ಎನ್​ಎಸ್​ಇ ಮಾಜಿ ಸಿಇಒ ಚಿತ್ರ ರಾಮಕೃಷ್ಣ ವಿರುದ್ಧ ಲುಕ್​ಔಟ್ ನೊಟೀಸ್ ಜಾರಿ ಮಾಡಿದ ಸಿಬಿಐ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 18, 2022 | 3:46 PM

ಚಿತ್ರಾ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಮಾರನೇ ದಿನವೇ ಸಿಬಿಐ ಈ ಕ್ರಮಕ್ಕೆ ಮುಂದಾಗಿದೆ.

ಎನ್​ಎಸ್​ಇ ಮಾಜಿ ಸಿಇಒ ಚಿತ್ರ ರಾಮಕೃಷ್ಣ ವಿರುದ್ಧ ಲುಕ್​ಔಟ್ ನೊಟೀಸ್ ಜಾರಿ ಮಾಡಿದ ಸಿಬಿಐ
ಚಿತ್ರಾ ರಾಮಕೃಷ್ಣ
Follow us on

ದೆಹಲಿ: ಹಲವು ಅಕ್ರಮಗಳನ್ನು ಎಸಗಿರುವ ಆರೋಪ ಹೊತ್ತಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (National Stock Exchange – NSE) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ (Chitra Ramakrishna) ವಿರುದ್ಧ ಕೇಂದ್ರೀಯ ತನಿಖಾ ಬ್ಯೂರೊ (Central Bureau of Investigation – CBI) ಲುಕ್​ಔಟ್ ನೊಟೀಸ್ ಜಾರಿ ಮಾಡಿದೆ. ಚಿತ್ರಾ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಮಾರನೇ ದಿನವೇ ಸಿಬಿಐ ಈ ಕ್ರಮಕ್ಕೆ ಮುಂದಾಗಿದೆ. ಮತ್ತೋರ್ವ ಮಾಜಿ ಸಿಇಒ ರವಿ ನಾರಾಯಣ್ ಮತ್ತು ಮಾಜಿ ಮುಖ್ಯ ಹಣಕಾಸು ಅಧಿಕಾರಿ ಆನಂದ್ ಸುಬ್ರಹ್ಮಣ್ಯಂ ಅವರ ವಿರುದ್ಧವೂ ಸಿಬಿಐ ಲುಕ್​ಔಟ್ ನೊಟೀಸ್ ಜಾರಿ ಮಾಡಿದೆ.

ಆದರೆ ಸಿಬಿಐ ವಿಚಾರಣೆಗೂ ಆದಾರ ತೆರಿಗೆ ದಾಳಿಗೂ ಯಾವುದೇ ಸಂಬಂಧವಿಲ್ಲ. ಚಿತ್ರಾ ಅವರ ಅಧಿಕಾರ ಅವಧಿಯಲ್ಲಿ ನಡೆದಿದ್ದ ಹಗರಣವೊಂದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ. ಎನ್​ಎಸ್​ಇ ಜಾರಿ ಮಾಡಿದ್ದ ಕೊ-ಲೊಕೇಶನ್ ಸೌಲಭ್ಯವನ್ನು ಕೆಲ ಟ್ರೇಡರ್​ಗಳು ದುರುಪಯೋಗಪಡಿಸಿಕೊಂಡ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಅವಧಿಗೆ ಮೊದಲೇ ಎನ್​ಎಸ್​ಇ ವೆಬ್​ಸೈಟ್​ಗೆ ಲಾಗಿನ್ ಆಗುವ ಮೂಲಕ ಒಂದು ಸೆಕೆಂಡ್​ನ ಕೆಲ ಭಾಗಗಳಷ್ಟು ಸೂಕ್ಷ್ಮ ವೇಳೆಯಲ್ಲಿ ದತ್ತಾಂಶಗಳನ್ನು ಪಡೆದುಕೊಂಡು ವಿಶ್ಲೇಷಿಸುವ ಅನುಕೂಲ ಪಡೆದುಕೊಂಡಿದ್ದರು. ಕೆಲ ಟ್ರೇಡರ್​ಗಳು ವಿವಿಧ ಐಪಿ ವಿಳಾಸಗಳನ್ನು ಬಳಸಿ ಷೇರುಪೇಟೆಯ ದತ್ತಾಂಶ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು.

‘ಷೇರುಪೇಟೆಯಲ್ಲಿ ನಡೆದ ‘ಟಿಕ್ ಬೈ ಟಿಕ್’ ಮೋಸ’ ಎಂದೇ ಕುಖ್ಯಾತವಾಗಿರುವ ಪ್ರಕರಣದ ಬಗ್ಗೆ ಸಿಬಿಐ ಎನ್​ಎಸ್​ಸಿ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಪ್ರಶ್ನಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲೇ ಪ್ರಕರಣ ದಾಖಲಾಗಿತ್ತಾದರೂ, ಹೆಚ್ಚಿನ ಮಾಹಿತಿ ಬಹಿರಂಗವಾಗಿರಲಿಲ್ಲ. 2013ರಿಂದ 2016ರವರೆಗೆ ಚಿತ್ರಾ ಅವರು ಎನ್​ಎಸ್​ಇ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆಗಿದ್ದರು. ನಂತರ ಖಾಸಗಿ ಕಾರಣ ಮುಂದಿಟ್ಟು ರಾಜೀನಾಮೆ ನೀಡಿದ್ದರು.

ಚಿತ್ರಾ ಅವರು ಕೆಲಸ ಬಿಟ್ಟ ರೀತಿಯ ಬಗ್ಗೆಯೂ ತನಿಖೆ ನಡೆದಿತ್ತು. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿಯನ್ನು ‘ಹಿಮಾಲಯದ ಯೋಗಿ’ ಎನ್ನುವ ನಿಗೂಢ ವ್ಯಕ್ತಿಯೊಂದಿಗೆ ಚಿತ್ರಾ ಹಂಚಿಕೊಂಡಿದ್ದರು. ಈ ವ್ಯಕ್ತಿ ಯಾರು ಎನ್ನುವ ಬಗ್ಗೆಯೂ ಸಂಶಯಗಳು ವ್ಯಕ್ತವಾಗಿವೆ.

ಒಪಿಜಿ ಸೆಕ್ಯುರಿಟಿಸ್ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ್ ಗುಪ್ತ ಮತ್ತು ಅಜಯ್ ಶಾ ಸೆಬಿಯ ಅನಾಮಿಕ ಅಧಿಕಾರಿಗಳಿಗಾಗಿ ‘ಟಿಕ್ ಬೈ ಟಿಕ್’ ಎನ್ನುವ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿಕೊಟ್ಟಿತ್ತು. 2010 ಮತ್ತು 2014ರ ನಡುವೆ ಹಣಕಾಸು ಮಾಹಿತಿಗೆ ಸಂಬಂಧಿಸಿದ ಅವ್ಯವಹಾರಗಳಿಗೆ ಈ ಸಾಫ್ಟ್​ವೇರ್ ಬಳಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಮುಖವೇ ನೋಡಿರದ ಯೋಗಿ ನಿರ್ದೇಶನದಂತೆ ಎನ್​ಎಸ್​ಇಯಲ್ಲಿ ಮುಖ್ಯ ನಿರ್ಧಾರಗಳೆಲ್ಲವನ್ನೂ ಮಾಡಿದ್ದ ಚಿತ್ರಾ ರಾಮಕೃಷ್ಣ

ಇದನ್ನೂ ಓದಿ: ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪ: ಎನ್ಎಸ್ಇ ಮಾಜಿ ಎಂಡಿ ಮನೆಗೆ ಐಟಿ ದಾಳಿ

Published On - 3:46 pm, Fri, 18 February 22