ಜಿಯೋ ಟವರ್ಗಳಿಗೆ ಹಾನಿ : ಕೇಂದ್ರ, ಪಂಜಾಬ್ ಸರ್ಕಾರಗಳಿಗೆ ನೋಟಿಸ್ ನೀಡಿದ ಚಂಡೀಗಢ ಹೈಕೋರ್ಟ್
ಟವರ್ ಧ್ವಂಸ ಮತ್ತು ಕಚೇರಿಗಳ ಮೇಲೆ ನಡೆದ ದಾಳಿ ವಿರುದ್ಧ ರಿಲಯನ್ಸ್ ಇನ್ಫೊಕಾಂ ಸಲ್ಲಿಸಿದ್ದ ಅರ್ಜಿ ಆಲಿಸಿದ ಚಂಡೀಗಢ ಉಚ್ಛ ನ್ಯಾಯಾಲಯ, ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಚಂಡೀಗಢ: ಪಂಜಾಬ್ ಮತ್ತು ಹರಿಯಾಣಗಳಲ್ಲಿ ರಿಲಯನ್ಸ್ನ 1500 ಮೊಬೈಲ್ ಟವರ್ಗಳಿಗೆ ಹಾನಿಯೆಸಗಿದ ಘಟನೆಗೆ ಸಂಬಂಧಿಸಿ, ಚಂಡೀಗಢ ಉಚ್ಛ ನ್ಯಾಯಾಲಯ ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ರಿಲಯನ್ಸ್ ಇನ್ಫೋಕಾಂ ತನ್ನ ಟವರ್ ಮತ್ತು ಕಚೇರಿಗಳ ರಕ್ಷಣೆಗೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.
ರಿಲಯನ್ಸ್ ಕಂಪನಿ ರೈತ ವಿರೋಧಿಯಾಗಿದ್ದು, ನೂತನ ಕೃಷಿ ಕಾಯ್ದೆಗಳಿಂದ ಲಾಭ ಪಡೆಯಲು ಹವಣಿಸುತ್ತಿದೆ ಎಂದು ದೆಹಲಿ ಚಲೋ ಚಳುವಳಿ ನಿರತ ರೈತರು ಆರೋಪಿಸಿದ್ದರು. ದೇಶಾದ್ಯಂತ ಜಿಯೋನಿಂದ ಇತರ ಕಂಪನಿಗಳಿಗೆ ಮೊಬೈಲ್ ನಂಬರ್ ಬದಲಿಸುವ ಚಳುವಳಿಯೂ ನಡೆದಿತ್ತು.
ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಉದ್ರಿಕ್ತ ಗುಂಪು ಜಿಯೋ ಟವರ್ಗಳ ಮೇಲೆ ದಾಳಿ ಎಸಗಿತ್ತು. ಈ ಘಟನೆಯಲ್ಲಿ 1500 ಟವರ್ಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ ಜಿಯೋ, ಚಂಡೀಗಢ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ರಿಲಯನ್ಸ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಕಂಪನಿಗೆ ಬಂಡವಾಳ ಶಾಹಿ ಕೃಷಿಯಲ್ಲಿ ತೊಡಗಿಕೊಳ್ಳುವ ಯಾವುದೇ ಇರಾದೆಯಿಲ್ಲ ಎಂದು ರಿಲಯನ್ಸ್ ತಿಳಿಸಿತ್ತು.
ಮೇಲ್ನೋಟಕ್ಕೆ ರಿಲಯನ್ಸ್ ಕಂಪನಿಯ ಆಸ್ತಿ ಹಾನಿಗೊಳಗಾಗಿದೆ ಎಂದು ನ್ಯಾಯಪೀಠಕ್ಕೆ ಅನಿಸಿದ್ದು, ಫೆಬ್ರುವರಿ 8ರಂದು ಮುಂದಿನ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಾಲಯ ತಿಳಿಸಿರುವುದಾಗಿ ಜಿಯೋ ಪರ ವಕೀಲ ಆಶಿಶ್ ಮಿತ್ತಲ್ ತಿಳಿಸಿದ್ದಾರೆ. ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ, ಟೆಲಿಕಾಂ ಸಚಿವಾಲಯಗಳಿಗೆ ಪ್ರತಿಕ್ರಿಯಿಸುವಂತೆ ಅರ್ಜಿ ಸಲ್ಲಿಸಿತ್ತು.
ಒತ್ತಾಯಪೂರ್ವಕವಾಗಿ ಇತರ ಕಂಪನಿಗಳಿಗೆ ಪೋರ್ಟ್ ಮಾಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸಲಾಗುತ್ತಿದೆ. ಅಲ್ಲದೇ, ರಿಲಯನ್ಸ್ ಇನ್ಫೊಕಾಂನ ಉದ್ಯೋಗಿಗಳಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ರಿಲಯನ್ಸ್ ಅರ್ಜಿ ಸಲ್ಲಿಸಿತ್ತು. ಪಂಜಾಬ್ನ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಕಾಯ್ದೆಯಡಿ ಹಾನಿಗೊಳಗಾದ ಆಸ್ತಿ ಮೌಲ್ಯ ಒದಗಿಸಬೇಕೆಂದು ರಿಲಯನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಕೃಷಿ ಕಾಯ್ದೆಗಳಿಂದ ನಮಗೆ ಲಾಭವಿಲ್ಲ, ಗುತ್ತಿಗೆ ಕೃಷಿ ಮಾಡುವುದಿಲ್ಲ: ರಿಲಯನ್ಸ್ ಸ್ಪಷ್ಟನೆ
Published On - 4:49 pm, Tue, 5 January 21