Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಕರ್ಕಾಟಕ ರಾಶಿ ಮೇಲೆ ಏನು ಪ್ರಭಾವ?
ಈ ಸಂಚಾರದೊಂದಿಗೆ ಕರ್ಕಾಟಕ ರಾಶಿಯವರಿಗೆ ಇಷ್ಟು ಸಮಯ ಬಹುವಾಗಿ ಕಾಡುತ್ತಿದ್ದ ಅಷ್ಟಮ ಶನಿಯ ದುಷ್ಪ್ರಭಾವವು ದೂರವಾಗಲಿದೆ. ಇನ್ನು ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ.

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಕರ್ಕಾಟಕ ರಾಶಿಯವರಿಗೆ ಇಷ್ಟು ಸಮಯ ಬಹುವಾಗಿ ಕಾಡುತ್ತಿದ್ದ ಅಷ್ಟಮ ಶನಿಯ ದುಷ್ಪ್ರಭಾವವು ದೂರವಾಗಲಿದೆ. ಇನ್ನು ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ಕರ್ಕಾಟಕ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ಒಂಬತ್ತನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಕಳತ್ರ ಹಾಗೂ ಆಯುಷ್ಯ ಸ್ಥಾನದ ಅಧಿಪತಿಯಾದ ಶನಿಯು ಒಂಬತ್ತನೇ ಸ್ಥಾನದಲ್ಲಿ ಇರುತ್ತದೆ. ಇಷ್ಟು ಸಮಯ ಅಷ್ಟಮ ಶನಿಯ ಪ್ರಭಾವದಿಂದ ನಾನಾ ಬಗೆಯಲ್ಲಿ ಕಷ್ಟಗಳನ್ನು ಪಡುತ್ತಿರುವ ಕರ್ಕಾಟಕ ರಾಶಿಯವರಿಗೆ ಸಮಸ್ಯೆಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗುತ್ತವೆ. ಮುಖ್ಯವಾಗಿ ಆರೋಗ್ಯದ ವಿಚಾರದಲ್ಲಿ ಸೂಕ್ತ ವೈದ್ಯರ ಮಾರ್ಗದರ್ಶನ ದೊರೆಯುತ್ತದೆ. ಆದರೆ ಮಾನಸಿಕವಾಗಿ ಬಹಳ ಕಿರಿಕಿರಿ ಇರುತ್ತದೆ. ಅದಕ್ಕೆ ಕಾರಣ ಏನೆಂದರೆ ಒಂದೇ ಕೆಲಸಕ್ಕೆ ಹಲವು ಸಲ ಪ್ರಯತ್ನಿಸಬೇಕಾಗುತ್ತದೆ. ಇನ್ನೇನು ಎಲ್ಲ ಕಾರ್ಯಗಳು ಮುಗಿಯಿತು, ಹಣವು ಕೈಗೆ ಸಿಗುತ್ತದೆ ಎಂದುಕೊಂಡಿದ್ದು ಮುಂದಕ್ಕೆ ಹೋಗುತ್ತದೆ.
ಆದ್ದರಿಂದ ಕೈ ಸೇರದ ಹಣವನ್ನು ನೆಚ್ಚಿಕೊಂಡು, ಬೇರೆಯವರಿಗೆ ಮಾತು ಕೊಡುವುದಕ್ಕೆ ಹೋಗಬೇಡಿ. ತಂದೆ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸ್ಥಿತಿ ಆತಂಕಕ್ಕೆ ಕಾರಣವಾಗಲಿದೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ಬರುತ್ತದೆ, ಆಸ್ತಿ- ಹಣ ಇಂಥವುಗಳ ನಿರೀಕ್ಷೆಯಲ್ಲಿ ಇರುವವರಿಗೆ ಅಂದುಕೊಂಡಂತೆ ಸನ್ನಿವೇಶ ಪೂರಕವಾಗಿ ಇರುವುದಿಲ್ಲ. ದಂಪತಿ ಮಧ್ಯೆ ಜಗಳ- ಕಲಹ ಉದ್ಭವಿಸಿದಲ್ಲಿ ಪರಸ್ಪರರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುವುದಕ್ಕೆ ಹೋಗಬೇಡಿ.
ಆಲಸ್ಯವನ್ನು ಮಾಡದೆ ಇದ್ದಲ್ಲಿ ಕೆಲಸಗಳು ಒಂದು ಪ್ರಯತ್ನದಲ್ಲಿ ಆಗದಂಥವು ಮೂರ್ನಾಲ್ಕು ಯತ್ನದಲ್ಲಿ ಆಗಲಿವೆ. ಆದರೆ ಉತ್ಸಾಹವನ್ನು ಕಾಯ್ದುಕೊಳ್ಳುವುದು ಸವಾಲಾಗಲಿದೆ. ಷೇರು, ಮ್ಯೂಚುವಲ್ ಫಂಡ್ಸ್ ಇಂಥದ್ದರಲ್ಲಿ ಹೂಡಿಕೆ ಮಾಡಬೇಕು ಎಂದಿರುವವರು ಅಥವಾ ಈಗಾಗಲೇ ಹಣವನ್ನು ಹಾಕುತ್ತಾ ಬರುತ್ತಿರುವವರು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಅಂದರೆ ಸಾಲ ಮಾಡಿ ಹಣ ಹಾಕುವುದು, ಎಮರ್ಜೆನ್ಸಿ ಫಂಡ್ ಅಂತ ಇಟ್ಟುಕೊಂಡಿರುವುದನ್ನು ಹೂಡಿಕೆ ಮಾಡದಿರುವುದು ಒಳ್ಳೆಯದು. ಮದುವೆ ನಿಶ್ಚಯ ಆಗಿದ್ದಲ್ಲಿ ಅಭಿಪ್ರಾಯ ಭೇದ ಉದ್ಭವಿಸದಂತೆ ನೋಡಿಕೊಳ್ಳಿ.
ಜೂಜು- ಬೆಟ್ಟಿಂಗ್ ಕಡೆಗೆ ತಿರುಗಿ ಕೂಡ ನೋಡಬೇಡಿ. ಈ ಅವಧಿಯಲ್ಲಿ ನಿಮಗೆ ಈಗ ಇರುವಂಥ ಸ್ನೇಹಿತರೋ ಅಥವಾ ಹೊಸದಾಗಿ ಆಗುವಂಥ ಸ್ನೇಹಿತರೋ ನಿಮಗೆ ಈ ರೀತಿಯ ವಿಚಾರಗಳ ಕಡೆಗೆ ಸೆಳೆಯಬಹುದು. ಅಥವಾ ನೀವು ಇಂಥವುಗಳ ಕಡೆಗೆ ಆಕರ್ಷಿತರಾಗುವ ಅವಕಾಶಗಳಿವೆ, ಎಚ್ಚರದಿಂದ ಇರುವುದು ಮುಖ್ಯ.
-ಸ್ವಾತಿ ಎನ್.ಕೆ.




