ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ಗಳೆಲ್ಲ ಜೀವನದ ಅವಿಭಾಜ್ಯ ಅಂಶಗಳೇ ಆಗುತ್ತಿವೆ. ಯಾವುದೇ ಬ್ಯಾಂಕಿಂಗ್ ವ್ಯವಹಾರ, ವಿದೇಶ ಪ್ರಯಾಣ, ಐಟಿ ರಿಟರ್ನ್ನಂಥ ಸಂದರ್ಭಗಳಲ್ಲಿ ಈ ದಾಖಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಆದಾಯ ತೆರಿಗೆ ಪಾವತಿ (ITR) ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖವಾಗಿ ಅಗತ್ಯವಿರುವ ಕೆವೈಸಿ ದಾಖಲೆಯಾಗಿದೆ. ಇನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪಡೆಯಲೂ ಪ್ಯಾನ್ ಕಾರ್ಡ್ ಬೇಕು. ಇಷ್ಟೆಲ್ಲ ಮಹತ್ವವಿರುವ ಪ್ಯಾನ್ ಕಾರ್ಡ್ ಒಂದೊಮ್ಮೆ ಕಳೆದೇ ಹೋದರೆ ಅಥವಾ ನೀವು ಎಲ್ಲೋ ಇಟ್ಟು ಮರೆತುಬಿಟ್ಟಿದ್ದರೆ ಏನು ಮಾಡುವುದು? ಹಾಗೊಮ್ಮೆ ನೀವು ಪ್ಯಾನ್ ಕಾರ್ಡ್ ಕಳೆದುಕೊಂಡ ಸಮಯದಲ್ಲೇ ಯಾವುದೋ ಕಾರಣಕ್ಕೆ ಅರ್ಜೆಂಟ್ ಆಗಿ ಬೇಕೆಂದರೆ ಗಾಬರಿ ಪಡುವ ಕೆಲಸವಿಲ್ಲ. ಇದೀಗ ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಲು ಆದಾಯ ತೆರಿಗೆ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಿದೆ.
ಹೀಗೆ ತಕ್ಷಣಕ್ಕೆ ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವ ವ್ಯವಸ್ಥೆ ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್ ಆದ incometax.gov.inನಲ್ಲಿದೆ. ಈ ಹೊಸ ಪೋರ್ಟಲ್ನ ವಿಶೇಷತೆ ಏನೆಂದರೆ ಪ್ಯಾನ್ ಕಾರ್ಡ್ ಕಳೆದುಕೊಂಡವರಿಗೆ ಪ್ಯಾನ್ ನಂಬರ್ ನೆನಪು ಇಲ್ಲದೆ ಹೋದರೂ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಆಧಾರ್ ಕಾರ್ಡ್ ನಂಬರ್ ಗೊತ್ತಿರಬೇಕು. ಮುಖ್ಯವಾಗಿ ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿರಬೇಕು. ನೀವಿನ್ನೂ ಪ್ಯಾನ್-ಆಧಾರ್ ಲಿಂಕ್ ಮಾಡಿಕೊಳ್ಳದಿದ್ದರೆ ಹೊಸ ಪೋರ್ಟಲ್ ಮೂಲಕ ಆಧಾರ್ ನಂಬರ್ ಕೊಟ್ಟು ಇ-ಪ್ಯಾನ್ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇಲ್ಲಿದೆ ನೋಡಿ ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್ನಲ್ಲಿ, ಆಧಾರ್ ಕಾರ್ಡ್ ನಂಬರ್ ಕೊಟ್ಟು ಇ-ಪ್ಯಾನ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ.
1. ಮೊದಲು incometax.gov.in ವೆಬ್ಸೈಟ್ಗೆ ಲಾಗಿನ್ ಆಗಿ
2. ಅಲ್ಲಿ ಎಡಭಾಗದ ಕೆಳಗೆ ಇರುವ Our Services ಮೇಲೆ ಕ್ಲಿಕ್ ಮಾಡಿ
3. Instant E PAN ಎಂಬಲ್ಲಿ ಕ್ಲಿಕ್ ಮಾಡಿ
4. ಮತ್ತೆ ಅಲ್ಲಿ ಕಾಣುವ New E PAN ಆಯ್ಕೆ ಮಾಡಿ
5. ನಂತರ ಆಧಾರ್ ಕಾರ್ಡ್ ನಂಬರ್ ನಮೂದಿಸಿ(ಪಾನ್ ಕಾರ್ಡ್ ನಂಬರ್ ನೆನಪಿದ್ದರೆ ಅದನ್ನೇ ಹಾಕಿ)
6. ಅಲ್ಲಿ ತೋರಿಸಲಾಗುವ ಷರತ್ತುಗಳನ್ನು ಓದಿ, Accept ಎಂಬಲ್ಲಿ ಕ್ಲಿಕ್ ಮಾಡಿ.
7. ಆಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನಮೂದಿಸಿ.
8. ಅಲ್ಲಿ ಕಾಣಿಸುವ ವಿವರಗಳನ್ನು ಓದಿ, ನಿಮ್ಮ ಮೇಲ್ ಐಡಿ ನಮೂದಿಸಿ. ನಂತರ Confirm ಎಂಬಲ್ಲಿ ಕ್ಲಿಕ್ ಮಾಡಿ.
ಇಷ್ಟು ಮಾಡಿದ ಬಳಿಕ ನಿಮ್ಮ ಇ-ಪ್ಯಾನ್ ನಿಮ್ಮ ಇಮೇಲ್ಗೆ ಬಂದಿರುತ್ತದೆ. ನಿಮ್ಮ ಮೇಲ್ ಐಡಿ ಲಾಗಿನ್ ಆಗಿ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ: Corona Vaccine: ಕೊವಿಡ್ ಲಸಿಕೆ ಪಡೆಯಲು ಆನ್ಲೈನ್ ರಿಜಿಸ್ಟ್ರೇಶನ್ ಅಥವಾ ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ
If you lost your PAN Card Now you can get instant E PAN in New Income Tax Portal
Published On - 5:56 pm, Tue, 15 June 21