
ಯಾತ್ರೆ ಎನ್ನುವುದು ಭಾರತೀಯರಿಗೆ ಪುಣ್ಯಸಂಪಾದನೆಗೆ ಇರುವ ಉತ್ತಮ ಮಾರ್ಗ. ಪುಣ್ಯಸ್ಥಳದಲ್ಲಿ ವಾಸ, ದೇವರ ದರ್ಶನ, ಪೂಜೆ, ಗತಿಸಿಹೋದ ಪಿತೃಗಳಿಗೆ ಪಿಂಡವನ್ನು ನೀಡುವುದು, ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುವುದು ಸಾವಿರಾರು ವರ್ಷಗಳ ಹಿಂದಿನಿಂದ ನಡೆದುಕೊಂಡುಬಂದ ಪದ್ಧತಿ. ಜೀವನ ಅರ್ಧಭಾಗ ಕಳೆದ ಮೇಲೆ ದೇವರ ಸಾನ್ನಿಧ್ಯವಿರುವ ಪವಿತ್ರ ಸ್ಥಳಗಳಿಗೆ ಹೋಗಿಬರುವರು.
ಹೀಗೆ ಹೋಗುವಾಗ ದಿನವೂ ಬಹಳ ಮುಖ್ಯ. ಹಿಂದಿನ ಕಾಲದಲ್ಲಿ ಸ್ವತಂತ್ರವಾಗಿ ಹೋಗುವುದೂ ಮತ್ತು ತಿಂಗುಳುಗಳಷ್ಟು ಕಾಲ ಮನೆಯಿಂದ ದೂರವಿರಬೇಕಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸದೇ ಇರಲು ಶುಭ ಸಮಯವನ್ನು ನೋಡುತ್ತಿದ್ದರು. ಹೊರಡುವ ಸಮಯದ ನಕ್ಷತ್ರ, ಲಗ್ನ, ವಾರ, ದಿಕ್ಕು, ಶಕುನ ಇವೆಲ್ಲ ಬಹಳ ಮುಖ್ಯ. ಅವೇ ಪ್ರಾರಂಭಿಸಿರುವ ಫಲಾಫಲವನ್ನು ತಿಳಿಸಿಬಿಡುತ್ತವೆ. ಕಾಲವಿದರಿಗೆ ಅವು ಅರ್ಥವಾಗುವುದು. ಹಾಗಾಗಿ ಅಂತಹ ಸಮಯವನ್ನು ಅರಿತುಕೊಳ್ಳುವುದು ಮುಖ್ಯವೇ.
ಅಶ್ವಿನೀ, ಶ್ರವಣಾ, ಮೃಗಶಿರ ಮತ್ತು ಪುಷ್ಯ ನಕ್ಷತ್ರಗಳು ಶುಭ. ಈ ನಕ್ಷತ್ರದಲ್ಲಿ ಯಾವ ದಿಕ್ಕಿಗೆ ಮುಖಮಾಡಿ ಹೋದರೂ ಶುಭ. ಏಕೆಂದರೆ ಈ ನಕ್ಷತ್ರಗಳ ಅಧಿದೇವತೆಗಳೂ ಶುಭವಾಗಿರುತ್ತವೆ.
ಆರ್ದ್ರಾ, ಆಶ್ಲೇಷಾ, ಉತ್ತರಾಫಲ್ಗುಣೀ, ಉತ್ತರಾಭಾದ್ರ, ಉತ್ತರಾಷಾಢ, ವಿಶಾಖಾ, ಮಘಾ, ಭರಣೀ ಮತ್ತು ಕೃತ್ತಿಕಾ ಇವು ಅಶುಭ ನಕ್ಷತ್ರಗಳು. ಈ ನಕ್ಷತ್ರದ ದೇವತೆಗಳು ಯಾತ್ರೆಗೆ ಶುಭವನ್ನು ಕೊಡುವವಲ್ಲ.
ಅಶ್ವಿನೀ, ಮೃಗಶಿರಾ, ಪುನರ್ವಸು, ಪುಷ್ಯಾ, ಹಸ್ತಾ, ಅನೂರಾಧಾ, ಜ್ಯೇಷ್ಠಾ, ಮೂಲಾ, ಶ್ರವಣಾ, ರೇವತೀ ಈ ನಕ್ಷತ್ರಗಳು ಶ್ರೇಷ್ಠವಾದರೂ ಶುಭ ದಿಕ್ಕು ಮುಖ್ಯ. ಇದನ್ನು ಬಿಟ್ಟ ಎಲ್ಲ ನಕ್ಷತ್ರಗಳಲ್ಲಿ ಮಧ್ಯಮಫಲ.
ಷಷ್ಠೀ, ದ್ವಾದಶೀ ಹಾಗೂ ಚತುರ್ಥೀ, ನವಮೀ, ಚತುರ್ದಶೀ ಹಾಗೂ ಅಮಾವಾಸ್ಯಾ, ಪೂರ್ಣಿಮಾ, ಅಷ್ಟಮೀ, ಜನ್ಮತಾರೆ, ಅಷ್ಟಮದಲ್ಲಿ ಚಂದ್ರ, ಸೂರ್ಯನು ರಾಶಿಯನ್ನು ಬದಲಿಸುವ ಸಂಕ್ರಾಂತಿ ಮೊದಲಾದ ಪರ್ವತಿಥಿಗಳು ಯಾತ್ರೆಗೆ ವರ್ಜ್ಯ. ಮೀನ ಲಗ್ನ, ಕನ್ಯಾ, ತುಲಾ, ಮಿಥುನಾ ಲಗ್ನಗಳು ಶುಭ. ಹಾಗೆಯೇ ಯಾತ್ರೆಯ ಸಂದರ್ಭದಲ್ಲಿ ಮೊದಲು ಹೇಳಿದ ಲಗ್ನದಿಂದ ಎಂಟು ಮತ್ತು ದ್ವಾದಶ ಭಾವ ಅಥವಾ ರಾಶಿಯಲ್ಲಿ ಗ್ರಹರು ಶೂನ್ಯರಾಗಿದ್ದರೆ ಒಳ್ಳೆಯದು.
ರಾಹುವು ಸ್ತ್ರೀಯ ಎಡಭಾಗ ಅಥವಾ ಹಿಂಬದಿಗೆ ಬರುವಂತೆ ಗಮನವಿದ್ದರೆ ಉತ್ತಮ. ಹಾಗೆಯೇ ಚೈತ್ರ, ಭಾದ್ರಪದ, ಪೌಷ ಹಾಗೂ ಸಿಂಹ, ಧನು, ಮೀನ ಮಾಸದಲ್ಲಿ ಗಮನಾಗಮನ ಎರಡೂ ಉತ್ತಮವಲ್ಲ. ಆಪತ್ಕಾಲದಲ್ಲಿ ಈ ನಿಯಮವನ್ನು ಅನುಸರಿಸುವುದು ಉಚಿತವಲ್ಲ.
ಯಾತ್ರಾ ಸಂದರ್ಭದಲ್ಲಿ ಚಂದ್ರನು ಎಡಭಾಗ ಅಥವಾ ಹಿಂಭಾಗಕ್ಕೆ ಬರುವಂತೆ ಇದ್ದರೆ ಶುಭ. ಚೈತ್ರ, ವೈಶಾಖ ಅಥವಾ ಮೇಷ, ವೃಷಭ ಮೊದಲಾದ ಮಾಸದ ಆರಂಭ ಹಾಗೂ ಅಂತ್ಯದಲ್ಲಿ ಗಮನವನ್ನು ಆರಂಭಿಸಬಾರದು. ಚಂದ್ರಾಭಿಮುಖವಾಗಿ ಯಾತ್ರೆಯನ್ನು ಹೊರಟರೆ ಎಂತಹ ದೋಷವೂ ನಾಶವಾಗಿ ಅನಾಹುತಗಳು ಆಗದಂತೆ ಮನೆಗೆ ಬಂದುತಲುಪಬಹುದು.
ಹೀಗೆ ಒಂದು ಯಾತ್ರೆ ಎಂದರೆ ಸುಮ್ಮನೇ ಪುಣ್ಯಸ್ಥಳವನ್ನು ಸುತ್ತಿ ಬರುವುದಲ್ಲ. ಅಲ್ಲಿ ದೋಷವನ್ನು ಕಳೆದುಕೊಂಡು, ಪುಣ್ಯವನ್ನು ಸಂಪಾದಿಸುವ ಕ್ರಿಯೆಯಾದಕಾರಣ ಅದು ಕಾಲಮಿತಿಯಲ್ಲಿ ನಡೆಯುವುದೇ ಆಗಿದೆ. ಇಂತಹ ಶುಭಸಮಯದಲ್ಲಿ ಆರಂಭಿಸಿದವರು ಯಾವುದೇ ಅವಘಡಗಳಿಗೆ ಒಳಗಾಗದೇ ಸುರಕ್ಷಿತವಾಗಿ ಹಿಂದಿರುಗುವರು. ಇಲ್ಲವಾದರೆ, ಅಶುಭವಾರ್ತೆಯನ್ನು ಕೇಳಬೇಕಾಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)
Published On - 5:59 pm, Mon, 17 March 25