
2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದಿಂದ ಶುಭ ಫಲವನ್ನು ನಿರೀಕ್ಷೆ ಮಾಡಬಹುದಾದ ರಾಶಿಗಳ ಪೈಕಿ ವೃಷಭವೂ ಒಂದು. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ವೃಷಭ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ಹನ್ನೊಂದನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇದು ಲಾಭ ಸ್ಥಾನ. ಅಂದರೆ ವೃಷಭ ರಾಶಿಯವರಿಗೆ ಅದೃಷ್ಟ- ಪಿತೃ ಸ್ಥಾನ ಹಾಗೂ ಕರ್ಮ ಸ್ಥಾನಾಧಿಪತಿ ಆದಂಥ ಶನಿಯು ಹನ್ನೊಂದನೇ ಮನೆಗೆ ಪ್ರವೇಶ ಆಗುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದು ನಿರಂತರವಾಗಿ ಪ್ರಯತ್ನ ಮಾಡುತ್ತಾ ಬರುತ್ತಿರುವವರಿಗೆ ಉತ್ತಮವಾದ ಅವಕಾಶಗಳು ದೊರೆಯಲಿವೆ. ಬಿಡುವು ಸಿಗದಷ್ಟು ಕೆಲಸಗಳು ಇದ್ದರೂ ಒಂದು ಬಗೆಯ ನೆಮ್ಮದಿ ಹಾಗೂ ತೃಪ್ತಿ ಇರುತ್ತದೆ.
ಇನ್ನು ಬಡ್ತಿ, ವೇತನ ಹೆಚ್ಚಳ ಅಥವಾ ಹುದ್ದೆಯ ನಿರೀಕ್ಷೆಯನ್ನು ಮಾಡುತ್ತಿರುವವರಿಗೆ ಅದು ಕೂಡ ದೊರೆಯುವ ಸಮಯ ಇದಾಗಿರುತ್ತದೆ. ಮೇಲಧಿಕಾರಿಗಳು ಅಥವಾ ಸಂಬಂಧಪಟ್ಟವರ ಎದುರು ನಿಮ್ಮ ಮನಸ್ಸಿನಲ್ಲಿ ಇರುವಂಥ ವಿಚಾರವನ್ನು ಹೇಳುವುದಕ್ಕೆ ಸಂಕೋಚ ಪಡಬಾರದು.
ಪಿತ್ರಾರ್ಜಿತ ಆಸ್ತಿ ವ್ಯಾಜ್ಯದಲ್ಲಿ ಏನಾದರೂ ಇದ್ದಲ್ಲಿ ಅದು ಬಗೆಹರಿಯುತ್ತದೆ. ಇದೇ ವೇಳೆ ಕುಟುಂಬದ ಆಸ್ತಿ ಪಾಲು ಮಾಡುವುದನ್ನು ನಿರೀಕ್ಷೆ ಮಾಡುತ್ತಾ ಇದ್ದಲ್ಲಿ ಅದು ಯಾವುದೇ ಸಮಸ್ಯೆ ಇಲ್ಲದಂತೆ ಮುಗಿಯುತ್ತದೆ. ನೀವು ಮಾಡಿದ ಪೂಜೆ- ಪುನಸ್ಕಾರ ಹಾಗೂ ಪುಣ್ಯ ಕಾರ್ಯಗಳ ಫಲ ದೊರೆಯುವಂಥ ಅವಧಿ ಇದಾಗಿರುತ್ತದೆ. ವಯಸ್ಸಿನಲ್ಲಿ ಹಿರಿಯರಾದವರ ಸಲಹೆ- ಸೂಚನೆ, ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಅನುಕೂಲಗಳು ಒದಗಿ ಬರಲಿವೆ.
ಕಟ್ಟಿರುವ ಮನೆಯನ್ನು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ, ಈ ತನಕ ಮನಸ್ಸಿಗೆ ಒಪ್ಪುವಂಥದ್ದು ಸಿಗುತ್ತಿಲ್ಲ ಎಂದಾದಲ್ಲಿ ಮೀನ ರಾಶಿಯ ಶನಿ ಸಂಚಾರ ಅವಧಿಯಲ್ಲಿ ದೊರೆಯುತ್ತದೆ. ಸ್ವಂತ ವ್ಯಾಪಾರ- ಉದ್ಯಮ, ವ್ಯವಹಾರಗಳನ್ನು ಮಾಡುತ್ತಾ ಇರುವವರು ಸರಕು- ಸೇವೆಯ ಬೆಲೆಯನ್ನು ಬಾಯಿ ಬಿಟ್ಟು ಕೇಳಿ, ಪಡೆಯಿರಿ. ಕೈಗೆ ಸೇರಬೇಕಾದ ಹಣವು ಸ್ವಲ್ಪ ವಿಳಂಬವಾದರೂ ಬಂದೇ ಬರುತ್ತದೆ. ಹನ್ನೊಂದನೇ ಮನೆಯ ಶನಿ ಸಂಚಾರ ಕಾಲವು ಹಲವು ಬಗೆಯಲ್ಲಿ ಒಳಿತನ್ನು ನಿರೀಕ್ಷೆ ಮಾಡಬಹುದಾದ ಸಮಯವಾಗಿದೆ. ದಿಢೀರ್ ಆಗಿ ಕೀರ್ತಿ, ಜನಪ್ರಿಯತೆ ದೊರೆಯಲಿದೆ ಹಾಗೂ ಪ್ರಭಾ ವಲಯವು ಸಹ ಹೆಚ್ಚಾಗುವ ಸಮಯ ಇದಾಗಿರಲಿದೆ.
– ಸ್ವಾತಿ ಎನ್.ಕೆ.