Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 14ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 14ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕೃಷಿಕರಿದ್ದಲ್ಲಿ ಬೆಳೆ ನಷ್ಟ ಅಥವಾ ಬೇರೆ ಯಾವುದಾದರೂ ರೀತಿಯಿಂದ ಹಣಕಾಸಿನ ವಿಚಾರದಲ್ಲಿ ನಿಮಗೆ ನಷ್ಟ ಆಗುವಂಥ ಯೋಗ ಇದೆ. ಯಾರಿಗಾದರೂ ವಸ್ತುವನ್ನು ಕೊಡುವುದಾಗಿಯೋ ಅಥವಾ ಇಂಥ ಕೆಲಸವನ್ನು ಇಷ್ಟೇ ಸಮಯದಲ್ಲಿ ಮಾಡಿಕೊಡುತ್ತೇನೆ ಎಂದು ಮಾತು ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಸಾಧ್ಯಾಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದು ಮುಖ್ಯ. ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವಿವಿಧ ವಿಚಾರಗಳಿಗೆ ಅಭಿಪ್ರಾಯ ಭೇದಗಳು ಉದ್ಭವ ಆಗಲಿದೆ. ಒಂದು ವೇಳೆ ನೀವು ಇದನ್ನು ಕೂತು, ಮಾತನಾಡಿ ಬಗೆಹರಿಸಿಕೊಳ್ಳದೇ ಹೋದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ಬೇರೆಯವರಿಗೆ ಒಪ್ಪಿಸಿ, ಮುಗಿಸಬೇಕು ಎಂದು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಹೋದೀತು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಹಣಕಾಸಿನ ವಿಚಾರದಲ್ಲಿ ಯಾರು ವಿಪರೀತ ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿದ್ದೀರಿ ಅಂಥವರಿಗೆ ಅದರಿಂದ ಹೊರಬರುವುದಕ್ಕೆ ಇತರರು ಸಹಾಯ ಮಾಡುವ ಸಾಧ್ಯತೆ ಇದೆ. ಅಥವಾ ಒಂದು ವೇಳೆ ನಿಮ್ಮದೇ ವ್ಯವಹಾರಗಳು ಅಥವಾ ವ್ಯಾಪಾರದಲ್ಲಿ ಬರಬೇಕಾದ ಹಣವು ಬಾಕಿ ನಿಂತಿದ್ದಲ್ಲಿ ಅದನ್ನು ವಾಪಸ್ ಪಡೆಯುವುದಕ್ಕೆ ಅವಕಾಶಗಳಿವೆ. ಉದ್ಯೋಗ ವಿಚಾರವಾಗಿ ಯಾರಾದರೂ ಹೊಸ ಆಫರ್ ಹೇಳಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ. ನಿಮಗೆ ನೀವೇ ದೊಡ್ಡ ಮಟ್ಟದ ಬೆಂಚ್ ಮಾರ್ಕ್ ಹಾಕಿಕೊಂಡು ಅದನ್ನು ನಿಮ್ಮಿಂದ ಮಾಡುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಆಸ್ತಿ- ಜಮೀನು ವಿಚಾರದಲ್ಲಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ದಾರಿಗಳು ಗೋಚರ ಆಗಲಿವೆ. ನಿಮ್ಮಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂಥ ಅವಕಾಶಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಧೈರ್ಯದ ತೀರ್ಮಾನ ಈ ದಿನ ಉತ್ತಮವಾದ ಫಲ ನೀಡಲಿದೆ. ಇತರರು ನಿಮ್ಮನ್ನು ಎಚ್ಚರಿಸಿ, ಯಾವುದನ್ನು ಮಾಡಬಾರದು ಎಂದು ಹೇಳಿರುತ್ತಾರೋ ಅದೇ ಲಾಭದಾಯಕವಾಗಿ ಮಾರ್ಪಡಲಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಇತರರು ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಹಾಗೂ ಲಾಭದಾಯಕವಾಗಿಯೂ ಮಾಡಿ ಮುಗಿಸಲಿದ್ದೀರಿ. ಮನೆಯಲ್ಲಾಗಲೀ ಅಥವಾ ಕಚೇರಿಯಲ್ಲಾಗಲೀ ಅಥವಾ ನೀವು ವೃತ್ತಿ ಮಾಡುವಂಥ ಸ್ಥಳದಲ್ಲಿಯೇ ಆಗಲಿ ನಿಮ್ಮ ಮಾತಿಗೆ ವಿಪರೀತ ಪ್ರಾಮುಖ್ಯ ಬರಲಿದೆ. ಕನಿಷ್ಠ ಪಕ್ಷ ತಾತ್ಕಾಲಿಕವಾಗಿಯಾದರೂ ನಿಮಗೆ ಕೆಲವು ಕೆಲಸಗಳಲ್ಲಿ ಮುಂದಾಳತ್ವವನ್ನು ವಹಿಸಲಿದ್ದಾರೆ. ಬಹಳ ಸಮಯದಿಂದ ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಿದ್ದೀರಿ ಅಂತಾದಲ್ಲಿ ಸಂಬಂಧಪಟ್ಟವರು ನಿಮ್ಮನ್ನು ಕರೆಸಿ, ಈ ಬಗ್ಗೆ ಮಾತನಾಡಲಿದ್ದಾರೆ. ಅಥವಾ ನಿಮ್ಮ ಸಹೋದ್ಯೋಗಿಗಗಳು, ಸ್ನೇಹಿತರ ಮೂಲಕ ಮಾಹಿತಿ ಸಿಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಒಂದು ಬಗೆಯ ಲೆಕ್ಕಾಚಾರದ ನಡೆ ನಿಮ್ಮಲ್ಲಿ ಕಂಡುಬರಲಿದೆ. ನಿಮ್ಮ ಈ ಹಿಂದಿನ ವೃತ್ತಿ, ಉದ್ಯೋಗದ ಅನುಭವಗಳು ನೆರವಿಗೆ ಬರಲಿವೆ. ನಾನಾಯಿತು, ನನ್ನ ಪಾಡಾಯಿತು ಎಂಬಂತೆ ಉದ್ಯೋಗ ಸ್ಥಳದಲ್ಲಿ ಇರುವವರಿಗೆ ಸಹ ಪ್ರಾಧಾನ್ಯ ದೊರೆಯಲಿದೆ. ಇನ್ನು ನಿಮ್ಮ ಬಹಳ ದಿನದ ಅಥವಾ ವರ್ಷಗಳ ಕನಸಾಗಿ ಉಳಿದು, ಅದನ್ನು ಸಾಕಾರ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂತಾದರೆ ಅದರ ಕಡೆಗೆ ಈ ದಿನ ಮಹತ್ತರವಾದ ಹೆಜ್ಜೆಯೊಂದನ್ನು ಇಡಲಿದ್ದೀರಿ. ನಿಮ್ಮಲ್ಲಿ ಯಾರು ಧಾರ್ಮಿಕ ಕ್ಷೇತ್ರವನ್ನೇ ನಿಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತೀರಿ ಅಂಥವರಿಗೆ ಸಾರ್ವಜನಿಕವಾಗಿ ಗೌರವ, ಮನ್ನಣೆ ಹಾಗೂ ಆದರಗಳು ದೊರೆಯಲಿವೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಅದಕ್ಕೆ ಸಂಬಂಧಪಟ್ಟವರಿಂದ ಸಹಾಯ ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವ್ಯಾಪಾರ- ವ್ಯವಹಾರ ರೀತಿಯಿಂದ ಅಥವಾ ವೃತ್ತಿಪರವಾಗಿ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ನಿಮ್ಮ ಸಾಮರ್ಥ್ಯವು ಯಾರ ಗಮನಕ್ಕೆ ಬರಬೇಕೋ ಅಂಥವರ ಗಮನಕ್ಕೆ ಬರಲಿದ್ದು, ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನೀವು ಬಹಳ ಇಷ್ಟಪಡುವ ವ್ಯಕ್ತಿ ಅಥವಾ ವ್ಯಕ್ತಿಗಳ ಜತೆಗೆ ಸಿನಿಮಾ, ರೆಸ್ಟೋರೆಂಟ್, ರೆಸಾರ್ಟ್ ಇಂಥವುಗಳಿಗೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮ ಪ್ರೀತಿಪಾತ್ರರು ಉಡುಗೊರೆಗಳನ್ನು ನೀಡುವ ಸಾಧ್ಯತೆಗಳು ಸಹ ಇವೆ. ಯಾರು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಬೇಕಾಗಬಹುದು. ಅದು ಕೂಡ ದಿಢೀರನೇ ನಿಗದಿಯಾಗಿ ಹೊರಡಬೇಕಾಗಬಹುದು. ಈ ಅಸೈನ್ ಮೆಂಟ್ ನಿಂದ ಮುಂದೆ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಆಗಲಿವೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ವಿಸ್ತರಣೆ ಆಗಿ, ಒಂದು ಬಗೆಯ ಸಮಾಧಾನ ನಿಮಗೆ ದೊರೆಯಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮುಖ್ಯವಾದ ಸಂಗತಿಗಳು ಮರೆತು, ಇತರರ ಆಕ್ಷೇಪ ಅಥವಾ ಅಸಮಾಧಾನಕ್ಕೆ ಕಾರಣ ಆಗಲಿದ್ದೀರಿ. ಆದ್ದರಿಂದ ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಅದನ್ನು ಶ್ರದ್ಧಾ- ಭಕ್ತಿಯಿಂದ ಮುಗಿಸುವುದಕ್ಕೆ ಪ್ರಯತ್ನಿಸಿ. ಒಂದೇ ವಿಷಯವನ್ನು ಹಲವರು ಹಲವು ರೀತಿಯಲ್ಲಿ ಹೇಳಿ, ನಿಮ್ಮಲ್ಲಿ ಆತಂಕ- ಗಾಬರಿಗೆ ಕಾರಣ ಆಗಲಿದ್ದಾರೆ. ಸುಮ್ಮನಿದ್ದರೆ ಆಗುತ್ತದೆ ಎಂದೆನಿಸುವಂಥ ಸನ್ನಿವೇಶದಲ್ಲೂ ಕೆಲವು ಸಮಸ್ಯೆಗಳನ್ನು ನಿಮ್ಮ ಮಾತಿನ ಮೂಲಕವೇ ಮಾಡಿಕೊಳ್ಳುತ್ತೀರಿ. ನೀವು ಎಷ್ಟು ತಾಳ್ಮೆ- ಸಂಯಮದಿಂದ ಇರುತ್ತೀರೋ ಅಷ್ಟು ನೆಮ್ಮದಿ ನಿಮ್ಮ ಪಾಲಿಗೆ ದೊರೆಯಲಿದೆ. ಇನ್ನು ನಿಮಗಿಂತ ಸಣ್ಣ ವಯಸ್ಸಿನವರ ಜತೆಗೆ ಅಥವಾ ದುರ್ಬಲರ ಜತೆಗೆ ವಾದ- ವಾಗ್ವಾದಗಳನ್ನು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮನ್ನೇ ತಪ್ಪಿತಸ್ಥರನ್ನಾಗಿ ಇತರರ ಮುಂದೆ ಬಿಂಬಿಸಿ, ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿಬಿಡುತ್ತಾರೆ, ಜಾಗ್ರತೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಅನುಭವ, ಆಲೋಚನೆಗಳು ಹಾಗೂ ಸಮಯಕ್ಕೆ ನೀವು ನೀಡುವಂಥ ಸಲಹೆ ಎಷ್ಟು ಅಮೂಲ್ಯವಾದದ್ದು ಎಂಬ ಸಂಗತಿ ಈ ದಿನ ನಿಮ್ಮ ಸುತ್ತಮುತ್ತಲೂ ಇರುವಂಥವರಿಗೆ ಗೊತ್ತಾಗಲಿದೆ. ಈ ಹಿಂದೆ ನೀವು ಯಾವಾಗಲೋ ಮಾಡಿದ ಸಹಾಯವನ್ನು ನೆನಪಿಸಿಕೊಂಡು, ಆಪ್ತರು- ಸಂಬಂಧಿಕರು ಈ ದಿನ ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ವಿದೇಶಗಳಿಂದ ಅಥವಾ ದೂರದ ಪ್ರದೇಶಗಳಿಂದ ನಿಮ್ಮ ಮನಸ್ಸಿಗೆ ಸಂತಸ ನೀಡುವಂಥ ಶುಭ ಸುದ್ದಿ ಬರಲಿದೆ. ನಿಮ್ಮಲ್ಲಿ ಯಾರು ಈವೆಂಟ್ ಮ್ಯಾನೇಜ್ ಮೆಂಟ್, ಅಡುಗೆ ಕಾಂಟ್ರ್ಯಾಕ್ಟ್ ಅಥವಾ ಹೂವು- ತರಕಾರಿಗಳ ಸರಬರಾಜು ಇತ್ಯಾದಿಗಳನ್ನು ಮಾಡುತ್ತಿರುತ್ತೀರಿ ಅಂಥವರಿಗೆ ದೀರ್ಘಾವಧಿಗೆ ಒಳ್ಳೆ ಆದಾಯ ಮೂಲವನ್ನು ಮಾಡಿಕೊಳ್ಳುವಂಥ ಆರ್ಡರ್ ಹುಡುಕಿಕೊಂಡು ಬರಲಿದೆ. ಮನೆ ಇಂಟಿರೀಯರ್ ಡಿಸೈನ್ ಮಾಡಿಸುವಂಥವರಿಗೆ ಕೂಡ ಅತ್ಯುತ್ತಮವಾದ ದಿನ ಇದಾಗಿರುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸಂಗಾತಿ ಜತೆಗಿನ ಬಾಂಧವ್ಯ ಗಟ್ಟಿಯಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ತುಂಬ ಸಂತೋಷವಾಗಿ ದಿನ ಕಳೆಯುವಂಥ ಯೋಗ ಇದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಮಟ್ಟದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ತನಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯಲಿದ್ದು, ಮನಸ್ಸಿಗೆ ಸಮಾಧಾನ ದೊರೆಯಲಿದೆ. ಹೊಸದಾಗಿ ಹಣ ಹೂಡಿಕೆ ಮಾಡಿ, ಷೇರು- ಮ್ಯೂಚುವಲ್ ಫಂಡ್ ಗಳ ಮೂಲಕವಾಗಿ ಅಥವಾ ಕಮಾಡಿಟಿ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡಬೇಕು ಎಂದುಕೊಂಡಿರುವವರಿಗೆ ತುಂಬ ಸಹಾಯ ಆಗುವಂಥ ವ್ಯಕ್ತಿಯೊಬ್ಬರ ಪರಿಚಯ ಆಗಲಿದೆ. ಅವರ ಸಲಹೆ- ಸೂಚನೆಗಳಿಂದ ನಿಮಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮಗೆ ಇಷ್ಟದ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಆಗಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇನ್ನು ಸಾಕು ಎಂದು ನಿರ್ಧಾರ ಮಾಡಿ ನೀವಾಗಿಯೇ ಕೆಲವು ಸಂಬಂಧ, ಸ್ನೇಹದಿಂದ ದೂರವಾಗುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಅದರಲ್ಲೂ ನಿಮ್ಮಲ್ಲಿ ಕೆಲವರು ಸಂಬಂಧಪಟ್ಟವರಿಗೆ ನೇರವಾಗಿ ಈ ಬಗ್ಗೆ ಹೇಳಿಯೇ ದೂರವಾಗಲಿದ್ದೀರಿ. ಮುಖ್ಯವಾಗಿ ನಿಮಗೆ ಹಳೇ ಸಂಗತಿಗಳು ವಿಪರೀತ ಕಾಡಲಿವೆ. ಎಷ್ಟೇ ಪ್ರೀತಿ- ವಿಶ್ವಾಸ ತೋರಿದರೂ ಯಾಕೆ ಕೆಲವರಲ್ಲಿ ನಂಬಿಕೆ ಮೂಡಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಂಬುದು ಅಚ್ಚರಿಯಾಗಿಯೂ ಹಾಗೂ ನಿಮಗೆ ಆತ್ಮಪೂರ್ವಕವಾಗಿ ಬೇಸರವಾಗಿಯೂ ಕಾಡಬಹುದು. ನಡೆಯುವಷ್ಟು ದಿನ ನಾಣ್ಯ ಎಂಬಂತೆ ಕೆಲವು ಕೆಲಸಗಳನ್ನು ಡೆಡ್ ಲೈನ್ ಇಟ್ಟುಕೊಂಡು ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಒಂದು ಹಂತದ ನಂತರ ಆ ಕೆಲಸವನ್ನು ಮಾಡಬಾರದು ಎಂಬ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ನಿಮ್ಮ ಈ ದಿನದ ನಡವಳಿಕೆ ಹಾಗೂ ಮಾತುಕತೆ ಆಪ್ತರಾದವರಿಗೆ ಆಶ್ಚರ್ಯ ಹಾಗೂ ಗಾಬರಿ ಉಂಟುಮಾಡುತ್ತದೆ.
ಲೇಖನ- ಎನ್.ಕೆ.ಸ್ವಾತಿ