾಧ್ಯತೆಗಳಿವೆ. ಬಂಧುಗಳಿಂದ ತಮ್ಮ ಮನೆಗೆ ಬರುವಂತೆ ನಿಮಗೆ ಆಹ್ವಾನ ಬರಲಿದ್ದು, ಪುಷ್ಕಳವಾದ ಆಹಾರವನ್ನು ಸವಿಯುವಂತಹ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ತೀರ್ಥಯಾತ್ರೆಗೆ ತೆರಳುವಂತಹ ಯೋಗ ಸಹ ಇದ್ದು, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಈ ದಿನದ ಎಚ್ಚರಿಕೆ ಏನೆಂದರೆ, ತಂದೆ-ತಾಯಿಗಳ ಆರೋಗ್ಯ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಾನು ಹೇಳಬೇಕಾದದ್ದನ್ನು ಎಲ್ಲವನ್ನೂ ಹೇಳಿಯಾಗಿದೆ, ಇನ್ನು ಕೆಲಸ ಎಲ್ಲವೂ ಅಚ್ಚುಕಟ್ಟಾಗಿ ಆಗಲಿದೆ ಎಂದು ನೀವು ಸುಮ್ಮನೆ ಕೂರುವಂತೆ ಇರುವುದಿಲ್ಲ. ಮುಖ್ಯ ವಸ್ತು ಒಂದನ್ನು ಎಲ್ಲೋ ಇಟ್ಟು, ಇನ್ನೆಲ್ಲೋ ಇಡೀ ದಿನ ಹುಡುಕಾಡುವಂತಾಗುತ್ತದೆ. ಆದ್ದರಿಂದ ನೀವು ಯಾವುದೇ ಮುಖ್ಯ ವಸ್ತುವನ್ನು ಎಲ್ಲಿ ಇಟ್ಟಿದ್ದೀರಿ ಎಂಬುದರ ಬಗ್ಗೆ ಮಾಮೂಲಿ ದಿನಕ್ಕಿಂತ ಹೆಚ್ಚಿನ ನಿಗಾ ವಹಿಸಿ. ನಿಮಗೆ ಬರಬೇಕಾದ ಹಣವನ್ನು ಕೇಳುವುದಕ್ಕೆ ಈ ದಿನ ಏನಾದರೂ ಪ್ರಯತ್ನ ಪಟ್ಟಲ್ಲಿ ಈಗಾಗಲೇ ಹಣ ಪಡೆದವರೇ ಮತ್ತೆ ನಿಮ್ಮಿಂದ ಸಹಾಯ ಕೇಳುವ ಸಾಧ್ಯತೆ ಇದೆ. ವೈದ್ಯಕೀಯ ವಿಚಾರಗಳಿಗೆ ಎರಡೆರಡು ಅಭಿಪ್ರಾಯಗಳು ಕುಟುಂಬದಲ್ಲಿ ಕೇಳಿ ಬಂದು, ಗೊಂದಲ ಸೃಷ್ಟಿಯಾಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ತಮಾಷೆಗೆ ಎಂದು ಹೇಳಿದ ವಿಚಾರವೋ ಅಥವಾ ಮಾತೋ ಗಂಭೀರವಾದ ಸ್ವರೂಪ ಪಡೆದುಕೊಂಡು, ದೊಡ್ಡ ಮಟ್ಟದ ಜಗಳಕ್ಕೆ ಕಾರಣ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸನ್ನಿವೇಶ ಹಾಗೂ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿ ಆ ನಂತರ ಮಾತನಾಡುವುದು ಕ್ಷೇಮ. ನಿಮ್ಮ ತಾಯಿಯ ಮನೆ ಕಡೆಯ ಸಂಬಂಧಿಕರು ಒಬ್ಬರು ಈ ದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದ್ದಾರೆ. ಯಾವುದೋ ಒಂದು ಕೆಲಸವನ್ನು ಮಾಡಿಕೊಡುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ನೀವು ಈಗಾಗಲೇ ಹೇಳಿದ್ದಲ್ಲಿ ಮುಜುಗರ ಆಗುವ ಮಟ್ಟಿಗೆ ಅವರು ನಿಮಗೆ ಹಿಂಸೆ ನೀಡಲಿದ್ದಾರೆ. ದೂರದ ಊರುಗಳಿಂದ ಯಾವುದಾದರೂ ವಸ್ತುವನ್ನು ತರಿಸಬೇಕು ಎಂದಿದ್ದಲ್ಲಿ ಆ ನಿರ್ಧಾರದ ಸಾಧಕ ಬಾಧಕಗಳನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸುವುದು ಉತ್ತಮ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಪಟಾಕಿ ಯಾರದಾದರೇನು ಹಚ್ಚುವವರು ನಾವಾಗಿರಬೇಕು ಎಂಬ ಮಾತಿನಂತೆ ಈ ದಿನ ಅನಾಯಾಸವಾಗಿ ನಿಮಗೆ ಕೀರ್ತಿ, ಹೆಸರು ದೊರೆಯಲಿದೆ. ಅದಾಗಲೇ ಸುಮಾರು ಕೆಲಸ ಮುಗಿದಾದ ಮೇಲೆ ನಿಮ್ಮ ಪಾಲಿಗೆ ಬಂದಂತಹ ಜವಾಬ್ದಾರಿಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಕೀರ್ತಿ ನಿಮಗೆ ದೊರೆಯಲಿದೆ. ಮನೆಗೆ ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಸ್ವಲ್ಪಮಟ್ಟಿಗೆ ಸಾಲವಾದರೂ ಸರಿ ನಿಮ್ಮ ಮನಸ್ಸಿಗೆ ಸಮಾಧಾನ ಆಗುವಂತಹ ಬ್ರಾಂಡ್, ವಸ್ತುಗಳು ಈ ದಿನ ದೊರೆಯಲಿವೆ. ಹಳೇ ವಿಚಾರಗಳನ್ನು ಮುಂದು ಮಾಡಿಕೊಂಡು, ಕುಟುಂಬ ಸದಸ್ಯರ ಪೈಕಿಯೇ ಒಬ್ಬರು ನಿಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದು. ಆದರೆ ಕುಟುಂಬದ ಇತರರು ನಿಮ್ಮ ಬೆನ್ನಿಗೆ ನಿಲ್ಲುವುದರಿಂದ ಈ ವಿಚಾರ ವಿಕೋಪಕ್ಕೆ ಹೋಗುವುದಿಲ್ಲ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರಿಗೆ ಸುಲಭಕ್ಕೆ ಹೊಳೆಯದ ಹಲವು ವಿಚಾರಗಳು ಈ ದಿನ ನಿಮಗೆ ತೋಚಲಿವೆ. ನಿಮಗೆ ಬರುವಂತಹ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಅವರು ಬೆರಗುಗೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ದೊಡ್ಡ ಪ್ರಾಜೆಕ್ಟ್ ಗಳು ದೊರೆಯುವ ಸೂಚನೆಗಳು ಸಿಗಲಿವೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡುವವರು ಅಥವಾ ಮಾಡಿಸುವವರು ಇನ್ಷೂರೆನ್ಸ್ ಏಜೆಂಟ್ ಗಳಿಗೆ ಈ ದಿನ ಬಹಳ ಉತ್ತಮವಾಗಿರುತ್ತದೆ. ನೀವು ನಿರೀಕ್ಷೆಯೇ ಮಾಡಿರದಂಥ ಸನ್ನಿವೇಶದಲ್ಲಿ ಪ್ರಭಾವಿಗಳ ಪರಿಚಯ, ಸಂಪರ್ಕ ನಿಮಗೆ ದೊರೆಯಲಿದೆ. ನಿಮ್ಮ ಒಲವು ನಿಲುವುಗಳಲ್ಲಿ ಏಕಾಏಕಿ ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಅನುಕೂಲ ಆಗಲಿದೆ.

ಲೇಖನ- ಎನ್‌.ಕೆ.ಸ್ವಾತಿ