Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 14ರಿಂದ 20ರ ತನಕ ವಾರಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 14ರಿಂದ 20ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 14ರಿಂದ 20ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ಹಿಂದೆ ಬಹಳ ಉತ್ಸಾಹದಿಂದ ನೀವು ಕೈಗೆತ್ತಿಕೊಂಡ ಕೆಲಸ ಮುಗಿಸುವುದರೊಳಗೆ ಸಾಕು ಬೇಕಾಗುತ್ತದೆ. ಯಾರದೋ ಓಲೈಕೆಗಾಗಿ ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ, ನಿಮ್ಮೆದುರು ಕಾಣುವಂತೆಯೇ ಬೆನ್ನ ಹಿಂದೆಯೂ ಜನರು ಹಾಗೇ ಇರುತ್ತಾರೆ ಎಂಬ ಭಾವನೆಯಿದ್ದಲ್ಲಿ ಹೊರಬನ್ನಿ. ನಿಮ್ಮ ಪಾಲಿಗೆ ಬರುವಂಥ ಉದ್ಯೋಗ ಸ್ಥಳದ ಯಾವ ಅವಕಾಶವನ್ನೂ ಬೇರೆಯವರಿಗೆ ಬಿಟ್ಟುಕೊಡಲು ಹೋಗದಿರಿ. ನಿಂತು ಕೆಲಸ ಮಾಡುವಂಥ ಉದ್ಯೋಗದಲ್ಲಿ ಇರುವವರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಳ್ಳಬಹುದು, ಇದರ ಜತೆಗೆ ಅಥವಾ ಬೆನ್ನು ಹುರಿಯ ವಿಪರೀತ ನೋವು ಕಾಣಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳದಿರಿ. ಫೋನ್ ನಲ್ಲಿ ಮಾತನಾಡುವಾಗ ಇತರರ ವೈಯಕ್ತಿಕ ವಿಚಾರಗಳ ಚರ್ಚೆ ಮಾಡದಿರುವುದು ಉತ್ತಮ. ಹಾಗೊಂದು ವೇಳೆ ಮಾಡಿದಲ್ಲಿ ನಿಮ್ಮ ವಿರುದ್ಧ ಅಪಪ್ರಚಾರ, ಶತ್ರುತ್ವ ಬೆಳೆದುಬಿಡುತ್ತದೆ. ಕೃಷಿಕರು ಪೂರ್ತಿಯಾಗಿ ಒಳ್ಳೆ ಸುದ್ದಿ ಬರುವ ಮುನ್ನವೇ ಸಂಭ್ರಮಾಚರಣೆಯನ್ನು ಮಾಡುವುದಕ್ಕೆ ಆರಂಭಿಸಬೇಡಿ. ಅದು ಕೋರ್ಟ್- ಕಚೇರಿ ವಿಚಾರಗಳೇ ಇರಬಹುದು ಅಥವಾ ರಾಜಕಾರಣ, ಸಂಘ- ಸಂಸ್ಥೆಗಳ ಹುದ್ದೆಗಳ ಆಯ್ಕೆಯ ವಿಚಾರವೇ ಇರಬಹುದು. ವಿಷಯ ಖಾತ್ರಿ ಆಗುವ ಮೊದಲೇ ಸಂಭ್ರಮಿಸುವುದು ಬೇಡ. ಮನೆಯ ದುರಸ್ತಿ ಮಾಡಿಸಬೇಕು ಅಥವಾ ಈಗಾಗಲೇ ಇರುವಂಥ ಗೋದಾಮು, ಸಂಗ್ರಹಾಗಾರಗಳ ವಿಸ್ತರಣೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೀರಿ. ವೃತ್ತಿನಿರತರಿಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ- ನಿಂದೆ ಕೇಳಿಬರಲಿದೆ. ಆದ್ದರಿಂದ ನೀವು ಮಾಡಿದ ಕೆಲಸಗಳ ಬಗ್ಗೆ ಸಂಬಂಧಪಟ್ಟವರಿಗೆ ಆಗಿಂದಾಗಲೇ ಅಪ್ ಡೇಟ್ ಮಾಡುವುದು ಉತ್ತಮ. ವಿದ್ಯಾರ್ಥಿಗಳು ನಿಮಗೆ ಸಂಬಂಧವೇ ಪಡದ ವಿಚಾರಗಳಿಗೆ ಆಪ್ತರು- ಸ್ನೇಹಿತರ ಎದುರು ಅನುಮಾನಕ್ಕೆ ಗುರಿ ಆಗಬೇಕಾಗುತ್ತದೆ. ಸ್ವಂತಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಅನಿವಾರ್ಯವಾಗಿ ಇತರರಿಗೆ ಕೊಡಬೇಕಾಗಬಹುದು. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಕೆಲಸದ ಒತ್ತಡ ಜಾಸ್ತಿ ಆಗಲಿದೆ. ರಜಾ ಬೇಕು ಎಂಬ ಸನ್ನಿವೇಶ ಇದ್ದರೂ ಕೇಳಿದ ಮೇಲೆ ಇಲ್ಲ ಎಂಬ ಉತ್ತರ ಬರುತ್ತದೆ. ಇದರಿಂದ ಬೇಸರ ಹೆಚ್ಚಾಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಆಪ್ತರು, ಹೃದಯಕ್ಕೆ ಹತ್ತಿರದವರು ನಿಮ್ಮ ಬಗ್ಗೆ ಟೀಕೆ- ಆಕ್ಷೇಪ ವ್ಯಕ್ತಪಡಿಸಿದರೂ ಧೃತಿಗೆಡಬೇಡಿ. ಯಾವುದೇ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಈ ವಾರ ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ನೋಡಿಕೊಳ್ಳಿ. ಮೇಲಧಿಕಾರಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರ ನಿಮಗೆ ಹೇಳುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಮಾತಿನ ಮೇಲೆ ನಿಗಾ ಇರಬೇಕು. ಇಲ್ಲದಿದ್ದರೆ ಅನಗತ್ಯ ವಿವಾದ ಆಗಬಹುದು. ಕಾರಣವೇ ಇಲ್ಲದೆ ನಿಮ್ಮ ಮನಸ್ಸಿಗೆ ಕೆಲವು ಬಾರಿ ಬೇಸರ ಕಾಡಲಿದೆ. ಕೃಷಿಕರಾಗಿದ್ದಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸೋದರರು ಅಥವಾ ಸೋದರಿಯರ ಜತೆಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಇತರರ ವೈಯಕ್ತಿಕ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ. ವೃತ್ತಿನಿರತರಾಗಿದ್ದಲ್ಲಿ ಈ ವಾರ ಕೆಲಸದ ಒತ್ತಡವೋ ಅಥವಾ ಏಕ ಕಾಲಕ್ಕೆ ಹಲವು ಜವಾಬ್ದಾರಿಗಳು ನಿರ್ವಹಿಸ ಬೇಕಾಗುವುದರಿಂದ ಕೆಲವು ಮುಖ್ಯವಾದ ಅಂಶಗಳನ್ನು ಮರೆತುಬಿಡುವ ಸಾಧ್ಯತೆ ಇದೆ. ಆದ್ದರಿಂದ ಆದ್ಯತೆಯ ಮೇಲೆ ಯಾವ ಕೆಲಸವನ್ನು ಮೊದಲಿಗೆ ಹಾಗೂ ಆ ನಂತರದಲ್ಲಿ ಮಾಡುವುದು ಯಾವುದು ಎಂಬ ಬಗ್ಗೆ ಪಟ್ಟಿಯೊಂದನ್ನು ಮಾಡಿಟ್ಟುಕೊಂಡು ಬಿಡಿ. ವಿದ್ಯಾರ್ಥಿಗಳಾಗಿದ್ದಲ್ಲಿ ಶೈಕ್ಷಣಿಕ ಕೋರ್ಸ್ ಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಅಥವಾ ಮಾರ್ಕ್ಸ್ ಕಾರ್ಡ್ ಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ. ಮಹಿಳೆಯರು ಕೈಯಲ್ಲಿ ಹಣವಿಲ್ಲದ ಪಕ್ಷದಲ್ಲಿ ಮುಂದೆ ಬರುವ ಆದಾಯವೋ ಅಥವಾ ಸಾಲವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗದಿರಿ. ಒಂದು ವೇಳೆ ಮಾತು ಕೊಟ್ಟಲ್ಲಿ ಅವಮಾನ, ಒತ್ತಡಕ್ಕೆ ಒಳಗಾಗುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಇಷ್ಟು ಕಾಲ ಹೀಗೆ ಇದ್ದು ತಪ್ಪು ಮಾಡಿಬಿಟ್ಟೆ ಎಂದು ಅನಿಸುವುದಕ್ಕೆ ಶುರುವಾಗಲಿದೆ. ಅಷ್ಟೇ ಅಲ್ಲ, ಅದೇ ಕಾರಣಕ್ಕೆ ತುಂಬ ಕಠಿಣ ನಿರ್ಧಾರಗಳನ್ನು ಸಹ ಮಾಡಲಿದ್ದೀರಿ. ಇಲ್ಲಿಯವರೆಗೆ ಹೇಗೆ ಇದ್ದಿರೋ ಆ ರೀತಿಯಲ್ಲದೆ ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ. ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ. ಉದ್ಯೋಗದಲ್ಲಿ ಈಗಿರುವುದಕ್ಕಿಂತ ಉನ್ನತ ಸ್ಥಾನಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕೈಯಲ್ಲಿ ಇರುವ ಹಣಕ್ಕಿಂತ ದೊಡ್ಡ ಯೋಜನೆಗಳನ್ನು ಹಾಕಿಕೊಂಡು, ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಕೃಷಿಕರಿಗೆ ಅಂತ ಹೇಳುವುದಾದರೆ, ಅಡಿಕೆ ಕೃಷಿಕರಿಗೆ ಆದಾಯದಲ್ಲಿ ಇಳಿಕೆ ಆಗಬಹುದು ಎಂಬ ಆತಂಕವು ಕಾಡಲಿದೆ. ಇನ್ನು ಕೃಷಿಯ ಜತೆಗೆ ಸ್ವಂತ ವ್ಯವಹಾರವನ್ನೂ ಮಾಡುವಂಥವರು ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವಿರಿ. ಇದಕ್ಕಾಗಿ ಹೊಸದಾಗಿ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ತೀರ್ಮಾನ ಮಾಡಲಿದ್ದೀರಿ. ಕೃಷಿ ಸಂಘ- ಸಂಸ್ಥೆಗಳ ಪ್ರಮುಖರ ಸಭೆ, ಚರ್ಚೆ ಸಂದರ್ಭದಲ್ಲಿ ನೇರವಾದ ಮಾತುಗಳಿಂದ ಇತರರ ಗಮನ ಸೆಳೆಯುತ್ತೀರಿ. ಪ್ರಮುಖವಾಗಿ ಮಾಡಿ ಮುಗಿಸಬೇಕಾದ ಕೆಲಸವನ್ನು ಈ ವಾರ ಮಾಡಲಿಕ್ಕಾಗದೆ ಸ್ವಲ್ಪ ಮಟ್ಟಿಗೆ ದೇಹಾಲಸ್ಯ ಇರುತ್ತದೆ. ಅದಕ್ಕಾಗಿ ವಿಶ್ರಾಂತಿ ಪಡೆಯಲಿದ್ದೀರಿ. ವೃತ್ತಿಪರರಿಗೆ ಎಲ್ಲ ಮುಗಿದೇ ಹೋಯಿತು ಎಂದು ಕೈ ಚೆಲ್ಲಿದ್ದ ವಿಷಯಗಳು ಈಗ ಜೀವ ಪಡೆದುಕೊಳ್ಳುತ್ತವೆ. ಹೊಸ ಭರವಸೆಗಳು ಹುಟ್ಟುತ್ತವೆ. ಮಧ್ಯವರ್ತಿಗಳ ನೆರವಿನಿಂದ ಕೆಲವು ಒಪ್ಪಂದ, ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಗಳನ್ನು ತೀವ್ರಗೊಳಿಸುತ್ತೀರಿ. ಹಿತೈಷಿಗಳ ನೆರವಿನಿಂದ ಹೂಡಿಕೆಯನ್ನು ಹೆಚ್ಚು ಮಾಡುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳ ಮೇಲೆ ಅಪವಾದ ಬರುವ ಸಾಧ್ಯತೆ ಇದೆ, ಸಂಬಂಧಿಗಳ ಮನೆಯೋ ಸ್ನೇಹಿತರೋ ಮನೆಗೋ ಹೋಗುವಂತಿದ್ದರೆ ಎಚ್ಚರಿಕೆ ಬೇಕು. ಅಷ್ಟೇ ಅಲ್ಲ, ಮನೆಯಲ್ಲೂ ಅನುಮಾನ ಪಡಬಹುದು. ಮಹಿಳೆಯರಿಗೆ ಕಣ್ಣು ಕೆಂಪಾಗುವುದು, ನೀರು ಸೋರುವುದು ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆಯನ್ನು ಕಾಣಿಸಿಕೊಳ್ಳಲಿದೆ. ದೂರದ ಸಂಬಂಧಿಕರು ಕಾರ್ಯ ನಿಮಿತ್ತ ನಿಮ್ಮನ್ನು ಭೇಟಿ ಆಗುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಂದ ಈ ವಾರ ನಾನಾ ಬಗೆಯಲ್ಲಿ ಸಹಾಯಗಳು ಒದಗಿ ಬರಲಿವೆ. ಇನ್ನು ಈ ಕೆಲಸ ಆಗುವುದಿಲ್ಲ ಅಥವಾ ನೀವು ಈಗಾಗಲೇ ನೀಡಿರುವ ಇಂಟರ್ ವ್ಯೂ ಯಶಸ್ಸು ಕಾಣುವುದಿಲ್ಲ ಎಂದು ನೀವು ಭಾವಿಸಿದ್ದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಉತ್ತಮ ಫಲವನ್ನು ಕಾಣಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ವೈರಲ್ ಜ್ವರ ಕಾಣಿಸಿಕೊಳ್ಳಬಹುದು. ನೀರು- ಆಹಾರ ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಏಕಕಾಲಕ್ಕೆ ಹಲವು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ನಿರ್ಧಾರ ಮಾಡುವುದಕ್ಕೆ ಬಹಳ ಸಮಯವನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸ್ನೇಹಿತರು ನೀಡುವಂತಹ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕೃಷಿಕರಿಗೆ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ದೇವತಾ ಕಾರ್ಯಗಳು ಅಥವಾ ಶುಭ ಕಾರ್ಯಗಳನ್ನು ಆಯೋಜಿಸುವಂತಹ ಯೋಗ ಇದೆ. ಡೇರಿ ವ್ಯವಹಾರಗಳಲ್ಲಿ ಇದ್ದು, ಅದರಲ್ಲಿ ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಆಲೋಚನೆ ಮಾಡುತ್ತಿರುವವರಿಗೆ ಸೂಕ್ತ ವೇದಿಕೆ ದೊರೆಯಲಿದೆ. ರಬ್ಬರ್ ಕೃಷಿ ಮಾಡುವಂಥವರು ಹೂಡಿಕೆಯನ್ನು ಹೆಚ್ಚು ಮಾಡಬೇಕಾಗುತ್ತದೆ. ಕೆಲವು ಅನಿರೀಕ್ಷಿತ ಖರ್ಚುಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೈಗೆ ಇನ್ನೂ ಸೇರದ ಆದಾಯವನ್ನು ನೆಚ್ಚಿಕೊಂಡು ಯಾವುದೇ ಖರ್ಚನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ವೃತ್ತಿ ನಿರತರಿಗೆ ಪ್ರಭಾವಿಗಳ ಪರಿಚಯದಿಂದ ಹೊಸ ಕ್ಲೈಂಟ್ ಗಳು ದೊರೆಯುವ ಸಾಧ್ಯತೆ ಇದೆ. ಹೊಸ ಸ್ಥಳಗಳಲ್ಲಿ ಶಾಖೆ ತೆರೆಯಬೇಕು ಎಂದು ಬಹಳ ಸಮಯದಿಂದ ಪ್ರಯತ್ನಿಸುತ್ತಿರುವವರಿಗೆ ಈ ವಾರ ಎಲ್ಲ ರೀತಿಯಿಂದಲೂ ಅನುಕೂಲಗಳು ಒದಗಿ ಬರಲಿವೆ. ತಂದೆ- ತಾಯಿಗಳ ಅನಾರೋಗ್ಯ ಸಮಸ್ಯೆ ಚಿಂತೆಗೆ ಕಾರಣ ಆಗಬಹುದು. ಆದರೆ ಸಮಯಕ್ಕೆ ಸರಿಯಾಗಿ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿಯೇ ಬ್ಯಾಂಕ್ ಲೋನ್, ಅಗತ್ಯ ನೆರವು, ಹಿರಿಯರ ಮಾರ್ಗದರ್ಶನ ದೊರೆಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ವಿದೇಶಗಳಲ್ಲಿ ಓದುತ್ತಿರುವ ಸ್ನೇಹಿತರಿದ್ದಲ್ಲಿ ಅವರಿಂದ ಸಹಾಯ ದೊರೆಯಬಹುದು. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಪಟ್ಟಂತಹ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಒಂದು ವೇಳೆ ಈಗಾಗಲೇ ಥೈರಾಯಿಡ್ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ಅದು ಉಲ್ಬಣಿಸುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮಗೆ ಅರಿವೇ ಇಲ್ಲದಂತೆ ಸಿಟ್ಟು ತುಂಬಾ ಜಾಸ್ತಿಯಾಗಿದೆ. ತುಂಬಾ ಸರಳವಾಗಿಯೇ ಮೇಲ್ನೋಟಕ್ಕೆ ಕಾಣುವಂತಹ ಸಂಗತಿಗಳಲ್ಲೂ ಏನೇನೋ ತಪ್ಪುಗಳು ಕಾಣುವುದಕ್ಕೆ ಆರಂಭವಾಗುತ್ತದೆ. ಆಪ್ತರು ನಿಮ್ಮ ಒಳಿತನ್ನೇ ಬಯಸುವವರು ಹೇಳುವ ಮಾತುಗಳನ್ನು ಕಿವಿ ಕೊಟ್ಟು ಕೇಳಿಸಿಕೊಳ್ಳಿ. ಅದರ ಹಿಂದೆ ಏನೋ ಲಾಭವಿದೆ, ಆ ಕಾರಣಕ್ಕೆ ಅವರು ಹೇಳುತ್ತಿದ್ದಾರೆ ಈ ರೀತಿಯಾಗಿ ಆಲೋಚನೆ ಮಾಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಈಗಾಗಲೇ ಯಾವುದಾದರೂ ದೇವರಿಗೆ ಹರಕೆ ಹೊತ್ತುಕೊಂಡಿದ್ದಲ್ಲಿ ಅದನ್ನು ಪೂರೈಸಿಲ್ಲ ಎಂದಾದರೆ ಈ ವಾರ ಕಡ್ಡಾಯವಾಗಿ ಅದನ್ನು ಪೂರೈಸುವ ಕಡೆಗೆ ಗಮನವನ್ನು ನೀಡಿ. ಯಾವುದೇ ಮುಖ್ಯವಾದ ಕೆಲಸಗಳಿಗೆ ತೆರಳುವ ಮುನ್ನ ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿ. ಕೃಷಿಕರಾಗಿದ್ದಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿದ್ದರೆ ದಯವಿಟ್ಟು ಅದನ್ನು ಕೈ ಬಿಡುವುದು ಉತ್ತಮ. ಬಹಳ ಕಡಿಮೆ ಮೊತ್ತಕ್ಕೆ ಸಿಗುತ್ತಿದೆ, ಅದನ್ನು ಈಗ ಬಿಟ್ಟರೆ ಮತ್ತೆ ಸಿಗುವುದಿಲ್ಲ ಎಂದುಕೊಂಡು ಒಂದು ವೇಳೆ ಸೆಕೆಂಡ್ ಹ್ಯಾಂಡ್ ವಾಹನವನ್ನೇ ಖರೀದಿ ಮಾಡಿದಲ್ಲಿ ಅದರ ದುರಸ್ತಿಗಾಗಿಯೇ ಸಿಕ್ಕಾಪಟ್ಟೆ ಖರ್ಚು ಮಾಡಲಿದ್ದೀರಿ. ನಿಮ್ಮ ದೂರದ ಸಂಬಂಧಿಗಳು ಸಾಲವನ್ನು ಕೇಳಿಕೊಳ್ಳುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ವೃತ್ತಿಪರರಿಗೆ ಸುಖಾ ಸುಮ್ಮನೆ ಖರ್ಚುಗಳು ಮೈಮೇಲೆ ಬರಲಿವೆ. ನಿಮ್ಮ ವೃತ್ತಿಗೆ ಅನುಕೂಲ ಆಗಲಿ ಎಂದುಕೊಂಡು ಖರೀದಿ ಮಾಡಿದ್ದ ಸಲಕರಣೆಗಳಿಂದ ನಷ್ಟವನ್ನು ಅನುಭವಿಸಲಿದ್ದೀರಿ. ಈಗಿರುವ ಕಚೇರಿಯಿಂದ ಬೇರೆಯದಕ್ಕೆ ಬದಲಾವಣೆ ಮಾಡಬೇಕು ಅಂದುಕೊಂಡಿರುವವರು ಕೊನೆ ಕ್ಷಣದಲ್ಲಿ ಬೇಡ ಅಂದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಯಾವುದೇ ತೀರ್ಮಾನದಲ್ಲಿ ಗೊಂದಲಗಳು ಎದ್ದು ಕಾಣಲಿವೆ. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದಲೇ ನಾನಾ ಬಗೆಯಲ್ಲಿ ಆರೋಪಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮದು ಯಾವುದೇ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿಕೊಳ್ಳುವುದರಲ್ಲಿ ಹೈರಾಣಗಳಿದ್ದೀರಿ. ಸಣ್ಣ ಸಣ್ಣ ಸಂಗತಿಗಳು ಎಂದುಕೊಂಡು ನೀವು ನಿರ್ಲಕ್ಷ್ಯ ಮಾಡಿದಂತಹ ವಿಚಾರಗಳು ಸಮಸ್ಯೆಗಳನ್ನು ತಂದಿಡಲಿವೆ. ಯುವತಿಯರಿಗೆ ಪ್ರೀತಿ ಪ್ರೇಮದ ವಿಚಾರದಲ್ಲಿ ನಿರಾಸೆ ಆಗಬಹುದು. ನೀವು ಪ್ರೀತಿಸಿದ ವ್ಯಕ್ತಿಯು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಬೇಸರಕ್ಕೆ ಕಾರಣರಾಗಲಿದ್ದಾರೆ. ಈ ಸಿಟ್ಟಿನ ಕಾರಣಕ್ಕೆ ಅವರ ಬಗ್ಗೆ ಎಲ್ಲಾ ಕಡೆ ನಕಾರಾತ್ಮಕವಾಗಿ ಹೇಳಿಕೊಂಡು ಬರುವಂತಹ ಕೆಲಸ ಮಾತ್ರ ಮಾಡಬೇಡಿ. ಏಕೆಂದರೆ ಈ ವಾರ ಕಳೆದ ನಂತರ ಸಂಬಂಧ ಮತ್ತೆ ಸರಿ ಹೋಗುವ ಸಾಧ್ಯತೆಗಳು ಇವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಸುತ್ತಮುತ್ತ ಇರುವವರು ಎಲ್ಲರೂ ಏನಾದರೂ ಒಂದನ್ನು ನಿಮ್ಮಿಂದ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಎನಿಸುವುದಕ್ಕೆ ಶುರುವಾಗುತ್ತದೆ. ನಿಮಗೆ ಅವಕಾಶ ಎಂದು ಸಿಕ್ಕಿದ್ದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸರಿಯಾದ ಯೋಜನೆಯನ್ನು ರೂಪಿಸುವುದು ಮುಖ್ಯ. ಆಸ್ತಿಯನ್ನು ಮಾರಾಟಕ್ಕೆ ಇಟ್ಟವರಿಗೆ ಸೂಕ್ತ ಬೆಲೆ ದೊರೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಂಥವರ ವಿರುದ್ಧ ಜೊತೆಯಲ್ಲಿ ಕೆಲಸ ಮಾಡುತ್ತಿರುವವರು ಮೇಲಧಿಕಾರಿಗಳಿಗೆ ದೂರು ನೀಡಬಹುದು. ಯಾವುದೇ ಮುಖ್ಯ ವಿಚಾರಗಳನ್ನು ತಿಳಿಸಬೇಕು ಎಂದಾದಲ್ಲಿ ಈ ಮೇಲ್ ಅಥವಾ ಸೂಕ್ತ ಮಾರ್ಗದಲ್ಲಿ ಆಧಾರವನ್ನು ನಿಮ್ಮ ಬಳಿ ಇಟ್ಟುಕೊಂಡು ತಿಳಿಸುವುದಕ್ಕೆ ಪ್ರಯತ್ನಿಸಿ. ಕೃಷಿಕರಿಗೆ ಕೋರ್ಟು ಕಚೇರಿ ವ್ಯಾಜ್ಯಗಳು ತಲೆ ನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವಾಗಿಯೇ ಯಾವುದೇ ಸಣ್ಣಪುಟ್ಟ ವ್ಯಾಜ್ಯಗಳಿಗೆ ಕೋರ್ಟು ಕಚೇರಿ ಮೆಟ್ಟಲು ಹತ್ತುವುದಕ್ಕೆ ಹೋಗಬೇಡಿ. ನಿಮ್ಮ ಜೊತೆಗೆ ಇರುವಂತಹವರು ಹಲವು ಸಲಹೆಗಳನ್ನು ನೀಡಬಹುದು. ಆದರೆ ಅವುಗಳ ಪೈಕಿ ಯಾವುದನ್ನು ತೆಗೆದುಕೊಳ್ಳಬೇಕು ಎಂಬುದರ ಆಯ್ಕೆ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಿ. ವೃತ್ತಿ ನಿರತರಿಗೆ ಹೊಸ ಸವಾಲುಗಳು ಎದುರಾಗಲಿವೆ. ನೀವು ಈಗ ಮಾಡುತ್ತಿರುವ ವೃತ್ತಿಯಲ್ಲಿ ಹೊಸದನ್ನು ಕಲಿಯಬೇಕು, ಹೊಸತನ್ನು ಅಳವಡಿಸಿಕೊಳ್ಳಬೇಕು ಎಂಬ ಸವಾಲುಗಳು ಎದುರು ನಿಲ್ಲಲಿವೆ. ನಿಮ್ಮಲ್ಲಿ ಕೆಲವರು ಸಾಲ ಮಾಡಿ ಕಾರು ಖರೀದಿಸುವಂತಹ ಯೋಗ ಇದೆ. ಆದರೆ ಇತರರ ಮೇಲಿನ ಪ್ರತಿಷ್ಠೆಗಾಗಿ ನಿಮ್ಮ ಕೈಮೀರಿ ಸಾಲವನ್ನು ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ತಂದೆ ತಾಯಿಗಳ ಜೊತೆಗೆ ಮಾತನಾಡುವಾಗ ಅಭಿಪ್ರಾಯ ಭೇದಗಳು ಕಾಣಿಸಿಕೊಂಡಲ್ಲಿ ಅವರ ಮನಸ್ಸಿಗೆ ನೋವಾಗುವಂತೆ ಏನನ್ನೂ ಹೇಳಬೇಡಿ. ವಿದ್ಯಾರ್ಥಿಗಳಿಗೆ ಕಫ, ಶೀತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ವಾರದಲ್ಲಿ ಪ್ರಮುಖ ತರಗತಿಗಳನ್ನು ತಪ್ಪಿಸಿಕೊಂಡಂತಾಗುತ್ತದೆ. ದೇಹಾಯಾಸದ ಕಾರಣಕ್ಕಾಗಿ ನಿಮ್ಮ ಆತ್ಮವಿಶ್ವಾಸದಲ್ಲೂ ಇಳಿಕೆಯಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವ ಮಹಿಳೆಯರಿಗೆ ಗೆಳೆಯ ಗೆಳತಿಯರ ಸಹಾಯದಿಂದ ಉತ್ತಮ ಸಂಸ್ಥೆಗಳಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳು ಇವೆ. ಸ್ವಂತವಾಗಿ ಸೈಟ್ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಸಹ ಇದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ವಾರ ನೀವು ಆರಂಭಿಸುವ ಯಾವುದೇ ಹೊಸ ವ್ಯವಹಾರ, ಉದ್ಯಮ, ವ್ಯಾಪಾರ ನಿಮ್ಮ ಕೈ ಹಿಡಿಯಲಿದೆ. ಒಂದು ಬಗೆಯ ಹೊಸ ಉತ್ಸಾಹ ನಿಮ್ಮಲ್ಲಿ ಮೂಡಲಿದೆ. ಇತ್ತೀಚೆಗಷ್ಟೇ ವಿದ್ಯಾಭ್ಯಾಸವನ್ನು ಮುಗಿಸಿ ಹೊಸದಾಗಿ ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಶುಭ ಸುದ್ದಿ ಕೇಳುವ ಯೋಗವಿದೆ. ಹೋಟೆಲ್ ಉದ್ಯಮದಲ್ಲಿ ಇರುವಂತಹವರು ಹಲವರಿಗೆ ನೆರವಾಗಲಿದ್ದೀರಿ. ಸಂಘ – ಸಂಸ್ಥೆಗಳಿಂದ ಸನ್ಮಾನಗಳು ನಡೆಯುವ ಯೋಗ ಸಹ ಇದೆ. ನಿಮ್ಮ ಹಳೇ ಸ್ನೇಹಿತರು, ಸ್ನೇಹಿತೆಯರು ಮತ್ತೆ ಭೇಟಿಯಾಗಿ, ಹೊಸ ಪ್ರಾಜೆಕ್ಟ್ ಗಳನ್ನು ಆರಂಭಿಸುವ ಬಗ್ಗೆ ನಿರ್ಧಾರವನ್ನು ಮಾಡಲಿದ್ದೀರಿ. ಈಗಾಗಲೇ ಇತರರ ಕೈಗೆ ಸಿಕ್ಕಿಹಾಕಿಕೊಂಡಂಥ ಹಣ ಬಾರದು ಎಂದುಕೊಂಡಿದ್ದು ಈ ವಾರ ನೀವು ಗಟ್ಟಿಯಾದ ಪ್ರಯತ್ನವನ್ನು ಹಾಕಿದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಬಹುತೇಕ ಮೊತ್ತ ಕೈ ಸೇರುವ ಸಾಧ್ಯತೆಗಳಿವೆ. ಕೃಷಿಕರಿಗೆ ಭೂಮಿ ಖರೀದಿ ಮಾಡುವಂತಹ ಯೋಗ ಇದ್ದು, ಈ ಹಿಂದೆ ನೀವು ನೋಡಿಕೊಂಡು ಬಂದಂತಹ ಭೂಮಿಯನ್ನೇ ಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿದೆ. ನಿಮ್ಮ ನಾಯಕತ್ವ ಗುಣವನ್ನು ಮೆಚ್ಚಿಕೊಂಡು, ಗುಂಪು, ಸಂಘ -ಸಂಸ್ಥೆ ಅಥವಾ ಸಂಘಟನೆಯನ್ನು ನಡೆಸುವಂತೆ ಕೇಳಿಕೊಳ್ಳುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ಬಳಿ ಇರುವ ಹಣ ಎಷ್ಟು ಹಾಗೂ ನಿಮ್ಮ ಸಾಮರ್ಥ್ಯಕ್ಕೆ ಎಷ್ಟು ಸಾಲ ಮಾಡಬಹುದು ಎಂಬುದನ್ನು ಸರಿಯಾಗಿ ಅಳೆದು, ತೂಗಿ ಆ ನಂತರವಷ್ಟೇ ಹಣಕಾಸಿನ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸೂಕ್ತ. ವೃತ್ತಿಯನ್ನು ಮಾಡುತ್ತಿರುವವರಿಗೆ ಈ ವಾರ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ದೊಡ್ಡಮಟ್ಟದ ತಪ್ಪುಗಳೇ ಆಗಬಹುದು. ಈ ಬೆಳವಣಿಗೆಗಳಿಂದ ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವಂಥವರೇ ವಿಶ್ವಾಸದ್ರೋಹ ಮಾಡುವ ಸಾಧ್ಯತೆಗಳಿದ್ದು, ಯಾರನ್ನು ನಂಬಬೇಕು ಹಾಗೂ ಯಾರನ್ನು ನಂಬಬಾರದು ಎಂಬ ಬಗ್ಗೆ ವಿವೇಚನೆ ಇರಲಿ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣಗಳಿಂದ ಭಾರಿ ಯಶಸ್ಸು ಸಿಗಲಿದ್ದು, ಜನಪ್ರಿಯತೆ ಕೂಡ ಹೆಚ್ಚಾಗಲಿದೆ. ಸ್ವಲ್ಪ ಮಟ್ಟಿಗೆ ಹಣಕಾಸು ಸಹ ಕೈ ಸೇರುವ ಸಾಧ್ಯತೆಗಳಿವೆ. ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿವೆ. ಸರ್ಕಾರಿ ನೌಕರಿಯಲ್ಲಿ ಇರುವಂತವರಿಗೆ ಪದೋನ್ನತಿ ಅಥವಾ ತಮಗೆ ಬೇಕಾದಂತಹ ವಿಭಾಗ ಅಥವಾ ಸ್ಥಳಕ್ಕೆ ವರ್ಗಾವಣೆ ದೊರೆಯುವ ಅವಕಾಶಗಳು ಸಹ ಇವೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸಂಬಂಧದ ವಿಚಾರದಲ್ಲಿ ಬಹಳ ಗೊಂದಲಗಳು ನಿಮ್ಮನ್ನು ಕಾಡಲಿವೆ. ನಿಮ್ಮಲ್ಲಿ ಕೆಲವರು ಇಷ್ಟು ಸಮಯ ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದುಕೊಳ್ಳಲಿದ್ದೀರಿ. ನಿಮ್ಮ ಬಳಿ ಇರುವ ಉಳಿತಾಯದ ಬಗ್ಗೆ ಆಗಲಿ ಅಥವಾ ನೀವು ಮಾಡಿದ ಹೂಡಿಕೆಯ ಬಗ್ಗೆ ಆಗಲಿ ಈ ವಾರ ಯಾರ ಜೊತೆಗೂ ಚರ್ಚಿಸಲು ಹೋಗಬೇಡಿ. ಈಗ ನಿಮಗೆ ದೊರೆಯುತ್ತಿರುವ ರಿಟರ್ನ್ಸ್ ಗಿಂತ ಹೆಚ್ಚಿನದನ್ನು ನೀಡುವುದಾಗಿ ಹೇಳಿ, ನಿಮ್ಮಿಂದ ಆ ಹಣವನ್ನು ಪಡೆದುಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸುವ ಸಾಧ್ಯತೆಗಳಿವೆ. ಭಾವನಾತ್ಮಕವಾಗಿ ಆಲೋಚಿಸುತ್ತಾ ನೀವು ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಬಹುದು. ಇನ್ನೂ ಪೂರ್ತಿಯಾಗಿ ಮುಗಿಯದ ಕೆಲಸಗಳ ಬಗ್ಗೆ ಯಾರ ಜೊತೆಗೂ ಚರ್ಚಿಸದಿರುವುದು ಉತ್ತಮ. ಸಹೋದ್ಯೋಗಿ ಒಬ್ಬರು ನಿಮ್ಮನ್ನು ಭಾರೀ ಅವಮಾನಕ್ಕೆ ಗುರಿ ಮಾಡಲಿದ್ದಾರೆ, ಎಚ್ಚರಿಕೆಯಿಂದ ಇರಿ. ಕೃಷಿಕರು ತಮ್ಮ ಬಳಿ ಇರುವಂತಹ ಸಲಕರಣೆಗಳನ್ನೋ ವಾಹನವನ್ನೋ ಅಥವಾ ಪಶುಗಳನ್ನೋ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಹೊಸದಾಗಿ ಮನೆ ಅಥವಾ ಒಂದು ಕೋಣೆ ಅಥವಾ ಇನ್ಯಾವುದಾದರೂ ಕಟ್ಟಡ ನಿರ್ಮಾಣಕ್ಕೆ ನೀವು ಆಲೋಚನೆ ಮಾಡಿದ್ದಲ್ಲಿ ಕುಟುಂಬದಲ್ಲಿ ವಿರೋಧ ಕೇಳಿ ಬರಲಿದೆ. ಒಂದು ವೇಳೆ ನಿಮ್ಮಲ್ಲಿ ಯಾರಿಗಾದರೂ ಬೆನ್ನು ನೋವು, ಹಿಮ್ಮಡಿ ನೋವು ಕಾಡುತ್ತಿದ್ದಲ್ಲಿ ಹಾಗೂ ಅದು ಹಳೆ ನೋವಾಗಿದ್ದಲ್ಲಿ ಉಲ್ಬಣಿಸುವ ಸಾಧ್ಯತೆಗಳಿವೆ. ವೃತ್ತಿಯನ್ನು ಮಾಡುತ್ತಿರುವವರು ಈಗ ನೀಡುತ್ತಿರುವ ಸೇವೆಗಳ ಜೊತೆಗೆ ಇನ್ನಷ್ಟು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಹೊಸದಾಗಿ ಪಾರ್ಟ್ ನರ್ ಗಳು ಸಿಗಬಹುದು. ಇನ್ನು ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಕೆಲವು ದಾಖಲೆ ಪತ್ರಗಳು ಅಡಚಣೆಯಾಗಿ ಪರಿಣಮಿಸಲಿವೆ. ಈ ವಿಚಾರದಲ್ಲಿ ನಿಮ್ಮ ಜವಾಬ್ದಾರಿಯನ್ನು ಇತರರಿಗೆ ವರ್ಗಾಯಿಸಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರು ಯಾವುದೋ ಮುಖ್ಯ ವಿಚಾರವನ್ನು ಮುಚ್ಚಿಡುತ್ತಿದ್ದಾರೆ ಎಂಬ ಭಾವನೆ ಮೂಡಬಹುದು. ಈ ಕಾರಣಕ್ಕಾಗಿ ಕೆಲವರ ಜೊತೆ ಏರು ಧ್ವನಿಯ ಮಾತುಕತೆಗಳಾಗುವ ಸಾಧ್ಯತೆಗಳಿವೆ. ಈ ವಾರ ಸಾಧ್ಯವಾದಷ್ಟು ತಾಳ್ಮೆ- ಸಂಯಮದಿಂದ ಇರುವುದಕ್ಕೆ ಪ್ರಯತ್ನಿಸಿ. ಮಹಿಳೆಯರು ತಾವು ಇಷ್ಟು ಸಮಯ ಉಳಿತಾಯ ಮಾಡಿದ್ದ ಹಣವನ್ನು ತೆಗೆದು, ಬೇರೆ ಕಡೆ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಬೆಳ್ಳಿ ಅಥವಾ ಚಿನ್ನದ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಶುಭ ಕಾರ್ಯಗಳಲ್ಲಿ ನಿಮ್ಮ ಕೆಲಸದ ವೈಕರಿಯಿಂದ ಇತರರಿಗೆ ಬಹಳ ಸಂತೋಷವಾಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ವಾರ ಬಹಳ ಖುಷಿ ಖುಷಿಯಾದ ಮನಸ್ಥಿತಿಯಲ್ಲಿ ಇರುತ್ತೀರಿ. ಕುಟುಂಬದ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿರ್ಧಾರ ಮಾಡುತ್ತೀರಿ. ರೆಸಾರ್ಟ್, ರೆಸ್ಟೋರೆಂಟ್, ಸಿನಿಮಾಗಳಿಗೆ ತೆರಳಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಆದರೆ ಈ ಅವಧಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ಅದರಲ್ಲಿಯೂ ಚರ್ಮಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಅವರೇನಾದರೂ ಸಣ್ಣ- ಪುಟ್ಟ ತಪ್ಪುಗಳನ್ನು ಮಾಡಿದಲ್ಲಿ ಅದನ್ನು ವಿಪರೀತ ದೊಡ್ಡದು ಮಾಡಿ, ಕೂಗಾಟ- ರೇಗಾಟ ಮಾಡದಿರಿ. ಕಂಪ್ಯೂಟರ್ ಹ್ಯಾಕರ್ ಗಳಿಂದ ತುಂಬ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ವ್ಯಾಲೆಟ್ ಬಳಸುತ್ತಿದ್ದಲ್ಲಿ ಅದನ್ನು ಜನ ಹೆಚ್ಚಿರುವ ಕಡೆಗಳಿಗೆ ತೆಗೆದುಕೊಂಡು ಹೋಗದಿರುವುದು ಉತ್ತಮ. ರಾಜಕಾರಣಿಗಳಾಗಿದ್ದಲ್ಲಿ ಶತ್ರುಗಳನ್ನು ಮಣಿಸುವಲ್ಲಿ ಸಫಲರಾಗುತ್ತಾರೆ. ಕೃಷಿಕರಿಗೆ ಭೂಮಿ ಖರೀದಿಸುವ, ಕೃಷಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಸಾಲ ಮಾಡಬೇಕಾದಂಥ ಸನ್ನಿವೇಶ ನಿರ್ಮಾಣ ಆಗಬಹುದು. ಕೃಷಿ ಮೇಳ, ಅಧ್ಯಯನ ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ಸಂಗಾತಿ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದ್ದು, ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ. ಒಂದು ವೇಳೆ ಮನೆಯಲ್ಲಿ ಹೆಣ್ಣುಮಕ್ಕಳ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಬಹುದು. ಅವರಾಗಿಯೇ ಹುಡುಕಿಕೊಂಡು ಬಂದರು ಅನ್ನೋ ಕಾರಣಕ್ಕೆ ಅನುಮಾನ ಪಡುವುದು ಬೇಡ. ವೃತ್ತಿನಿರತರಿಗೆ ಹೊಸ ವಾಹನವನ್ನು ಖರೀದಿ ಮಾಡುವ ಅವಕಾಶಗಳಿವೆ. ಕೆಲವರು ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಬಹುದು. ಆದಾಯವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಹೊಸಬರೊಬ್ಬರನ್ನು ಪಾರ್ಟನರ್ ಆಗಿ ತೆಗೆದುಕೊಳ್ಳುವಂಥ ಆಲೋಚನೆ ಮೂಡಲಿದೆ. ಕಾಗದ- ಪತ್ರಗಳನ್ನು ಸರಿಯಾಗಿ ಮಾಡಿಕೊಂಡು, ಮುಂದುವರಿಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಟ್ಯಾಬ್ ಲೆಟ್ , ಡೆಸ್ಕ್ ಟಾಪ್ ಅನ್ನು ಪೋಷಕರು ಕೊಡಿಸಬಹುದು. ಬ್ರ್ಯಾಂಡ್ ವಿಚಾರಕ್ಕೆ ವಿಪರೀತ ಹಠ ಮಾಡಬೇಡಿ. ಮಹಿಳೆಯರಿಗೆ ಹೊಸ ವಸ್ತ್ರಾಭರಣ ಬರುವಂಥ ಯೋಗ ಇದೆ. ಅದರಲ್ಲೂ ನಿಮ್ಮಲ್ಲಿ ಕೆಲವರಿಗೆ ಸ್ವಂತವಾಗಿ ಕೂಡಿಟ್ಟ ಹಣದಲ್ಲೇ ಹೊಸ ವಸ್ತ್ರ- ಒಡವೆಗಳನ್ನು ಖರೀದಿಸುವ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ