ಈ ಹಿಂದೆ ಪ್ರಕಟ ಮಾಡಿದ ಲೇಖನದಲ್ಲಿ ಸುನಫಾ, ಅನಫಾ ಯೋಗಗಳ ಬಗ್ಗೆ ತಿಳಿಸಿಯಾಗಿದೆ. ಆದರೂ ಮತ್ತೊಮ್ಮೆ ಅವುಗಳ ಬಗ್ಗೆ ತಿಳಿಸಿ, ಯಾವ ಗ್ರಹದಿಂದ ಆಗುವ ಸುನಫಾ, ಅನಫಾ ಯೋಗಗಳಿಗೆ ಏನು ಫಲ ಎಂಬುದರ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಯಾವುದೇ ವ್ಯಕ್ತಿಯ ಜನ್ಮ ಜಾತಕದಲ್ಲಿ ಚಂದ್ರ ಇರುವ ಸ್ಥಾನದಿಂದ ಮುಂದಿನ ಮನೆಯಲ್ಲಿ ಒಂದು ಗ್ರಹವಿದ್ದರೆ ಸುನಫಾ ಯೋಗ ಆಗುತ್ತದೆ, ಅದು ಆ ಜಾತಕರಿಗೆ ಸಂಪತ್ತು ಮತ್ತು ಖ್ಯಾತಿ ನೀಡುತ್ತದೆ. ಜನ್ಮ ಜಾತಕದಲ್ಲಿ ಚಂದ್ರನ ಹಿಂದಿನ ಸ್ಥಾನದಲ್ಲಿ ಗ್ರಹ ಇದ್ದಲ್ಲಿ ಅನಫಾ ಯೋಗ ಆಗುತ್ತದೆ. ಅನಫಾ ಯೋಗವು ಉತ್ತಮ ಆರೋಗ್ಯ, ಖ್ಯಾತಿ, ಆಧ್ಯಾತ್ಮಿಕ ಬೆಳವಣಿಗೆ ನೀಡುತ್ತದೆ.
ರವಿ ಗ್ರಹ ಬಿಟ್ಟರೆ ಉಳಿದ ಗ್ರಹಗಳಿಗೆ ಶುಭ ಫಲ ಹೇಳಲಾಗಿದೆ. ಒಂದು ವೇಳೆ ರವಿ ಇದ್ದರೂ ಆಗ ಅಲ್ಲಿ ಬೇರೆ ಗ್ರಹವೂ ಇರಬೇಕು. ಮೊದಲಿಗೆ ಸುನಫಾ ಯೋಗ, ಅಂದರೆ ಚಂದ್ರನಿರುವ ಮನೆಯಿಂದ ಮುಂದಿನ ಮನೆಯಲ್ಲಿ ಯಾವ ಗ್ರಹ ಏನು ಫಲ ನೀಡುತ್ತದೆ ಎಂಬುದನ್ನು ತಿಳಿಯಿರಿ.
ಕುಜ- ಸುನಫಾ ಯೋಗ:
ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಕುಜ ಇದ್ದಲ್ಲಿ, ಕುಜ ಸುನಫಾ ಯೋಗವು ಏರ್ಪಡಿತ್ತದೆ. ಇದರಿಂದ ಆ ವ್ಯಕ್ತಿಯು ಧೈರ್ಯವಂತರಾಗುತ್ತಾರೆ. ಸಂಪತ್ತು ಬರುತ್ತದೆ. ಭೂಮಿ ಅಥವಾ ಆಸ್ತಿ ಮಾಲೀಕರಾಗಿರುತ್ತಾರೆ.
ಬುಧ- ಸುನಫಾ ಯೋಗ:
ಚಂದ್ರನ ಮುಂದಿನ ಮನೆಯಲ್ಲಿ ಬುಧ ಇದ್ದಾಗ ಬುಧ ಸುನಫಾ ಯೋಗ ಆಗುತ್ತದೆ. ಇದರಿಂದ ಆ ವ್ಯಕ್ತಿ ಪವಿತ್ರ ಗ್ರಂಥಗಳು, ಸಂಗೀತ ಮತ್ತು ಕಲೆಯಲ್ಲಿ ಪ್ರವೀಣರನ್ನಾಗಿ ಮಾಡುತ್ತದೆ. ಕಾವ್ಯಾಸಕ್ತರಾಗುತ್ತಾರೆ. ಸುಂದರವಾದ ದೇಹ ಹಾಗೂ ಉದಾತ್ತವಾದ ಸ್ವಭಾವ ಉಳ್ಳವರಾಗಿರುತ್ತಾರೆ.
ಬೃಹಸ್ಪತಿ – ಸುನಫಾ ಯೋಗ:
ಚಂದ್ರನ ಮುಂದಿನ ಮನೆಯಲ್ಲಿ ಬೃಹಸ್ಪತಿ ಇದ್ದಲ್ಲಿ ಗುರು ಸುನಫಾ ಯೋಗ ಆಗುತ್ತದೆ. ಇದರಿಂದ ಈ ಜಾತಕರು ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರವೀಣರಾಗುತ್ತಾರೆ. ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದುತ್ತಾರೆ. ಶ್ರೀಮಂತರಾಗಿದ್ದು, ಅಧ್ಯಾತ್ಮದ ಬಗ್ಗೆಯೂ ಒಲವು ಇರುತ್ತದೆ.
ಶುಕ್ರ- ಸುನಫಾ ಯೋಗ:
ಚಂದ್ರನ ಮುಂದಿನ ಮನೆಯಲ್ಲಿ ಶುಕ್ರ ಇದ್ದಲ್ಲಿ ಶುಕ್ರ ಸುನಫಾ ಯೋಗ. ಇದರಿಂದ ಆ ಜಾತಕರು ಭೂಮಿ ಅಥವಾ ಆಸ್ತಿಯ ಒಡೆಯರಾಗುತ್ತಾರೆ. ಧೈರ್ಯಶಾಲಿ, ಅಧಿಕಾರಿಗಳಿಂದ ಗುರುತಿಸುವಂಥವರು, ಬುದ್ಧಿವಂತರು ಎನಿಸಿಕೊಳ್ಳುತ್ತಾರೆ. ಮನೆ ಮತ್ತು ವಾಹನ ಸೌಕರ್ಯ ಯಥೇಚ್ಛವಾಗಿರುತ್ತವೆ.
ಶನಿ – ಸುನಫಾ ಯೋಗ:
ಚಂದ್ರನ ಮುಂದಿನ ಸ್ಥಾನದಲ್ಲಿ ಶನಿ ಇದ್ದಲ್ಲಿ ಶನಿ ಸುನಫಾ ಯೋಗವು ರೂಪುಗೊಳ್ಳುತ್ತದೆ. ಆ ವ್ಯಕ್ತಿಯು ನ್ಯಾಯಯುತವಾಗಿ ಇರುತ್ತಾರೆ, ಪರಿಶ್ರಮಿಗಳಾಗಿರುತ್ತಾರೆ ಮತ್ತು ಅದೃಷ್ಟ ಇರುತ್ತದೆ.
ವಿವಿಧ ಗ್ರಹಗಳ ಅನಫಾ ಯೋಗಗಳು
ಕುಜ- ಅನಫಾ ಯೋಗ:
ಚಂದ್ರನ ಹಿಂದಿನ ಸ್ಥಾನದಲ್ಲಿ ಕುಜ ಇದ್ದಲ್ಲಿ ಮಂಗಳ ಅನಫಾ ಯೋಗ ಆಗುತ್ತದೆ. ಇದರಿಂದ ಆ ವ್ಯಕ್ತಿಯು ಗುಂಪಿನ ನಾಯಕರಾಗುತ್ತಾರೆ. ದಿಟ್ಟ ವ್ಯಕ್ತಿತ್ವ ಇರುತ್ತದೆ. ಆತ್ಮವಿಶ್ವಾಸದಿಂದಿರುತ್ತಾರೆ. ಸವಾಲುಗಳನ್ನು ಎದುರಿಸುತ್ತಾರೆ.
ಬುಧ- ಅನಫಾ ಯೋಗ:
ಚಂದ್ರನ ಹಿಂದಿನ ಸ್ಥಾನದಲ್ಲಿ ಬುಧ ಇದ್ದಲ್ಲಿ ಬುದ್ಧ ಅನಫಾ ಯೋಗ ಆಗುತ್ತದೆ. ಹೀಗಿದ್ದಲ್ಲಿ ಸುಂದರರಾಗಿರುತ್ತಾರೆ, ಸಾಹಿತ್ಯಾಸಕ್ತರಾಗಿ, ಸಂಗೀತದಲ್ಲಿ ಪ್ರವೀಣರಾಗುತ್ತಾರೆ. ಅಷ್ಟೇ ಅಲ್ಲ, ಅತ್ಯುತ್ತಮ ಮಾತುಗಾರರಾಗಿ, ಖ್ಯಾತಿ ಪಡೆಯುತ್ತಾರೆ.
ಬೃಹಸ್ಪತಿ- ಅನಫಾ ಯೋಗ:
ಚಂದ್ರನ ಹಿಂದಿನ ಸ್ಥಾನದಲ್ಲಿ ಬೃಹಸ್ಪತಿ ಇದ್ದಲ್ಲಿ ಗುರು ಅನಫಾ ಯೋಗವು ಆಗುತ್ತದೆ. ಇವರು ಬುದ್ಧಿವಂತರಾಗಿರುತ್ತಾರೆ. ಯಾವ ಕೆಲಸವೇ ಆಗಲಿ ಗಮನ ಕೇಂದ್ರೀಕರಿಸಿ ಮಾಡುತ್ತಾರೆ. ವಿಚಕ್ಷಣಾ ಬುದ್ಧಿ ಇರುತ್ತದೆ. ಮೇಲಧಿಕಾರಿಗಳು ಮತ್ತು ಸಂಸ್ಥೆಗಳಿಂದ ಬಹುಮಾನ ಪಡೆಯುವ ಯೋಗ ಇರುತ್ತದೆ.
ಶುಕ್ರ – ಅನಫಾ ಯೋಗ:
ಚಂದ್ರನ ಹಿಂದಿನ ಸ್ಥಾನದಲ್ಲಿ ಶುಕ್ರ ಇದ್ದಲ್ಲಿ, ಶುಕ್ರ ಅನಫಾ ಯೋಗವು ಆಗುತ್ತದೆ. ಪುರುಷರಾಗಿದ್ದಲ್ಲಿ ಸ್ತ್ರೀಯರ ಮಧ್ಯೆ ಹಾಗೂ ಸ್ತ್ರೀಯರಾಗಿದ್ದಲ್ಲಿ ಪುರುಷರ ಮಧ್ಯೆ ಜನಪ್ರಿಯರಾಗುತ್ತಾರೆ. ಅಧಿಕಾರಿಗಳು ಇವರ ಮೇಲೆ ವಿಶ್ವಾಸ ಹೊಂದಿರುತ್ತಾರೆ ಹಾಗೂ ಇವರ ಬಳಿ ಐಷಾರಾಮಿ ವಾಹನಗಳು ಇರುತ್ತವೆ.
ಶನಿ- ಅನಫಾ ಯೋಗ:
ಚಂದ್ರನ ಹಿಂದಿನ ಮನೆಯಲ್ಲಿ ಶನಿಗ್ರಹ ಇದ್ದಲ್ಲಿ ಶನಿ ಅನಫಾ ಯೋಗ ಆಗುತ್ತದೆ. ಇವರು ಅದೃಷ್ಟಶಾಲಿಗಳಾಗಿರುತ್ತಾರೆ, ಹಲವು ಕೆಲಸಗಳಲ್ಲಿ ಪರಿಣತರಾಗುತ್ತಾರೆ. ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಬೇರೆಯವರಿಗೆ ತಾವು ಸ್ಫೂರ್ತಿ ಆಗುತ್ತಾರೆ.
ಇದನ್ನೂ ಓದಿ: Astrology: ಅನಫಾ – ಸುನಫಾ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಜಾತಕದಲ್ಲಿ ಈ ಯೋಗಗಳಿವೆಯಾ?
ಇದನ್ನೂ ಓದಿ: Astrology: ಏಕೆ ಕೆಲವರಿಗೆ ಏಕಾಗ್ರತೆ ಸಾಧ್ಯವಾಗಲ್ಲ, ತಾಯಿಯ ಪ್ರೀತಿ ಸಿಗಲ್ಲ? ಇಲ್ಲಿದೆ ಜ್ಯೋತಿಷ್ಯದ ಕಾರಣ