ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜೂನ್ 25 ರಿಂದ ಜುಲೈ 1 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ: ಈ ವಾರವು ಶುಭಾಶುಭಗಳು ಸಮಾನವಾಗಿ ಇರಬಹುದು. ನಿಮಗೆ ಬೇಕಾದ ಹಣವು ಸಕಾಲಕ್ಕೆ ದೊರೆಯಲಿದೆ. ನಿಮ್ಮ ಸಂತೋಷವನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಬರಬಹುದು. ಅದನ್ನೆಲ್ಲ ಇಟ್ಟುಕೊಂಡು ಸಂಕಟ ಪಡುವ ಬದಲು ಆಪ್ತರಿಗೆ ಹೇಳಿ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ದೊಡ್ಡ ಚಿಕಿತ್ಸೆಯನ್ನು ಪಡೆಯುವ ಮೊದಲೇ ಅದನ್ನು ಸರಿ ಮಾಡಿಕೊಳ್ಳಿ. ಶನಿಯು ನಿಮಗೆ ಯೋಗಕಾರಕನಾಗಿ ಬಯಸಿದ್ದನ್ನು ಕೊಡುವನು. ಕಾರ್ಯದ ಸ್ಥಳದಲ್ಲಿ ಅಧಿಕಲಾಭವಾಗುವ ಸಾಧ್ಯತೆ ಇದೆ. ಕುಟುಂಬದ ಜೊತೆ ಸಂಬಂಧವು ಹದಗೆಡಬಹುದು. ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಸ್ವಲ್ಪ ಸಮಯದ ಕುಳಿತು ಬನ್ನಿ. ನಿಮ್ಮೊಳಗೆ ಒಂದಿಷ್ಟು ಬದಲಾವಣೆಗಳು ಆಗಲಿದೆ.
ವೃಷಭ: ಈ ವಾರವು ನಿಮಗೆ ಹೆಚ್ಚು ಸಂತೋಷದ ಸಂಗತಿಗಳು ಇರಲಿದೆ. ಖರ್ಚನ್ನು ಅನಿವಾರ್ಯವಾಗಿ ನೀವು ಮಾಡಬೇಕಾದೀತು. ಸಪ್ತಮಾಧಿಪತಿಯು ತೃತೀಯದಲ್ಲಿ ಇದ್ದು ಮನಸ್ಸು ಕೆಡಿಸುವನು. ಸಂಗಾತಿಯಿಂದ ದೂರವಾಗುವಂತೆ ಅಥವಾ ಸಂಗಾತಿಯನ್ನು ಧಿಕ್ಕರಿಸಿ ನಡೆಯುವಂತೆ ಮಾಡಬಹುದು. ಅಷ್ಟಮ ಮತ್ತು ಏಕಾದಶಾಧಿಪತಿಯಾದ ಗುರು ವ್ಯಯದಲ್ಲಿ ಇದ್ದು ಪ್ರಯೋಜನವಿಲ್ಲವಾಗುವುದು. ಸಣ್ಣ ಪುಟ್ಟ ಅವಮಾನಗಳನ್ನು ನೀವು ಎದುರಿಸುವ ಸಂದರ್ಭವು ಬರಬಹುದು. ಷಷ್ಠಾಧಿಪತಿಯೂ ಸ್ವಸ್ಥಾನಾಧಿಪತಿಯೂ ಆಗಿರುವ ಶುಕ್ರನು ಕುಜನ ಜೊತೆಗಿದ್ದು ವಿವಾಹಕ್ಕೆ ತೊಂದರೆಯನ್ನು ಕೊಡಬಹುದು. ಸುಬ್ರಹ್ಮಣ್ಯನ ಹಾಗೂ ದುರ್ಗೆಯ ಆರಾಧನೆ ಮಾಡಬೇಕು.
ಮಿಥುನ: ಈ ವಾರವು ಶುಭವಾರವೆಂದೇ ಹೇಳಬೇಕು. ಎಲ್ಲ ಗ್ರಹಗಳೂ ಶುಭಫಲವನ್ನೇ ನಿಮಗೆ ಕೊಡಲಿವೆ. ಗುರುಬಲವು ಪೂರ್ಣಾವಾಗಿ ಇಲ್ಲದಿದ್ದರೂ ನಿಮಗೆ ಸ್ಥಾನಮಾನ, ಗೌರವಗಳನ್ನು ಕೊಡಲು, ಸಂಪತ್ತು ಬರುವಂತೆ ಮಾಡಲು ಯಾವ ತೊಂದರೆ ಇಲ್ಲ. ಸ್ವಲ್ಪ ಒತ್ತಡಗಳು ಕಡಿಮೆ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಕ್ಕಂತೆ ಆದೀತು. ನಿಲ್ಲಿಸಿದ್ದ ಭೂಮಿಯ ವ್ಯವಹಾರವನ್ನು ಆರಂಭಿಸಬಹುದು. ಅಲ್ಪ ಲಾಭವನ್ನು ಪಡೆಯುವಿರಿ. ಮಕ್ಕಳಿಲ್ಲ ಕೊರಗು ನಿಮ್ಮನ್ನು ಕಾಡಬಹುದು. ನವಮದಲ್ಲಿ ಇರುವ ಶನಿಯು ನಿಮಗೆ ಧಾರ್ಮಿಕ ಶ್ರದ್ಧೆಯನ್ನು ಕಡಿಮೆ ಮಾಡಿಸುವನು.
ಕಟಕ: ಜೂನ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅಲ್ಪ ಪ್ರಮಾಣದ ಶುಭವು ಇರಲಿದೆ. ಸಮಸ್ಯೆಯನ್ನು ನೀವು ಬಿಡಿಸಿಕೊಳ್ಳಲು ಹೋಗಿ ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಿರಿ. ವೃತ್ತಿಯನ್ನು ನೀವು ಬಹಳ ಶ್ರದ್ಧೆಯಿಂದ ಮಾಡಿದರೂ ನಿಮಗೆ ಲಾಭವು ಅಷ್ಟಾಗಿ ಸಿಗದು. ಭಡ್ತಿಯು ಸಿಗುವುದೂ ನಿಮಗೆ ಕಷ್ಟವಾದೀತು. ವಾಹನ ಖರೀದಿಯಿಂದ ನಷ್ಟವನ್ನು ಪಡೆಯುವಿರಿ. ತಂದೆಯಿಂದ ದೂರವಾಗುವ ಸಾಧ್ಯತೆ ಇದೆ. ಅವರ ಕಾರಣಕ್ಕಾಗಿ ಹಣವನ್ನೂ ಕಳೆದುಕೊಳ್ಳಬೇಕಾದೀತು. ಮಕ್ಕಳ ವಿಚಾರದಲ್ಲಿ ನೀವು ಬಹಳ ವ್ಯಥೆ ಪಡುವ ಸನ್ನಿವೇಶ ಎದುರಾದೀತು. ಮಾನಸಿಕವಾಗಿ ಈ ವಾರ ನೀವು ಕುಗ್ಗುವಿರಿ. ಅಂದುಕೊಂಡಿದ್ದು ನಿಮ್ಮ ವಿರುದ್ಧವೂ ಆಗಬಹುದು. ಶನೈಶ್ಚರನಿಗೆ ದೀಪಬೆಳಗಿ, ಎಳ್ಳಿನ ದಾನ ಮಾಡಿ.
ಸಿಂಹ: ಈ ವಾರವು ನಿಮಗೆ ತಂದೆಯಿಂದ ಲಾಭವನ್ನು ನೀವು ನಿರೀಕ್ಷಿಸಬಹುದು. ಕುಜ ಹಾಗು ಶುಕ್ರರು ದ್ವಾದಶಸ್ಥಾನದಲ್ಲಿದ್ದು ನಿಮಗೆ ಅಶುಭವನ್ನೇ ನೀಡುವರು. ನಾನಾ ರೀತಿಯ ಖರ್ಚುಗಳು ಬರಲಿದೆ. ಅಲಂಕಾರಿಕ ವಸ್ತುಗಳನ್ನು ನೀವು ಖರೀದಿಸಿ ಧನವನ್ನು ಮಾಡಿಕೊಳ್ಳುವಿರಿ. ಯಂತ್ರೋಪಕರಣಗಳಿಂದಲೂ ನಷ್ಟವಾಗುವ ಸಾಧ್ಯತೆ ಇದೆ. ಕೇತುವು ಚತುರ್ಥದಲ್ಲಿ ಇದ್ದಾನೆ. ಕುಟುಂಬದಲ್ಲಿ ಸಣ್ಣ ಕಿರಿಕಿರಿಗಳು ಆಗಬಹುದು. ಶನಿಯು ಸಪ್ತಮದಲ್ಲಿ ಇದ್ದು ಮನಸ್ಸನ್ನು ಚಂಚಲಗೊಳಿಸಿ ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವನು. ಗುರುವಿನ ಬಲವಿದ್ದರೂ ರಾಹುವು ಅದನ್ನು ತಡೆದು ನಿಲ್ಲಿಸಿದ್ದಾನೆ. ಹಾಗಾಗಿ ಗುರುವಿನ ದರ್ಶನ, ಸ್ತೋತ್ರವನ್ನು ಮಾಡಿ. ಒಳ್ಳೆಯ ಫಲವನ್ನು ಪಡೆಯಬಹುದು.
ಕನ್ಯಾ: ಈ ತಿಂಗಳ ಕೊನೆಯ ವಾರವು ಅಷ್ಟಾಗಿ ಶುಭವಿಲ್ಲ. ಶುಭಸ್ಥಾನಾಧಿಪತಿಗಳು ಅಶುಭಸ್ಥಾನದಲ್ಲಿ ಇದ್ದು ಪರಿಣಾಮವು ವಿಪರೀತವಾಗಬಹುದು. ಷಷ್ಠಸ್ಥಾನದಲ್ಲಿರು ಶನಿಯು ನಿಮ್ಮ ಅನಾರೋಗ್ಯವನ್ನು ಬೇಗ ಗುಣಪಡಿಸಲಾರನು. ಚತುರ್ಥ ಹಾಗೂ ಸಪ್ತಮಾಧಿಪತಿಯಾದ ಗುರುವು ಅಷ್ಟಮದಲ್ಲಿ ಇದ್ದು ಅಗೌರವವನ್ನು ತರುವಂತೆ ಮಾಡುವನು. ಸ್ಥಾನಮಾನವನ್ನು ನೀಡುವನು. ಸ್ಥಾನದಿಂದ ಕೆಳಗೆ ಇಳಿಯುವ ಸಾಧ್ಯತೆ ಇದೆ. ವಚನಭ್ರಷ್ಟತೆಯ ಆರೋಪವನ್ನೂ ನೀವು ಅನುಭವಿಸುವಿರಿ. ಅಷ್ಟಮಾಧಿಪತಿಯು ಏಕಾದಶದಲ್ಲಿ ಇದ್ದು ಯಾವ ಪ್ರಯೋಜನವನ್ನೂ ನೀಡನು. ನಿಮ್ಮನ್ನು ದುರ್ಬಲಗೊಳಸಿಯಾನು. ದೈವಬಲವು ನಿಮ್ಮನ್ನು ಸ್ವಲ್ಪ ಕಾಪಾಡಲಿದೆ.
ತುಲಾ: ಈ ವಾರದಲ್ಲಿ ನಿಮಗೆ ಅನೇಕ ಶುಭ ಸಮಾಚಾರಗಳು ಕೇಳಿಬರಬಹುದು. ಮಾನಸಿಕ ಸ್ಥಿತಿಯು ಚೆನ್ನಾಗಿರಲಿದೆ. ವೃತ್ತಿಯಲ್ಲಿ ನಿಮಗೆ ಬಹಳ ಸಂತೋಷವು ಸಿಗಲಿದೆ. ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗುವುದು ಬೇಡ. ನಿಮಗೆ ಗೌರವ ಆದರಗಳೂ ಸಿಗುವುದು. ತಂತ್ರಜ್ಞರಾಗಿದ್ದರೆ ನಿಮಗೆ ಸ್ವಲ್ಪ ತೊಂದರೆಗಳು, ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುವುದು. ದೇಹದಲ್ಲಿ ನಾನಾ ಬಾಧೆಗಳು ಕಾಣಿಸಿಕೊಳ್ಳಬಹುದು. ಸುಲಭ ಸಾಧ್ಯವಾದುದನ್ನು ಮೊದಲು ಮಾಡಿ ಮುಗಿಸಿ. ನಿಮ್ಮ ಮನಸ್ಸು ಸಕಾರಾತ್ಮಕವಾಗಿ ಇರಲಿದೆ. ಸ್ನೇಹಿತರ ನಡೆಯು ನಿಮಗೆ ಬೇಸರ ತರಿಸೀತು. ಗೋಗ್ರಾಸವನ್ನು ನೀಡಿ ದೋಷವನ್ನು ಪರಿಹರಿಸಿಕೊಳ್ಳಿ.
ವೃಶ್ಚಿಕ: ಈ ತಿಂಗಳ ಕೊನೆಯ ವಾರ ನಿಮಗೆ ಗುರುಬಲದ ಕೊರತೆ ಇದೆ. ಜೊತೆಗೆ ರಾಹುವೂ ಇದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಷ್ಟಪಡುವಿರಿ. ಸರಿಯಾದ ಔಷಧೋಪಚಾರಗಳು ಸಿಕ್ಕರೂ ಪರಿಣಾಮ ಇಲ್ಲದೇ ಹೋಗಬಹುದು. ಆಪ್ತರ ನೆನಪು ಮತ್ತೆ ಮತ್ತೆ ಬರಬಹುದು. ಮನಸ್ಸನ್ನು ತೆರೆದು ಮಾತನಾಡಲು ಈ ವಾರ ಕಷ್ಟಪಡುವಿರಿ. ನಿಮ್ಮ ವ್ಯಥೆಯನ್ನು ಮನಸ್ಸಿನಲ್ಲೇ ನುಂಗಿಕೊಳ್ಳಬೇಕಾಗವುದು. ಕೆಲವರ ಮಾತುಗಳು ನಿಮ್ಮನ್ನು ಚುಚ್ಚಬಹುದು. ವಿವಾಹಕ್ಕೆ ನೀವು ಇಷ್ಟಪಟ್ಟವರೇ ಸಿಗುವರು. ಅನಾರೋಗ್ಯದ ಕಾರಣದಿಂದ ನೀವು ಸಂಪತ್ತನ್ನು ಕಳೆದುಕೊಳ್ಳುವಿರಿ. ಧನ್ವಂತರಿಯ ಸ್ತೋತ್ರವನ್ನು ಮಾಡಿ.
ಧನು: ಈ ವಾರ ಕೆಲಸವು ಸಂಪೂರ್ಣವಾಗದೇ ಇರುವ ಕಾಲವಾಗಿದೆ. ಪಂಚಮದಲ್ಲಿ ಇರುವ ಗುರು ಹಾಗೂ ರಾಹುವು ಮಕ್ಕಳ ಪ್ರೀತಿಯಿಂದ ನಿಮ್ಮನ್ನು ದೂರ ಇರಿಸುವನು. ದಾಂಪತ್ಯದಲ್ಲಿ ಸುಖವಿರಲಿದೆ. ನಿಮ್ಮ ಮಾತಿಗೆ ಸಂಗಾತಿಯು ಮನಸೋಲಬಹುದು. ನಿಮ್ಮ ಪ್ರಯಾಣದಲ್ಲಿ ಅಪಘಾತದ ಭೀತಿ ಕಾಡಬಹುದು. ಸ್ತ್ರೀಯರಿಂದ ನಿಮಗೆ ತೊಂದರೆ ಆಗಲಿದೆ. ಆರ್ಥಿಕವಾಗಿ ನೀವು ಸಬಲರಾಗಲು ಬಯಸಿ ಅನ್ಯ ವೃತ್ತಿಯನ್ನು ಆಶ್ರಯಿಸುವಿರಿ. ವಾಹನ ಮಾರಾಟದಿಂದ ಈ ವಾರ ನಷ್ಟವಾಗಲಿದೆ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆ ಕಂಡೀತು.
ಮಕರ: ಈ ತಿಂಗಳ ಕೊನೆಯ ಬಾರ ಸಾಧಾರಣವಾಗಿ ಇರಲಿದೆ. ಬುಧಾದಿತ್ಯ ಯೋಗವು ಒಳ್ಳೆಯದಾದರೂ ನಿಮಗೆ ಶುಭವಲ್ಲ. ಷಷ್ಠದಲ್ಲಿ ಇರುವ ಕಾರಣ ಶತ್ರುಗಳ ಬಾಧೆ ಅಧಿಕವಾದೀತು. ವೃತ್ತಿಯಲ್ಲಿ ಹೆಚ್ಚಿನ ಒತ್ತಡ ಇರಲಿದೆ. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ದ್ವಿತೀಯದಲ್ಲಿ ಇರುವ ಶನಿಯು ನಿಮಗೆ ಮಾತಿನ ಬಲವನ್ನು ಕಡಿಮೆ ಮಾಡಿಸುವನು. ಕುಟುಂಬದಲ್ಲಿ ಹಿರಿಯರ ಜೊತೆ ಕಲಹವಾಗಬಹುದು. ಮಕ್ಕಳ ಆರೋಗ್ಯದ ಮೇಲೆ ಒಂದು ನಿಗಾ ಇರಲಿ. ನಿಮ್ಮ ವೃತ್ತಿಯು ನಿಮಗೆ ಬೇಸರ ತರಿಸಬಹುದು. ಗಣಪತಿಯ ಸ್ತೋತ್ರವನ್ನು ಮಾಡಿ. ಗಣಪತಿಗೆ ಪ್ರಿಯವಾದ ದೂರ್ವೆಯನ್ನು ಅರ್ಪಿಸುವಿರಿ.
ಕುಂಭ: ಈ ವಾರವು ಸಾಮಾಜಿಕವಾಗಿ ಬಹಳ ನೆಮ್ಮದಿ ಇದ್ದರೂ ಮನೆಯಲ್ಲಿ ನೆಮ್ಮದಿಯ ಕೊರತೆ ಕಾಣಿಸುವುದು. ತಂದೆಯ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಪತ್ನಿಯ ಸಹಕಾರವು ಅಲ್ಪವಾಗಬಹುದು. ಷಷ್ಠದಲ್ಲಿ ಶುಕ್ರ ಹಾಗೂ ಕುಜರಿದ್ದು ಸ್ತ್ರೀಶತ್ರುಗಳು ಅಧಿಕವಾಗಬಹುದು. ಕುಜನು ದುರ್ಬಲನಾಗಿದ್ದು ನಿಮ್ಮ ವಾಹನಸಂಚಾರದಿಂದ ತೊಡಕಾಗಬಹುದು. ದ್ವಿತೀಯ ಹಾಗೂ ಏಕಾದಶಾಧಿಪತಿಯು ತೃತೀಯದಲ್ಲಿ ಇದ್ದು ಹಣದ ಹರಿವು ಚೆನ್ನಾಗಿರಲಿದೆ. ನಿಮ್ಮ ಪರಿಶ್ರಮದಿಂದ ಇಂದಿನ ಕೆಲಸ ಸಾಧ್ಯವಾಗುವುದು.
ಮೀನ: ಇದು ಜೂನ್ ತಿಂಗಳ ಕೊನೆಯ ವಾರವಾಗಿದ್ದು ಗ್ರಹಗತಿಗಳಲ್ಲಿ ಸಣ್ಣ ಬದಲಾವಣೆ ಆಗಲಿದೆ. ಸಹೋದರ ಹಾಗೂ ತಂದೆಯ ಸಹಾಯವು ನಿಮಗೆ ಸಿಗುವುದು. ಪತ್ನಿಯಿಂದ ಶುಭವಾರ್ತೆಯನ್ನು ನೀವು ಇಂದು ಕೇಳುವಿರಿ. ವಾರದ ಮಧ್ಯದಲ್ಲಿ ಕೆಲವು ಅವಘಡಗಳನ್ನು ನಿಮ್ಮನ್ನು ಭಯಗೊಳಿಸಬಹುದು. ದ್ವಿತೀಯದಲ್ಲಿರುವ ಗುರು ಹಾಗೂ ರಾಹುಗಳಿಂದ ಸ್ವಲ್ಪ ಲಾಭವೂ ಆಗಲಿದೆ. ನಿಮ್ಮ ಮಾತು ಸ್ವಲ್ಪ ವ್ಯಂಗ್ಯದಿಂದ ಇರಬಹುದು. ಶನಿಯು ದ್ವಾದಶದಲ್ಲಿ ಇರುವದುರಿಂದ ನಿಮ್ಮ ಕಾರ್ಯಗಳ ಮೇಲೆ ನಿಮ್ಮ ಎಚ್ಚರಿಕೆ ಇರಲಿ. ತಂದೆಯ ಕಡೆಯವರಿಂದ ನಿಮಗೆ ಸಹಾಯವು ಸಿಗಬಹುದು.
-ಲೋಹಿತಶರ್ಮಾ ಇಡುವಾಣಿ