Monthly Horoscope October 2023: ಅಕ್ಟೋಬರ್​ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ, ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

| Updated By: ವಿವೇಕ ಬಿರಾದಾರ

Updated on: Sep 29, 2023 | 6:25 AM

ಅಕ್ಟೋಬರ್​​​ ತಿಂಗಳ ದ್ವಾದಶ ರಾಶಿ ಭವಿಷ್ಯ: 2023ರ ಅಕ್ಟೋಬರ್​​ ತಿಂಗಳಲ್ಲಿ ಯಾವ ರಾಶಿಗಳ ಮೇಲೆ ಪ್ರಭಾವವನ್ನು ಬೀರಲಿದೆ..? ಅಕ್ಟೋಬರ್​​ನಲ್ಲಿ ಯಾವ ರಾಶಿಗೆ ಶುಭಫಲ, ಯಾರು ಎಚ್ಚರಿಕೆಯಿಂದ ಇರಬೇಕು? ಸೆಪ್ಟೆಂಬರ್​ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ತಿಳಿಯಿರಿ.

Monthly Horoscope October 2023: ಅಕ್ಟೋಬರ್​ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ, ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
ಪ್ರಾತಿನಿಧಿಕ ಚಿತ್ರ
Follow us on

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಅದರಂತೆ ಅಕ್ಟೋಬರ್​​​ ತಿಂಗಳ ಗ್ರಹಗತಿಗಳ ಪ್ರಕಾರ, ಯಾವ ರಾಶಿಗೆ ಏನು ಫಲ? ಎನ್ನುವುದನ್ನು ಮಾಸ ಭವಿಷ್ಯದಲ್ಲಿ ನೀಡಲಾಗಿದೆ. ಹಾಗಾದರೆ, ಅಕ್ಟೋಬರ್​ ತಿಂಗಳ ನಿಮ್ಮ ರಾಶಿ ಭವಿಷ್ಯದಲ್ಲಿ ಏನು ಇದೆ ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ ರಾಶಿ: ವಿವಾಹದ ಅಪೇಕ್ಷಿತರು ಈ ತಿಂಗಳು ಸ್ವಲ್ಪ ಕಾಯುವುದು ಒಳ್ಳೆಯದು. ಸಪ್ತಮಾಧಿಪತಿಯಾದ ಶುಕ್ರನು ಪಂಚಮದಲ್ಲಿ ಇದ್ದಾನೆ. ಆದರೂ ಉಳಿದ ಗ್ರಹಗಳು ತಮ್ಮ ಬಲವನ್ನು ತೋರಿಸಲು ಸಮರ್ಥರಾಗಿಲ್ಲ. ಸಪ್ತಮದಲ್ಲಿ ಕುಜನಿದ್ದು ಮನಸ್ಸು ಬಹಳ ದುರ್ಬಲವಾಗಬಹುದು. ಸೂರ್ಯನು ದುರ್ಬಲನಾದ ಕಾರಣ ಆತ್ಮವಿಶ್ವಾಸದಲ್ಲಿ ಕೊರತೆ ಇರಲಿದೆ. ಏಕಾದಶದ ಶನಿಯು ತನ್ನ ಸ್ವಕ್ಷೇತ್ರದಲ್ಲಿ ಇದ್ದು ನಿಮ್ಮ ಎಲ್ಲ ಕಾರ್ಯಗಳಿಗೆ ಬಲವಾಗಿ ಇರುವನು. ಈ ತಿಂಗಳು ಗುರುವಿನ ಶುಭದೃಷ್ಟಿಯು ನಿಮ್ಮ ಮೇಲೆ‌ ಬೀಳಲಿದೆ. ಮಾತಿನಲ್ಲಿ ಅಳತೆಯಿರಲಿ. ಅತಿಯಾದ ಮಾತು ಬೇಡ. ಆದಿತ್ಯಹೃದಯ ಪಾರಾಯಣವನ್ನು ಮಾಡಿ.

ವೃಷಭ ರಾಶಿ: ಈ ತಿಂಗಳು ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಅವಶ್ಯಕ. ಷಷ್ಠಸ್ಥಾನದಲ್ಲಿ ನಾಲ್ಕೂ ಗ್ರಹರು ಇದ್ದು ಸೂರ್ಯನು ನಿಮಗೆ ಯಾವ ಸಹಕಾರವನ್ನೂ ಮಾಡನು. ಬಂಧುಗಳೇ ಶತ್ರುವಾಗುವ ಸಾಧ್ಯತೆ ಇದೆ. ಮಾತನಾಡುವಾಗ ಜಾಗರೂಕತೆ ಅವಶ್ಯಕ. ಚತುರ್ಥಕ್ಕೆ ಶುಕ್ರನ ಪ್ರವೇಶ ಆಗಲಿದ್ದು ಕುಟುಂಬದಲ್ಲಿ ನೆಮ್ಮದಿ ಇರುವುದು. ತಾಯಿಗೆ ಬೇಕಾದ ಸಹಕಾರವನ್ನು ನೀವು ಕೊಡುವಿರಿ. ತಾಯಿಯ ವಿಚಾರದಲ್ಲಿ ಅಧಿಕ‌ಪ್ರೀತಿಯು ಉಂಟಾಗುವುದು. ಗುರುಬಲಬು ಇಲ್ಲದ ಕಾರಣ ಯಾವುದೇ ದುಸ್ಸಾಹಸಕ್ಕೆ ಹೋಗುವುದು ಬೇಡ. ಗುರುವಿನ ಸ್ತೋತ್ರವನ್ನು ಪಠಿಸಿ. ಗುರುವಾರದಂದು ಲಕ್ಷ್ಮೀನಾರಾಯಣನ ದೇವಾಲಯಕ್ಕೆ ಹೋಗಿ, ಪೂಜಿಸಿ.

ಮಿಥುನ ರಾಶಿ: ಈ ತಿಂಗಳು ಬದಲಾಗುವ ಗ್ರಹಗತಿಗಳಿಂದ ಮಿಶ್ರಫಲವು ಇರಲಿದೆ. ಪಂಚಮದಲ್ಲಿ ನಾಲ್ಕು ಗ್ರಹಗಳ ಸಂಯೋಗವು ಉಂಟಾಗಲಿದೆ. ಶುಭನಾದ ಬುಧನೂ ಪಾಪಗ್ರಹರ ಜೊತೆ ಸೇರಿ ಪಾಪಿಯಾಗಿ ಕೊಡಬೇಕಾದ ಫಲವನ್ನು ಕೊಡನು. ಉನ್ನತ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗಲಿದೆ. ಶುಕ್ರನು ತೃತೀಯಕ್ಕೆ ಬರಲಿದ್ದು ನಿಮ್ಮ ಸಾಮರ್ಥ್ಯವನ್ನು ತೋರಿಸಬೇಕಾದೀತು. ಈ ತಿಂಗಳು ಗುರುಬಲವೊಂದೇ ನಿಮ್ಮ ಎಲ್ಲ ತೊಡಕುಗಳನ್ನು ನಿಯಂತ್ರಣಮಾಡಿದ್ದು ಎಲ್ಲವೂ ಶುಭದಂತೆ ತೋರುವುದು. ದೇವತಾರಾಧನೆಯನ್ನು ಒತ್ತಾಯದಿಂದ ಮಾಡಬೇಕಾದೀತು. ಮಹಾವಿಷ್ಣುವಿನ ಸ್ತೋತ್ರವನ್ನು ಪಠಿಸಿ.

ಕಟಕ ರಾಶಿ: ಗ್ರಹಗತಿಗಳ ಚಲನೆಯಿಂದ ಈ ತಿಂಗಳು ಉತ್ತಮವಾಗಿರಲಿದೆ. ಚತುರ್ಥದಲ್ಲಿ ಕೇತು, ಕುಜ, ಸೂರ್ಯ ಹಾಗೂ ಬುಧರಿರುವರು. ಕುಟುಂಬದಲ್ಲಿ ಕಲಹವಾಗಬಹುದು. ಬಂಧುಗಳ ಜೊತೆಯೂ ಅಸಮಾಧವನ್ನು ತೋರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮೂಲ ಮುನ್ನಡೆ ಸಿಗುವುದು. ಆದರೆ ಸರ್ಕಾರಿ ಕಛೇರಿಯಲ್ಲಿ ಕೆಲಸವಾಗದೇ ಓಡಾಟ ಮಾಡಬೇಕಾದೀತು. ಅಷ್ಟಮದಲ್ಲಿ ಶನಿಯು ಇದ್ದು ಭೀತಿಯನ್ನು ಕೊಡುವನು. ದ್ವಿತೀಯಕ್ಕೆ ಶುಕ್ರನು ಆಗಮಿಸಲಿದ್ದು ಮಾತನ್ನು ಬಹಳ ಮನೋಜ್ಞವಾಗಿ ಆಡುವಿರಿ. ನಿಮ್ಮ ಮಾತಗೆ ಯಾರಾದರೂ ಮರುಳಾದಾರು. ನಿಮಗೆ ಆಗಬೇಕಾದ ಕೆಲಸವನ್ನು ಇದೇ ಸಂದರ್ಭದಲ್ಲಿ ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ: ಅಕ್ಟೋಬರ್ ಮಾಸದಲ್ಲಿ ಗ್ರಹಗತಿಗಳು ಬದಲಾಗಿದ್ದು ಮಿಶ್ರ ಫಲವು ಇರಲಿದೆ. ಸ್ವಕ್ಷೇತ್ರಾಧಿಪತಿಯು ತೃತೀಯದಲ್ಲಿ ಇದ್ದು ನೀಚನಾಗಿರುವನು. ಸಿಟ್ಟು ಹೆಚ್ಚು ಬರಬಹುದು. ಚತುರ್ಥ ಹಾಗೂ ನವಮಾಧಿಪಯಾಗಿ ಕುಜನು ತೃತೀಯದಲ್ಲಿ ಇದ್ದು ಸಹೋದರರಿಂದ ಅನುಕೂಲ‌ ಮಾಡಿಸುವನು. ಅಪರೂಪದ ಸ್ನೇಹಿತರ ಸಮಾಗಮವೂ ಇಂದು ಆಗಲಿದೆ. ದ್ವಿತೀಯ ಹಾಗೂ ಏಕಾದಶಾಧಿಪತಿಯಾದ ಬುಧನು ತೃತೀಯದಲ್ಲಿ ಇರಲಿದ್ದು ಬಂಧುಗಳ ಸಹಕಾರವು ಅಲ್ಪ ಸಿಗುವುದು. ಸಪ್ತಮದಲ್ಲಿ ಶನಿಯು ಇರುವುದರಿಂದ ಪತಿಯ ಕಾರ್ಯಗಳು ನಿಮಗೆ ಹಿಡಿಸದೇ ಇರಬಹುದು. ಆತ್ಮ ತೃಪ್ತಿಯು ಇರುವುದು.

ಕನ್ಯಾ ರಾಶಿ: ಈ ತಿಂಗಳು ನಿಮಗೆ ಅಶುಭವೇ ಹೆಚ್ಚು. ಎಲ್ಲ ಗ್ರಹಗಳು ದುಃಸ್ಥಾನದಲ್ಲಿ ಇದ್ದು ನಿಮಗೆ ತೊಂದರೆಯನ್ನು ಕೊಡಲಿದ್ದಾರೆ. ಏಕಾದಶದ ಶುಕ್ರನು ದ್ವಾದಶಕ್ಕೆ ಬರಲಿದ್ದು ಆರ್ಥಿಕ ನಷ್ಟವನ್ನು ಮಾಡಿಸುವನು. ಭೋಗವಸ್ತುಗಳ ವಿಚಾರದಲ್ಲಿ ಆಸಕ್ತಿ ತೋರಿಸಿ ಖರ್ಚು ಮಾಡಿಸುವನು. ದ್ವಿತೀಯದಲ್ಲಿ ಕುಜ, ಸೂರ್ಯ, ಬುಧ ಹಾಗೂ ಕೇತುಗಳು ಇರಲಿದ್ದು ಶುಭರಿದ್ದರೂ ಪಾಪಗ್ರಹರ ಸಂಯೋಗದಿಂದ ದುರ್ಬಲರಾಗುವರು. ಕಣ್ಣಿನ ತೊಂದರೆ ಅಧಿಕವಾಗಿ ಕಾಣಿಸುವುದು. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಕುಟುಂಬದಲ್ಲಿ ಐಕಮತ್ಯದ ಕೊರತೆ ಕಾಣಿಸುವುದು.

ತುಲಾ ರಾಶಿ: ಈ ತಿಂಗಳು ನಿಮಗೆ ಮಿಶ್ರಫಲಗಳು ಇರಲಿವೆ. ದಶಮದಲ್ಲಿ ಇರುವ ಶುಕ್ರನು ಏಕಾದಶಕ್ಕೆ ಬರಲಿದ್ದು ಕಲಾವಿದರಿಗೆ ಹೆಚ್ಚಿನ ಗೌರವ, ಪ್ರಶಂಸೆ, ಯಶಸ್ಸುಗಳು ಸಿಗಲಿವೆ. ವಿವಾಹ ಕಾರ್ಯಕ್ಕೆ ಮುಂದಡಿ ಇಡಬಹುದು. ಶರೀರಕ್ಕೆ ಪೆಟ್ಟಗಳು ಆಗಬಹುದು. ಬಹಳ ಎಚ್ಚರಿಕೆಯಿಂದ ವಾಹನ ಸವಾರಿ‌ ಮಾಡಿ. ಮಕ್ಕಳ‌ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಪ್ರೇಮವು ಫಲಿಸದೇ ಮಾನಸಿಕ ವೇದನೆಯನ್ನು ಅನುಭವಿಸಬೇಕಾದೀತು. ನಿಮ್ಮ ರಾಶಿಯಲ್ಲಿ ನಾಲ್ಕು ಗ್ರಹರು ಇರಲಿದ್ದು ನಿಮ್ಮ ಸ್ವಭಾವವು ಒರಟಾಗುವ ಸಾಧ್ಯತೆ ಇದೆ. ಆಲೋಚನೆಗಳು ಸಕಾರಾತ್ಮಕವಾಗಿ ಇರುವಂತೆ ನೋಡಿಕೊಳ್ಳಿ. ಎಲ್ಲ ವಿಚಾರದಲ್ಲಿ ದ್ವಂದ್ವವು ಕಾಣಿಸುವುದು.

ವೃಶ್ಚಿಕ ರಾಶಿ: ಅಶುಭಫಲವನ್ನು ಹೆಚ್ಚು ನಿರೀಕ್ಷಿಸಬಹುದು ನೀವು ಈ ತಿಂಗಳಲ್ಲಿ. ದ್ವಾದಶದಲ್ಲಿ ಸೂರ್ಯ, ಬುಧ, ಕುಜ ಹಾಗೂ ಕೇತುಗಳು ಇರಲಿದ್ದು ಸೂರ್ಯನಿಂದ ಶುಭವನ್ನು ನಿರೀಕ್ಷಿಸಲಾಗದು. ಏಕೆಂದರೆ ಸೂರ್ಯನು ತನ್ನ ಪೂರ್ಣಬಲವನ್ನು ಕಳೆದುಕೊಂಡು ನೀಚನಾಗಿರುವನು. ಇನ್ನು ಬುಧನ್ನು ಪಾಪಗ್ರಹರ ಜೊತೆ ಇದ್ದು ಆತನೂ ಪಾಪಿಯಾಗಿ ಬಂಧುಗಳಿಂದ‌ ಪೀಡೆಗೆ‌ ಒಳಗಾಗುವಂತೆ ಮಾಡುವನು. ಕುಜ ಹಾಗೂ ಕೇತುಗಳಿಂದ ಆರೋಗ್ಯ ಸಮಸ್ಯೆಯು ಶಸ್ತ್ರಚಿಕಿತ್ಸೆಯ‌ ಮೂಲಕ ಸರಿಯಾಗುವುದು. ಮರಣಭೀತಿಯು ಇರಬಹುದು. ಷಷ್ಠದಲ್ಲಿ ಗುರುವು ಇರಲಿದ್ದು ಸೋದರ ಮಾವನ‌ ಆರೋಗ್ಯವು ಕೆಡಬಹುದು. ಸಾಲ‌ ಮಾಡುವ ಸ್ಥಿತಿಯು ಬರಬಹುದು. ಆಗಾಗ ಶತ್ರುವಿನ ತೊಂದರೆಯಿಂದ ಕಷ್ಟಪಡುವಿರಿ. ಮೃತ್ಯುಂಜಯನ ಉಪಾಸನೆ ಅಗತ್ಯ.

ಧನಸ್ಸು ರಾಶಿ: ಈ ತಿಂಗಳು ಹೆಚ್ಚಿನ ಶುಭವು ಸಿಗುವುದಾಗಿದೆ. ಅಷ್ಟಮದಲ್ಲಿ ಇರುವ ಶುಕ್ರನು ನವಮಕ್ಕೆ ಬರಲಿದ್ದು ವಾಹನ ಮೊದಲಾದ ಭೋಗ ವಸ್ತುಗಳ ಸಹವಾಸವನ್ನು ಮಾಡಿಸುವನು. ಸ್ತ್ರೀಯ ಕಡೆಯಿಂದ ಲಾಭವನ್ನು ನಿರೀಕ್ಷಿಸಿದ್ದರೆ ಲಭ್ಯವಾಗುವ ಸಾಧ್ಯತೆ ಇದೆ. ಏಕಾದಶದಲ್ಲಿ ಮೂರು ಮುಖ್ಯಗ್ರಹಗಳ ಆವಾಸಸ್ಥಾನವು ಈ ತಿಂಗಳು ಆಗಲಿದ್ದು ಸೂರ್ಯನು ನೀಚನಾದ ಕಾರಣ ಆತನಿಂದ ಶುಭವನ್ನು ನಿರೀಕ್ಷಿಸುವುದು ಕಷ್ಟ. ಕುಜನು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಕೊಡಿಸುವನು.‌ ತಂತ್ರಜ್ಞರಿಗೆ ವಿದೇಶ ಪ್ರಯಾಣ ಯೋಗವನ್ನು ಕೊಡಿಸುವನು. ವಿದ್ಯೆಗೆ ಸಂಬಂಧಿಸಿದಂತೆ ಅನುಕೂಲತೆಗಳು ಆಗುವುದು. ಅಧಿಕ ಒತ್ತಡವನ್ನು ಕಾರ್ಯಕ್ಷೇತ್ರದಲ್ಲಿ ಕಾಣಬೇಕಾದೀತು.

ಮಕರ ರಾಶಿ: ಈ ತಿಂಗಳು ನಿಮಗೆ ಮಧ್ಯಫಲವೇ ಹೆಚ್ಚಾಗಿರುವುದು. ಶುಕ್ರನು ಅಷ್ಟಮಕ್ಕೆ ಬರಲಿದ್ದು ಪತ್ನಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು.‌ ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಅಧಿಕವಾಗಿ ಎಲ್ಲ ವಿಚಾರಗಳಿಗೂ ಕಲಹವಾಗಬಹುದು. ಇನ್ನು ದಶಮಸ್ಥಾನದ ವಿಚಾರಕ್ಕೆ ಬಂದರೆ ನಾಲ್ಕು ಗ್ರಹಗಳು ಇದ್ದರೂ ನಿಮ್ಮ ಉದ್ಯೋಗದಲ್ಲಿ ಯಾವುದೇ ಏಳ್ಗೆಯನ್ನು ಕಾಣಲಾಗದು. ಎಲ್ಲವೂ ಆಗುತ್ತದೆ ಎಂಬ ನಿರೀಕ್ಷೆಯು ಇದ್ದರೂ ಮತ್ಯಾವುದೋ ಕಾರಣಕ್ಕೆ ಅದು ಇಲ್ಲವಾಗದೇ ಹೋಗಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಗಳೆಲ್ಲವೂ ನಿಂತೇ ಹೋಗುವುದು. ನಿಮ್ಮ ಒತ್ತಡವೂ ಯಾವ ಪ್ರಯೋಜನಕ್ಕೆ ಬಾರದೇ ಹೋದೀತು. ಕಾರ್ತಿಕೆಯನ ಉಪಾಸನೆಯು ನಿಮ್ಮ ಹಲವು ತೊಂದರೆಗೆ ದಿವ್ಯೌಷಧವಾಗುವುದು.

ಕುಂಭ ರಾಶಿ: ಅಕ್ಟೋಬರ್ ತಿಂಗಳು ನಿಮಗೆ ಶುಭಫಲವು ಹೆಚ್ಚಿದೆ. ಶನಿಯು ನಿಮ್ಮದೇ ಮನೆಯಲ್ಲಿ ಇದ್ದು ಎಲ್ಲವನ್ನೂ ನಿಧಾನವಾಗಿಸುವವನು. ಉಳಿದಂತೆ ಸಪ್ತಮಕ್ಕೆ ಶುಕ್ರನ ಗಮನವಿರಲಿದೆ. ವಿವಾಹದ ನಿರೀಕ್ಷೆಯಲ್ಲಿ ಇರುವವರು ಮುಂದುವರಿಯಬಹುದು. ಕಲಾವಿದರಿಗೆ ಹೆಚ್ಚಿನ ಸ್ಥಾನ, ಅವಕಾಶಗಳು ಲಭ್ಯ. ನವಮಕ್ಕೆ ಬುಧ, ಶುಕ್ರ, ಕುಜರ ಪ್ರವೇಶವಾಗಲಿದ್ದು ಸ್ಥಾನ ಉತ್ತಮವಾದರೂ ಸ್ಥಾನದಲ್ಲಿ ಇರುವವರು ಉತ್ತಮರಲ್ಲ. ಆದ್ದರಿಂದ ಪೂರ್ವಪುಣ್ಯವೆಲ್ಲವೂ ಒಮ್ಮೆಲೆ ಸ್ಥಗಿತವಾಗುವುದು. ಯಾವುದೇ ಶುಭ ಕಾರ್ಯಕ್ಕೆ ಮನಸ್ಸು ಇರದು. ಹಿರಿಯರ, ಬಂಧುಗಳ ಮಾರ್ಗದರ್ಶನವೂ ನಿಮಗೆ ಸರಿಯಾಗದು. ಸರ್ಕಾರದ ಕೆಲಸವೂ ಅಷ್ಟಕ್ಕಷ್ಟೇ. ತಿಂಗಳ ಮಧ್ಯದವರೆಗೆ ಹೀಗೇ ಇರಲಿದ್ದು ಅನಂತರ ಬದಲಾಗುವುದು. ಸೂರ್ಯನಾರಾಯಣನ ಆರಾಧನೆಯನ್ನು ಮಾಡಿ.

ಮೀನ ರಾಶಿ: ಈ ತಿಂಗಳು ನಾಲ್ಕು ಗ್ರಹಗಳು ಸ್ಥಾನ ಬದಲಾವಣೆಯನ್ನು ಮಾಡಲಿದ್ದು ಸ್ವಲ್ಪ ಸಂಕಷ್ಟವು ಇರಲಿದೆ ಎಂದೇ ಹೇಳಬಹುದು. ಪಂಚಮದ ಶುಕ್ರನು ಷಷ್ಠಸ್ಥಾನಕ್ಕೆ ಇರಲಿದ್ದು ಆರೋಗ್ಯದ ತೊಂದರೆ, ಶತ್ರು ಭೀತಿ, ವಿಶೇಷವಾಗಿ ಸ್ತ್ರೀಯರು ನಿಮಗೆ ಶತ್ರುವಾಗಬಹುದು. ಬಹಳ ಎಚ್ಚರಿಕೆ ಅಗತ್ಯ. ಇನ್ನು ಸೂರ್ಯ, ಕುಜ, ಬುಧರು ಅಷ್ಟಮಕ್ಕೆ ಬರಲಿದ್ದು ಕೇತುವೂ ಇರಲಿದ್ದಾನೆ. ಪಾಪರ ಮಧ್ಯದಲ್ಲಿ ಸಿಕ್ಕಿಕೊಂಡು ಬುಧನೂ ನಿಮಗೆ ಶುಭ ಫಲವನ್ನು ಕೊಡಲಾರ. ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಅಸಹಕಾರ ಎಲ್ಲವೂ ಇರಲಿದೆ.‌ ಸರ್ಕಾರ ಉದ್ಯೋಗದಲ್ಲಿ ನಿಮಗೆ ಯಾವ ಕೆಲಸವೂ ಆಗದೇ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವಿರಿ. ಮಹಾಲಕ್ಷ್ಮಿ ಅನುಗ್ರಹ ಬೇಕು. ದುರ್ಗೆಯನ್ನು ಅನನ್ಯ ಮನಸ್ಸಿನಿಂದ ಆರಾಧಿಸಿ.