Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 8ರ ದಿನಭವಿಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2024 | 9:26 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 8ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 8ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 8ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಪ್ರತಿಭೆಗೆ ಪ್ರಾಶಸ್ತ್ಯ ದೊರೆಯುವಂಥ ದಿನ ಇದಾಗಿರುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದ್ದು, ಹತ್ತಿರದ ಸ್ಥಳಕ್ಕಾದರೂ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಯಾರು ಬ್ಯಾಂಕ್- ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುತ್ತೀರಿ ಅಂಥವರಿಗೆ ದಾಖಲೆ, ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುವುದಕ್ಕೆ ಇತರರ ಸಹಾಯ ದೊರೆಯಲಿದೆ. ಮನೆಗೆ ಏರ್ ಕೂಲರ್ ಅಥವಾ ಏಸಿ ಇಂಥದ್ದನ್ನು ಖರೀದಿಸಿ ತರುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಊಟ- ತಿಂಡಿ ವಿಚಾರಕ್ಕೆ ಕುಟುಂಬ ಸದಸ್ಯರ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ಆದರೆ ಇದನ್ನು ತುಂಬ ಮುಂದುವರಿಸಿಕೊಂಡು ಹೋಗದಿರುವುದು ಒಳ್ಳೆಯದು. ನಿಮ್ಮ ಬಗ್ಗೆ ಇತರರಿಗೆ ಏನು ಅಭಿಪ್ರಾಯ ಇದೆ ಎಂಬ ಬಗ್ಗೆ ವಿಚಿತ್ರ ಕುತೂಹಲ ತೋರಿಸಲು ಹೋಗಬೇಡಿ. ಗಾಜಿನ ವಸ್ತುಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನೀವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ಸುತ್ತಮುತ್ತ ಇರುವವರು ಹೇಳಲಿಕ್ಕೆ ಶುರು ಮಾಡಲಿದ್ದಾರೆ. ಇದರಿಂದ ನಿಮಗೂ ಖುಷಿ ಆಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಕಾಡು- ಬೆಟ್ಟ, ಗುಡ್ಡ ಪ್ರದೇಶಗಳಿಗೆ ತೆರಳುವ ಯೋಗ ಇದೆ. ಮಿಡ್ಲ್ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಇಷ್ಟು ಸಮಯ ಕೆಲಸ ಮಾಡುತ್ತಿರುವ ಕೆಲವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ, ಟಾಪ್ ಮ್ಯಾನೇಜ್ ಮೆಂಟ್ ಹುದ್ದೆಗೆ ಬಡ್ತಿ ನೀಡುವ ಸಾಧ್ಯತೆಗಳಿವೆ ಎಂಬುದು ತಿಳಿದುಬರಲಿದೆ. ಈ ಬಗ್ಗೆ ನಿಮ್ಮ ಜತೆಗೇ ಚರ್ಚೆ ನಡೆಸಬಹುದು ಅಥವಾ ನಿಮಗೆ ಬಹಳ ಹತ್ತಿರವಾದವರಿಂದ ಈ ಬಗ್ಗೆ ಮಾಹಿತಿ ದೊರೆಯಬಹುದು. ಮುಖ್ಯ ದಾಖಲೆ ಪತ್ರಗಳು, ಸಂಖ್ಯೆಗಳು ಹಾಗೂ ಸಣ್ಣ ಸಣ್ಣ ಮಾಹಿತಿಗಳು ಅಂದಾಗ ಮಾಮೂಲಿ ದಿನಗಳಿಗಿಂತ ಹೆಚ್ಚಿನ ಗಮನವನ್ನು ನೀಡುವುದು ಉತ್ತಮ. ಒಂದು ಸಣ್ಣ ಕಣ್ತಪ್ಪಿನಿಂದ ದೊಡ್ಡ ಅವಕಾಶ ಕಳೆದುಕೊಳ್ಳುವಂತೆ ಆಗಬಾರದು, ನೋಡಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ಒಂದು ವಿಚಾರವನ್ನು ಯಾರಿಗಾದರೂ ಹೇಳಿಕೊಳ್ಳಲೇಬೇಕು ಎಂಬ ಚಡಪಡಿಕೆ ನಿಮಗೆ ಶುರುವಾಗಲಿದೆ. ಆದರೆ ಅದು ಯಾರು ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಲಿದೆ. ಆಲೋಚನೆ ಮಟ್ಟದಲ್ಲೇ ಇರುವಂಥ ಯೋಜನೆಗೆ ಏಕಾಏಕಿ ಹಣ ಹಾಕುವುದಕ್ಕೆ ನಿರ್ಧಾರ ಮಾಡಬೇಡಿ. ಇನ್ನು ಸಾರ್ವಜನಿಕ ಜೀವನದಲ್ಲಿ ಇರುವಂಥವರು ಬಾಯಿ ತಪ್ಪಿ ಆಡಿದಂಥ ಮಾತೊಂದರ ಬಗ್ಗೆ ವಿಪರೀತ ಚರ್ಚೆಗೆ ಗುರಿ ಆಗಬೇಕಾಗುತ್ತದೆ. ಹಲವರಿಗೆ ಸಹಾಯ ಮಾಡಿದ ನಂತರವೂ ಕೆಲವು ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳ ಬೇಕಾದೀತು. ಸಿಹಿ ತಿನಿಸು ಮಾರಾಟ, ಕಾಂಡಿಮೆಂಟ್ಸ್ ನಡೆಸುತ್ತಿರುವವರು ವ್ಯಾಪಾರ ವಿಸ್ತರಣೆ ಮಾಡುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಸೈಕ್ಲಿಂಗ್, ಜಿಮ್, ಪ್ರಾಣಾಯಾಮ, ಯೋಗ ಸೇರಿದಂತೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಆರಂಭಿಸುವುದಕ್ಕೆ ಬೇಕಾದಂಥ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವುದಕ್ಕೆ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ನಿಮ್ಮಲ್ಲಿ ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ, ಅಂಥವರು ಅನಿವಾರ್ಯವಾಗಿ ಹುಡುಕಾಟವನ್ನು ಮುಂದಕ್ಕೆ ಹಾಕಬೇಕಾದ ಪರಿಸ್ಥಿತಿ ಸೃಷ್ಟಿ ಆಗಲಿದೆ. ಇದೇ ಮೊದಲ ಬಾರಿಗೆ ಎಂಬಂತೆ ಮಾಡಿದ ಕೆಲಸಗಳಲ್ಲಿ ಯಶಸ್ಸು ದೊರೆಯುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮಲ್ಲಿ ಯಾರು ಅಕ್ಕಪಕ್ಕದಲ್ಲಿಯೇ ಇರುವಂಥ ಸೈಟು, ಮನೆಯನ್ನು ಖರೀದಿ ಮಾಡಬೇಕು ಎಂದು ಪ್ರಯತ್ನಿಸುತ್ತಿರುವಿರೋ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಪ್ರಾಮುಖ್ಯ ಹೆಚ್ಚಾಗಲಿದೆ. ಜತೆಗೆ ಸ್ಥಾನ-ಮಾನ ದೊರೆಯಬಹುದು. ದಿನದ ಕೊನೆಗೆ ಸ್ನೇಹಿತರು- ಸಂಬಂಧಿಕರ ಜತೆಗೆ ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯಲಿದ್ದೀರಿ. ಸಂಗೀತಗಾರರಿಗೆ ಸನ್ಮಾನ- ಗೌರವ- ಸಮ್ಮಾನಗಳು ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಕೃಷಿ ಭೂಮಿ, ಸೈಟು ಅಥವಾ ಬೇರೆ ಯಾವುದೇ ರೀತಿಯ ಆಸ್ತಿಯನ್ನು ಖರೀದಿ ಮಾಡುವುದಕ್ಕೆ ಗಂಭೀರವಾದ ಹುಡುಕಾಟವನ್ನು ನಡೆಸಲಿದ್ದೀರಿ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದಂಥ ಆಸ್ತಿಯ ಬಗ್ಗೆಯೇ ನಿಮಗೆ ಮತ್ತೆ ಪ್ರಸ್ತಾವಗಳು ಬರಬಹುದು ಅಥವಾ ನಿಮಗೆ ಅದನ್ನು ಖರೀದಿ ಮಾಡಬೇಕು ಎಂಬ ಆಲೋಚನೆ ಬರಬಹುದು. ಈ ದಿನ ನಿಮ್ಮ ಊಟ- ತಿಂಡಿಯ ಸಮಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಬೇಕು. ಏಕೆಂದರೆ ನಿಮ್ಮಲ್ಲಿ ಯಾರಿಗೆ ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳಿವೆಯೋ ಅಂಥವರಿಗೆ ಸಮಸ್ಯೆ ಉಲ್ಬಣ ಆಗಬಹುದು. ಹುಳಿ ತೇಗು, ಹೊಟ್ಟೆಯುಬ್ಬರ, ಎದೆಯುರಿ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಉತ್ಸಾಹದ ಭರದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಈ ದಿನ ನಿಮಗೆ ವ್ಯಕ್ತಿಯೊಬ್ಬರ ಪರಿಚಯ ಆಗಲಿದ್ದು, ಇದು ದೀರ್ಘಕಾಲದ ತನಕ ಅನುಕೂಲಕರವಾಗಿ ಮುಂದುವರಿಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ಕೆಲವು ವ್ಯಕ್ತಿಗಳಿಂದ ದೂರ ಇರುವುದಕ್ಕೆ ಅಲೋಚನೆ ಮಾಡಲಿದ್ದೀರಿ. ವಿಪರೀತ ಪೊಸೆಸಿವ್ ನೆಸ್ ಅಂತಲೋ ಅಥವಾ ನೀವು ಹೇಳಿಕೊಂಡ ವಿಷಯವನ್ನು ಎಲ್ಲ ಕಡೆಗೆ ಹೇಳಿಕೊಂಡು ಬರುತ್ತಿದ್ದಾರೆ ಅಂತಲೋ ಅಥವಾ ನಿಮ್ಮ ಬಗ್ಗೆ ಹಾಗೂ ನಿಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಕೆಲವು ವ್ಯಕ್ತಿಗಳನ್ನು ದೂರ ಮಾಡುವುದಕ್ಕೆ ನಿರ್ಧರಿಸಲಿದ್ದೀರಿ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್, ಹೂಡಿಕೆ ಹಾಗೂ ಸಾಲ ಎಷ್ಟಿದೆ ಎಂಬ ಸಂಗತಿಯನ್ನು ಸ್ನೇಹಿತರು, ಆಪ್ತರ ಜತೆಗೆ ಚರ್ಚೆ ನಡೆಸುವಂಥ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಕೆಲವು ಖರ್ಚುಗಳು ತಲೆ ಎತ್ತಲಿವೆ. ಮೊದಮೊದಲಿಗೆ ತುಂಬ ಕಡಿಮೆ ಖರ್ಚಿನಲ್ಲಿ, ವೇಗವಾಗಿ ಮುಗಿದು ಹೋಗಬಹುದು ಎಂದುಕೊಂಡ ವಿಷಯಗಳಿಗೆ ಜಾಸ್ತಿ ಖರ್ಚಾಗಬಹುದು. ನಿಮಗಿಂತ ವಯಸ್ಸಿನಲ್ಲಿ ಹಿರಿಯರಾದವರು ಆತ್ಮಗೌರವಕ್ಕೆ ಪೆಟ್ಟು ನೀಡುವಂಥ ಮಾತುಗಳನ್ನು ಆಡಬಹುದು. ಇದರಿಂದ ಧೈರ್ಯಗೆಡದಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸಂತಾನ ಅಪೇಕ್ಷಿತರಿಗೆ ಅಡೆ-ತಡೆಗಳು ಜಾಸ್ತಿ ಆಗುತ್ತಿವೆ ಎಂದು ಅನಿಸಲಿಕ್ಕೆ ಆರಂಭವಾಗಲಿದೆ. ಹಣಕಾಸಿನ ವಿಚಾರಕ್ಕೆ ದಂಪತಿ ಮಧ್ಯೆ ವಾಗ್ವಾದಗಳು ಆಗಲಿವೆ. ನೀವು ಒಂದು ವೇಳೆ ವ್ಯಾಪಾರ- ವ್ಯವಹಾರವನ್ನು ಮಾಡುತ್ತಿರುವವರಾದಲ್ಲಿ ಅದರ ಒಳಸುಳಿಗಳು, ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳುವುದಕ್ಕೆ ಹೋಗಬೇಡಿ. ಪದೇಪದೇ ಸಾಲ ಕೇಳುತ್ತಾ ಕೆಲವು ವ್ಯಕ್ತಿಗಳು ಮಾನಸಿಕ ಹಿಂಸೆಗೆ ಕಾರಣ ಆಗಲಿದ್ದಾರೆ. ಬ್ಯಾಂಗಲ್ ಸ್ಟೋರ್ ಗಳನ್ನು ನಡೆಸುತ್ತಿರುವವರು ಹಾಗೂ ಸೀರೆ- ಚೂಡಿದಾರ್ ಹೀಗೆ ಹೆಣ್ಣುಮಕ್ಕಳ ದಿರಿಸುಗಳ ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಭಾರೀ ಇಳಿಕೆ ಆಗಿ, ಚಿಂತೆಗೆ ಕಾರಣವಾಗಬಹುದು. ಮನೆಯಲ್ಲಿ ಕೆಲವು ದುರಸ್ತಿ, ನವೀಕರಣ ಮಾಡುವುದಕ್ಕೆ ಕುಟುಂಬ ಸದಸ್ಯರ ಜತೆಗೆ ಚರ್ಚೆ ನಡೆಸಬೇಕಾಗುತ್ತದೆ. ಆಧಾರ್, ಪಾನ್ ಕಾರ್ಡ್ ನಂಥ ದಾಖಲೆಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಿಸುವಂಥ ಸೂಚನೆಗಳು ದೊರೆಯಲಿವೆ. ನಿಮ್ಮಲ್ಲಿ ಯಾರು ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಳ್ಳುತ್ತಿರುವಿರಿ ಅಂಥವರಿಗೆ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕ ರೆಫರೆನ್ಸ್ ಸಿಗಬಹುದು. ನೀವು ಈಗಿರುವ ಸ್ಥಳದಿಂದ ಬೇರೆಡೆ ತೆರಳಬೇಕು ಎಂದೇನಾದರೂ ಅಂದುಕೊಳ್ಳುತ್ತಿದ್ದಲ್ಲಿ, ಅದು ಯಾವುದೇ ಉದ್ದೇಶದಿಂದಲಾದರೂ ಇರಬಹುದು, ಅದು ಸಾಧ್ಯವಾಗುವುದಿಲ್ಲ ಎಂದೆನಿಸಲಿದೆ. ನಿಮ್ಮ ಬಗ್ಗೆ ಕಾಳಜಿ, ಅಕ್ಕರಾಸ್ಥೆ ಇಟ್ಟುಕೊಂಡು ಮಾತನಾಡುವವರು ಹೇಳುವ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ. ಈ ದಿನ ನಿಮಗೆ ಮುಖ್ಯವಾದ ಎಚ್ಚರಿಕೆ ಏನೆಂದರೆ ಚರ್ಮಕ್ಕೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಕೂಡಲೇ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವ ಕಡೆಗೆ ಗಮನ ನೀಡಿ. ಕಾಲು ಉಳುಕುವುದು, ಸೊಂಟ ಉಳುಕುವುದು ಈ ರೀತಿಯ ಸಮಸ್ಯೆಗಳು ಸಹ ಕಾಡಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಯಾವ ವಿಚಾರವನ್ನು ಮತ್ತು ಕೆಲಸವನ್ನು ಸಾಂಪ್ರದಾಯಿಕ ಅಲ್ಲದ ರೀತಿಯಲ್ಲಿ ನಿರ್ವಹಿಸಿರುತ್ತೀರಿ ಅದರಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ನಿಮ್ಮಲ್ಲಿ ಕೆಲವರಿಗೆ ಸಂಬಂಧದಲ್ಲೇ ವಿವಾಹ ನಿಶ್ಚಯ ಆಗುವ ಸಾಧ್ಯತೆಗಳು ಕಾಣಬಹುದು. ಅದು ದೂರದ ಸಂಬಂಧ ಇರಬಹುದು ಅಥವಾ ಸೋದರತ್ತೆ ಅಥವಾ ಸೋದರಮಾವ ಈ ರೀತಿಯ ಸಂಬಂಧಿಗಳ ಮಗ ಅಥವಾ ಮಗಳ ಜತೆಗೆ ನಿಶ್ಚಯ ಆಗಬಹುದು. ಬಹಳ ಸಮಯದಿಂದ ನೀವು ಆಸೆ ಪಡುತ್ತಿದ್ದ ಅಥವಾ ನಿಮಗೆ ಇಷ್ಟವಾದ ಕೆಲವು ಕೆಲಸಗಳನ್ನು ಮಾಡಲಿದ್ದೀರಿ. ಮನೆಗೆ ಎಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿಸಿ ತರುವ ಯೋಗ ಇದೆ. ಈ ಹಿಂದೆ ಯಾವಾಗಲೋ ಕೊಟ್ಟಿದ್ದ ಸಾಲದ ಹಣ ಈಗ ವಾಪಸಾಗುವ ಸಾಧ್ಯತೆಗಳು ಕಂಡುಬರಲಿದೆ. ನಿಮ್ಮ ಸ್ನೇಹಿತರ ಪೈಕಿ ಯಾರಾದರೊಬ್ಬರು ತಮ್ಮ ವಾಹನವನ್ನು ನಿಮ್ಮ ಬಳಿ ಇರಿಸಿಕೊಳ್ಳುವಂತೆ ಕೇಳಬಹುದು.

ಲೇಖನ- ಎನ್‌.ಕೆ.ಸ್ವಾತಿ