Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 16ರಿಂದ 23ರ ತನಕ ವಾರಭವಿಷ್ಯ  

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 15, 2024 | 5:00 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 16ರಿಂದ 23ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 16ರಿಂದ 23ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 16ರಿಂದ 23ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇಷ್ಟು ಸಮಯ ನೀವು ಹಾಕಿದ ಶ್ರಮದ ಫಲವನ್ನು ಪಡೆಯಲಿದ್ದೀರಿ. ದೊರೆತ ಫಲಿತಾಂಶವನ್ನು ಕಂಡು ಸಂಭ್ರಮ ಪಡಲಿದ್ದೀರಿ. ಇನ್ನು ನಿಮ್ಮ ಸಾಧನೆಗೆ ಇತರರು ಹೊಟ್ಟೆಕಿಚ್ಚು ಪಡುವಂತೆ ಆಗುತ್ತದೆ. ಉದ್ಯಮ- ವ್ಯವಹಾರಗಳನ್ನು ಮಾಡುತ್ತಿರುವವರು ತಮ್ಮ ಮಾತಿನ ಮೂಲಕ ಇತರರನ್ನು ಒಪ್ಪಿಸುವುದರಲ್ಲಿ ಯಶಸ್ವಿ ಆಗಲಿದ್ದೀರಿ. ಅದರ ಮೂಲಕವಾಗಿ ಹಣದ ಹರಿವನ್ನು ಹೆಚ್ಚು ಮಾಡಿಕೊಳ್ಳುವಂಥ ಯೋಗ ಇದೆ. ನವ ದಂಪತಿಗೆ ವಿದೇಶ ಪ್ರಯಾಣ ಅಥವಾ ಸಮುದ್ರ ಇರುವಂಥ, ಬೆಟ್ಟಗಳಿರುವಂಥ ಪ್ರದೇಶಗಳಿಗೆ ತೆರಳುವಂಥ ಯೋಗ ಇದೆ. ಒಂದು ವೇಳೆ ನಿಮಗೆ ಬರಬೇಕಾದ ಸಾಲದ ಬಾಕಿ ಇದ್ದಲ್ಲಿ ಫಾಲೋ ಅಪ್ ಸರಿಯಾಗಿ ಮಾಡಿ, ಪ್ರಯತ್ನಿಸಿದರೆ ಅದು ಬರುವಂಥ ಯೋಗ ಇದೆ. ಬ್ಯಾಂಕ್, ಲೇವಾದೇವಿ ಸಂಸ್ಥೆಗಳಲ್ಲಿ, ವಾಹನಗಳಿಗೆ ಸಾಲ ಒದಗಿಸುವಂಥ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮುಗಿಸುವ ಮೂಲಕ ಮೇಲಧಿಕಾರಿಗಳಿಂದ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಕೃಷಿಕರಿಗೆ ಹಣ, ಶ್ರಮ, ಸಮಯ ಇವೆಲ್ಲ ಹೆಚ್ಚೆಚ್ಚು ಹಾಕಬೇಕಾಗುತ್ತದೆ. ಮುಖ್ಯವಾಗಿ ಈಗಾಗಲೇ ಅರ್ಧ ಮುಗಿದಿರುವ ಕೆಲಸಗಳನ್ನು ಮತ್ತೆ ಮೊದಲಿಂದ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಒಂದು ವೇಳೆ ನಿಮಗೆ ಬಿಡುವಿಲ್ಲದೆ ಇತರರನ್ನು ನಂಬಿ, ಕೆಲಸ ಒಪ್ಪಿಸುತ್ತಿದ್ದೀರಿ ಎಂದಾದಲ್ಲಿ ಸರಿಯಾಗಿ ಫಾಲೋ ಅಪ್ ಮಾಡುವ ಕಡೆಗೆ ಲಕ್ಷ್ಯ ಇರಲಿ. ವೃತ್ತಿನಿರತರು ನಿಮ್ಮ ಕೈಯಿಂದ ಹಣ ಹಾಕಿಕೊಂಡು ಮಾಡಿದ್ದ ಕೆಲಸದ ದುಡ್ಡು ಬಂದಿಲ್ಲ ಎಂದಾದರೆ ಈ ವಾರ ಅದು ಬರುವ ಸಾಧ್ಯತೆ ಇದೆ. ಅನಿವಾರ್ಯ ಎಂಬಂತೆ ಕೆಲಸ- ಕಾರ್ಯದ ನಿಮಿತ್ತವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಲಿ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಅಂತ ಮಾಡಲಿಕ್ಕೆ ಆಗದಿರಬಹುದು. ಇದರಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತದೆ. ನಿಮಗೇನಾದರೂ ಒಂದು ವೇಳೆ ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆಗಳು ಇದ್ದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳಿಗೆ ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ಗ್ಯಾಜೆಟ್ ಅಥವಾ ವ್ಯಾಸಂಗಕ್ಕೆ ಅಗತ್ಯವಾದ ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದ್ದು, ನಿಮ್ಮಲ್ಲಿ ಕೆಲವರಿಗೆ ಗಿಫ್ಟ್ ಆಗಿ ದೊರೆಯುವಂಥ ಸಾಧ್ಯತೆ ಇದೆ. ತಂದೆ- ತಾಯಿ ನೀಡಿದಂಥ ಸಲಹೆ- ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ. ಮಹಿಳೆಯರಿಗೆ ಹಳೇ ಸ್ನೇಹಿತರನ್ನು ಭೇಟಿ ಆಗುವ ಯೋಗ ಇದೆ. ಇದರಿಂದ ಮನಸ್ಸಿಗೆ ಸಂತೋಷ ಆಗಲಿದೆ. ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ಕಡೆಗೆ ಉದ್ಯೋಗಾವಕಾಶ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಣ ಮಾಡುವವರು ತಮಗೆ ಬೇಕಾದ ಯಾವ ದಾರಿಯಲ್ಲಾದರೂ ಮಾಡಿಕೊಳ್ಳಲಿ. ಅವರ ಆದಾಯದಿಂದ ನೀವು ಉತ್ತೇಜಿತರಾಗಬೇಡಿ. ಸ್ನೇಹಿತರು- ಸಂಬಂಧಿಕರು ತಮ್ಮ ಆದಾಯದ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ವಿಪರೀತ ಆಸಕ್ತಿಯನ್ನು ತೋರಿಸಬೇಡಿ. ಯಾಕೆಂದರೆ ನೀವು ಇತರರ ಮಾತಿನಿಂದ ಪ್ರಭಾವಕ್ಕೆ ಒಳಗಾಗಿ ಬೆಟ್ಟಿಂಗ್ ಮೇಲೆ ಹೆಚ್ಚಿನ ಹಣ ಹಾಕುವಂಥ ಸಾಧ್ಯತೆ ಇದೆ. ಆದ್ದರಿಂದ ರೊಚ್ಚಿಗೆದ್ದು ಜೂಜಿಗಾಗಿ ಹಣ ಹಾಕದಿರಿ. ಇನ್ನು ಬಾಡಿಗೆ ಆದಾಯದ ಮೂಲಕ ಹಣ ಗಳಿಸುವವರಿಗೆ ಅದರಲ್ಲಿ ಇಳಿಕೆ ಕಾಣಿಸಲಿದೆ. ನಿಮ್ಮ ಮೂಲ ಸ್ವಭಾವದಿಂದ ಬದಲಾವಣೆ ಮಾಡಿಕೊಳ್ಳದಿರಿ. ಸಂಬಂಧಿಕರ ಕಡೆಯಿಂದ ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ಎಷ್ಟೇ ಆತುರದಲ್ಲಿ ಇದ್ದರೂ ಈ ವಾರ ಯಾವ ಕಾರಣಕ್ಕೂ ವೇಗದ ಚಾಲನೆಯನ್ನು ಮಾಡದಿರಿ. ಕೃಷಿಕರಾಗಿದ್ದಲ್ಲಿ ಏಕಾಂಗಿತನ ನಿಮ್ಮನ್ನು ಕಾಡಬಹುದು. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಆದ ಘಟನೆಯನ್ನು ಈಗ ಎತ್ತಾಡಿ, ಬೇಸರ ಹೊರಹಾಕಲಿದ್ದಾರೆ. ಈ ಹಿಂದೆ ನೀವು ತೆಗೆದುಕೊಂಡ ಹಣಕಾಸಿನ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಇನ್ನು ಮನೆಯಿಂದ ದೂರದಲ್ಲಿ ಇದ್ದು, ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಸಾಲವನ್ನಾದರೂ ಪಡೆದು ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಆಸ್ತಮಾ, ಮೈಗ್ರೇನ್ ಈ ರೀತಿ ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರವಿರಿ. ವೃತ್ತಿಪರರಾಗಿದ್ದಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ನಿಮ್ಮ ಮೈ ಮೇಲೆ ಬರಲಿವೆ. ನೀವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದಿದ್ದ ವೃತ್ತಿಪರತೆಗೆ ಅಗತ್ಯ ಇರುವಂಥ ಸಲಕರಣೆ, ವಸ್ತುಗಳನ್ನು ಕೊಳ್ಳುವಂಥ ಸಾಧ್ಯತೆಗಳಿವೆ. ಪ್ರಭಾವಿಗಳ ಪರಿಚಯ ಆಗಲಿದೆ. ಈ ಹಿಂದೆ ನೀವು ಕಷ್ಟಪಟ್ಟು ಬೆಳೆಸಿಕೊಂಡಿದ್ದ ಸಾಮರ್ಥ್ಯ, ಪರಿಚಯ ಈಗ ನಿಮಗೆ ಉಪಯೋಗಕ್ಕೆ ಆಗಲಿದೆ. ಸಣ್ಣ ಪ್ರಮಾಣದಲ್ಲಿಯಾದರೂ ಸಾಲ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಉಳಿತಾಯ ಮಾಡಿದ್ದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂತೆಗೆಯಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಆದರೆ ಅದನ್ನು ಯಾವ ಕಾರಣಕ್ಕೆ ಹಣ ತೆಗೆದುಕೊಳ್ಳುತ್ತೀರೋ ಅದಕ್ಕಾಗಿಯೇ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಬ್ಲ್ಯಾಕ್ ಮೇಲ್ ಗೆ ಗುರಿ ಆಗುವ ಸಾಧ್ಯತೆಗಳಿವೆ. ಅದು ನಿಮ್ಮ ನೆಮ್ಮದಿಯನ್ನು ಕೆಡಿಸಲಿದೆ. ಪೊಲೀಸ್ ಠಾಣೆ ಕೆಲಸಗಳು, ಕೋರ್ಟ್- ಕಚೇರಿ ವ್ಯವಹಾರಗಳಿಗೆ ವಿಪರೀತ ಅಲೆದಾಡುವಂಥ ಯೋಗವಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮದುವೆ ನಿಶ್ಚಯ ಆಗಿರುವವರಿಗೆ ಅಸಮಾಧಾನ ಮೂಡುವಂಥ ಬೆಳವಣಿಗೆಗಳು ಆಗಲಿವೆ. ಇದೇ ವೇಳೆ ಸ್ನೇಹಿತರ ಜತೆಗಿನ ಹಣಕಾಸಿನ ಸಂಗತಿಯೋ ಅಥವಾ ಸಂಬಂಧಗಳ ವಿಚಾರವಾಗಿಯೋ ಒಟ್ಟಿನಲ್ಲಿ ಯಾವುದೋ ಹಳೆಯ ವಿಚಾರವೊಂದು ನಿಮ್ಮನ್ನು ಈ ವಾರ ವಿಪರೀತ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಜಾಮೀನು ನೀಡುವುದಾಗಿ ಮಾತು ನೀಡಬೇಡಿ. ಏಕೆಂದರೆ ಈ ಕಾರಣಕ್ಕೆ ನಿಮ್ಮ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ತಡೆಯಾಗಿ ಪರಿಣಮಿಸಬಹುದು. ಇನ್ನು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಜ್ಯೋತಿಷಿಗಳು, ಪುರೋಹಿತರಿಗೆ ದೂರ ಪ್ರಯಾಣದ ಯೋಗ ಇದ್ದು, ದಿಢೀರನೆ ಹೊರಡಬೇಕಾಗಿ ಬರುವುದರಿಂದ ಕೆಲವು ಕೆಲಸ- ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಿಗೆ ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ಸಹಕಾರ ಸಂಘಗಳಲ್ಲಿ ಯಾವುದಾದರೂ ಹುದ್ದೆಗಳಿಗೆ ಸ್ಪರ್ಧೆ ಮಾಡುವಂತೆ ಕೇಳಿಕೊಂಡಲ್ಲಿ ಈ ಬಗ್ಗೆ ಕುಟುಂಬ ಸದಸ್ಯರ ಜತೆಗೂ ಚರ್ಚೆ ಮಾಡಿದ ನಂತರ ನಿರ್ಧಾರ ಕೈಗೊಳ್ಳುವುದು ಉತ್ತಮ. ದೊಡ್ಡ ಮೊತ್ತದ ಹೂಡಿಕೆ ಭೂಮಿಯ ಮೇಲೆ ಅಥವಾ ಡೇರಿ ವ್ಯವಹಾರದ ಮೇಲೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ. ಇದಕ್ಕೆ ಯಾವುದೇ ಹಿಂಜರಿಕೆ ಬೇಡ. ವೃತ್ತಿರನಿರತರಾಗಿದ್ದಲ್ಲಿ ಆದಾಯ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿದ್ದೀರಿ. ಅನಿರೀಕ್ಷಿತವಾಗಿ ಹೊಸ ಜನರ ಪರಿಚಯ ಆಗಲಿದೆ. ಇದು ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಅದು ಅರ್ಧಂಬರ್ಧ ಆಗಿ ನಿಂತಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಇದೆ. ಈಗ ನೀವು ನೀಡುತ್ತಿರುವ ಸೇವೆಗಳ ಶುಲ್ಕವನ್ನು ಹೆಚ್ಚು ಮಾಡುವುದಕ್ಕೆ ಆಲೋಚನೆ ಮಾಡುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಈ ವಾರ ಹಳೇ ಸ್ನೇಹಿತರು- ಗೆಳತಿಯರನ್ನು ಈ ದಿನ ಭೇಟಿ ಆಗುವ ಯೋಗ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಮನೆಯ ಹೊರಗಿನ ಆಹಾರ ಪದಾರ್ಥ- ನೀರಿನ ಸೇವನೆ ಮಾಡದಿರುವುದು ಉತ್ತಮ. ಏಕೆಂದರೆ ಜ್ವರ, ಹೊಟ್ಟೆನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಹಿಳೆಯರು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಲುವಾಗಿ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ದೇವತಾ ಕಾರ್ಯಗಳಿಗೆ ನಿಮಗೆ ಆಹ್ವಾನ ಬರಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಈ ಹಿಂದೆ ಯಾರು ಸಹಾಯ ಮಾಡಿದ್ದರೋ ಅಂಥವರ ಬಗ್ಗೆಯೇ ನೀವು ನಕಾರಾತ್ಮಕವಾಗಿ ಮಾತನಾಡಲಿದ್ದೀರಿ. ಈ ವಿಚಾರ ಸಂಬಂಧಪಟ್ಟವರ ಕಿವಿಗೆ ತಲುಪಲಿದೆ. ಆ ನಂತರದಲ್ಲಿ ನಾನು ಹೀಗೆ ಮಾತನಾಡಬಾರದಿತ್ತು ಎಂದು ಹಲವು ಸಲ, ವಿವಿಧ ವಿಚಾರಗಳಿಗೆ ನಿಮಗೆ ಅನಿಸಲಿದೆ. ಆದ್ದರಿಂದ ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಇನ್ನು ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವಂಥವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಲೆಕ್ಕ-ಪತ್ರ, ದಾಖಲೆಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಈ ಹಿಂದೆ ಆದ ನಿರ್ಲಕ್ಷ್ಯಕ್ಕೆ ಈಗ ಬೆಲೆ ತೆರಬೇಕಾಗುತ್ತದೆ. ಮೊದಮೊದಲಿಗೆ ಎಂಬಂತೆ ಆರಂಭಿಸಿದ ಕೆಲಸಗಳಿಗೆ ಹೆಚ್ಚು ಸಮಯ ನೀಡಬೇಕಾದ ಸ್ಥಿತಿ ಏರ್ಪಡುವುದರಿಂದ ಮನೆಯಲ್ಲಿ ನಡೆಯಬೇಕಾದ ಮುಖ್ಯ ಕಾರ್ಯಕ್ರಮಕ್ಕೆ ಹೆಚ್ಚು ಸಮಯ ನೀಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ವಿದೇಶಗಳಲ್ಲಿ ಉದ್ಯೋಗ ಅಥವಾ ವ್ಯಾಸಂಗ ಮಾಡುತ್ತಿರುವವರು ಸ್ನೇಹಿತರ ಹಿನ್ನೆಲೆ ಹಾಗೂ ಅವರ ಸ್ವಭಾವವನ್ನು ಸರಿಯಾಗಿ ವಿಶ್ಲೇಷಿಸುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಾಗಿದ್ದಲ್ಲಿ ಹಣಕಾಸು ಲೆಕ್ಕಾಚಾರಗಳು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ವಿಚಾರಿಸಿ, ಮುಂದುವರಿಯುವುದು ಉತ್ತಮ. ಜಮೀನಿನಲ್ಲಿ ಮಾಡಿಸುವಂಥ ಕೆಲಸಗಳ ವಿಚಾರದಲ್ಲಿ ಸ್ಪಷ್ಟತೆ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೃಷಿ ಕಾರ್ಮಿಕರಾಗಿ ಇರುವಂಥವರಾಗಿದ್ದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿಯನ್ನು ಖರೀದಿಸುವ ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗಗಳಿವೆ. ಈ ಬೆಳವಣಿಗೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಕುಟುಂಬ ಸದಸ್ಯರು ನೆರವು ನೀಡಲಿದ್ದಾರೆ. ವೃತ್ತಿನಿರತರಾಗಿದ್ದು, ಹಣಕಾಸು ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಿ ಅಂತಾದಲ್ಲಿ ನಿಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಮೊತ್ತ ನಷ್ಟವಾಗುತ್ತಿದ್ದುದನ್ನು ತಪ್ಪಿಸಲಿದ್ದೀರಿ. ಇನ್ನು ಸ್ವಂತ ಕಚೇರಿಯನ್ನು ನಡೆಸುತ್ತಿರುವವರಿದ್ದಲ್ಲಿ ಹೊಸ ಶಾಖಾ ಕಚೇರಿಯನ್ನು ಆರಂಭಿಸುವಂಥ ಯೋಗ ಇದೆ. ಸಂಘ- ಸಂಸ್ಥೆಗಳಿಗೆ ಸನ್ಮಾನಗಳು ಆಗುವಂಥ ಯೋಗ ಸಹ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವಂಥ ಯೋಗಗಳಿವೆ. ಯಾವುದಾದರೂ ಪ್ರಾಜೆಕ್ಟ್ ಅಥವಾ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆಯೇ ದೂರ ಪ್ರಯಾಣ ಮಾಡಬೇಕಾಗಲಿದೆ. ಮಹಿಳೆಯರು ಗಾಸಿಪ್ ಮಾತನಾಡಬೇಡಿ. ಇದರಿಂದ ನಿಮ್ಮ ಬಗ್ಗೆಯೇ ಇತರರು ಕೆಟ್ಟದಾಗಿ ಮಾತನಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಪ್ರೀತಿ- ಪ್ರೇಮದ ವಿಚಾರಗಳು ಯುವತಿಯರಿಗೆ ಪ್ರಾಮುಖ್ಯ ಪಡೆಯಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ತಂದೆ-ತಾಯಿಯ ಆರೋಗ್ಯದಲ್ಲಿನ ಏರುಪೇರು ಆತಂಕವನ್ನು ಸೃಷ್ಟಿಸಲಿದೆ. ಔಷಧೋಪಚಾರದಲ್ಲಿನ ವ್ಯತ್ಯಾಸದಿಂದ ಅಲರ್ಜಿ ಆಗಬಹುದು. ಇದೇ ವೇಳೆ ವಿವಾಹಿತರಿಗೆ ಈ ವಾರ ಭಾವನಾತ್ಮಕವಾಗಿ ಬಹಳ ಸವಾಲಿನಿಂದ ಕೂಡಿರುತ್ತದೆ. ಯಾರ ಬಳಿಯಾದರೂ ವ್ಯವಹಾರ- ಒಪ್ಪಂದದ ವಿಚಾರಗಳನ್ನು ಮಾತನಾಡುವ ಮುನ್ನ ಹಣಕಾಸಿನ ಸಂಗತಿಯನ್ನು ಮೊದಲಿಗೆ ಮಾತನಾಡುವುದು ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಆದ ಮೇಲೆ ಕೊಟ್ಟರಾಯಿತು ಎಂಬ ಧೋರಣೆ ಬೇಡ. ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಒಂದು ವೇಳೆ ಅದಕ್ಕೆ ಅಗತ್ಯ ಇರುವಷ್ಟು ಹಣ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಷೋ ರೂಮ್‌ಗೆ ತೆರಳಿ, ನೋಡಿಕೊಂಡಾದರೂ ಬರುತ್ತೀರಿ. ಕೃಷಿ ವಲಯದಲ್ಲಿ ಇರುವವರು ಭೂಮಿ ಮಾರಾಟ ಮಾಡುವುದಕ್ಕೋ ಅಥವಾ ಇರುವ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ, ಮಾರಾಟ ಮಾಡುವುದಕ್ಕೋ ಆಲೋಚನೆ ಮಾಡುತ್ತೀರಿ. ಕೆಲವು ಕಂಪನಿಗಳವರೇ ತಾವಾಗಿ ನಿಮ್ಮ ಜತೆ ಕೈ ಜೋಡಿಸುವುದಕ್ಕೆ ಪ್ರಸ್ತಾವವನ್ನು ತರಲಿದ್ದಾರೆ. ಒಂದು ವೇಳೆ ನಿಮಗೆ ಈಗಾಗಲೇ ಕೋರ್ಟ್- ಕಚೇರಿ ವ್ಯಾಜ್ಯಗಳು ಇದೆ ಎಂದಾದಲ್ಲಿ ಅದನ್ನು ರಾಜೀ- ಸಂಧಾನದ ಮೂಲಕ ಸರಿ ಮಾಡಿಕೊಳ್ಳುವ ಅವಕಾಶಗಳಿವೆ. ವೃತ್ತಿನಿರತರು ಅದೇ ವೃತ್ತಿಯಲ್ಲಿ ಇರುವವರ ಜತೆಗೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದ್ದು, ಅದು ಮದುವೆ ಹಂತದ ತನಕ ಹೋಗುತ್ತದೆ. ಈ ವಾರ ಇದೇ ವಿಷಯ ನಿಮ್ಮಲ್ಲಿ ಉಲ್ಲಾಸ ತುಂಬುತ್ತದೆ. ನಿಮ್ಮ ಮನಸ್ಸಿನ ಪ್ರೀತಿಯನ್ನು ಹೇಳಿಕೊಳ್ಳದೆ ಇರುವವರು ಇದ್ದಲ್ಲಿ ಅದನ್ನು ಹೇಳಿಕೊಳ್ಳುವುದಕ್ಕೆ ಬೇಕಾದ ವೇದಿಕೆ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಮಧ್ಯೆ ಬಹಳ ಒಳ್ಳೆ ಹೆಸರು ಬರಲಿದೆ. ಇತರರಿಗೆ ಸಹಾಯಹಸ್ತ ನೀಡಲಿದ್ದೀರಿ. ಪ್ರತಿಷ್ಠಿತ ಸಂಸ್ಥೆಗಳಿಂದ, ಆಡಿಟಿಂಗ್ ಸಂಸ್ಥೆಗಳಿಂದ ಸ್ಟೈಪೆಂಡ್ ಬರುವಂಥ ಕೆಲಸ ಹುಡುಕಿಕೊಂಡು ಬರಲಿದೆ. ನಿಮ್ಮ ಓಡಾಟಕ್ಕೆ ಬೇಕಾದಂಥ ದ್ವಿಚಕ್ರ ವಾಹನವೋ ಅಥವಾ ಕಾರು ಇಂಥದ್ದನ್ನೇ ಖರೀದಿಸುವ ಅವಕಾಶಗಳು ಸಹ ಇವೆ. ಒಟ್ಟಾರೆ ಭವಿಷ್ಯದ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡಲಿದ್ದೀರಿ. ಮಹಿಳೆಯರು ರಾಜಕಾರಣದಲ್ಲಿ ಇದ್ದಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ನೀವು ನಿರೀಕ್ಷೆಯೇ ಮಾಡಿರದಂಥ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಜತೆಗೆ ನಿಮ್ ಖ್ಯಾತಿ ಜಾಸ್ತಿ ಆಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕೆ ಬೇಕಾದಂಥ ಹಣಕಾಸಿನ ಹೊಂದಾಣಿಕೆ ಆಗಲಿದೆ. ಇನ್ನು ನಿಮ್ಮ ಮೇಲಧಿಕಾರಿಗಳ ಎದುರು ನೀವು ಪಡುತ್ತಿರುವ ಶ್ರಮ, ಈಗಿನ ಕೆಲಸದಲ್ಲಿ ಎಷ್ಟು ತನ್ಮಯರಾಗಿದ್ದೀರಿ ಎಂಬುದನ್ನು ತೋರಿಸುವುದು ಅನಿವಾರ್ಯ ಎಂಬಂತಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಶ್ರಮ ಇನ್ಯಾರದೋ ಪಾಲಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಶ್ರಮವನ್ನು ನಿಜಕ್ಕೂ ಯಾರಿಗೆ ತಲುಪಿಸಬೇಕು, ಅಂದರೆ ತಿಳಿಸಬೇಕು ಅಲ್ಲಿಗೆ ತಲುಪುವಂತೆ ನೋಡಿಕೊಳ್ಳಿ. ಸ್ನೇಹಿತರು ಅಥವಾ ಸಂಬಂಧಿಕರು ಒತ್ತಡ ಹಾಕಿ ಹಣ ಸಾಲ ತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ, ಬಡ್ಡಿ ಕಡಿಮೆ ಹಾಗೂ ಹೆಚ್ಚಿನ ಅವಧಿಗೆ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೆ ತೆಗೆದುಕೊಳ್ಳುವುದು ಸಮಸ್ಯೆ ಆಗಿ ಪರಿಣಮಿಸಲಿದೆ. ನಿಮಗೆ ಹಣದ ಅಗತ್ಯವಿಲ್ಲ ಎಂದಾದಲ್ಲಿ ಸಾಲ ಪಡೆಯಬೇಡಿ. ಇತರರ ವೈಯಕ್ತಿಕವಾದ ವಿಚಾರ ಇದ್ದಾಗ ಅದರಲ್ಲಿ ತಲೆ ಹಾಕಬೇಡಿ. ಸಾರ್ವಜನಿಕ ಸ್ಥಳ, ಸಭೆ- ಸಮಾರಂಭಗಳಲ್ಲಿ ಮಾತನಾಡುತ್ತೀರಿ ಅಂತಾದಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ. ವೈಯಕ್ತಿಕ ವಿಚಾರವನ್ನು ಎಲ್ಲರೆದುರು ಹೇಳಿಕೊಳ್ಳುವುದು ಮುಳುವಾಗಬಹುದು. ಕೃಷಿಕರಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂಥವರಿಗೆ ಆದಾಯ ಕಡಿಮೆ ಆಗುತ್ತದೆ ಎಂದು ಬಲವಾಗಿ ಅನಿಸುತ್ತದೆ ಅಥವಾ ಖರ್ಚಿನ ಪ್ರಮಾಣ ಆದಾಯಕ್ಕಿಂತ ಬಹಳ ಹೆಚ್ಚಾಯಿತು ಅಂತಾದರೂ ಅನಿಸಬಹುದು. ಒಂದು ವೇಳೆ ನೀವು ಈಗಾಗಲೇ ಸಾಲ ಮಾಡಿದ್ದಲ್ಲಿ ಅದನ್ನು ಕೂಡಲೇ ಹಿಂತಿರುಗಿಸುವಂತೆ ಒತ್ತಡವು ಹೆಚ್ಚಾಗಲಿದೆ. ಕುಟುಂಬಸ್ಥರ ಅಗತ್ಯಕ್ಕಾಗಿ ಉಳಿತಾಯವನ್ನು ಮಾಡುವುದಕ್ಕೆ ಆರಂಭಿಸಲಿದ್ದೀರಿ. ವೃತ್ತಿನಿರತರು ಹೊಸ ವಿಷಯಗಳನ್ನು ಕಲಿತುಕೊಳ್ಳಬೇಕಾದ ಅನಿವಾರ್ಯ ಎದುರಾಗಲಿದೆ. ಹೊಸದಾಗಿ ಕೋರ್ಸ್ ಗಳಿಗೆ ಸೇರಲಿದ್ದೀರಿ. ತಾತ್ಕಾಲಿಕವಾಗಿಯಾದರೂ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದರಿಂದ ನಿಮ್ಮ ವೃತ್ತಿಬದುಕು ವಿಸ್ತರಿಸುವುದಕ್ಕೆ ಬೇಕಾದಂಥ ಅವಕಾಶಗಳು ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಬೈಗುಳ, ಅನುಮಾನದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಪಾರದರ್ಶಕವಾಗಿ ನಡೆದುಕೊಳ್ಳಿ, ಏನನ್ನೂ ಮುಚ್ಚಿಡುವುದಕ್ಕೆ ಹೋಗದಿರಿ. ಮನೆಯಿಂದ ಹೊರಗೆ ಹೋಗುವಾಗ ಸುಳ್ಳು ಹೇಳುವುದಕ್ಕೆ ಹೋಗಬೇಡಿ. ಇತರರ ವಾಹನವನ್ನು ಬಳಸುತ್ತೀರಿ ಅಂತಾದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಲಕ್ಷ್ಯ ವಹಿಸಿ. ಮಹಿಳೆಯರು ಚಿನ್ನಾಭರಣ ಖರೀದಿ ಮಾಡುವ ಯೋಗ ಇದೆ. ಈಗಾಗಲೇ ಉಳಿತಾಯ ಮಾಡಿದಂಥ ಹಣದಿಂದಲಾದರೂ ಬೆಲೆಬಾಳುವ ಲೋಹದ ಆಭರಣಗಳನ್ನು ಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಮನಸ್ಸು ಗೊಂದಲದಲ್ಲಿ ಬೀಳದಂತೆ ನೋಡಿಕೊಳ್ಳುವುದು ಈ ವಾರ ಬಹಳ ಮುಖ್ಯವಾಗುತ್ತದೆ. ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುತ್ತದೆ ಅಂದಾಗ ಯಾವುದೋ ದುಡ್ಡು ಬಂದಿತು, ಅದನ್ನು ಯಾವುದಕ್ಕೋ ಬಳಸಿದೆ ಎಂದು ಆಲೋಚಿಸಬೇಡಿ. ತಮ್ಮ ಬಳಿ ಇರುವ ಚಿನ್ನವನ್ನು ಮಾರುತ್ತಿರುವುದಾಗಿ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಲೆಕ್ಕಾಚಾರ ಮಾಡದಂತೆ ಜೀವನ ನಡೆಸುವುದು ಸಮಸ್ಯೆಗೆ ಕಾರಣ ಆಗಲಿದೆ. ತುಂಬ ಪರಿಚಿತರು ಅಥವಾ ಸ್ನೇಹಿತರು ಎಂಬ ಕಾರಣಕ್ಕೆ ಚೀಟಿ ವ್ಯವಹಾರ ಅಥವಾ ಯಾವುದೇ ಹಣಕಾಸು ವ್ಯವಹಾರವನ್ನು ಮಾಡಿದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ. ಒಂದು ವೇಳೆ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದಾದರೆ ಹಿರಿಯರು ಅಥವಾ ಅನುಭವಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಒಂದು ವೇಳೆ ಸೈಟು, ಮನೆ ಖರೀದಿ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿರುವವರಿಗೆ ಈಗ ಮನಸ್ಸಿಗೆ ಹಿಡಿಸುವಂಥ ಸ್ಥಳ ಅಥವಾ ಮನೆ ಕಂಡುಬರಲಿದೆ. ನಿರ್ಧಾರಗಳನ್ನು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ನಿಮ್ಮ ಕೈ ಅಳತೆಯಲ್ಲೇ ಇದ್ದು, ಮನಸ್ಸಿಗೂ ಮೆಚ್ಚಿದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಿ. ಕೃಷಿಕರಿಗೆ ದೈಹಿಕ ಆಯಾಸ ಹೆಚ್ಚಾಗಲಿದೆ, ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಿ. ವೈದ್ಯರು ಸೂಚಿಸುವಂಥ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವಂತೆ ಸೂಚಿಸಿದಲ್ಲಿ ಅದನ್ನು ಕಡ್ಡಾಯವಾಗಿ ಮಾಡಿಸಿ. ನಿಮ್ಮಲ್ಲಿ ಯಾರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೀರಿ ಅಂಥವರಿಗೆ ಲಾಭದ ಪ್ರಮಾಣದಲ್ಲೂ ಕಡಿಮೆ ಆಗುವ ಸಾಧ್ಯತೆಗಳಿವೆ. ಇನ್ನು ವೃತ್ತಿನಿರತರ ಬಗ್ಗೆ ಹೇಳುವುದಾದರೆ, ಚಾರ್ಟರ್ಡ್ ಅಕೌಂಟೆಂಟ್, ವೈದ್ಯರು ಇಂಥ ವೃತ್ತಿಯಲ್ಲಿ ಇರುವವರಿಗೆ ಹೆಚ್ಚುವರಿ ಆದಾಯ ಮೂಲಗಳು ದೊರೆಯಲಿವೆ. ಹೊಸದಾಗಿ ಕಚೇರಿಯನ್ನು ಅಥವಾ ಕ್ಲಿನಿಕ್ ಅನ್ನು ಶುರು ಮಾಡುವುದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ. ಇನ್ನು ಈಗಾಗಲೇ ನಿಮಗಿರುವಂಥ ಸಾಲಗಳನ್ನು ತೀರಿಸುವುದಕ್ಕೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಲ್ಲಿ ಅದು ಆಗಲಿದೆ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಸ್ನೇಹಿತರ ಜತೆಗೂಡಿ ಬೆಟ್ಟ- ಗುಡ್ಡಗಾಡು ಪ್ರದೇಶಗಳಿಗೆ ತೆರಳಲಿದ್ದೀರಿ. ಅಥವಾ ರೆಸಾರ್ಟ್ ಇಂಥ ಕಡೆಗೆ ಮನರಂಜನೆಯ ಸಲುವಾಗಿ ಹೋಗುವಂಥ ಯೋಗ ಇದೆ. ಮಹಿಳೆಯರಿಗೆ ಕೆಲಸದಲ್ಲಿ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಅವಕಾಶಗಳು ದೊರೆಯಲಿವೆ. ಈ ವಾರದಲ್ಲಿ ಒಮ್ಮೆ ಸಾಯಿಬಾಬ ಅಥವಾ ರಾಘವೇಂದ್ರ ಸ್ವಾಮಿ ದೇವಸ್ಥಾನ ಅಥವಾ ಗುರುದ್ವಾರಕ್ಕೆ ಭೇಟಿ ನೀಡಿ. ಇನ್ನು ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕಾನೂನಿಗೆ ಸಂಬಂಧಿಸಿದ ವಿಚಾರಗಳು, ಸರ್ಕಾರದ ಜತೆಗೆ ನಡೆಸಬೇಕಾದಂಥ ಮಾತುಕತೆಗಳು ಇವುಗಳನ್ನು ನೀವೇ ಮುಂದೆ ನಿಂತು ಮಾಡಿಕೊಳ್ಳುವುದು ಒಳ್ಳೆಯದು. ಹಣ ಕೊಟ್ಟರೆ ಅಥವಾ ನೀವು ಒಂದು ಮಾತು ಹೇಳಿದರೆ ಕೆಲಸ ಮಾಡಿಕೊಡುವವರು ಇದ್ದಾರೆ ಅಂದುಕೊಂಡು ಏನಾದರೂ ಮೈ ಮರೆತಲ್ಲಿ ಯಾರದೋ ತಪ್ಪಿಗೆ ನೀವು ಬೆಲೆ ತೆರಬೇಕಾದಂಥ ಸನ್ನಿವೇಶ ಎದುರಾಗಲಿದೆ. ಈ ಹಿಂದೆ ನೀವು ಆಡಿದ್ದ ಮಾತುಗಳೇ ಸಮಸ್ಯೆಗಳಾಗಿ ಎದ್ದು ನಿಲ್ಲುತ್ತವೆ. ಆದ್ದರಿಂದ ಅಂಥ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮುಂಚೆಯೇ ಆಲೋಚನೆಯನ್ನು ಮಾಡಿಕೊಳ್ಳಿ. ಈಗಲಾದರೂ ಅಷ್ಟೇ, ಯಾವುದೇ ಮಾತನಾಡುವ ಮುನ್ನ ಈ ಹಿಂದೆ ಅದಕ್ಕೆ ಸಂಬಂಧಿಸಿದಂತೆ ಏನು ಹೇಳಿದ್ದಿರಿ ಎಂಬುದನ್ನು ಒಮ್ಮೆ ನೆನಪಿಸಿಕೊಂಡು ಬಿಡಿ. ನಿಮ್ಮಲ್ಲಿ ಯಾರು ರಾಜಕಾರಣವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದೀರಿ, ಅಂಥ ರಾಜಕಾರಣಿಗಳಿಗೆ ಬಹಳ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಕೆಲ ಕಾಲ ಸಾರ್ವಜನಿಕ ಜೀವನದಿಂದಲೇ ದೂರ ಇರಬೇಕಾದಂಥ ಅನಿವಾರ್ಯ ಸೃಷ್ಟಿ ಆಗಬಹುದು. ನಿಮಗೆ ಸಂಬಂಧಿಸಿದ ಆಕ್ಷೇಪಾರ್ಹ ಆಡಿಯೋ- ವಿಡಿಯೋ ಹೊರಬಂದು ಮುಜುಗುರದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದುರ್ಗಾದೇವಿಯ ಆರಾಧನೆಯನ್ನು ಮಾಡಿ, ಮಾನಸಿಕ ಸ್ಥೈರ್ಯಕ್ಕಾಗಿ ಪ್ರತಿ ದಿನ ಕೆಲ ಸಮಯವಾದರೂ ಧ್ಯಾನ ಮಾಡುವುದಕ್ಕೆ ಸಮಯವನ್ನು ಮೀಸಲಿಡುವುದು ಉತ್ತಮ. ಕೃಷಿಕರು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂಥ ಯೋಗ ಇದೆ. ನಿಮ್ಮಲ್ಲಿ ಯಾರು ಕೃಷಿ ಉತ್ಪನ್ನಗಳನ್ನು ಈಗಾಗಲೇ ಮಾರಾಟವನ್ನು ಮಾಡುತ್ತಿದ್ದೀರಿ, ಅಂಥವರು ಮಾರುಕಟ್ಟೆಯ ವಿಭಾಗವನ್ನು ಸಹ ಆರಂಭಿಸುವ ಬಗ್ಗೆ ಅಥವಾ ಕೆಲವು ಮುಖ್ಯ ಸ್ಥಳಗಳಲ್ಲಿ ಮಳಿಗೆ ತೆರೆಯುವ ಬಗ್ಗೆ ಕೂಡ ಆಲೋಚಿಸುವ ಸಾಧ್ಯತೆ ಇದೆ. ಇದನ್ನು ಒಬ್ಬ ವ್ಯಕ್ತಿಯೇ ಮಾಡಬೇಕು ಎಂದಿಲ್ಲ. ಒಂದು ಗುಂಪಾಗಿ ಮಾಡಬಹುದು, ಇದರ ಮುಂದಾಳತ್ವವನ್ನು ನೀವು ವಹಿಸಿಕೊಳ್ಳುವಂಥ ಸಾಧ್ಯತೆ ಇದೆ. ವೃತ್ತಿನಿರತರಿಗೆ ಡೆಡ್ ಲೈನ್ ನೊಳಗೆ ಕೆಲಸ ಮಾಡಿ ಮುಗಿಸುವುದಕ್ಕೆ ನಾನಾ ಬಗೆಯಲ್ಲಿ ಸವಾಲುಗಳು ಎದುರಾಗಲಿವೆ. ಕೆಲವರಿಗೆ ಇದರಿಂದ ಆರ್ಥಿಕ ನಷ್ಟಗಳು ಸಹ ಎದುರಾಗಬಹುದು. ಇನ್ನು ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜಂಕ್ ಫುಡ್ ಸೇವನೆಯಿಂದ ದೂರ ಇರುವುದು ಬಹಳ ಮುಖ್ಯವಾಗುತ್ತದೆ. ಮಹಿಳೆಯರಿಗೆ ಪರಿಚಯಸ್ಥರು, ಆತ್ಮೀಯರಿಂದಲೇ ಬಹಳ ವಿರೋಧದ ಮಾತುಗಳನ್ನು ಕೇಳಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮದೇ ತಪ್ಪು ನಿರ್ಧಾರದ ಕಾರಣಕ್ಕೆ ಸಜ್ಜನರ ಜತೆಗೆ ಜಗಳ- ಕದನ, ಮನಸ್ತಾಪಗಳು ಆಗಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಬ್ಬರ ಬಳಿ ಕೈ ಚಾಚಬಾರದು ಎಂದು ಗಟ್ಟಿಯಾಗಿ ತೀರ್ಮಾನವನ್ನು ಮಾಡಲಿದ್ದೀರಿ. ಏಕೆಂದರೆ ಇದೇ ವಿಚಾರಕ್ಕೆ ಕೆಲವು ಅವಮಾನಗಳನ್ನು ನೀವು ಎದುರಿಸಲಿದ್ದೀರಿ. ಈಗ ನೀವು ಮಾಡುತ್ತಿರುವ ಕೆಲಸದ ಜತೆಗೆ ಹೊಸದಾಗಿ ಕೆಲವು ಕೆಲಸಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಇದರ ಅರ್ಥ ಏನೆಂದರೆ, ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನವನ್ನು ಮಾಡಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಇದು ಉತ್ತಮ ಸಮಯವಾಗಿರಲಿದೆ. ನಿಮ್ಮ ವೈಯಕ್ತಿಕ ನಿಲವು, ಸಿದ್ಧಾಂತಗಳು ಏನೇ ಇರಲಿ, ಹೊಸಬರು ಪರಿಚಯ ಆದಾಗ ದೀರ್ಘ ಕಾಲದ ಒಡನಾಟವನ್ನು ಅವರ ಜತೆಗೆ ಮುಂದುವರಿಸುವ ಬಗ್ಗೆ ಪ್ರಯತ್ನವನ್ನು ಮಾಡಿ. ಸಿನಿಮಾ ರಂಗದಲ್ಲಿ ಇರುವವರು ಕೆಲವು ಟೀಕೆ- ಟಿಪ್ಪಣಿಗಳನ್ನು ಕೇಳಬೇಕಾಗುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗದಿರಿ. ಹೊಸ ಪ್ರಾಜೆಕ್ಟ್ ಗಳು ಬಂದಾಗ ಮುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳಿ. ಆ ನಂತರ ಸಾಧಕ- ಬಾಧಕಗಳ ಬಗ್ಗೆ ಆಲೋಚನೆಯನ್ನು ಮಾಡಿ. ವಿದೇಶ ಪ್ರಯಾಣಗಳನ್ನು ಮಾಡುತ್ತಿರುವವರು ಅಥವಾ ಮಾಡಬೇಕೆಂದು ಇರುವವರು ಹಣಕಾಸು ಅಗತ್ಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು, ಆ ನಂತರ ಯೋಜನೆಯನ್ನು ರೂಪಿಸಿ. ಕೃಷಿಕರಿಗೆ ಆಪ್ತ ಸ್ನೇಹಿತರು, ತುಂಬ ನಂಬಿರುವಂಥ ವ್ಯಕ್ತಿಗಳ ಜತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಆಗುವಂಥ ಯೋಗ ಇದೆ. ಮದ್ಯಪಾನದ ಅಭ್ಯಾಸ ಇರುವಂಥವರು ಸಾಧ್ಯವಾದಷ್ಟೂ ಅದರಿಂದ ದೂರ ಇರುವುದು ಒಳ್ಳೆಯದು. ಹತ್ತಾರು ಜನರು ಇರುವಂಥ ಸ್ಥಳದಲ್ಲಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮೌನವಾಗಿರುವುದಕ್ಕೆ ಪ್ರಯತ್ನಿಸಿ. ವೃತ್ತಿನಿರತರ ಬಗ್ಗೆ ಹೇಳುವುದಾದರೆ, ನಿಮ್ಮಲ್ಲಿ ಯಾರು ಕಟ್ಟಡ ನಿರ್ಮಾಣವನ್ನು ಮಾಡುತ್ತಿದ್ದೀರಿ, ಅಂಥ ಕಾಂಟ್ರಾಕ್ಟರ್ ಗಳಿಗೆ ಹೊಸ ಪ್ರಾಜೆಕ್ಟ್ ಗಳು ಬರಲಿವೆ. ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡ ನಂತರವಷ್ಟೇ ಒಪ್ಪಿಕೊಳ್ಳಿ. ಇಲ್ಲದಿದ್ದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನೀಡುವಂಥ ಸಲಹೆ- ಸೂಚನೆ, ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸುವುದು ಹಾಗೂ ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ನಿಂದೆಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮದೇ ತಪ್ಪು ಎಂದು ಖಾತ್ರಿ ಆದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕ್ಷಮೆಯನ್ನು ಕೇಳುವುದು ಉತ್ತಮ. ಮಹಿಳೆಯರು ಕುಟುಂಬದೊಳಗೆ ಪ್ರಾಮುಖ್ಯವನ್ನು ಪಡೆಯಲಿದ್ದೀರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ