ಶ್ರೀಲಂಕಾ ವಿರುದ್ದದ ಸರಣಿಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆ ಮಾಡಲಾದ ಟೆಸ್ಟ್ ತಂಡದಲ್ಲಿ ಹೊಸಮುಖವೊಂದು ಕಾಣಿಸಿಕೊಂಡಿದೆ. ಟೀಮ್ ಇಂಡಿಯಾ ಟೆಸ್ಟ್ ಬಳಗದಲ್ಲಿ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರ ಬೆನ್ನಲ್ಲೇ ಯಾರು ಈ ಸೌರಭ್ ಕುಮಾರ್ ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಹಾಗಿದ್ರೆ ಯಾರು ಈ ಸೌರಭ್ ಕುಮಾರ್?
ಸೌರಭ್ ಕುಮಾರ್ ಮೂಲತಃ ಉತ್ತರ ಪ್ರದೇಶದ ಕ್ರಿಕೆಟಿಗ. ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಈಗಾಗಲೇ ದೇಶೀಯ ಅಂಗಳದಲ್ಲಿ ಸೌರಭ್ ಕುಮಾರ್ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡಬಲ್ಲ ಆಟಗಾರ. ಹೀಗಾಗಿ ಆಲ್ರೌಂಡರ್ ಸ್ಪಿನ್ನರ್ ಆಗಿ ಸೌರಭ್ ಕುಮಾರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ವಿರುದ್ದದ ಸರಣಿಗೆ ಸೌರಭ್ ಕುಮಾರ್ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಸೌರಭ್ ಕುಮಾರ್ ದೇಶೀಯ ಅಂಗಳದಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. 2015-16ರಲ್ಲಿ ಗುಜರಾತ್ ವಿರುದ್ಧ ಉತ್ತರ ಪ್ರದೇಶ ಪರ ತಮ್ಮ ಮೊದಲ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ.
2018-19ರಲ್ಲಿ ಅವರು ದುಲೀಪ್ ಟ್ರೋಫಿಯಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 2019-20 ರ ರಣಜಿ ಟ್ರೋಫಿಯಲ್ಲಿ ಸೌರಭ್ 44 ವಿಕೆಟ್‌ಗಳನ್ನು ಪಡೆದು ಸಂಚಲನ ಸೃಷ್ಟಿಸಿದ್ದರು. ಈ ಭರ್ಜರಿ ಪ್ರದರ್ಶನದ ಕಾರಣ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು.
ಇನ್ನು 46 ಪ್ರಥಮ ದರ್ಜೆ ಪಂದ್ಯವಾಡಿರುವ ಸೌರಭ್ ಕುಮಾರ್ ಒಟ್ಟು 196 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 1572 ರನ್ ಕಲೆಹಾಕಿದ್ದಾರೆ. ಇದಲ್ಲದೆ 25 ಲೀಸ್ಟ್ ಎ ಪಂದ್ಯಗಳಿಂದ 37 ವಿಕೆಟ್ ಪಡೆದಿದ್ದಾರೆ. ಇನ್ನು 33 ಟಿ20 ಪಂದ್ಯಗಳಿಂದ 24 ವಿಕೆಟ್ ಉರುಳಿಸಿದ್ದಾರೆ. ಒಟ್ಟಿನಲ್ಲಿ ದೇಶೀಯ ಅಂಗಳದಲ್ಲಿ 200 ಕ್ಕೂ ಅಧಿಕ ವಿಕೆಟ್ ಉರುಳಿಸುವ ಮೂಲಕ ಮಿಂಚಿರುವ 2 ಶತಕ ಹಾಗೂ 8 ಅರ್ಧಶತಕಗಳನ್ನೂ ಕೂಡ ಬಾರಿಸಿದ್ದಾರೆ. ಇದೇ ಕಾರಣದಿಂದಾಗಿ ಇದೀಗ 28 ವರ್ಷದ ಎಡಗೈ ಸ್ಪಿನ್ನರ್ಗೆ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಚಾನ್ಸ್ ಸಿಕ್ಕಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್, ಶುಭ್ಮನ್ ಗಿಲ್, ಕೆಎಸ್ ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಸೌರಭ್ ಕುಮಾರ್
Published On - 5:57 pm, Sat, 19 February 22