ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 31ರಿಂದ ಜನವರಿ 7ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ವಾರ ಸ್ವತಃ ನಿಮಗೆ ತೃಪ್ತಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಏಕೆಂದರೆ ನಿಮ್ಮ ಚಾತುರ್ಯ, ಸಮಯ ಪ್ರಜ್ಞೆ ಹಾಗೂ ವೇಗವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ರೀತಿಯಿಂದ ದೊಡ್ಡ ಮಟ್ಟದ ಉಳಿತಾಯವನ್ನು ಮಾಡಲಿದ್ದೀರಿ. ಇನ್ನು ನಿಮ್ಮ ಸಾಧನೆ ಬಗ್ಗೆ ಕುಟುಂಬದಲ್ಲಿ, ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ಬೆರಗು ಮೂಡಲಿದೆ. ಈ ಹಿಂದಿನ ಭಿನ್ನಾಭಿಪ್ರಾಯಗಳೆಲ್ಲ ಕರಗಲಿದೆ. ಅದೇ ರೀತಿ ಒಂದು ಸಲ ಶ್ರಮವನ್ನೆಲ್ಲ ಮರೆಸುವಂತೆ ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಶುಭ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಹೆಚ್ಚಿನ ಸಮಯ ಹೋಗಲಿದೆ. ನೀವಾಗಿಯೇ ವಹಿಸಿಕೊಂಡಿದ್ದ ಜವಾಬ್ದಾರಿಗಳನ್ನು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಸಂಬಂಧಿಗಳು ಹಣಕಾಸು ನೆರವು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಅವರಿಗೆ ಸಹಾಯ ಮಾಡುವಂತೆ ತಂದೆ ಅಥವಾ ತಂದೆ ಸಮಾನರಾದವರು ಕೂಡ ನಿಮ್ಮಲ್ಲಿ ಕೇಳಬಹುದು. ಕೆಲವು ಹಳೇ ಅನುಭವಗಳು ನಿಮಗೆ ಈ ವೇಳೆ ಹಣದ ವ್ಯವಹಾರ ಮಾಡಬಾರದು ಎಂಬುದನ್ನೇ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ನೀವು ಹಾಗೇ ನಡೆದುಕೊಂಡಲ್ಲಿ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಕೃಷಿಕರಿಗೆ ಆಲಸ್ಯ ಹೆಚ್ಚಾಗಲಿದೆ. ದೈಹಿಕ ಆಯಾಸ ವಿಪರೀತ ಜಾಸ್ತಿ ಆಗಲಿದೆ. ಯಾರು ಈಗಾಗಲೇ ಬೆನ್ನಿನ ನೋವು, ಕಾಲಿನ ನೋವು ಅನುಭವಿಸುತ್ತಿರುತ್ತೀರಿ ಅಂಥವರು ಸೂಕ್ತ ವೈದ್ಯೋಪಚಾರ ಪಡೆಯುವುದಕ್ಕೆ ಪ್ರಾಮುಖ್ಯ ನೀಡಿ. ಮಕ್ಕಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಒಂದು ವೇಳೆ ವೈದ್ಯರು ಮಾಸ್ಟರ್ ಚೆಕಪ್ ಮಾಡುವಂತೆಯೋ ಅಥವಾ ಯಾವುದಾದರೂ ನಿರ್ದಿಷ್ಟ ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಸಲಹೆ ಏನಾದರೂ ನೀಡಿದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ವೃತ್ತಿನಿರತರಿಗೆ ಕೆಲವರು ವೃಥಾ ಆರೋಪಗಳನ್ನು ಮಾಡುತ್ತಾ, ವದಂತಿಗಳನ್ನು ಹಬ್ಬಿಸಲಿದ್ದಾರೆ. ಇದರಿಂದ ನಿಮಗೆ ದೊಡ್ಡ ನಷ್ಟ ತಂದಿಡಬೇಕು ಎಂಬುದು ಅವರ ಉದ್ದೇಶ ಎನ್ನುವುದು ನಿಮಗೇ ಗೊತ್ತಾಗುತ್ತದೆ. ಹೀಗೆ ನಿಮಗೆ ವಿಷಯ ಗೊತ್ತಾದ ಕೂಡಲೇ ಸೂಕ್ತವಾಗಿ ಪ್ರತಿಕ್ರಿಯಿಸಿ ಹಾಗೂ ಹಾನಿಯನ್ನು ತಡೆಯುವುದಕ್ಕೆ ಏನು ಮಾಡಬೇಕು ಎಂದಿರುತ್ತೀರೋ ಅದನ್ನು ಗಂಭೀರವಾಗಿ ಮಾಡಿ. ವಿದ್ಯಾರ್ಥಿಗಳು ಸ್ನೇಹವಲಯದಲ್ಲಿ ಎಲ್ಲರನ್ನೂ ನಂಬಬಾರದು ಎಂಬುದನ್ನು ಮನಗಾಣುತ್ತೀರಿ. ನಿಮ್ಮ ವಿರುದ್ಧವೇ ನಡೆಯುವ ಪಿತೂರಿ ಅಥವಾ ಷಡ್ಯಂತ್ರವನ್ನು ಗುರುತಿಸುವಲ್ಲಿ ಸಫಲರಾಗುತ್ತೀರಿ. ಸ್ತ್ರೀಯರಿಗೆ ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ, ಸೂಕ್ತ ಔಷಧೋಪಚಾರ ಮಾಡಿ.
ಕೆಲವು ವಿಚಾರಗಳನ್ನು, ವಿಷಯಗಳನ್ನು ನೇರಾನೇರ ಹೇಳಿಬಿಡುವುದು ಉತ್ತಮ. ಒಂದು ವೇಳೆ ಅದನ್ನೇ ತುಂಬ ನಾಜೂಕಾಗಿ ನಿರ್ವಹಿಸಬೇಕು ಎಂದುಕೊಂಡಲ್ಲಿ ಅದರ ಪರಿಣಾಮ ಬೇರೆ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಎಲ್ಲರಿಗೂ ಒಳ್ಳೆಯರಾಗುವ ನಿಮ್ಮ ಪ್ರಯತ್ನ ಈ ವಾರ ಬಹಳ ಸಮಸ್ಯೆಗಳನ್ನು ತಂದಿಡಲಿದೆ. ತಪ್ಪು ವಿಚಾರಗಳನ್ನು, ತಪ್ಪು ಮಾಡಿದ ವ್ಯಕ್ತಿಗಳನ್ನು ಸಹ ಒಪ್ಪಿಕೊಂಡು ಜತೆಯಲ್ಲಿ ಇರಬೇಕು ಎಂಬ ಅನಿವಾರ್ಯ ಇಲ್ಲ ಎಂಬುದನ್ನು ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಲೇಬೇಕು. ನೇರಾನೇರವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ನಿಮ್ಮನ್ನು ನಂಬಿ, ಕೆಲಸ ಒಪ್ಪಿಸಿದವರಿಗೆ ನ್ಯಾಯ ಸಲ್ಲಿಸಬೇಕಾದದ್ದು ಸಹ ನಿಮ್ಮದೇ ಜವಾಬ್ದಾರಿ ಆಗಿರುತ್ತದೆ. ಬೇರೆಯವರ ಮನಸ್ಸಿಗೆ ನೋವಾಗುತ್ತದೆ ಎಂದು ತಪ್ಪು ಮಾಡಿದಾಗಲೂ ಗುಣಮಟ್ಟದ ಕೆಲಸ ಇಲ್ಲದಿದ್ದಾಗಲೂ ಒಪ್ಪಿಕೊಳ್ಳುವುದು ಸರಿಯಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಇನ್ನು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಮ್ಯಾಟ್ರಿಮೋನಿ ವೆಬ್ ಸೈಟ್ ಗಳಲ್ಲಿ ಅಥವಾ ಸಂಬಂಧಿಕರ ರೆಫರೆನ್ಸ್ ಮೂಲಕ ಸಂಬಂಧಗಳು ಕೂಡಿ ಬರುವಂಥ ಅವಕಾಶಗಳು ಹೆಚ್ಚಿವೆ. ನಾಳೆ ನೋಡಿದರಾಯಿತು, ನಾಳೆ ಮಾಡಿದರಾಯಿತು ಎಂಬ ಧೋರಣೆ ಖಂಡಿತಾ ಬೇಡ. ನಿಮಗೆ ಮಾಹಿತಿ ದೊರೆತ ಕೂಡಲೇ ಸ್ಪಂದಿಸುವುದರ ಕಡೆಗೆ ಗಮನವನ್ನು ನೀಡಿ. ಆಗ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಕೃಷಿಕರಿಗೆ ಕೆಲವು ನಿಯಮಾವಳಿಗಳು, ಸರ್ಕಾರದ ಕ್ರಮಗಳಿಂದ ಸವಾಲುಗಳು ಎದುರಾಗಬಹುದು. ಈಗ ಆಗುತ್ತಿರುವ ಖರ್ಚು ಹೆಚ್ಚಾಗಲಿದೆ ಎಂದು ಮೇಲ್ನೋಟಕ್ಕೆ ಅನಿಸಲಿದೆ. ಆದರೆ ತಾಳ್ಮೆ ವಹಿಸಿ. ಈಗೇನಾದರೂ ಆತುರ ಪಟ್ಟರೆ ಭವಿಷ್ಯದಲ್ಲಿ ಆಗಬಹುದಾದ ಅನುಕೂಲವನ್ನು ನೀವು ಕೈಯಾರೆ ಹಾಳು ಮಾಡಿಕೊಂಡಂತೆ ಆಗಬಹುದು. ವೃತ್ತಿನಿರತರು ಈಗ ನೀಡುತ್ತಿರುವ ಸೇವೆ ಜತೆಗೆ ಇನ್ನೊಂದಿಷ್ಟು ಹೊಸದನ್ನು ಸೇರ್ಪಡೆ ಮಾಡಿಕೊಳ್ಳಲಿದ್ದೀರಿ. ಸ್ವತಃ ಇದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ. ಇಷ್ಟು ಸಮಯ ನಿಮ್ಮ ಗಮನಕ್ಕೆ ಬಾರದ, ಲೆಕ್ಕಾಚಾರ ತಪ್ಪಿಹೋಗಿದ್ದ ಸಂಗತಿಗಳ ಬಗ್ಗೆ ತಿಳಿಯುತ್ತಾ ಹೋಗಲಿದೆ. ಯಶಸ್ಸಿನ ಖಾತ್ರಿ ಬೇಗ ಸಿಗಲಿದೆ. ಆದರೆ ಈ ವಾರ ನಿಮ್ಮ ಸುತ್ತಮುತ್ತಲಿನವರ ವರ್ತನೆಯನ್ನು ಗಮನಿಸುವುದಕ್ಕೂ ಸಮಯವನ್ನು ಮೀಸಲಿಡಿ. ಇಲ್ಲದಿದ್ದಲ್ಲಿ ಸಮಸ್ಯೆ ಎದುರಾದ ಮೇಲೆ ಪರಿತಪಿಸುವಂತಾಗುತ್ತದೆ. ವಿದ್ಯಾರ್ಥಿಗಳು ಈ ವಾರ ಸಾಧ್ಯವಾದಷ್ಟೂ ಮೌನದಿಂದ ಇರಿ. ಇನ್ನು ಸೋಷಿಯಲ್ ಮೀಡಿಯಾದ ಬಳಕೆಯಿಂದಲೂ ದೂರ ಇದ್ದರೆ ನೆಮ್ಮದಿ ಇದ್ದೀತು. ನೀವು ಆಡದ ಮಾತು, ಮಾಡದ ಕೆಲಸವನ್ನು ನಿಮ್ಮ ತಲೆಗೆ ಕಟ್ಟಬಹುದು. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಸ್ತ್ರೀಯರು ವಸ್ತ್ರಾಭರಣಗಳನ್ನು ಖರೀದಿಸುವ ಯೋಗ ಇದೆ. ಇದಕ್ಕಾಗಿ ಕುಟುಂಬದಿಂದಲೂ ಒಂದಿಷ್ಟು ಹಣಕಾಸಿನ ನೆರವು ಸಿಗಲಿದೆ.
ಡೆಡ್ ಲೈನ್ ಒಳಗಾಗಿ ಕೆಲಸ ಮಾಡುವುದು ಬಹಳ ಮುಖ್ಯ. ನಿಮ್ಮ ಮನಸ್ಥಿತಿ ಅಥವಾ ಪರಿಸ್ಥಿತಿ ಏನೇ ಇರಬಹುದು, ಆದರೆ ಒಪ್ಪಿಕೊಂಡ ಕೆಲಸವನ್ನು ಮಾಡಿಕೊಡದೇ ಹೋದಲ್ಲಿ ಇದರಿಂದ ನಿಮಗೇ ಸಮಸ್ಯೆ. ಆದ್ದರಿಂದ ನೀವೇ ಮಾಡಬೇಕಾದ ಕೆಲಸಗಳು ಯಾವ್ಯಾವು ಬಾಕಿ ಇವೆಯೋ ಅವುಗಳನ್ನು ಮಾಡಿ ಮುಗಿಸುವುದಕ್ಕೆ ಒಂದು ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ. ಈಗ ತಾನೇ ಉದ್ಯೋಗ ಹುಡುಕಿಕೊಳ್ಳಬೇಕು ಎಂದು ಹೊಸದಾಗಿ ಪ್ರಯತ್ನಗಳನ್ನು ಆರಂಭಿಸಿರುವವರಿಗೆ ಒಂದೇ ಸಲಕ್ಕೆ ಎರಡ್ಮೂರು ಕಡೆ ಅವಕಾಶಗಳು ತೆರೆದುಕೊಳ್ಳಲಿವೆ. ಆಯ್ಕೆ ವಿಚಾರವಾಗಿ ಏನಾದರೂ ಗೊಂದಲ ಎಂದೆನಿಸಿದರೆ ಅನುಭವಿಗಳ, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ನಿಮ್ಮಲ್ಲಿ ಕೆಲವರು ಈಗ ಇರುವ ಸ್ಥಳಕ್ಕಿಂತ ಬೇರೆಡೆ ತೆರಳಿ, ಅಲ್ಲಿಯೇ ನೆಲೆಗೊಳ್ಳಬೇಕು ಎಂಬ ಆಲೋಚನೆಯನ್ನು ಮಾಡಲಿದ್ದೀರಿ. ಇದರ ಬಗ್ಗೆ ಕುಟುಂಬದ ಇತರ ಸದಸ್ಯರ ಜತೆಗೆ ಚರ್ಚೆ ಕೂಡ ಮಾಡಲಿದ್ದೀರಿ. ಈ ಸನ್ನಿವೇಶದಲ್ಲಿ ಎದುರಿನಲ್ಲಿ ಇರುವವರ ಮಾತನ್ನು ಸರಿಯಾಗಿ ಮತ್ತು ಪೂರ್ತಿಯಾಗಿ ಕೇಳಿಸಿಕೊಳ್ಳಿ. ನನ್ನ ನಿರ್ಧಾರ ಇದೇ, ನಿಮಗೆ ಏನಾದರೂ ಹೇಳಬೇಕು ಅಂತಿದ್ದಲ್ಲಿ ಹೇಳಬಹುದು ಎಂಬ ಧಾಟಿಯಲ್ಲಿ ಮಾತನಾಡಲಿಕ್ಕೆ ಹೋಗಬೇಡಿ. ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಜಮೀನಿನಲ್ಲಿ ತಂತಿ- ಬೇಲಿ ಹಾಕಿಸುವುದು, ಟ್ರಾನ್ಸ್ ಫಾರ್ಮರ್ ಹಾಕಿಸುವುದು ಅಥವಾ ಸೋಲಾರ್ ಉಪಕರಣಗಳನ್ನು ಅಳವಡಿಸುವುದು ಇಂಥವುಗಳಿಗಾಗಿ ಯೋಜನೆ ರೂಪಿಸಲಿದ್ದೀರಿ ಹಾಗೂ ಹಣವನ್ನು ಸಹ ಖರ್ಚು ಮಾಡುವ ಯೋಗ ಇದೆ. ದರಗಳ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡು ಮುಂದುವರಿಯಿರಿ. ಏಕೆಂದರೆ ಈ ಅವಧಿಯಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗಿ, ಆ ನಂತರ ಒಮ್ಮೆ ವಿಚಾರಿಸಿ, ಮುಂದುವರಿದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ವೃತ್ತಿಪರರು ತಮ್ಮ ಸೇವಾ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ಇನ್ನು ಇತರ ಸ್ಥಳಗಳಲ್ಲೂ ಶಾಖೆ- ಕಚೇರಿಗಳನ್ನು ಆರಂಭಿಸುವುದಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ನಿಮ್ಮ ಸೇವೆ ಪಡೆದುಕೊಳ್ಳುವುದಕ್ಕೆ ಇನ್ನಷ್ಟು ಹೊಸ ಸಂಸ್ಥೆಗಳು ವಿಚಾರಣೆ ನಡೆಸಬಹುದು. ಒಪ್ಪಂದ ಅಂತಿಮ ಆಗುವ ತನಕ ನಿಮ್ಮ ಯೋಜನೆಗಳನ್ನು ಜಾರಿಗೆ ತರದಿರುವುದು ಉತ್ತಮ. ವಿದ್ಯಾರ್ಥಿಗಳು ಸೈಕಲ್, ಮೋಟಾರ್ ಸೈಕಲ್ ನಂಥದ್ದನ್ನು ಪಡೆಯುವಂಥ ಅಥವಾ ಖರೀದಿಸುವಂಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಹೊಸ ಜವಾಬ್ದಾರಿಗಳು ಕೆಲವನ್ನು ನಿರ್ವಹಿಸಲೇ ಬೇಕಾಗುತ್ತದೆ. ಇದರಿಂದ ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗಳು ಆಗಲಿವೆ. ಇನ್ನು ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿವೆ. ಮಹಿಳೆಯರಿಗೆ ಪ್ರಯಾಣಗಳು ಹೆಚ್ಚಾಗಲಿವೆ. ಸಂಬಂಧಿಕರು, ಸ್ನೇಹಿತರು ಅಥವಾ ಆತ್ಮೀಯರ ಜತೆಗಿನ ಒಡನಾಟದಿಂದ ಮನಸ್ಸು ಬಹಳ ಉಲ್ಲಾಸವಾಗಿರುತ್ತದೆ.
ಮುಂದೆ ಹೇಗಾಗಬಹುದು ಎಂಬ ಅಂದಾಜು ಮಾಡದೆ ಒಪ್ಪಿಕೊಂಡ ಕೆಲಸಗಳಿಂದಾಗಿ ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಒತ್ತಡ ಜಾಸ್ತಿ ಆಗಲಿದೆ. ಬಹಳ ಕಡಿಮೆ ಗಡುವಿನೊಳಗೆ ಅಗಾಧವಾದ ಕೆಲಸವನ್ನು ಮಾಡಿ ಮುಗಿಸಬೇಕಾದ ಜವಾಬ್ದಾರಿ ನಿಮ್ಮ ಹೆಗಲೇರಲಿವೆ. ನಿಮ್ಮಲ್ಲಿ ಕೆಲವರಿಗೆ ಹುಳು- ಹುಪ್ಪಟೆಯ ಕಡಿತದಿಂದ ಅಲರ್ಜಿ ಆಗಬಹುದು. ಗಾರ್ಡನಿಂಗ್ ನಂಥ ಹವ್ಯಾಸ ಇರುವಂಥವರು ಹಾಗೂ ಮನೆಯಲ್ಲಿನ ಹಳೇ ವಸ್ತುಗಳನ್ನು ಸ್ವಚ್ಛ ಮಾಡುವುದಕ್ಕೆ ಅಂತ ಹೊರಡುವವರು ಕೆಲವೊಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುವಂಥವರು ಊಟ- ತಿಂಡಿಯನ್ನು ಎಲ್ಲಿ ಮಾಡುತ್ತೀರಿ ಹಾಗೂ ಅಲ್ಲಿನ ಸ್ವಚ್ಛತೆ ಹೇಗಿದೆ ಎಂಬುದರ ಕಡೆಗೆ ಲಕ್ಷ್ಯವನ್ನು ನೀಡಿ. ಈ ವಾರ ಇತರರು ಹೇಳುವ ಹಾಗೂ ನೀಡುವ ಸಲಹೆಗಳನ್ನು ಪಾಲಿಸುವುದಕ್ಕೆ ನಿಮ್ಮ ಮನಸ್ಸು ಹಿಂಜರಿಯಲಿದೆ. ಅವರು ಹೇಳಿದ್ದೇ ಮಾಡಬೇಕಾ ಅಥವಾ ಅದನ್ನೇ ಏಕೆ ಅನುಸರಿಸಬೇಕು ಎಂಬಂಥ ವಿರೋಧ ಎಣಿಸುವ ಧೋರಣೆ ಆಗಿರುತ್ತದೆ. ಒಳಿತು ಆಗುವ ಉದ್ದೇಶದಿಂದ ಯಾರು ಹೇಳಿದರೂ ಅವರ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ, ಅನುಸರಿಸುವುದರಲ್ಲಿ ಏನೂ ತಪ್ಪಿಲ್ಲ. ಕೃಷಿಕರಿಗೆ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಬೇಕಾದದ ಕೆಲವು ಮುಖ್ಯವಾದ ಕಾಗದ- ಪತ್ರಗಳನ್ನು ಹೊಂದಿಸುವುದರಲ್ಲೇ ಹೆಚ್ಚಿನ ಸಮಯ ಹೋಗಲಿದೆ. ಕುಟುಂಬದ ಸದಸ್ಯರಿಗೆ ಇದೇ ವೇಳೆ ನಿಮ್ಮ ನೆರವಿನ ಅಗತ್ಯ ಬೀಳುತ್ತದೆ. ಒಂದು ವೇಳೆ ನಿಮ್ಮಿಂದ ಅವರಿಗೆ ಸಹಾಯ ಮಾಡುವುದಕ್ಕೆ ಆಗಲಿಲ್ಲ ಎಂದಾದಲ್ಲಿ ಪರಿಸ್ಥಿತಿಯನ್ನು ವಿವರಿಸುವುದಕ್ಕೆ ಪ್ರಯತ್ನ ಮಾಡಿ, ಅದನ್ನು ಬಿಟ್ಟು ರೇಗುವುದಕ್ಕೆ ಹೋಗಬೇಡಿ. ಪ್ರಯಾಣಕ್ಕಾಗಿ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ. ಈ ಪ್ರಯಾಣದಿಂದ ನೀವು ಅಪೇಕ್ಷೆ ಪಟ್ಟಿದ್ದ ಮಟ್ಟಕ್ಕೆ ಅನುಕೂಲಗಳು ಆಗುವ ಸಾಧ್ಯತೆ ಕಂಡುಬರುವುದಿಲ್ಲ. ವೃತ್ತಿನಿರತರಿಗೆ ಹೊಸ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳಿಂದ ಸಾಲಕ್ಕೆ ಪ್ರಯತ್ನ ಮಾಡಲಿದ್ದೀರಿ. ನಿಮಗೆ ಹಣಕಾಸಿಗೆ ಅನುಕೂಲ ಸಹ ಆಗಿಬರಲಿದೆ. ಇನ್ನು ನಿಮ್ಮಲ್ಲಿ ಕೆಲವರು ಈಗಿರುವ ನಿಮ್ಮ ಗ್ರಾಹಕರ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ, ಕೆಲವು ಮುಖ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಇಷ್ಟು ಸಮಯ ಓದಿನಲ್ಲಿ ಏಕಾಗ್ರತೆ ತೋರಿಸುವುದು ಬಹಳ ಸವಾಲಾಗಿ ಇದ್ದ ಪಕ್ಷದಲ್ಲಿ ಈಗ ಎಲ್ಲವೂ ನಿಮಗೆ ಅನುಕೂಲವಾಗಿ ಪರಿಣಮಿಸಲಿದೆ. ನಿಮ್ಮ ಶ್ರಮ, ಪ್ರತಿಭೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಗುರುತಿಸಲಾಗುತ್ತದೆ. ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ವಾರ ಅನುಕೂಲ ಒದಗಿ ಬರಲಿದೆ. ಉತ್ತಮ ಸಂಸ್ಥೆಗಳಲ್ಲಿ ಕೆಲಸ ದೊರೆಯುವ ಯೋಗ ಇದೆ.
ನಿಮ್ಮ ಉತ್ಸಾಹ ಹಾಗೂ ಸಾಮರ್ಥ್ಯವನ್ನು ಕುಗ್ಗಿಸಬೇಕು ಎಂಬಂಥ ಕೆಲವು ಪ್ರಯತ್ನಗಳನ್ನು ನಡೆಯಲಿವೆ. ಅದು ಕೌಟುಂಬಿಕ ಜೀವನದಲ್ಲೇ ಇರಬಹುದು ಅಥವಾ ಹೊರಗೆ ಇರಬಹುದು. ಇದರಿಂದ ನಿಮಗೂ ಒಂದಿಷ್ಟು ಬೇಸರ ಆಗಬಹುದು. ಆದರೆ ಸಂಯಮ, ತಾಳ್ಮೆ, ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣದಿಂದ ಈ ವಾರ ಹಲವು ಅನುಕೂಲಗಳು ಒದಗಿ ಬರಲಿವೆ. ಇನ್ನೂ ಕೆಲವರು ಬೇಕೆಂತಲೆ ನಿಮ್ಮನ್ನು ಸಿಟ್ಟಿಗೆಬ್ಬಿಸಬೇಕು ಎಂಬ ಉದ್ದೇಶದಿಂದಲೇ ಚುಚ್ಚಿ ಮಾತನಾಡುವುದಕ್ಕೆ ಪ್ರಯತ್ನಿಸಲಿದ್ದಾರೆ. ಅದು ನಿಮಗೆ ಗೊತ್ತಾಗಿಯೂ ಗೊತ್ತಾಗುತ್ತದೆ. ಹೇಗೆ ನಿಮ್ಮ ಪ್ರತಿಕ್ರಿಯೆ ಇರಬೇಕು ಅನ್ನೋದರ ಬಗ್ಗೆ ಸ್ಪಷ್ಟತೆ ಇರಿಸಿಕೊಳ್ಳಿ. ಇನ್ನು ಇದೇ ವೇಳೆ ಮಾಡಿರುವ ಕೆಲಸಗಳಿಂದ ಬರಬೇಕಾದ ಮೊತ್ತ ಕೈ ತಲುಪುವುದು ಒಂದಿಷ್ಟು ತಡ ಆಗಬಹುದು. ಆ ಹಣ ಬರುತ್ತದೆ ಅಂತಲೇ ನೆಚ್ಚಿಕೊಂಡು ಬೇರೆಯವರಿಗೆ ಮಾತು ಕೊಡುವುದಕ್ಕೆ ಹೋಗಬೇಡಿ. ಬೇರೆ ಎಲ್ಲಿಯಾದರೂ ಹಣ ಹೊಂದಾಣಿಕೆ ಮಾಡಿಕೊಡುವುದಕ್ಕೆ ಸಾಧ್ಯವಿದ್ದಲ್ಲಿ ಮಾತ್ರ ಭರವಸೆಯನ್ನು ಕೊಡಿ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುತ್ತಿರುವವರು ಅಥವಾ ಯಾವುದಾದರೂ ದಾಖಲಾತಿಗಳನ್ನು ಹೊಂದಿಸಿಕೊಳ್ಳುತ್ತಿರುವವರು ಆಲಸ್ಯ ಮಾಡದೆ ಬೇಗ ಸಂಗ್ರಹಿಸಿಟ್ಟುಕೊಳ್ಳಿ. ಕೃಷಿಕರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ. ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗುವುದಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂದಾದಲ್ಲಿ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳಲಿವೆ. ಈ ಹಿಂದೆ ನೀವು ಬಹಳ ಆಪ್ತರಿಗೆ ನೀಡಿದ್ದ ಮಾತಿನಂತೆ ನಡೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದ್ದು, ಅದನ್ನು ಪೂರ್ತಿ ಮಾಡಲಿಕ್ಕಾಗದೆ ನಿಂದನೆಯನ್ನು ಕೇಳಿಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ನಿಮಗೆ ನೆನಪಿರಬೇಕಾದ ವಿಚಾರ ಏನೆಂದರೆ, ನಿಮ್ಮ ಬಳಿ ಎಷ್ಟು ಹಣ ಇದೆಯೋ ಅದರ ಆಧಾರದಲ್ಲಿ ಮಾತ್ರ ನೀವು ವೆಚ್ಚದ ಬಜೆಟ್ ಮಾಡಿಕೊಳ್ಳುವುದು ಒಳ್ಳೆಯದು. ವೃತ್ತಿನಿರತರು ತಮ್ಮ ವೃತ್ತಿಗೆ ಸಹಾಯ ಆಗುವಂಥ ಹೊಸ ಕೋರ್ಸ್ ಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ. ಇದರಿಂದ ನಿಮಗೆ ಅನುಕೂಲ ಆಗಲಿದೆ. ಆದರೆ ಒಮ್ಮೆ ನಿರ್ಧಾರ ಮಾಡಿದ ನಂತರದಲ್ಲಿ ಅದರಿಂದ ವಾಪಸ್ ಬರಬೇಡಿ. ಇನ್ನೂ ಸ್ವಲ್ಪ ಸಮಯ ಕಾಯ್ದರೆ ಆ ಕೋರ್ಸ್ ಫೀ ಕಡಿಮೆ ಆಗುತ್ತದೆ, ನಿಮ್ಮ ಪರಿಚಿತರೊಬ್ಬರು ಜತೆಗೆ ಸಿಗುತ್ತಾರೆ ಎಂದೆಲ್ಲಾ ಕಾಯುತ್ತಾ ಕೂರಬೇಡಿ. ಇನ್ನು ಸ್ನೇಹಿತರು ನಿಮ್ಮ ಕೆಲವು ಆಲೋಚನೆಗಳಿಗೆ – ಯೋಜನೆಗಳಿಗೆ ಹಣ ಹೂಡುವುದಾಗಿ ಭರವಸೆ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಹೊಸ ಬಟ್ಟೆ, ಶೂ, ವಾಚ್ ಇಂಥವುಗಳು ಉಡುಗೊರೆಯಾಗಿ ದೊರೆಯಬಹುದು. ಸಂಬಂಧಿಕರ ಮನೆಗಳಿಗೆ ತೆರಳಿ, ಅಲ್ಲೇ ಕೆಲ ಸಮಯ ಇರುವಂಥ ಯೋಗ ಸಹ ನಿಮಗಿದೆ. ವಿವಾಹ ವಯಸ್ಕ ಯುವತಿಯರಿಗೆ ತಮ್ಮ ಮನಸ್ಸಿಗೂ ಒಪ್ಪುವಂಥ ಕಡೆಗಳಿಂದ ಸಂಬಂಧಗಳು ಹುಡುಕಿಕೊಂಡು ಬರಬಹುದು.
ಒಂದು ನಿಶ್ಚಿತವಾದ ಆದಾಯ ಬರುವಂಥ ಕಡೆಯಲ್ಲಿ ಹೂಡಿಕೆ ಮಾಡಬೇಕು ಎಂದು ಪ್ರಯತ್ನಿಸುತ್ತಾ ಇರುವವರಿಗೆ ಉತ್ತಮವಾದ ವಾರ ಇದಾಗಿರಲಿದೆ. ಅದರಲ್ಲೂ ನಿಮ್ಮಲ್ಲಿ ಯಾರು ವಿಲ್ಲಾ, ಪೆಂಟ್ ಹೌಸ್, ಹಾಲಿಡೇ ಹೋಮ್ ಇಂಥವುಗಳನ್ನು ಖರೀದಿ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಮೆಚ್ಚುವಂಥದ್ದು ದೊರೆಯಲಿದೆ. ಇನ್ನು ಯಾರಾದರೂ ತಮ್ಮ ಬಳಿ ಇರುವ ಆಸ್ತಿಯನ್ನು ಮಾರಿ, ಹೊಸದಾಗಿ ಬೇರೆ ಆಸ್ತಿ ಖರೀದಿ ಮಾಡಬೇಕು ಎಂದಿದ್ದಲ್ಲಿ ಸಹ ಅವರಿಗೆ ಅನುಕೂಲ ಆಗಿಬರಲಿದೆ. ಆದರೆ ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಹೊಸಬರ ಎದುರು ಮಾತನಾಡಲಿಕ್ಕೆ ಹೋಗಬೇಡಿ. ಇದರ ಜತೆಗೆ ನಿಮ್ಮ ವೈಯಕ್ತಿಕ ವಿಚಾರ, ಹಣಕಾಸಿನ ವಿಷಯಗಳು, ಕುಟುಂಬದ ಸಂಗತಿಗಳನ್ನು ಚರ್ಚೆ ಮಾಡಲಿಕ್ಕೆ ಹೋಗಬೇಡಿ. ಈ ಹಿಂದೆ ತುಂಬ ಎಚ್ಚರಿಕೆಯಿಂದ, ದೂರದೃಷ್ಟಿ ಇಟ್ಟುಕೊಂಡು ನೀವು ತೆಗೆದುಕೊಂಡಿದ್ದ ನಿರ್ಧಾರದಿಂದ ಈಗ ತುಂಬ ಅನುಕೂಲಗಳು ಆಗಲಿವೆ. ಈ ವಾರ ನಿಮಗೆ ಬಹಳ ಮುಖ್ಯವಾದ ಎಚ್ಚರಿಕೆ ಏನೆಂದರೆ ಯಾವುದೇ ಪರಿಸ್ಥಿತಿಯಲ್ಲಿ ಇತರರ ವಾಹನಗಳನ್ನು ಚಲಾಯಿಸುವುದಕ್ಕೆ ಹೋಗಬೇಡಿ. ಅದನ್ನು ಮೀರಿಯೂ ಪ್ರಯತ್ನ ಪಟ್ಟಲ್ಲಿ ಕೈಯಿಂದ ಹಣ ಕಟ್ಟಿಕೊಡಬೇಕಾಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಸ್ನೇಹಿತರ ಜತೆಗೆ ಇರುವಾಗ ನಾನು ಹೇಳಿದ್ದೇ ಆಗಬೇಕು ಎಂದು ಹಠ ಮಾಡಬೇಡಿ. ಕೃಷಿಕರಿಗೆ ಪಶುಸಾಕಣೆ, ಜೇನುಸಾಕಣೆ, ಡೇರಿ ವ್ಯವಹಾರ ಮಾಡುತ್ತಿದ್ದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಇದೇ ವೇಳೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ, ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವು ವ್ಯವಸ್ಥೆಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುವಂಥ ಸಾಧ್ಯತೆಗಳಿವೆ. ಸ್ನೇಹಿತರಿಗೆ ಹಣಕಾಸಿನ ಅಗತ್ಯ ಕಂಡುಬರುವುದರಿಂದ ನೀವು ಜಾಮೀನು ನೀಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೀವು ಜಾಮೀನು ನೀಡಬಯಸುವ ಸ್ನೇಹಿತರ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದು ಮುಖ್ಯ. ಹೊಸದಾಗಿ ಆ್ಯಪ್ ಗಳನ್ನು ಏನಾದರೂ ಡೌನ್ ಲೋಡ್ ಮಾಡಿಕೊಳ್ಳುತ್ತೀರಿ ಎಂದಾದಲ್ಲಿ ಜಾಗ್ರತೆಯಿಂದ ಇರಬೇಕು. ವೃತ್ತಿನಿರತರು ಫೋನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಅಥವಾ ಯುಪಿಐ ವ್ಯವಹಾರಗಳನ್ನು ಮಾಡುವಾಗ ಸರಿಯಾದ ವ್ಯಕ್ತಿಯ ಖಾತೆಗೇ ಹಣ ವರ್ಗಾವಣೆ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಹಣ ಕಳೆದುಕೊಳ್ಳಬೇಕಾದೀತು. ವಿದ್ಯಾರ್ಥಿಗಳು ಆರೋಗ್ಯದಲ್ಲಿ ಏರುಪೇರಾಗಿ, ದೈಹಿಕವಾಗಿ ಸುಸ್ತಾಗಲಿದ್ದೀರಿ. ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳಿ. ಹೆಣ್ಣುಮಕ್ಕಳು ಗಾಸಿಪ್ ಮಾತನಾಡಿ, ಇತರರ ದ್ವೇಷ ಕಟ್ಟಿಕೊಳ್ಳಲಿದ್ದೀರಿ. ಆದ್ದರಿಂದ ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬೇಡಿ.
ನಿಮ್ಮ ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿದೆ. ಯಾವ ಕೆಲಸವನ್ನು ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿರುತ್ತೀರೋ ಅದು ಮುಂದುವರಿಯುವುದಿಲ್ಲ ಎಂಬುದು ನಿಮಗೇ ತಿಳಿಯುತ್ತದೆ. ಇನ್ನು ಇದೇ ವೇಳೆ ನಿಮ್ಮ ಅಸಹಾಯಕತೆ ಇತರರಿಗೆ ಅವಕಾಶದಂತೆ ಕಾಣಬಹುದು. ಬೆಂದ ಮನೆಯಲ್ಲಿ ಗಳ ಹಿರಿದರು ಎಂಬಂತೆ ನಿಮ್ಮ ಸಮಸ್ಯೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನ ಮಾಡಲಿದ್ದಾರೆ. ಆದ್ದರಿಂದ ಒಂದು ವೇಳೆ ನೀವು ತುಂಬ ದೊಡ್ಡ ತೊಂದರೆಗೆ ಸಿಲುಕಿಕೊಂಡರೆ ಯಾರೆಂದರೆ ಅವರ ಬಳಿ ನೆರವು ಕೇಳಬೇಡಿ ಮತ್ತು ಸಮಸ್ಯೆಯನ್ನು ಹೇಳಿಕೊಳ್ಳುವ ಮುಂಚೆ ನಿಮ್ಮೆದುರು ಇರುವ ವ್ಯಕ್ತಿಯ ಉದ್ದೇಶ ಏನು ಎಂಬುದನ್ನು ಅಂದಾಜು ಮಾಡುವುದಕ್ಕೆ ಪ್ರಯತ್ನಿಸಿ. ಇಲ್ಲದಿದ್ದರೆ ನಿಮ್ಮ ತೊಂದರೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಬಿಡ್ತಾರೆ. ನಿಮ್ಮಲ್ಲಿ ಕೆಲವರಿಗೆ ಚರ್ಮದ ಅನಾರೋಗ್ಯ ಕಾಡಬಹುದು. ಒಂದು ವೇಳೆ ಈಗಾಗಲೇ ಚರ್ಮದ ಸಮಸ್ಯೆ ಇದೆ ಎಂದಾದಲ್ಲಿ ಉಲ್ಬಣ ಆಗಬಹುದು. ಅಥವಾ ಈ ವಾರ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದರ ಜತೆಗೆ ಹಲ್ಲಿನ ವಸಡಿನಲ್ಲಿ ಊತ, ರಕ್ತಸ್ರಾವ ಮೊದಲಾದ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಇಂಥ ಸನ್ನಿವೇಶದಲ್ಲಿ ಸೂಕ್ತ ವೈದ್ಯೋಪಚಾರವನ್ನು ಮಾಡಿಸಿಕೊಳ್ಳಿ. ಆಹಾರ ಸೇವನೆಯಲ್ಲಿ ಯಾವುದು ಅಲರ್ಜಿ ಎಂಬುದನ್ನು ಗುರುತಿಸಿಕೊಳ್ಳಿ. ಬಾಯಿ ಚಪಲಕ್ಕೆ ಬಿದ್ದು, ಏನೆಂದರೆ ಅದು ತಿನ್ನದಿರಿ. ಕೃಷಿಕರು ವಾಹನ ಚಾಲನೆ ವೇಳೆ ಸಣ್ಣ- ಪುಟ್ಟ ಅಪಘಾತಕ್ಕೆ ಈಡಾಗಬಹುದು. ಟ್ರ್ಯಾಕ್ಟರ್ ಚಾಲನೆ ಮಾಡುವಂಥವರಾಗಿದ್ದರೆ ದೊಡ್ಡ ಮಟ್ಟದ ಖರ್ಚುಗಳು ಆಗಬಹುದು. ಒಬ್ಬರಲ್ಲ, ಇಬ್ಬರ ಬಳಿ ರಿಪೇರಿಗೆ ಆಗುವ ವೆಚ್ಚ ಎಷ್ಟು ಎಂಬುದನ್ನು ಸರಿಯಾಗಿ ವಿಚಾರಿಸಿಕೊಳ್ಳಿ. ಚೀಟಿಯಲ್ಲಿ ಹಣ ಹಾಕುತ್ತಿರುವವರು ಅದನ್ನು ಹಿಂದಕ್ಕೆ ಪಡೆಯಬೇಕು ಎಂದುಕೊಂಡಲ್ಲಿ ತೆಗೆದುಕೊಂಡಲ್ಲಿ ಉತ್ತಮ. ಆ ಹಣವನ್ನು ಎಲ್ಲಿ ಹಾಕಬೇಕು ಎಂದು ಗೊತ್ತಾಗದಿದ್ದರೂ ತೊಂದರೆ ಇಲ್ಲ, ಬ್ಯಾಂಕ್ ನಲ್ಲಿ ಎಫ್.ಡಿ.ಯಾದರೂ ಮಾಡಿ. ಆದರೆ ಹಣವನ್ನು ತೆಗೆದುಕೊಳ್ಳುವುದು ಒಳ್ಳೆಯ ನಿರ್ಧಾರ ಆಗಲಿದೆ. ವೃತ್ತಿಯನ್ನು ಮಾಡುತ್ತಿರುವವರು ಶತ್ರುಗಳು, ಪ್ರತಿಸ್ಪರ್ಧಿಗಳ ವಿರುದ್ಧ ಸ್ವಲ್ಪ ಮಟ್ಟಿಗೆ ಕಳಾಹೀನರಾದಂತೆ, ದುರ್ಬಲರಾದಂತೆ ಕಾಣಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಸಹ ಸ್ವಲ್ಪ ಮಟ್ಟಿಗೆ ಕುಸಿಯಲಿದೆ. ದುರ್ಗಾದೇವಿಯ ಆರಾಧನೆಯನ್ನು ಮಾಡಿ. ಪ್ರಮುಖ ಕೆಲಸಗಳಿಗೆ ತೆರಳುವಾಗ ಮನಸ್ಸಿನಲ್ಲಿ ದೇವಿಯ ಸ್ಮರಣೆಯನ್ನು ಮಾಡಿ. ವಿದ್ಯಾರ್ಥಿಗಳು ಪ್ರಮುಖವಾದ- ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳಬಹುದು. ಅಥವಾ ಎಲ್ಲಿ ಇಟ್ಟಿದ್ದೀರಿ ಎಂಬುದನ್ನೇ ಮರೆಯಬಹುದು. ಮಹಿಳೆಯರು ಉದ್ಯಮ- ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಲ್ಲಿ ನಿಮ್ಮ ನಿರ್ಣಯ- ನಿರ್ಧಾರಗಳಿಗೆ ವಿರೋಧ ಎದುರಿಸಬೇಕಾಗುತ್ತದೆ.
ಈ ವಾರ ಮಾಡುವ ಕೆಲಸದಲ್ಲಿ ಉತ್ಸಾಹ ಇರುತ್ತದೆ. ಇದರ ಜತೆಗೆ ಕೆಲಸಗಳಲ್ಲಿ ಯಶಸ್ಸು ಸಹ ನಿಮ್ಮದಾಗುತ್ತದೆ. ಒಟ್ಟಿನಲ್ಲಿ ಪಾದರಸದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತೀರಿ. ಇತರರು ಅಂದಾಜು ಕೂಡ ಮಾಡಲು ಸಾಧ್ಯವಾಗದಂತೆ ಒಳ್ಳೊಳ್ಳೆ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗಕ್ಕಾಗಿ ನಿಮಗೆ ಆಹ್ವಾನ ಬರಬಹುದು. ಇನ್ನು ವೇತನದ ಜತೆಗೆ ಲಾಭದಲ್ಲೂ ಪಾಲು ನೀಡುವುದಾಗಿ ಹೇಳಿ, ಕೆಲವರು ನಿಮ್ಮನ್ನು ಆಹ್ವಾನಿಸಬಹುದು. ಏಕಕಾಲದಲ್ಲಿ ಹಲವು ಅವಕಾಶಗಳು, ಗೌರವಾದರಗಳು ದೊರೆಯಲಿವೆ. ನಿಮ್ಮಷ್ಟಕ್ಕೆ ನೀವು ಎಂಬಂತೆ ಇದ್ದರೂ ಈ ಹಿಂದೆ ನೀವು ಕೆಲಸ ಮಾಡಿಕೊಟ್ಟಿದ್ದರಿಂದ ಬಹಳ ಸಂತೋಷವಾಗಿದ್ದವರು ಮತ್ತೊಮ್ಮೆ ಹುಡುಕಿಕೊಂಡು ಬರಲಿದ್ದಾರೆ. ಈ ವಾರ ನಿಮ್ಮ ಪಾಲಿಗೆ ಒದಗಿ ಬರುವ ಅನುಕೂಲಗಳನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬುದನ್ನು ಸರಿಯಾದ ರೀತಿಯಲ್ಲಿ ಆಲೋಚನೆ ಮಾಡಿಟ್ಟುಕೊಳ್ಳಿ. ಆದರೆ ಈ ವಾರ ನಿದ್ರೆಗೆ ನಾನಾ ಅಡೆ-ತಡೆಗಳು ಕಾಡಲಿವೆ. ಕೆಟ್ಟ ಕನಸುಗಳು ಬೀಳಬಹುದು. ಅಥವಾ ಒಳ್ಳೆ ನಿದ್ದೆ ಬಂದಿದ್ದಾಗ ಯಾರೋ ಕಾಲ್ ಮಾಡಿ, ನಿದ್ದೆಯನ್ನು ಹಾಳು ಮಾಡಲಿದ್ದಾರೆ. ಆದ್ದರಿಂದ ಮೊಬೈಲ್ ಫೋನ್ ಬಳಕೆ ರಾತ್ರಿ ವೇಳೆ ಸಾಧ್ಯವಾದಷ್ಟೂ ಕಡಿಮೆ ಮಾಡಿ. ಇನ್ನು ನೀರನ್ನು ಚೆನ್ನಾಗಿ ಕುಡಿಯಿರಿ. ಕೃಷಿಕರಾಗಿದ್ದಲ್ಲಿ ಈ ಹಿಂದೆ ಏನಾದರೂ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿ, ಚಿಂತೆಗೆ ಕಾರಣವಾಗಿದ್ದಲ್ಲಿ ಅಂಥ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವ ಯೋಗ ಇದೆ. ನೀವು ಬಹಳ ಇಷ್ಟ ಪಟ್ಟಿದ್ದ ಜಮೀನು ಖರೀದಿ ಮಾಡುವುದಕ್ಕೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಅಥವಾ ಮಾರಾಟಕ್ಕೆ ಇಟ್ಟಿರುವಂಥ ವ್ಯಕ್ತಿಯ ದುಡ್ಡನ್ನು ಆ ನಂತರದಲ್ಲಿ ಕೊಡುವುದಕ್ಕೆ ಸಮಾಯಾವಕಾಶ ನೀಡಬಹುದು. ವೃತ್ತಿನಿರತರಿಗೆ ಪ್ರಭಾವಿಗಳ ಸಂಪರ್ಕ ದೊರೆಯಲಿದೆ. ನೀವಾಗಿಯೇ ತೆಗೆದುಕೊಂಡ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ಗೆಲುವು ಸಾಧಿಸಲಿದ್ದೀರಿ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಸೋಷಿಯಲ್ ಕಾಂಟ್ಯಾಕ್ಟ್ ಗಳ ವ್ಯಾಪ್ತಿ ಹಿಗ್ಗಲಿದೆ. ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದ ಕೆಲಸ ಏನಾದರೂ ಇದ್ದಲ್ಲಿ ಈ ವಾರ ಆಗಲಿದೆ. ಈಗಾಗಲೇ ಕೆಲಸ ಮಾಡಿಯಾಗಿದೆ, ಹಣ ಕೈಗೆ ಬರುವುದಕ್ಕೆ ತಡವಾಗುತ್ತಿದೆ ಎಂದಿದ್ದಲ್ಲಿ ಅದು ಸಹ ನಿಮ್ಮ ಕೈ ಸೇರುವಂಥ ಎಲ್ಲ ಅವಕಾಶಗಳು ಇವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಇಂಟರ್ನ್ ಷಿಪ್ ಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶ ದೊರೆಯಲಿದೆ. ಭವಿಷ್ಯದಲ್ಲಿ ಇದರಿಂದ ಹೆಚ್ಚಿನ ಅನುಕೂಲ ಆಗುವ ಎಲ್ಲ ಸಾಧ್ಯತೆಗಳಿವೆ. ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಗಮನ ಇರಲಿ. ಮಹಿಳೆಯರಿಗೆ ಸೋದರ- ಸೋದರಿ, ಅಪ್ಪ- ಅಮ್ಮ, ತಂದೆ- ತಾಯಿ ಸಮಾನರು ಹಣಕಾಸಿನ ಸಹಾಯ ಕೇಳಬಹುದು.
ನಿಮ್ಮ ಎದುರಿಗೆ ಇರುವ ವ್ಯಕ್ತಿಯ ನಿರೀಕ್ಷೆ ಏನು, ಆತ ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಿದ್ದಾನೆ ಎಂಬ ಸಂಗತಿಯನ್ನು ಬಹಳ ಬೇಗ ಗುರುತಿಸಲಿದ್ದೀರಿ. ಅದಕ್ಕೆ ಕಾರಣ ಆಗುವುದು ನಿಮ್ಮ ಈ ಹಿಂದಿನ ಅನುಭವ. ಆದ್ದರಿಂದ ಏನು ಹೇಳಬಹುದು ಅಂದರೆ ನಿಮ್ಮ ಅನುಭವದ ಲಾಭವನ್ನು ಪಡೆಯುವುದಕ್ಕೆ ಈ ವಾರ ಒಳ್ಳೆ ಅವಕಾಶ ಇದೆ. ನೀವು ಎಷ್ಟು ವೇತನ ಅಥವಾ ಕಮಿಷನ್ ಅಥವಾ ಲಾಭದ ಹಂಚಿಕೆ ಬೇಕು ಎಂದು ಕೇಳಿ, ಪಡೆದುಕೊಳ್ಳುವಂಥ ಸ್ಥಿತಿಯಲ್ಲಿ ಇರುತ್ತೀರಿ. ಬಾಯಿ ಮಾತಿನ ಹೊಗಳಿಕೆಗೆ ಕರಗಿ ಹೋಗಿ, ಎಷ್ಟು ಕೊಟ್ಟರೂ- ಏನು ಕೊಟ್ಟರೂ ಪರವಾಗಿಲ್ಲ ಎಂದೇನಾದರೂ ಹೇಳಿದರೋ ಅವಕಾಶವನ್ನು ಕಳೆದುಕೊಂಡಿರಿ ಅಂತಲೇ ಅರ್ಥ. ನೀವೇನಾದರೂ ಮನೆ- ಜಮೀನು ಮಾರಾಟಕ್ಕೆ ಇಟ್ಟಿದ್ದಲ್ಲಿ ಹೆಚ್ಚೆಚ್ಚು ಮಂದಿ ವಿಚಾರಣೆಗೆ ಬರಲಿದ್ದಾರೆ. ಎದುರಾ ಬದುರು ಬಂದು ವ್ಯವಹಾರ ಮಾತನಾಡುವ ತನಕ ಕಾಯಿರಿ, ಫೋನ್ ನಲ್ಲಿ ಯಾವುದೇ ಮಾತುಕತೆ ಬೇಡ. ಉಪನ್ಯಾಸಕರು, ಪುರೋಹಿತರು, ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದೂರದ ಊರುಗಳಲ್ಲಿ ಮುಖ್ಯವಾದ ಕಾರ್ಯಕ್ರಮಗಳಿಗೆ ಭಾಗೀ ಆಗುವಂತೆ ಅಥವಾ ನೀವೇ ಮುಂದಾಳಾಗಿ ನಿಂತು, ಕಾರ್ಯ ನೆರವೇರಿಸಿಕೊಡುವಂತೆ ಕೇಳಿಕೊಳ್ಳಲಿದ್ದಾರೆ. ನಿಮ್ಮ ತೀರ್ಮಾನಗಳಿಗೆ ಮನೆಯ ಸದಸ್ಯರಿಂದಲೂ ಉತ್ತಮವಾದ ಬೆಂಬಲ ವ್ಯಕ್ತವಾಗಲಿದೆ. ಕೃಷಿಕರಿಗೆ ನಿಮ್ಮದೇ ಕೆಲಸ ಮಾಡುವವರು ಅಥವಾ ನಿಮ್ಮ ಜಮೀನಿನ ನೆರೆ ಹೊರೆಯಲ್ಲಿರುವವರಿಂದ ಜಮೀನು ಖರೀದಿಗೆ ನೀಡುವಂತೆ ಒತ್ತಾಯ ಬರಬಹುದು, ಇದರ ಜತೆಗೆ ನೀವು ಗೌರವಿಸುವಂಥ ಕೆಲವು ಹಿರಿಯರಿಂದ ಹೇಳಿಸುವ ಸಾಧ‌್ಯತೆಗಳು ಸಹ ಇವೆ. ಭಾವನಾತ್ಮಕವಾಗಿ ಯಾವುದಕ್ಕೂ ಮಣಿಯಬೇಡಿ. ಆರ್ಥಿಕವಾಗಿ ಅನುಕೂಲ ಆಗಬಹುದು ಎಂಬಂತೆ ಇದ್ದರೆ ಮಾತ್ರ ಮುಂದುವರಿಯಿರಿ. ಅಥವಾ ನಿಮ್ಮಲ್ಲಿ ಕೆಲವರಿಗೆ ಸೋದರ ಸಂಬಂಧಿಗಳೇ ತಮ್ಮ ಜಾಗವನ್ನು ನೀವು ಖರೀದಿ ಮಾಡುವಂತೆ ಕೇಳುವ ಸಾಧ್ಯತೆ ಇದೆ. ಯೋಚಿಸಿ, ಸರಿಯಾದ ತೀರ್ಮಾನ ತೆಗೆದುಕೊಳ್ಳಿ. ವೃತ್ತಿನಿರತರಿಗೆ ಪ್ರಯಾಣಗಳಿವೆ. ಕೆಲವರು ವಿದೇಶ ಪ್ರವಾಸಕ್ಕೆ ಸಹ ತೆರಳಬಹುದು. ಈ ಸಂದರ್ಭದಲ್ಲಿ ಹೊಸ ಪರಿಚಯಗಳು ಆಗಲಿವೆ. ಇದರಿಂದ ವೃತ್ತಿ ಬದುಕಲ್ಲಿ ತುಂಬ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳು ಕೋರ್ಸ್ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಮನೆಯಲ್ಲಿ ಚರ್ಚೆ ಮಾಡುವಂಥ ಸಾಧ್ಯತೆಗಳಿವೆ. ಕೋರ್ಸ್ ಕಾಂಬಿನೇಷನ್ ಸಹ ಬದಲಾಯಿಸಿಕೊಳ್ಳುವುದಕ್ಕೆ ಮುಂದಾಗಬಹುದು. ಸ್ವಲ್ಪ ಮಟ್ಟಿಗೆ ಹಣ ಕೈ ಬಿಡಬಹುದು. ಆದರೆ ಸರಿಯಾಗಿ ಆಲೋಚನೆ ಮಾಡಿ, ತೀರ್ಮಾನ ಮಾಡಿದಲ್ಲಿ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಸ್ತ್ರೀಯರಿಗೆ ವಿಲಾಸಿ ವಾಹನಗಳು, ಹೋಟೆಲ್ ಗಳು, ರೆಸಾರ್ಟ್ ಗಳಿಗೆ ತೆರಳುವಂಥ ಯೋಗ ಇದೆ. ಕುಟುಂಬ ಸದಸ್ಯರ ಜತೆಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ