
2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಮೀನ ರಾಶಿಯವರಿಗೆ ಜನ್ಮ ರಾಶಿಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಸಾಡೇಸಾತ್ ಶನಿಯ ಏಳೂವರೆ ವರ್ಷದಲ್ಲಿ ಎರಡೂವರೆ ವರ್ಷ ಪೂರ್ತಿಯಾಗಿದ್ದು, ಇದೀಗ ಎರಡನೇ ಹಂತದ ಆರಂಭಕ್ಕೆ ಬಂದಂತಾಗುತ್ತದೆ. ಈ ಅವಧಿಯಲ್ಲಿ ಆರೋಗ್ಯ, ಹಣ, ಉದ್ಯೋಗ, ವ್ಯವಹಾರ ಹೀಗೆ ನಾನಾ ವಿಚಾರದಲ್ಲಿ ಅಸಹಾಯಕ ಸ್ಥಿತಿಗೆ ನೀವು ತಲುಪುತ್ತೀರಿ. ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಮೀನ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮಗೆ ವ್ಯಯಾಧಿಪತಿ ಹಾಗೂ ಲಾಭಾಧಿಪತಿ ಎರಡೂ ಆದಂಥ ಶನಿ ಗ್ರಹವು ಜನ್ಮ ರಾಶಿಗೆ ಬರಲಿದೆ. ಅಂದರೆ ಇದು ಒಂದನೇ ಮನೆ ಆಗುತ್ತದೆ. ನಿರ್ಧಾರ- ತೀರ್ಮಾನಗಳನ್ನು ಕೈಗೊಳ್ಳುವುದರಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತೀರಿ. ಅತಿಯಾದ ಲಾಭದಾಸೆಗೆ ಬಿದ್ದು, ನಿಮ್ಮ ಕೈಲಿ ಇರುವಂಥ ಬಂಡವಾಳವನ್ನೂ ಕಳೆದುಕೊಳ್ಳುವಂತೆ ಆಗುತ್ತದೆ. ಇನ್ನೇನು ನಿಮ್ಮ ಕೈಗೆ ಸೇರಿತು ಅಂದುಕೊಂಡ ಹಣವೋ ಆಸ್ತಿಯೋ ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗುತ್ತದೆ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ನಾನಾ ಕಡೆಗಳಿಂದ ಕೇಳಿಸಿಕೊಳಬೇಕಾಗುತ್ತದೆ.
ಈ ಅವಧಿಯಲ್ಲಿ ನಿಮ್ಮ ಬಳಿ ಇರುವ ಮೊತ್ತವನ್ನು ಷೇರು ಮಾರುಕಟ್ಟೆಯಂಥ ಕಡೆಗೆ ಹೂಡಿಕೆ ಮಾಡದಿರುವುದು ಕ್ಷೇಮ. ಸಟ್ಟಾ ವ್ಯವಹಾರಗಳಲ್ಲಿ ಹಣವನ್ನೇನಾದರೂ ಹಾಕಿದಿರೋ ಭಾರೀ ನಷ್ಟವನ್ನು ಕಾಣುವಂತೆ ಆಗುತ್ತದೆ. ನಿಮ್ಮ ಹೆಸರಿಗೆ ಮಸಿ ಬಳಿಯುವುದರಲ್ಲಿ ವಿರೋಧಿಗಳು ಯಶಸ್ಸು ಕಾಣುತ್ತಾರೆ. ಗಂಭೀರವಾದ ಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ ಎಂದು ವೈದ್ಯಕೀಯ ಪರೀಕ್ಷೆಗಳಲ್ಲಿ ಕಂಡುಬರಬಹುದು. ಅಥವಾ ದೈಹಿಕವಾಗಿ ಆಗುವಂಥ ಕೆಲವು ಬದಲಾವಣೆಗಳು ನಿಮ್ಮನ್ನು ಭಾರೀ ಆತಂಕಕ್ಕೆ ದೂಡಬಹುದು. ಸೂಕ್ತ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳದೆ ನಿಮಗೆ ನೀವೇ ಏನೇನೋ ಅಂದುಕೊಳ್ಳಬೇಡಿ.
ವಿದ್ಯಾರ್ಥಿಗಳಿಗೆ ಈಗ ಇರುವ ಕೋರ್ಸ್ ಬೇಡ ಬೇರೆಯದ್ದಕ್ಕೆ ಸೇರೋಣ ಎಂದೆನಿಸಿ, ಬದಲಾವಣೆ ಮಾಡಿಕೊಂಡ ನಂತರದಲ್ಲಿ ಅದು ಕೂಡ ಬೇಸರ ಆಗುವುದಕ್ಕೆ ಶುರುವಾಗುತ್ತದೆ. ವಿದ್ಯಾಭ್ಯಾಸದಲ್ಲಿ ನಾನಾ ಬಗೆಯ ಅಡೆಚಣೆಗಳು ಕಾಣಿಸಿಕೊಳ್ಳುತ್ತವೆ. ಸ್ನೇಹಿತರು ಸೇರಿದರು ಎಂಬ ಕಾರಣಕ್ಕೆ ಅವರಿಂದ ಪ್ರಭಾವಿತರಾಗಿ ನಿಮಗೆ ಕಷ್ಟ ಆಗಬಹುದಾದ, ಇಷ್ಟವಿಲ್ಲದ ಕೋರ್ಸ್ ತೆಗೆದುಕೊಳ್ಳಬೇಡಿ. ಮನೆಯಲ್ಲಿನ ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ.
ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಬಹಳ ಕಿರಿಕಿರಿ ಇರುತ್ತದೆ. ಬೇರೆ ಉದ್ಯೋಗ ಸಿಗುತ್ತದೋ ಇಲ್ಲವೋ ಇರುವ ಕೆಲಸವಂತೂ ಬಿಟ್ಟುಬಿಡೋಣ ಎಂದೆನಿಸಿ, ನಿಮ್ಮಲ್ಲಿ ಕೆಲವರು ಕೆಲಸವನ್ನೂ ಬಿಟ್ಟುಬಿಡುತ್ತೀರಿ. ಮತ್ತೊಂದು ಉದ್ಯೋಗ ಹುಡುಕಿಕೊಳ್ಳದೆ ಇರುವ ಕೆಲಸ ಬಿಡಬೇಡಿ. ಇಲ್ಲದಿದ್ದರೆ ವರ್ಷಗಳ ಕಾಲ ಮನೆಯಲ್ಲಿ ಇರುವಂತಾಗುತ್ತದೆ.
ಕುಟುಂಬ ಸದಸ್ಯರ ಜೊತೆಗೆ ದ್ವೇಷ- ಪ್ರತೀಕಾರ ಕಟ್ಟಿಕೊಳ್ಳದಿರುವುದು ಕ್ಷೇಮ.
ಶನಿ ಗ್ರಹದ ಶಾಂತಿ- ಹೋಮ ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಇದಕ್ಕೆ ಹೆಚ್ಚಿನ ಖರ್ಚಾಗುತ್ತದೆ, ತಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಅನ್ನುವವರು ಶನೈಶ್ಚರ ದೇವಸ್ಥಾನದಲ್ಲಿ ಶನಿ ದರ್ಶನ, ಅಭಿಷೇಕ, ದೀಪ ಹಚ್ಚುವುದನ್ನು ಮಾಡಬಹುದು ಅಥವಾ ನೀಲಿ ಬಟ್ಟೆಯಲ್ಲಿ ಮೂರು-ನಾಲ್ಕು ಹಿಡಿ ಕರಿ ಎಳ್ಳನ್ನು ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು ಹಾಗೂ ದಕ್ಷಿಣೆ ಸಹಿತ ದಾನ ಮಾಡಬಹುದು. ಇನ್ನು ಯಾರಿಗೆ ಸಾಧ್ಯವೋ ಅವರು ದಶರಥ ಕೃತ ಶನಿ ಸ್ತೋತ್ರದ ಶ್ರವಣ (ಕೇಳಿಸಿಕೊಳ್ಳುವುದು) ಅಥವಾ ಪಾರಾಯಣ ಮಾಡಬಹುದು.
-ಸ್ವಾತಿ ಎನ್.ಕೆ.