Twitter: ಟ್ವಿಟರ್​ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ: ಎಲಾನ್ ಮಸ್ಕ್

Elon Musk: ಎಸ್​ಅಂಡ್​ಪಿ ಗ್ಲೋಬಲ್ ರೇಟಿಂಗ್ಸ್​ ಟ್ವಿಟರ್​ನ ಶ್ರೇಯಾಂಕವನ್ನು ‘ಬಿ’ ದರ್ಜೆಗೆ ಇಳಿಸಿದೆ. ಮಸ್ಕ್ ಟ್ವಿಟರ್​ ಕಂಪನಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಸಾಲದ ಪ್ರಮಾಣ ಹೆಚ್ಚಾಗಿರುವುದನ್ನು ಇದು ಸೂಚಿಸುತ್ತದೆ.

Twitter: ಟ್ವಿಟರ್​ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ: ಎಲಾನ್ ಮಸ್ಕ್
ಎಲಾನ್ ಮಸ್ಕ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2022 | 8:17 AM

ಟ್ವಿಟರ್​ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ (Twitter Blue Tick) ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ತೆರಬೇಕು ಎಂದು ಟ್ವಿಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಜನರು ಸ್ವತಃ ಶುಲ್ಕ ತೆರಲು ಆರಂಭಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟ್ವಿಟರ್​ನಲ್ಲಿ ಬ್ಲೂಟಿಕ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ. ‘ಪ್ರಸ್ತುತ ಟ್ವಿಟರ್​ನಲ್ಲಿ ಅಧಿಪತಿಗಳು ಮತ್ತು ಕೆಲಸಗಾರರು ಎಂಬ ಎರಡು ವರ್ಗ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಅಸಮಾನತೆ ಇರುವುದಿಲ್ಲ. ತಿಂಗಳಿಗೆ 8 ಡಾಲರ್ ಶುಲ್ಕ ತೆರುವ ಯಾರು ಬೇಕಾದರೂ ಬ್ಲೂಟಿಕ್​ಗೆ ಅಪ್ಲೈ ಮಾಡಬಹುದಾಗಿದೆ. ಈ ಮೊತ್ತವನ್ನು ಆಯಾ ದೇಶಗಳ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಪರಿಷ್ಕರಿಸಲಾಗುವುದು’ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಬ್ಲೂ-ಟಿಕ್ ಪಡೆದಿರುವ ಖಾತೆಗಳಿಗೆ ಟ್ವಿಟರ್​ ಆಲ್ಗರಿದಂನಲ್ಲಿ ಆದ್ಯತೆ ಸಿಗುತ್ತದೆ. ಈ ಅಂಶವನ್ನು ಮಸ್ಕ್ ಸಹ ಅಧಿಕೃತವಾಗಿ ಘೋಷಿಸಿದ್ದಾರೆ. ‘ಬ್ಲೂಟಿಕ್ ಪಡೆದ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ. ಇಂಥವರಿಗೆ ದೀರ್ಘ ಅವಧಿಯ ವಿಡಿಯೊ / ಆಡಿಯೊ ಪೋಸ್ಟ್ ಮಾಡಲೂ ಅವಕಾಶ ಮಾಡಿಕೊಡಲಾಗುವುದು’ ಎಂದು ಮಸ್ಕ್ ಭರವಸೆ ನೀಡಿದ್ದಾರೆ. ಟ್ವಿಟರ್ ಜೊತೆಗೆ ಕೆಲಸ ಮಾಡಲು ಇಚ್ಛಿಸುವ ಕಂಟೆಂಟ್ ಕ್ರಿಯೇಟರ್​ಗಳಿಗಾಗಿ ಪೇವಾಲ್ ಬೈಪಾಸ್ ಒದಗಿಸಲು ಮಸ್ಕ್ ಪ್ರಸ್ತಾವ ಮುಂದಿಟ್ಟಿದ್ದಾರೆ. ಟ್ವಿಟರ್​ನಲ್ಲಿ ಸಕ್ರಿಯವಾಗಿರುವ ಕಂಟೆಂಟ್ ಕ್ರಿಯೇಟರ್​ಗಳಿಗೆ ಹಣ ನೀಡುವ ವ್ಯವಸ್ಥೆ ಆರಂಭಿಸಲೂ ಮಸ್ಕ್ ಚಿಂತನೆ ನಡೆಸಿದ್ದಾರೆ. ಈ ಬಗ್ಗೆಯೂ ಶೀಘ್ರ ಮಸ್ಕ್ ತಮ್ಮ ಅಭಿಪ್ರಾಯ ಬಹಿರಂಗಪಡಿಸಬಹುದು ಎಂದು ಹೇಳಲಾಗುತ್ತಿದೆ.

ಟ್ವಿಟರ್ ತನ್ನದೇ ಆದ ಮಾನದಂಡದ ಆಧಾರದ ಮೇಲೆ ಟಿಪ್ಪಣಿ-ಯೋಗ್ಯ ಪ್ರೊಫೈಲ್ ಗಳಿಗೆ ನೀಲಿ ಟಿಕ್ ಗಳನ್ನು ನೀಡಲು ಬಳಸುತ್ತದೆ. ಬ್ಲೂಟಿಕ್ ಪಡೆಯುವ ಖಾತೆಯು ಹಲವು ಹಂತಗಳ ಪರಿಶೀಲನೆಗೆ ಒಳಪಡಬೇಕಿದೆ. ಈ ಸೇವೆಗೆ ಹಣ ಪಾವತಿಸಬೇಕು ಎನ್ನುವ ಷರತ್ತು ಒಪ್ಪಲು ಬಹುತೇಕ ಬಳಕೆದಾರರು ಹಿಂಜರಿದಿದ್ದಾರೆ. ಇತ್ತೀಚೆಗೆ ರಾಯಿಟರ್ಸ್​ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇ 80ರಷ್ಟು ಬಳಕೆದಾರರು ಹಣ ಪಾವತಿಸಲು ಆಗುವುದಿಲ್ಲ ಎಂದಿದ್ದರು. ಶೇ 10ರಷ್ಟು ಬಳಕೆದಾರರು ಮಾತ್ರ ತಿಂಗಳಿಗೆ 5 ಡಾಲರ್ ಪಾವತಿಸಬಹುದು ಎಂದಿದ್ದರು.

ಕಳೆದ ಜೂನ್​ ತಿಂಗಳಿನಿಂದ ಟ್ವಿಟರ್ ಕಂಪನಿಯು ‘ಟ್ವಿಟರ್ ಬ್ಲೂ’ ಹೆಸರಿನ ವಿಶಿಷ್ಟ ಸೇವೆಯನ್ನು ಆರಂಭಿಸಿದೆ. ಈ ಸೇವೆ ಪಡೆದವರಿಗೆ ಟ್ವೀಟ್​ಗಳನ್ನು ಎಡಿಟ್ ಮಾಡುವ ಅವಕಾಶ ಸೇರಿದಂತೆ ಹಲವು ವಿಶಿಷ್ಟ ಸೌಲಭ್ಯಗಳು ಸಿಗುತ್ತಿವೆ.

ಅಪಾಯದಲ್ಲಿ ಟ್ವಿಟರ್

ಬ್ಲೂ ಟಿಕ್​ಗೆ ಶುಲ್ಕ ವಿಧಿಸುವ ಎಲಾನ್ ಮಸ್ಕ್ ಚಿಂತನೆಗೆ ವಿರೋಧ ವ್ಯಕ್ತವಾಗಿದೆ. ಈ ಸೇವೆಗೆ ಮಸ್ಕ್ 20 ಡಾಲರ್ ಶುಲ್ಕ ವಿಧಿಸಬಹುದು ಎಂಬ ಮಾತುಗಳು ಇತ್ತೀಚಿನವರೆಗೂ ಕೇಳಿಬರುತ್ತಿತ್ತು. ಈ ಊಹಾಪೋಹಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಬೆಸ್ಟ್​ ಸೆಲ್ಲರ್ ಲೇಖಕ ಸ್ಟೀಫನ್ ಕಿಂಗ್, ‘ಇದು ಆರಂಭವಾದರೆ (ಬ್ಲೂಟಿಕ್​ಗೆ ಶುಲ್ಕ) ನಾನು ಎನ್ರಾನ್​ನಂತೆ (ದಿವಾಳಿ) ಆಗುತ್ತೇನೆ’ ಎಂದಿದ್ದರು. ಈ ನಡುವೆ ಎಸ್​ಅಂಡ್​ಪಿ ಗ್ಲೋಬಲ್ ರೇಟಿಂಗ್ಸ್​ ಟ್ವಿಟರ್​ನ ಶ್ರೇಯಾಂಕವನ್ನು ‘ಬಿ’ ದರ್ಜೆಗೆ ಇಳಿಸಿದೆ. ಮಸ್ಕ್ ಟ್ವಿಟರ್​ ಕಂಪನಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಸಾಲದ ಪ್ರಮಾಣ ಹೆಚ್ಚಾಗಿರುವುದನ್ನು ಇದು ಸೂಚಿಸುತ್ತದೆ.

ಕಳೆದ ವಾರವಷ್ಟೇ ಎಲಾನ್ ಮಸ್ಕ್ 44 ಶತಕೋಟಿ ಡಾಲರ್ ಮೊತ್ತ ತೆತ್ತು ಟ್ವಿಟರ್ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಮೊದಲು ಉತ್ಸಾಹದಿಂದ ಟ್ವಿಟರ್ ಖರೀದಿಗೆ ಪ್ರಸ್ತಾವ ಮಂಡಿಸಿದ್ದ ಮಸ್ಕ್ ನಂತರ ನಕಲಿ ಖಾತೆಗಳ ವಿಚಾರ ಮುಂದಿಟ್ಟು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ಆದರೆ ಟ್ವಿಟರ್ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋದ ನಂತರ ಅನಿವಾರ್ಯವಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದರು.

Published On - 8:17 am, Wed, 2 November 22