Shani Vakratyaga 2025: ನ. 28ರಂದು ಶನಿ ವಕ್ರತ್ಯಾಗ; ಯಾವ ರಾಶಿಯವರಿಗೆ ಬಂಪರ್, ಯಾವ ರಾಶಿಯವರಿಗೆ ಕಷ್ಟ?
ಇದೇ ನವೆಂಬರ್ ತಿಂಗಳ 28ನೇ ತಾರೀಕು ಶನಿ ಗ್ರಹ “ವಕ್ರ ತ್ಯಾಗ” ಮಾಡಲಿದೆ. ಜುಲೈ 13ನೇ ತಾರೀಕಿನಿಂದ ವಕ್ರ ಗತಿಯಲ್ಲಿ ಸಂಚಾರ ಮಾಡುತ್ತಿದ್ದ ಶನೈಶ್ಚರನಿಂದಾಗಿ ಕೆಲವು ರಾಶಿಗಳಿಗೆ ತಾತ್ಕಾಲಿಕವಾಗಿ ಅನುಕೂಲಗಳು ಆಗಿತ್ತು. ಮತ್ತೆ ಕೆಲವು ರಾಶಿಗಳಿಗೆ ಇದೇ ಅವಧಿಯಲ್ಲಿ ಸಮಸ್ಯೆಗಳು ಎದುರಾಗಿದ್ದವು. ಆದ್ದರಿಂದ ಯಾವ್ಯಾವ ರಾಶಿಯವರಿಗೆ ಈ ತಿಂಗಳ ಇಪ್ಪತ್ತಾರನೇ ತಾರೀಕಿನಿಂದ ಏನೇನು ಫಲ ಇದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಶನೈಶ್ಚರ ಅಥವಾ ಶನಿ ಗ್ರಹ ಒಂದು ರಾಶಿಯಲ್ಲಿ ಮೂವತ್ತು ತಿಂಗಳು ಅಥವಾ ಎರಡೂವರೆ ವರ್ಷ ಇರುತ್ತದೆ. ಅದರಲ್ಲಿ ಕೆಲವು ಬಾರಿ ವಕ್ರೀ ಸಂಚಾರ ಮಾಡುತ್ತದೆ. ಆ ಅವಧಿಯಲ್ಲಿ ಶನಿಯ ಪ್ರಭಾವ ತೀಕ್ಷ್ಣವಾಗಿರುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ವಕ್ರಸ್ಯ ಅಧಿಕ ಬಲಂ ಎಂಬ ಪ್ರಮಾಣ ಇದೆ. ವಕ್ರ ಗತಿಯಲ್ಲಿ ಸಂಚರಿಸುವ ಗ್ರಹ ಬಲಿಷ್ಠವಾಗಿರುತ್ತದೆ ಮತ್ತು ಫಲವನ್ನು ಸಹ ಬಲವಾಗಿ ನೀಡುತ್ತದೆ. ರಾಹು- ಕೇತು ಎರಡನ್ನು ಬಿಟ್ಟು ಉಳಿದ ಗ್ರಹಕ್ಕೆ ಇದು ಅನ್ವಯ. ಏಕೆಂದರೆ ರಾಹು- ಕೇತು ಚಲನೆಯೇ ಅಪ್ರದಕ್ಷಿಣೆಯಾಗಿರುತ್ತದೆ. ಈಗ ಮತ್ತೆ ಶನಿ ವಕ್ರ ತ್ಯಾಗದ ವಿಚಾರಕ್ಕೆ ಬರುವುದಾದರೆ, ಜುಲೈ 13ನೇ ತಾರೀಕಿನಿಂದ ವಕ್ರ ಗತಿಯಲ್ಲಿ ಸಂಚಾರ ಮಾಡುತ್ತಿದ್ದ ಈ ಮಂದ ಗ್ರಹವು ಇದೇ ನವೆಂಬರ್ 28ನೇ ತಾರೀಕು ವಕ್ರತ್ಯಾಗ ಮಾಡುತ್ತದೆ.
ಹೀಗೆ ಮಾಡುವುದರಿಂದ ಮೇಷ, ಮಿಥುನ, ಸಿಂಹ, ವೃಶ್ಚಿಕ, ಧನುಸ್ಸು ಹಾಗೂ ಮೀನ ರಾಶಿಯವರ ಮೇಲೆ ನಕಾರಾತ್ಮಕ ಪ್ರಭಾವ ತೀವ್ರ ಆಗುತ್ತದೆ. ವೃಷಭ, ತುಲಾ, ಮಕರ ರಾಶಿಯವರಿಗೆ ಶುಭ ಫಲಗಳು ದೊರೆಯುವುದಕ್ಕೆ ಮತ್ತೆ ಆರಂಭವಾಗುತ್ತದೆ. ಮುಖ್ಯವಾಗಿ ಕುಂಭ ರಾಶಿಯವರು ಅನುಭವಿಸುತ್ತಿರುವ ಯಾತನೆ ಕಡಿಮೆ ಆಗುತ್ತದೆ. ದೇಹದ ಆರೋಗ್ಯ ವಿಚಾರದಲ್ಲಿ ಕುಂಭ ರಾಶಿಯವರಿಗೆ ಈಗ ಎದುರಿಸುತ್ತಿರುವ ತೊಂದರೆಗಳು ಕಡಿಮೆ ಆಗುತ್ತಾ ಬರುತ್ತದೆ. ಅದಕ್ಕೆ ಪೂರಕವಾಗಿ ಆರನೇ ಮನೆ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಗ್ರಹವು ಡಿಸೆಂಬರ್ ಐದನೇ ತಾರೀಕಿನಿಂದ ಐದನೇ ಮನೆ ಆಗುವ ಮಿಥುನ ರಾಶಿಗೆ ಬರುವುದು ಕುಂಭ ರಾಶಿಯವರಿಗೆ ಮತ್ತೂ ಒಳ್ಳೆ ವಿಚಾರ ಆಗಲಿದೆ.
ಇದೀಗ ಶನಿ ವಕ್ರ ತ್ಯಾಗ ಮಾಡುವುದರ ಫಲ ಮೇಷದಿಂದ ಮೀನ ರಾಶಿಯ ತನಕ ಯಾರಿಗೆ ಹೇಗಿರುತ್ತದೆ ಎಂಬ ವಿವರ ಹೀಗಿದೆ:
ಮೇಷ:
ಕಳೆದ ಜುಲೈನಿಂದ ಈಚೆಗೆ ನಿಮಗೆ ಲಾಭ ತಂದುಕೊಟ್ಟಿದ್ದ ವ್ಯವಹಾರಗಳಿಂದ ಆಚೆ ಬರುವುದಕ್ಕೆ ಸಾಧ್ಯವಾದಲ್ಲಿ ಲಾಭ ತೆಗೆದುಕೊಂಡು (ಪ್ರಾಫಿಟ್ ಬುಕ್ಕಿಂಗ್) ಹೊರಗೆ ಬಂದು ಬಿಡುವುದು ಒಳ್ಳೆಯದು. ಹೊಸ ಹೂಡಿಕೆಗಳನ್ನು ಇನ್ನು ಮುಂದೆ ಮಾಡುವ ಮುನ್ನ ಸಾವಿರ ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಇನ್ನು ನಿಮಗೆ ತಿಳಿವಳಿಕೆ ಇಲ್ಲದ ಅಥವಾ ಹೊಸದಾದ ವ್ಯವಹಾರಕ್ಕೆ ಹೆಜ್ಜೆ ಇಡುವುದಕ್ಕೆ ಹೋಗಬೇಡಿ. ಅತಿಯಾದ ಬುದ್ಧಿವಂತಿಕೆ- ಅತಿಯಾದ ಆತ್ಮವಿಶ್ವಾಸ ಎರಡೂ ಒಳ್ಳೆಯದಲ್ಲ. ಭೂಮಿ ವ್ಯವಹಾರಗಳು ವ್ಯಾಜ್ಯಗಳಾಗಿ ಪರಿವರ್ತನೆ ಆಗಬಹುದು. ಕಾನೂನು ವ್ಯಾಪ್ತಿಯಲ್ಲಿರುವ ವಿಚಾರಗಳಿಗೆ ಮಾತ್ರ ತಲೆ ಹಾಕಿ. ಅಗತ್ಯ ಕಂಡುಬಂದಲ್ಲಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಿ. ಹೊಸದಾಗಿ ದೊಡ್ಡ ಪ್ರಾಜೆಕ್ಟ್ ಗಳಿಗೆ ಹಣ ಹಾಕದಿರುವುದು ಕ್ಷೇಮ.
ವೃಷಭ:
ಉದ್ಯೋಗ ಸ್ಥಳದಲ್ಲಿ, ವೃತ್ತಿ ಮಾಡುವ ಕಡೆಗಳಲ್ಲಿ ಕಳೆದ ನಾಲ್ಕು ತಿಂಗಳಿಂದ ಕಿರಿಕಿರಿ ಅನುಭವಿಸುತ್ತಿರುವವರಿಗೆ ಅದು ಸಂಪೂರ್ಣ ನಿವಾರಣೆ ಆಗುತ್ತದೆ. ನಿಮ್ಮಲ್ಲಿ ಯಾರಿಗೆ ಉತ್ತಮ ದಶಾ- ಭುಕ್ತಿ ಸಹ ನಡೆಯುತ್ತಿದೆ ಅಂಥವರು ಬಡ್ತಿಯನ್ನು ಸಹ ನಿರೀಕ್ಷೆ ಮಾಡಬಹುದು. ತಂದೆ ಅಥವಾ ತಂದೆ ಸಮಾನರಾದವರಿಂದ ನಿಮಗೆ ಬರಬೇಕಾದ ಹಣಕಾಸು ಇದ್ದಲ್ಲಿ ಅದು ನಿಮ್ಮ ಕೈ ಸೇರುವಂಥ ಯೋಗ ಇದೆ. ಜಮೀನು, ಸೈಟು ಅಥವಾ ಆಸ್ತಿ ವಿಚಾರದಲ್ಲಿ ಕಾಗದ- ಪತ್ರ, ದಾಖಲೆಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಮುಖ್ಯವಾಗಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಗಳು ಒಳ್ಳೆ ರಿಟರ್ನ್ಸ್ ನೀಡಲಿವೆ. ಒಂದು ಕೆಲಸಕ್ಕೆ ಹಲವು ಬಾರಿದ ಅಲೆದಾಡುತ್ತಿದ್ದ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಸಲೀಸಾಗಿ ಕೆಲಸ- ಕಾರ್ಯಗಳು ಆಗಲಿವೆ.
ಮಿಥುನ:
ಇದು ದುಃಖದ ಸಮಯ ಆಗಿರುತ್ತದೆ. ಒಂದಲ್ಲಾ ಒಂದು ಕಾರಣಕ್ಕೆ ನೋವು- ಹಿಂಸೆ, ಮುಜುಗರ ಅನುಭವಿಸುವಂತೆ ಆಗುವುದು ಈ ರೀತಿ ತೊಂದರೆಗಳನ್ನು ಎದುರಿಸಲಿದ್ದೀರಿ. ನಿಮ್ಮ ಆರೋಗ್ಯದ ಮೇಲೂ ಗಮನವನ್ನು ನೀಡಿ. ತಮ್ಮ ಸಾಲಕ್ಕೆ ಜಾಮೀನು ನೀಡುವಂತೆ ಯಾರಾದರೂ ಕೇಳಿಕೊಂಡು ಬಂದಲ್ಲಿ “ಆಗುವುದಿಲ್ಲ” ಎಂಬುದನ್ನು ನೇರಾನೇರ ಹೇಳಿಬಿಡುವುದು ಉತ್ತಮ. ಅಥವಾ ಈಗಾಗಲೇ ನೀವು ಯಾರಿಗಾದರೂ ಸಾಲದ ವಿಷಯಕ್ಕೆ ಜಾಮೀನು ನೀಡಿದ್ದಲ್ಲಿ ಅದರ ಮರುಪಾವತಿ ಸರಿಯಾಗಿ ಆಗುತ್ತಿದೆಯಾ ಎಂಬುದನ್ನು ವಿಚಾರಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಹಣ ಕಟ್ಟುವಂತೆ ಫಾಲೋ ಅಪ್ ಮಾಡಿ. ನಿಮ್ಮ ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಕಡೆಗೆ ಲಕ್ಷ್ಯವನ್ನು ನೀಡಬೇಕು. ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಇನ್ನು ಆರು ತಿಂಗಳು ಮಾಡದಿರುವುದು ಉತ್ತಮ.
ಕರ್ಕಾಟಕ:
ಈ ಶನಿ ವಕ್ರ ತ್ಯಾಗದ ಸಮಾಧಾನ ಹಾಗೂ ಅತಿ ದೊಡ್ಡ ನಿಟ್ಟುಸಿರು ಬಿಟ್ಟಂತೆ ಆಗುವ ರಾಶಿ ಇದ್ದರೆ ಮೊದಲನೆಯದು ನಿಮ್ಮದೇ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಲಿದೆ. ಹಣಕಾಸಿನ ವಿಚಾರಕ್ಕೆ ನೀವು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಾರ್ಗೋಪಾಯಗಳು ತೆರೆದುಕೊಳ್ಳಲಿವೆ. ದಂಪತಿ ಮಧ್ಯ ಭಿನ್ನಾಭಿಪ್ರಾಯ ಆಗಿ, ಅದೇನಾದರೂ ವಿಚ್ಛೇದನ ತನಕ ಹೋಗಿದ್ದಲ್ಲಿ ನಿಮ್ಮಲ್ಲಿ ಕೆಲವರಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಜೀರ್ಣಾಂಗ, ಮೇಧೋಜೀರಕ ಗ್ರಂಥಿಗಳು, ಬೆನ್ನು ನೋವು, ಕಾಲಿನ ಮೀನಖಂಡದ ವಿಪರೀತ ನೋವು, ರಾತ್ರಿ ವೇಳೆ ಸರಿಯಾದ ನಿದ್ರೆ ಇಲ್ಲದಿರುವುದು ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಾ ಇರುವವರಿಗೆ ಸೂಕ್ತ ವೈದ್ಯೋಪಚಾರ ದೊರೆತು, ಆರೋಗ್ಯ ಸುಧಾರಣೆ ಕಾಣುತ್ತಾ ಬರಲಿದೆ. ಕುತ್ತಿಗೆ ತನಕ ಬಂದಂಥ ಕೆಲವು ಹಣಕಾಸಿನ ಸಮಸ್ಯೆಗಳು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.
ಸಿಂಹ:
ಖರ್ಚು ವಿಪರೀತಕ್ಕೆ ಹೋಗುತ್ತದೆ. ಸಿಕ್ಕಾಪಟ್ಟೆ ಸಿಟ್ಟು, ಯಾವುದನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಮನಸ್ಥಿತಿಯಿಂದ ನರಳುವಂತೆ ಆಗಲಿದೆ. ನಿಮ್ಮ ಆರೋಗ್ಯ ವಿಚಾರದಲ್ಲಿ ಏರುಪೇರುಗಳು ಕಾಣಿಸಿಕೊಳ್ಳಲಿದೆ. ದೇಹದ ತೂಕ, ಕೊಲೆಸ್ಟ್ರಾಲ್, ಗ್ಯಾಸ್ಟ್ರಿಕ್ ಸಮಸ್ಯೆ ಇಂಥವುಗಳು ಈಗಾಗಲೇ ಇದ್ದಲ್ಲಿ ಸರಿಯಾದ ಫಾಲೋ ಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಇನ್ನು ನೀವು ಯಾರಿಂದ ಸಾಲ ಪಡೆದುಕೊಂಡಿದ್ದೀರಿ, ಅವರಿಗೆ ಸಮಯಕ್ಕೆ ಸರಿಯಾಗಿ ಹಿಂತಿರುಗಿಸುವುದಕ್ಕೆ ಪ್ರಯತ್ನಿಸಿ. ನಿಮಗೆ ಶತ್ರುಗಳ ತೊಂದರೆ ಸಹ ಜಾಸ್ತಿ ಆಗಲಿದೆ. ಕೋರ್ಟ್- ಕಚೇರಿಯಲ್ಲಿ ಪ್ರಕರಣಗಳು ಬಾಕಿ ಉಳಿದಿದ್ದಲ್ಲಿ ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಆದಲ್ಲಿ ಅದನ್ನು ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಅವಮಾನವನ್ನು ಎದುರಿಸುವಂತೆ ಆಗಲಿದೆ. ಈ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಲ್ಲಿ ಮತ್ತೆ ಸಿಗುವುದು ತುಂಬ ಕಷ್ಟವಾಗುತ್ತದೆ.
ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಅದ್ಯಾತ್ಮಿಕ ರಹಸ್ಯವೇನು ಗೊತ್ತಾ?
ಕನ್ಯಾ:
ನಿಮ್ಮ ಸುತ್ತ ಮುತ್ತ ಯಾರಿದ್ದಾರೆ, ಯಾರು ಇಷ್ಟು ಸಮಯ ನಿಮಗೆ ಅನುಕೂಲವಾಗಿ ಕೆಲಸ ಮಾಡುತ್ತಿದ್ದರು ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಲಿದೆ. ನಿಮಗೆ ಬರಬೇಕಾಗಿರುವ, ನೀವು ಈಗಾಗಲೇ ಕೆಲಸ ಮಾಡಿದ್ದರ ಬಾಕಿ ಬರಬೇಕಾಗಿರುವುದು ಬಾರದಂತೆ ಆಗಲಿದೆ. ನಿಮ್ಮಲ್ಲಿ ಯಾರು ಭೂಮಿ ಖರೀದಿ ಮಾಡಿ, ಅದರಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೀರಿ, ಅಂಥವರಿಗೆ ಹಣಕಾಸಿಗೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿವಾಹ ನಿಶ್ಚಿತಾರ್ಥ ಆಗಿರುವವರು ಮಾತುಕತೆ ಆಡುವಾಗ ಜೋಪಾನವಾಗಿರಬೇಕು. ಏಕೆಂದರೆ, ದಶಾ- ಭುಕ್ತಿಯೂ ಅನುಕೂಲಕರವಾಗಿಲ್ಲ ಅಂತಾದಲ್ಲಿ ಮದುವೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ದಂಪತಿ ಮಧ್ಯೆ ಒಂದಲ್ಲಾ ಒಂದು ಕಾರಣಕ್ಕೆ ವಿರಸ, ಮನಸ್ತಾಪ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ವಿದೇಶ ಪ್ರಯಾಣ ಮಾಡಬೇಕು ಎಂದಿರುವವರಿಗೆ ನಾನಾ ಬಗೆಯ ಅಡೆತಡೆಗಳು ಕಾಣಿಸಬಹುದು ಎಚ್ಚರ.
ತುಲಾ:
ಆದಾಯ- ಲಾಭದ ಹರಿವಿನಲ್ಲಿ ಇದ್ದಂಥ ಅಡೆತಡೆಗಳು ನಿವಾರಣೆ ಆಗಲಿದೆ. ದಂಪತಿ ಮಧ್ಯೆ ಮನಸ್ತಾಪ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಮುಂದಕ್ಕೆ ಹಾಕಿಕೊಂಡು ಬರುತ್ತಿದ್ದ ಕೆಲವು ವಿಚಾರಗಳಲ್ಲಿ ತಕ್ಷಣವೇ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ನಾಜೂಕಾದ ಪರಿಸ್ಥಿತಿಯಲ್ಲಿ ಇರುವಂಥ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರಿಗೆ ಪಿತ್ರಾರ್ಜಿತವಾದ ಆಸ್ತಿ ಬರಬೇಕಾಗಿರುತ್ತದೆ ಅಂಥವರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮ್ಮ ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ತೀವ್ರತರವಾದ ಜ್ವರ, ವಾಂತಿ, ಭೇದಿ ಇಂಥ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಸಿ. ದೇವರಿಗೆ ಹೊತ್ತಿದ್ದ ಹರಕೆಗಳನ್ನು ಪೂರೈಸಿದಲ್ಲಿ ಈವರೆಗಿನ ಎಲ್ಲ ತಡೆಗಳು ನಿವಾರಣೆ ಆಗಲಿವೆ.
ವೃಶ್ಚಿಕ:
ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆ ಇತ್ಯಾದಿ ವಿಚಾರಗಳು ನಿಮಗೆ ಚಿಂತೆಯಾಗಿ ಪರಿಣಮಿಸಲಿವೆ. ಈ ಹಿಂದೆ ನಿಮ್ಮಿಂದ ಆಗಿದ್ದ ತಪ್ಪು ಈಗ ದೊಡ್ಡ ಸಮಸ್ಯೆಯಾಗಿ ತಲೆ ಎತ್ತಲಿವೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗಲಿದೆ. ನಿಮ್ಮಲ್ಲಿ ಕೆಲವರು ಉದ್ಯೋಗವನ್ನೇ ಬಿಡುವ ನಿರ್ಧಾರಕ್ಕೆ ಬರಬಹುದು. ಸಣ್ಣ- ಪುಟ್ಟದು ಎಂದು ಯಾವ ವಿಷಯವನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಯಮ- ಕಾನೂನು ಮೀರಿ ಯಾವುದೇ ಕೆಲಸವನ್ನು ಮಾಡದಿರಿ. ಇನ್ನು ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ಜಾಸ್ತಿ ಲಕ್ಷ್ಯ ವಹಿಸಿ. ಅದರಲ್ಲೂ ಕೆಲವರು ಪದೇಪದೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಗಲಿದೆ. ಇಷ್ಟು ಸಮಯ ನೀವು ಉಳಿಸಿಕೊಂಡು ಬಂದಿದ್ದ ವರ್ಚಸ್ಸು, ಜನಪ್ರಿಯತೆಗೆ ಪೆಟ್ಟು ಬೀಳಲಿದ್ದು, ನಿಮಗಿರುವ ಸ್ಥಾನ- ಮಾನ, ಹುದ್ದೆಯನ್ನು ಬಿಟ್ಟುಕೊಡುವಂತೆ ಸಹ ಆಗಬಹುದು.
ಧನುಸ್ಸು:
ಕೂಡು ಕುಟುಂಬದಲ್ಲಿ ಇರುವಂಥವರಾದರೆ ಮನೆಯಿಂದ ಪ್ರತ್ಯೇಕ ಹೋಗಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಪೈಕಿ ಕೆಲವರು ಇದಕ್ಕೆ ಈಗಾಗಲೇ ಸಿದ್ಧತೆ ಕೂಡ ನಡೆಸಿರಬಹುದು. ಅಥವಾ ಮದುವೆ ಆಗಿ, ಪ್ರತ್ಯೇಕವಾಗಿ ಮನೆ ಮಾಡುವಂಥ ಸಾಧ್ಯತೆ ಸಹ ಇದೆ. ದೇಹದ ತೂಕ ವಿಪರೀತ ಹೆಚ್ಚಾಗಬಹುದು. ದೀರ್ಘಾವಧಿ ಕಾಯಿಲೆಗಳಾದ ಮಧುಮೇಹ- ರಕ್ತದೊತ್ತಡಕ್ಕೆ ಔಷಧ ತೆಗೆದುಕೊಳ್ಳುತ್ತಾ ಇದ್ದಲ್ಲಿ ಡೋಸ್ ಹೆಚ್ಚಳ ಮಾಡಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗುತ್ತದೆ. ಮನೆ ದುರಸ್ತಿ, ವಾಹನ ರಿಪೇರಿ ಇಂಥವುಗಳಿಗೆ ಸಿಕ್ಕಾಪಟ್ಟೆ ಖರ್ಚು ಮಾಡುವಂತಾಗುತ್ತದೆ. ಅಷ್ಟಾದರೂ ಅದು ಸರಿ ಹೋಗದೆ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಬಾಯಿಯ ಆರೋಗ್ಯದ ಕಡೆಗೆ ಗಮನವನ್ನು ನೀಡಿ. ಸಣ್ಣ- ಪುಟ್ಟದಾದರೂ ಶಸ್ತ್ರಚಿಕಿತ್ಸೆ ಮಾಡಿಸುವಂಥ ಸನ್ನಿವೇಶ ಎದುರಾಗಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.
ಮಕರ:
ಸಾಡೇಸಾತ್ ಮುಗಿದಿದೆ, ಅನುಕೂಲಕರವಾದ ಸಮಯ ಶುರುವಾಗಿದೆ ಎನ್ನುತ್ತಿದ್ದಾರಾದರೂ ಅದರ ಅನುಭವ ಆಗುತ್ತಿಲ್ಲ ಅನ್ನುತ್ತಿದ್ದವರಿಗೆ ಈಗ ಸಮಾಧಾನದ ನಿಟ್ಟುಸಿರು ಬಿಡುವಂಥ ಕಾಲ. ಆರೋಪ- ನಿಂದೆ ಈಗಾಗಲೇ ಎದುರಿಸುತ್ತಾ ಇರುವವರಿಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ, ಕೋರ್ಟ್- ಕಚೇರಿ ವ್ಯಾಜ್ಯಗಳಲ್ಲಿ ಹೈರಾಣ ಆಗಿರುವವರಿಗೆ ತಾತ್ಕಾಲಿಕವಾಗಿ ನಿರಾಳ ಆಗುವಂಥ ಸಾಧ್ಯತೆ ಇದೆ. ಮುಖ್ಯವಾಗಿ ನಿಮ್ಮ ಬಗ್ಗೆ ಇರುವಂಥ ನಕಾರಾತ್ಮಕ ಭಾವನೆಯನ್ನು ತೊಡೆದುಕೊಳ್ಳಲು ವೇದಿಕೆ ದೊರೆಯಲಿದೆ. ಜುಲೈನಿಂದ ಈಚೆಗೆ ಆರೋಗ್ಯ ಸಮಸ್ಯೆಯಿಂದ ಆತಂಕಕ್ಕೆ ಗುರಿ ಆಗಿರುವವರಿಗೆ, ಸಂಸಾರದಲ್ಲಿ ಕಿರಿಕಿರಿ ಅನುಭವಿಸುತ್ತಾ ಇರುವವರಿಗೆ, ಹಣಕಾಸಿನ ಹರಿವು ಸಮಾಧನಕರವಾಗಿಲ್ಲ ಎನ್ನುವವರಿಗೆ ಈ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ನಿಮಗಿಂತ ಬಲಿಷ್ಠರಾದವರ ವೈರತ್ವ ಕಟ್ಟಿಕೊಳ್ಳದಂತೆ ಎಚ್ಚರಿಕೆಯನ್ನು ವಹಿಸಿ.
ಕುಂಭ:
ಕಳೆದ ನಾಲ್ಕು- ನಾಲ್ಕೂವರೆ ತಿಂಗಳಿಂದ ತೀವ್ರತರದ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ಸೂಕ್ತ ಔಷಧೋಪಚಾರ ದೊರೆಯಲಿದೆ. ನೀವು ಯಾವ ವಿಚಾರಕ್ಕೆ ಪೂರ್ತಿಯಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರೋ ನಿಮಗೆ ಮತ್ತೊಮ್ಮೆ ವಿಶ್ವಾಸ ಮೂಡಲಿದೆ. ಆದರೆ ನೀವು ದುರ್ಗಾದೇವಿ ಆರಾಧನೆಯನ್ನು ಮಾಡುವುದು ಬಹಳ ಮುಖ್ಯ. ಸ್ವಲ್ಪ ಮಟ್ಟಿನ ಚೇತರಿಕೆ ಕಾಣಿಸಿಕೊಂಡಿತು ಎಂಬ ಕಾರಣಕ್ಕೆ ಅತ್ಯುತ್ಸಾಹದಿಂದ ಎಲ್ಲ ಕೆಲಸವನ್ನು ಮಾಡಲು ಹೊರಟು ಬಿಡಬೇಡಿ. ಸಂಗಾತಿಯ ಮಾತನ್ನು ಗೌರವಿಸುವುದು ಬಹಳ ಮುಖ್ಯ. ನಿಮಗೆ ಈ ಅವಧಿಯಲ್ಲಿ ಕೆಲವರು ತಾವಾಗಿಯೇ ಹಣವನ್ನು ಸಾಲವಾಗಿ ನೀಡುವುದಕ್ಕೆ ಮುಂದಾಗುತ್ತಾರೆ. ಬಡ್ಡಿಯೇ ಇಲ್ಲ ಅಂತಲೋ ಅಥವಾ ಕಡಿಮೆ ಬಡ್ಡಿ ಅಂತಲೋ ಸಾಲ ಪಡೆದುಕೊಂಡಲ್ಲಿ ಆ ನಂತರ ಪಡಿಪಾಟಲು ಪಡುವಂತೆ ಆಗಲಿದೆ.
ಮೀನ:
ನಿಮಗೆ ಇಷ್ಟು ಸಮಯ ಲಾಭ ತಂದುಕೊಡುವಂತೆಯೇ ಇದ್ದ ಅಥವಾ ಲಾಭದಲ್ಲಿಯೇ ಇದ್ದ ವ್ಯವಹಾರ ನಷ್ಟಕ್ಕೆ ತಿರುಗಲಿದೆ. ಬೆನ್ನು ನೋವಿನ ಸಮಸ್ಯೆ ತೀವ್ರ ಆಗಲಿದೆ. ನಿಮ್ಮಲ್ಲಿ ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದ್ದು, ಮತ್ತೆ ಕೆಲವರಿಗೆ ದೀರ್ಘಾವಧಿಗೆ ಔಷಧೋಪಚಾರ ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೊಸ ವ್ಯಾಪಾರ- ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ನಿಮಗೆ ಹಳೇ ಸ್ನೇಹಿತರೋ ಅಥವಾ ಸಂಬಂಧಿಗಳ ಪೈಕಿಯೋ ಅತಿಯಾದ ಬಡ್ಡಿ ಅಥವಾ ಹೆಚ್ಚಿನ ರಿಟರ್ನ್ಸ್ ನೀಡುವ ಆಮಿಷ ತೋರಿಸಿದಲ್ಲಿ ಒಂದು ವೇಳೆ ನಿಮ್ಮ ಹತ್ತಿರ ಹಣವೂ ಇದೆ ಎಂದಾದಲ್ಲಿ ಅದನ್ನು ಈ ಸಮಯದಲ್ಲಿ ನೀಡಿದರೆ ಅದು ನಿಮಗೆ ವಾಪಸ್ ಬರುವುದಿಲ್ಲ. ಕೆಲವು ಅವಕಾಶಗಳನ್ನು ನಿಮ್ಮ ಆಲಸ್ಯದ ಕಾರಣದಿಂದಲೇ ಕಳೆದುಕೊಳ್ಳುವಂತೆ ಆಗಲಿದೆ. ನಿಧಾನವೇ ಪ್ರಧಾನ ಹಾಗೂ ಆಲಸ್ಯಂ ಅಮೃತಂ ವಿಷಂ ಈ ಎರಡಕ್ಕೂ ಇರುವ ವ್ಯತ್ಯಾಸವನ್ನೂ ಅರಿತುಕೊಂಡು ಮುಂದಕ್ಕೆ ಹೆಜ್ಜೆ ಇಡಿ.
ಲೇಖನ- ಸ್ವಾತಿ ಎನ್.ಕೆ.




