ಪರಿಸರ ಸ್ನೇಹಿ ಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ನಂ 1: ಆರ್ಬಿಐ ವರದಿ
ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು ದೇಶದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಪರಿಸರಸ್ನೇಹಿ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ ಮಾರಾಟ ಮಾಡುತ್ತಿವೆ.
ಬೆಂಗಳೂರು: ವಿದ್ಯುತ್ ವಿತರಣಾ ಗ್ರಿಡ್ ಸಂಯೋಜಿತ ನವೀಕರಣಗೊಳಿಸಬಹುದಾದ (Renewable Power) ಪರಿಸರ ಸ್ನೇಹಿ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ನ ಪ್ರಮಾಣದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಒಟ್ಟು 15,463 ಮೆಗಾವಾಟ್ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ವರದಿಯು ತಿಳಿಸಿದೆ. ತಮಿಳುನಾಡಿನಲ್ಲಿ 15,225 ಮೆಗಾವಾಟ್, ಗುಜರಾತ್ನಲ್ಲಿ 13,153 ಮೆಗಾವಾಟ್ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ರಾಜ್ಯಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. 10,267 ಮೆಗಾಟಾಟ್ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ. ‘ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ಆನ್ ಇಂಡಿಯನ್ ಸ್ಟೇಟ್ಸ್ 2021-22’ (Handbook of Statistics on Indian States) ಕೈಪಿಡಿಯಲ್ಲಿ ಆರ್ಬಿಐ ಈ ಮಾಹಿತಿಯನ್ನು ಪ್ರಕಟಿಸಿದೆ. ಭಾರತದ ಪ್ರಾದೇಶಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೈಪಿಡಿಯು ಅಧಿಕೃತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪ್ರಕಟಿಸುತ್ತದೆ.
ಮಾರ್ಚ್ 2021ರವರೆಗಿನ ದತ್ತಾಂಶಗಳನ್ನು ಆಧರಿಸಿ ವಿದ್ಯುತ್ ಉತ್ಪಾದನೆಯ ಸ್ಥಿತಿಗತಿಯ ಮಾಹಿತಿಯನ್ನು ಆರ್ಬಿಐ ಪ್ರಕಟಿಸಿದೆ. ಗ್ರಿಡ್ ಸಂಯೋಜಿತ ನವೀಕರಣಗೊಳಿಸಬಹುದಾದ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ ಉತ್ಪಾದನೆಯ ಬಗ್ಗೆ ಆಯಾ ರಾಜ್ಯಗಳ ಇಂಧನ ಇಲಾಖೆ ಹಾಗೂ ಸಾಂಖ್ಯಿಕ ಇಲಾಖೆಯಿಂದ ಆರ್ಬಿಐ ಮಾಹಿತಿ ಪಡೆದುಕೊಂಡಿದೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ರಾಜಸ್ಥಾನ್ (10,205 ಮೆವಾ), ಆಂಧ್ರ ಪ್ರದೇಶ (8,969 ಮೆವಾ), ಮಧ್ಯ ಪ್ರದೇಶ (5,206 ಮೆವಾ), ತೆಲಂಗಾಣ (4,378 ಮೆವಾ), ಉತ್ತರ ಪ್ರದೇಶ್ (3,879 ಮೆವಾ), ಪಂಜಾಬ್ (1,617 ಮೆವಾ), ಹಿಮಾಚಲ ಪ್ರದೇಶ (988 ಮೆವಾ) ಮತ್ತು ಉತ್ತರಾಖಂಡ್ (713 ಮೆವಾ) ರಾಜ್ಯಗಳು ಇವೆ.
ಆರ್ಬಿಐ ಹೇಳಿಕೆಯ ಪ್ರಕಾರ ನವೀಕರಣಗೊಳ್ಳುವ ಮೂಲಗಳು ಎಂದರೆ ಬಯೋವಿದ್ಯುತ್, ಸೌರಶಕ್ತಿ, ಸಣ್ಣ ಪ್ರಮಾಣದ ಜಲವಿದ್ಯುತ್ ಘಟಕ, ತ್ಯಾಜ್ಯದಿಂದ ವಿದ್ಯುತ್ ಮತ್ತು ಪವನಶಕ್ತಿಯಿಂದ ಉತ್ಪಾದಿಸುವ ವಿದ್ಯುತ್ ಸೇರುತ್ತದೆ. ಆರ್ಬಿಐ ಪ್ರಕಟಿಸಿರುವ ಕೈಪಿಡಿಯಲ್ಲಿ ರಾಜ್ಯವಾರು ಸಾಮಾಜಿಕ ಸ್ಥಿತಿಗತಿಯ ವಿವರಗಳು, ಜೀವನ ಸ್ಥಿತಿಯ ವಿವರಗಳು, ರಾಜ್ಯವಾರು ಉತ್ಪಾದನೆ ವಿವರ, ಕೃಷಿ, ಬೆಲೆ ಮತ್ತು ವೇತನ, ಕೈಗಾರಿಕೆ, ಮೂಲಸೌಕರ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸ್ಥಿತಿಗತಿಯ ವಿವರಗಳಿವೆ. 1951ರಿಂದ 2021-22ರವರೆಗಿನ ಅವಧಿಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಈ ಕೈಪಿಡಿಯು ಬೆಳಕು ಚೆಲ್ಲುತ್ತಿದೆ. ಈ ವರ್ಷದಿಂದ ಕೈಪಿಡಿಯಲ್ಲಿ ಆರೋಗ್ಯ ಮತ್ತು ಪರಿಸರ ಎನ್ನುವ ಎರಡು ಹೊಸ ವಿಭಾಗಗಳನ್ನು ಸೇರಿಸಲಾಗಿದೆ.
ಭಾರತ ಇಂಧನ ವಿನಿಮಯ ಕೇಂದ್ರದ (Indian Energy Exchange – IEX) ಮಾಹಿತಿ ಪ್ರಕಾರ ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು (discoms) ದೇಶದಲ್ಲಿಯೇ ಅತಿಹೆಚ್ಚು ಪ್ರಮಾಣದ ನವೀಕರಣಗೊಳ್ಳಬಹುದಾದ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ ಮಾರಾಟ ಮಾಡುತ್ತಿವೆ.
Published On - 11:39 am, Mon, 21 November 22