ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 8ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?
ಮನರಂಜನೆ, ರೆಸ್ಟೋರೆಂಟ್, ಹೋಟೆಲ್, ಪ್ರವಾಸ ಇಂಥದ್ದಕ್ಕೆ ಹೆಚ್ಚಿನ ಖರ್ಚು ಆಗಲಿದೆ. ಸ್ನೇಹಿತರು, ಸಂಬಂಧಿಗಳ ವಾಹನವನ್ನು ಬಳಸುವ ಆಲೋಚನೆ ಇದ್ದಲ್ಲಿ ಈ ದಿನ ಮಾಡದಿರುವುದು ಉತ್ತಮ. ಪ್ರೇಮಿಗಳಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಮನೆಯಲ್ಲಿ ನಿಮ್ಮ ಪ್ರೀತಿ ವಿಷಯ ಮೂರನೇ ವ್ಯಕ್ತಿಗಳಿಂದ ಗೊತ್ತಾಗಿ, ಕೂಗಾಟ- ಕಿರುಚಾಟಕ್ಕೆ ಕಾರಣ ಆಗಬಹುದು. ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇತರರಿಗೆ ಸಹಾಯ ಮಾಡುವ ಸಲುವಾಗಿ ಹೆಚ್ಚಿನ ಸಮಯ ಹೋಗಲಿದೆ. ಕ್ರೀಡಾಪಟುಗಳು ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು. ಹೊಸ ಕಾರು ಅಥವಾ ಬೈಕ್ ಖರೀದಿ ಮಾಡುವ ಕುರಿತು ಮನೆಯಲ್ಲಿ ಚರ್ಚೆ ಮಾಡಲಿದ್ದೀರಿ, ಅಡ್ವಾನ್ಸ್ ನೀಡಿ, ಬುಕ್ಕಿಂಗ್ ಮಾಡುವ ಯೋಗ ಸಹ ಇದೆ. ಮನೆಯ ಪೇಂಟಿಂಗ್, ದುರಸ್ತಿ ಇಂಥದ್ದಕ್ಕೆ ಸಾಲ ಮಾಡಲಿದ್ದೀರಿ. ಎಲೆಕ್ಟ್ರಿಕಲ್ ವಸ್ತುಗಳ ಮಾರಾಟಗಾರರಿಗೆ ಲೆಕ್ಕಪತ್ರದಲ್ಲಿ ವಂಚನೆ ಆಗಿದೆ ಎಂಬ ಗುಮಾನಿ ಕಾಡಲಿದೆ.
ಕೆಲಸ ಪೂರ್ತಿ ಆಗುವ ಮುಂಚೆಯೇ ಹೇಳಿಕೊಂಡು, ಅದು ಅರೆಬರೆ ಆಗಿ, ಅವಮಾನಕ್ಕೆ ಗುರಿ ಆಗಬಹುದು. ಆದ್ದರಿಂದ ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ಹೇಳಿಕೊಳ್ಳದಿರಿ. ಸಂಗೀತಗಾರರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ವೇದ ಪಾಠ ಮಾಡುವಂಥವರಿಗೆ ಗೌರವ- ಸನ್ಮಾನಗಳು ಆಗಲಿವೆ. ಹೊಸದಾಗಿ ಭೂಮಿ ಖರೀದಿ ಮಾಡಬೇಕು ಎಂದಿರುವವರು ಈ ದಿನದ ಮಟ್ಟಿಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಈ ದಿನ ನಿಮಗೆ ದೈವ ಪ್ರೇರಣೆ ದೊರೆಯಲಿದೆ. ಅದರಂತೆ ನಡೆದುಕೊಳ್ಳಿ. ಇದರರ್ಥ ಇಷ್ಟೇ, ನಿಮ್ಮ ಮನಸ್ಸಿಗೆ ಬಲವಾಗಿ ಅನಿಸುವಂಥ ಉತ್ತಮ ಕೆಲಸಗಳನ್ನು ಕೂಡಲೇ ಮಾಡಿ, ಅನುಮಾನಗಳನ್ನು ಇಟ್ಟುಕೊಳ್ಳದಿರಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ವ್ಯಕ್ತಿಯ ಪರಿಚಯ, ಸ್ನೇಹ ಆಗಲಿದೆ. ಕಾನೂನು ಮೀರುವ ಆಲೋಚನೆ ಅದೆಷ್ಟೇ ಸಣ್ಣ ಪ್ರಮಾಣದಲ್ಲೇ ಆದರೂ ಮಾಡದಿರಿ, ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.
ಆಡಬಾರದ ಮಾತನ್ನು ಆಡಬಾರದ ಸ್ಥಳದಲ್ಲಿ ಆಡಿ, ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಲಿದ್ದೀರಿ. ಸಂತಸವೋ- ಸಂಕಟವೋ ಮನಸ್ಸಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಿ. ಮಕ್ಕಳ ಆರೋಗ್ಯದ ಕಡೆ ಲಕ್ಷ್ಯ ನೀಡಿ. ಅದರಲ್ಲೂ ಹೆಣ್ಣುಮಕ್ಕಳು ಇರುವಂಥವರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಹಳೆಯ ಸ್ನೇಹಿತರು ಈ ದಿನ ಭೇಟಿ ಆಗುವ ಯೋಗ ಇದೆ. ಹಳೇ ಆರೋಗ್ಯ ಸಮಸ್ಯೆಗಳು ಉಲ್ಬಣ ಆಗಬಹುದು.
ಡಿಜಿಟಲ್ ಆಸ್ತಿಗಳ ಮೇಲೆ ಹೂಡಿಕೆ ಮಾಡಿದಂಥವರಿಗೆ ಭಾರೀ ಒತ್ತಡದ ಸುದ್ದಿ ಕೇಳಿಬರುತ್ತದೆ. ಮುಖದ ಮೇಲೆ ಗಾಯಗಳಾಗಬಹುದು. ಈ ದಿನ ದೃಷ್ಟಿ ದೋಷ ತಗುಲುವಂಥ ಸಾಧ್ಯತೆ ಇದೆ. ಆದ್ದರಿಂದ ಗಣಪತಿಯ ಆರಾಧನೆಯನ್ನು ಮಾಡಿ. ಎಷ್ಟೇ ಪರಿಚಯದವರು, ಆಪ್ತರಾದರೂ ಅಂತರಂಗದ ವಿಷಯಗಳನ್ನು ಹಂಚಿಕೊಳ್ಳದಿರಿ. ಪೌರೋಹಿತ್ಯ ಮಾಡಿಸುವಂಥವರಿಗೆ ಆದಾಯದ ಪ್ರಮಾಣವು ಕಡಿಮೆ ಆಗಲಿದೆ. ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ.
ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ನಾನಾ ಗೊಂದಲಗಳು ಎದುರಾಗಬಹುದು. ಇತರರ ಸಲಹೆ ಅಗತ್ಯ ಕಂಡುಬಂದಲ್ಲಿ ಪಡೆದುಕೊಳ್ಳಿ. ನಾಟಕ, ಸಂಗೀತ ಕಛೇರಿ, ಚಿತ್ರಕಲಾ ಪ್ರದರ್ಶನದಂಥ ಕಾರ್ಯಕ್ರಮಗಳಲ್ಲಿ ಭಾಗಿ ಆಗುವಂಥ ಸಾಧ್ಯತೆ ಇದೆ. ಸ್ತ್ರೀಯರ ವಿಚಾರದಲ್ಲಿ ಈ ಸಂಖ್ಯೆಯ ಪುರುಷರು ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ಆಡುವ ಮಾತುಗಳ ಮೇಲೆ ನಿಗಾ ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಅವಮಾನಕ್ಕೆ ಗುರಿ ಆಗುತ್ತೀರಿ.
ಸಾಕು ಪ್ರಾಣಿಗಳ ಸಲುವಾಗಿ ಖರ್ಚು ಮಾಡುವ ಯೋಗ ಇದೆ. ದಾನ- ಧರ್ಮಗಳಿಗಾಗಿ ವಸ್ತು ಅಥವಾ ಹಣವನ್ನು ನೀಡಲಿದ್ದೀರಿ. ಮನೆಗೆ ಟೀವಿ, ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಇನ್ಯಾವುದಾದರೂ ಗ್ಯಾಜೆಟ್ ಖರೀದಿ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಇಎಂಐ ಅನ್ನು ಸರಿಯಾದ ಸಮಯಕ್ಕೆ ಕಟ್ಟಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಮಸಾಲೆಯುಯಕ್ತ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರಿ.
ಸಂಬಂಧಿಕರ ಮನೆಗಳಿಗೆ ಭೇಟಿ ನೀಡುವ ಯೋಗ ಇದೆ. ಹಿಂದೆ ನಿಮಗಾಗಿದ್ದ ಅವಮಾನಕ್ಕೆ ಸರಿಯಾದ ಉತ್ತರವನ್ನು ನೀಡಲಿದ್ದೀರಿ. ಕೂದಲು ಉದುರುವಂಥ ಸಮಸ್ಯೆ ಈಗಾಗಲೇ ಕಾಡುತ್ತಿದ್ದಲ್ಲಿ ಅದು ಹೆಚ್ಚಾಗಲಿದೆ. ಮೊಡವೆ, ಚರ್ಮ ಕಾಯಿಲೆಗಳು ಕೂಡ ಜಾಸ್ತಿ ಆಗಬಹುದು. ಕುಡಿಯುವ ನೀರು ಶುದ್ಧತೆ ಕಡೆಗೆ ನಿಗಾ ಮಾಡಿ. ಯಾರದೋ ಮೇಲಿನ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳದಿರಿ.
ಲೇಖನ- ಎನ್.ಕೆ.ಸ್ವಾತಿ