Bajaj Chetak Electric Scooter: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರ ನಡುವೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಇದನ್ನೇ ಈಗ ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು, ಅದರಂತೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಇದೀಗ ಬಜಾಜ್ ಕಂಪೆನಿ ಕೂಡ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹಲವು ನಗರಗಳಲ್ಲಿ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ ಅನ್ನು ಬಿಡುಗಡೆ ಮಾಡಿದೆ. ಬಜಾಜ್ ಕಂಪೆನಿಯು ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದ ಜನಪ್ರಿಯ ಬಜಾಜ್ ಚೇತಕ್ನ್ನು ಎಲೆಕ್ಟ್ರಿಕ್ ಮಾಡೆಲ್ನಲ್ಲಿ ಇತ್ತೀಚೆಗೆ ರಿ ಲಾಂಚ್ ಮಾಡಿತ್ತು. ಇದಾಗ್ಯೂ ಇ-ಸ್ಕೂಟರ್ ಕೆಲ ನಗರಗಳಿಗೆ ಸೀಮಿತವಾಗಿತ್ತು. ಆದರೆ ಇದೀಗ ಕಂಪನಿಯು 20 ಹೊಸ ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಬುಕ್ಕಿಂಗ್ ಆರಂಭಿಸಿದೆ. ಇವುಗಳಲ್ಲಿ ಕೊಯಮತ್ತೂರು, ಮಧುರೈ, ಕೊಚ್ಚಿ, ಕೋಝಿಕ್ಕೋಡ್, ಹುಬ್ಬಳ್ಳಿ, ವಿಶಾಖಪಟ್ಟಣಂ, ನಾಸಿಕ್, ವಸಾಯಿ, ಸೂರತ್, ದೆಹಲಿ, ಮುಂಬೈ ಮತ್ತು ಮಾಪುಸಾ ಸೇರಿದಂತೆ ನಗರಗಳು ಸೇರಿವೆ. ಈ ಹಿಂದೆ ಕರ್ನಾಟಕದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಬುಕ್ಕಿಂಗ್ ಆರಂಭಿಸಿತ್ತು. ಅದರಂತೆ ಇದೀಗ ಕರ್ನಾಟಕದ ಪ್ರಮುಖ ನಗರಗಳಲ್ಲಿ ಬಜಾಜ್ ಚೇತಕ್ ಅನ್ನು ಶೋ ರೂಂ ಅಥವಾ ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದು.
ಭರ್ಜರಿ ಪೈಪೋಟಿ:
ಭಾರತೀಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ಗಳಾದ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್ ಮತ್ತು ಓಲಾ ಇ-ಸ್ಕೂಟರ್ ಜೊತೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಭರ್ಜರಿ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಪ್ರಮುಖ ನಗರಗಳಲ್ಲಿ ಬುಕ್ಕಿಂಗ್ ಆರಂಭಿಸುತ್ತಿರುವುದು ವಿಶೇಷ.
2 ಮಾಡೆಲ್ಗಳಲ್ಲಿ ಲಭ್ಯ:
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸದ್ಯ ಎರಡು ಮಾಡೆಲ್ಗಳಲ್ಲಿ ಬುಕ್ಕಿಂಗ್ಗೆ ಲಭ್ಯವಿದ್ದು, ಅದರಂತೆ ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್ಗಳಲ್ಲಿ ಬುಕ್ ಮಾಡಿಕೊಳ್ಳಬಹುದು.
ಬ್ಯಾಟರಿ ಮತ್ತು ಮೋಟರ್:
ಈ ಇ-ಸ್ಕೂಟರ್ 3.8 ಕಿ.ವ್ಯಾಟ್ ಪವರ್ ಮತ್ತು 4.1 ಕಿ.ವ್ಯಾ ಗರಿಷ್ಠ ಎಲೆಕ್ಟ್ರಿಕ್ ಮೋಟರ್ ಹೊಂದಿರಲಿದೆ. ಸ್ಕೂಟರ್‌ನಲ್ಲಿ ನೀಡಲಾದ ವಿಶೇಷ ಆಟೋಮ್ಯಾಟಿಕ್ ಟ್ರಾನಿಮಿಷನ್ ಇದ್ದು, ಇದು ಹಿಂದಿನ ಚಕ್ರಗಳಿಗೆ ಹೆಚ್ಚಿನ ಪವರ್ ಒದಗಿಸಲಿದೆ. ಇನ್ನು ಈ ಸ್ಕೂಟರ್ 3kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ.
ಬ್ಯಾಟರಿ ಸಾಮರ್ಥ್ಯ:
ಬಜಾಜ್ ಚೇತಕ್ ಇ-ಸ್ಕೂಟರ್‌ನ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ವೇಗದ ಚಾರ್ಜಿಂಗ್ ಕೇವಲ ಒಂದು ಗಂಟೆಯಲ್ಲಿ 25 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಅವಧಿಯು 70,000 ಕಿ.ಮೀ ಅಥವಾ 7 ವರ್ಷಗಳವರೆಗೆ ಇರಲಿದೆ. ಈ ಬ್ಯಾಟರಿಗಳ ಮೇಲೆ ಕಂಪನಿಯು 3 ವರ್ಷಗಳ ಅಥವಾ 50,000 ಕಿ.ಮೀ ವರೆಗೆ ಖಾತರಿ ನೀಡಲಿದೆ.
ಮೈಲೇಜ್ (ರೇಂಜ್):
ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡಿದ ಬಳಿಕ ಇಕೊ ಸ್ಪೋರ್ಟ್ ಮೋಡ್‌ನಲ್ಲಿ ಈ ಸ್ಕೂಟರ್ 95 ಕಿ.ಮೀ ಮೈಲೇಜ್ ನೀಡಲಿದೆ. ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಬಹುದು.
ಬೆಲೆ ಮತ್ತು ಬುಕಿಂಗ್:
ಬಜಾಜ್ ಚೇತಕ್ ಇ-ಸ್ಕೂಟರ್ನ್ನು 2 ಸಾವಿರ ರೂ. ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಾಗೆಯೇ ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 1,42,998 ರೂ. (ಅರ್ಬನ್ ಮಾಡೆಲ್) ನಿಂದ ಶುರುವಾಗುತ್ತದೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: India Squad For Sri Lanka: ಭಾರತ ತಂಡದಲ್ಲಿ ಹೊಸಮುಖ: ಯಾರು ಈ ಸೌರಭ್?
(Bajaj Chetak Electric Scooter Launched In 20 Cities)