ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್ಲೈನ್ ಮಾರುಕಟ್ಟೆ ಸಂಸ್ಕೃತಿ. ಲಾಕ್ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್ಲೈನ್ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್ಬುಕ್ ಅಕೌಂಟ್ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ಫೇಸ್ಬುಕ್ ಗ್ರೂಪ್ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್, ಆ್ಯಪ್ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್ಲೈನ್ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು.
ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್ಲೈನ್ ಆಗಲಿ ಆಫ್ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500. tv9kannadadigital@gmail.com
*
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಗೊಬ್ಬಳಿಯ ಜಿ.ಆರ್. ನಂದೀಶ್ ಮತ್ತು ನಂದಕುಮಾರ್ ಎಂಬ ಬಾಲ್ಯದ ಗೆಳೆಯರಿಬ್ಬರೂ ಎಂಎನ್ಸಿ ಕೆಲಸ, ಮಹಾನಗರದ ಜೀವನಶೈಲಿಗೆ ಬೇಸತ್ತು ಹಳ್ಳಿಯ ಕಡೆ ಮುಖ ಮಾಡಿದ ಸಂದರ್ಭದಲ್ಲೇ ಮರಳಿ ಅದೇ ಕಂಪೆನಿಯ ವೆಂಡರ್ ಆದ ಕಥೆ ಇದು.
ನಾನು ಬೆಂಗಳೂರಿನ ಟೊಯೋಟಾದಲ್ಲಿ ಹತ್ತು ವರ್ಷಗಳಿಂದ ಎಂಜಿನಿಯರ್ ಆಗಿ ಕೆಲಸ ಮಾಡಿದೆ. ನನ್ನ ಸ್ನೇಹಿತ ನಂದಕುಮಾರ್ ಕೂಡ ಟೆಕ್ಟ್ಟೈಲ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ. ಯಾಕೋ ಈ ಮಹಾನಗರದ ಜೀವನ, ಕಂಪೆನಿಯ ಕೆಲಸ ಬೇಸರ ತರಿಸಿದವು. ಕೊನೆಗೆ ನಮ್ಮ ಹಳ್ಳಿಯೇ ಆಧಾರ ಅನ್ನಿಸಿತು. ಹೈನುಗಾರಿಕೆ ಮಾಡಲು ಯೋಜನೆ ರೂಪಿಸುವಾಗ, ಸ್ನೇಹಿತರು ಸಂಬಂಧಿಕರು ನಿಮ್ಮಿಂದ ಇದೆಲ್ಲ ಸಾಧ್ಯವಾಗದು ಎಂದೇ ಹೇಳಿದರು. ಯಾಕೋ ಸ್ವಲ್ಪ ಭಯವಾಯಿತು. ಹಾಗಿದ್ದರೆ ನಮ್ಮೂರಲ್ಲೇ ಇದ್ದು ನಾವು ಏನು ಮಾಡಬಹುದು ಎಂದು ಯೋಚಿಸಿದೆವು. ನಮ್ಮೂರಲ್ಲಿ ಎಲ್ಲರೂ ಬೆಳೆಯುವುದು ರಾಜಮುಡಿ ಅಕ್ಕಿಯನ್ನೇ. ನಾವೂ ಅದನ್ನೇ ಬೆಳೆಯೋಣ ಎಂದು ನಿರ್ಧರಿಸಿದೆವು. ರೇಟ್ ವಿಚಾರಿಸಿದಾಗ ಒಂದು ಕ್ವಿಂಟಾಲ್ಗೆ ಭತ್ತ ಕೇವಲ 1200 ರಿಂದ 1400 ರೂಪಾಯಿ ಇತ್ತು. ಹೀಗಿದ್ದಾಗ ನಾವು ಹಾಕಿದ ಬಂಡವಾಳ ಕೂಡ ಬರುವುದು ಅನುಮಾನವೇ. ಹಾಗಾಗಿ ಏನೂ ತೋಚದಂತಾಗಿ ವಾಪಾಸು ಬೆಂಗಳೂರಿಗೆ ಬಂದೆವು.
ಅಷ್ಟರಲ್ಲಿ ಕೊವಿಡ್. ಲಾಕ್ಡೌನ್ನಿಂದಾಗಿ ದಿನಸಿ ಸರಿಯಾಗಿ ಸಿಗದೆ ಎಲ್ಲ ಪರದಾಡುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ಮನೆಯಲ್ಲಿದ್ದ ಐದು ಬ್ಯಾಗ್ ರಾಜಮುಡಿ ಅಕ್ಕಿಯನ್ನು ನಮ್ಮ ಬಿಲ್ಡಿಂಗ್ನಲ್ಲಿರುವವರಿಗೆ ಹಂಚಿದೆವು. ಮೂರು ದಿನಗಳ ನಂತರ ಎಲ್ಲರೂ ಬಂದು ಅಕ್ಕಿ ಚೆನ್ನಾಗಿದೆ ಪ್ರತೀ ತಿಂಗಳೂ ತಂದುಕೊಡಿ ಎಂದರು. ಆಗ ಇದನ್ನೇ ನಾವು ಯಾಕೆ ಮಾರ್ಕೆಟ್ ಮಾಡಬಾರದು ಎನ್ನಿಸಿ ಬೆಂಗಳೂರಿನ ಸುಮಾರು 40 ಅಂಗಡಿಗಳಲ್ಲಿ ರಾಜಮುಡಿಯ ರೇಟ್ ವಿಚಾರಿಸಿದೆವು. ಒಂದೊಂದು ಕಡೆ ಒಂದೊಂದು ರೇಟ್. ಮುಖ್ಯವಾಗಿ ಅನ್ಪಾಲಿಷ್ಡ್ ಅಂತ ಶೇ. 50ರಷ್ಟು ಪಾಲಿಶ್ ಆಗಿರೋ ಅಕ್ಕಿಯನ್ನು ಮಾರುತ್ತಿದ್ದರು. ಕೆಲವು ಕಡೆ ಮಿಕ್ಸಿಂಗ್ ಇನ್ನೂ ಕೆಲವೆಡೆ ಕೃತಕ ಬಣ್ಣ.ಒಟ್ಟಾರೆಯಾಗಿ ರೇಟ್ ಕೂಡ ತುಂಬಾ ವ್ಯತ್ಯಾಸ. ಕೆಲವು ಗ್ರಾಹಕರನ್ನು ವಿಚಾರಿಸಿದಾಗ ಅನೇಕರು ರಾಜಮುಡಿ ಅಂದರೆ ನಂಬಿಕೆ ಇಲ್ಲ ಅಂತ ಹೇಳಿದರು.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭತ್ತದೊಳಗಿರುವ ಶುದ್ಧ ಅಕ್ಕಿಯನ್ನೇ ನೇರವಾಗಿ ಗ್ರಾಹಕರಿಗೆ ತಲುಪಿಸಬೇಕು ಎಂದು ತೀರ್ಮಾನಿಸಿ ಸೂಕ್ತ ಬೆಲೆ ನಿಗದಿ ಮಾಡಿದೆವು. ಭತ್ತವನ್ನು ಮಿಲ್ಗೆ ಕಳಿಸುವುದರಿಂದ ಹಿಡಿದು, ಡೆಲಿವರಿಯತನಕ ನಾವೇ ಜವಾಬ್ದಾರಿ ವಹಿಸಿಕೊಂಡೆವು. ಗುಣಮಟ್ಟದ ಅರಿವು ಮೂಡಿಸಲೆಂದೇ ಮನೆಮನೆಗೆ ಹೋಗಿ ತಲುಪಿಸಿದೆವು. ಹೀಗೆ ಮಾಡುವಾಗ ನಮಗೆ ಸಿಕ್ಕ ದೊಡ್ಡ ಅವಕಾಶವೆಂದರೆ ‘ರೈತರಿಂದ ನೇರ ಗ್ರಾಹಕರಿಗೆ’ ಎನ್ನುವ ಫೇಸ್ಬುಕ್ ಗ್ರೂಪ್. ನಮ್ಮ ‘ಶ್ರೀ ನಂದಿ ರಾಜಮುಡಿ ಅಕ್ಕಿ’ಗೆ ಅಲ್ಲಿಂದ ಬಹಳ ಡಿಮ್ಯಾಂಡ್ ಶುರುವಾಯಿತು. ಒಂದು ವಾರಕ್ಕೆ ಲೋಡ್ಗಟ್ಟಲೆ ಆರ್ಡರ್ ಬರತೊಡಗಿತು. ಸತತ ಎರಡು ತಿಂಗಳು ನಾನು ನನ್ನ ಗೆಳೆಯ ಇಬ್ಬರೇ ಹೋಮ್ ಡೆಲಿವರಿ ಮಾಡಿದೆವು. ಅಷ್ಟರಲ್ಲಿ ಆ ಗ್ರೂಪ್ನಲ್ಲಿ ತುಂಬಾ ಸ್ಪರ್ಧೆ ಶುರುವಾಯಿತು.
ನಮ್ಮ ರಾಜಮುಡಿಯ ದರ ಸಾಗಾಣಿಗೆ ವೆಚ್ಚ ಸೇರಿ ಒಂದು ಕೆಜಿಗೆ 60 ರೂ. ಆದರೆ ಕೆಲವರು ಒಂದು ಕೆಜಿಗೆ ಅಕ್ಕಿಯ ದರ 38 ರೂಪಾಯಿ ಎಂದು ಪೋಸ್ಟ್ ಹಾಕತೊಡಗಿದರು. ಆಗ ನಮಗೆ ದೊಡ್ಡ ಹೊಡೆತ ಬಿದ್ದಿತು. ವಾರಕ್ಕೆ ಒಂದು ಲೋಡ್ ಖಾಲಿಯಾಗುತ್ತಿದ್ದದ್ದು ಈಗ ಎರಡು ತಿಂಗಳಾದರೂ ಒಂದೇ ಒಂದು ಲೋಡ್ ಖಾಲಿಯಾಗದೆ ಹುಳಬಿದ್ದು ಅರ್ಧದಷ್ಟು ನಷ್ಟವಾಯಿತು. ನಮ್ಮ ಕೆಲ ಗ್ರಾಹಕರು ಅನುಕಂಪದಿಂದ ನಮ್ಮ ಮನೆಗೇ ಬಂದು ಖರೀದಿಸಿದರು. ಮತ್ತೆ ಕೆಲವರು ನೀವೂ ರೇಟ್ ಕಡಿಮೆ ಮಾಡಿ ಇಲ್ಲವಾದೆ ಈ ವ್ಯಾಪಾರ ಮುಂದುವರಿಸಲಾಗದು ಎಂದು ಸಲಹೆ ಕೊಟ್ಟರು. ಇನ್ನೂ ಕೆಲವರು ಕಡಿಮೆ ಬೆಲೆ ಇದ್ದಲ್ಲಿಯೇ ಖರೀದಿಸಿದರು. ಮುಂದಿನ ಎರಡು ತಿಂಗಳು ಸುಮ್ಮನೇ ಕುಳಿತೆವು. ನಮಗೆ ಇದ್ದಿದ್ದು ಒಂದೇ ಉದ್ದೇಶ ಒಳ್ಳೆಯ ಗುಣಮಟ್ಟದ ರಾಜಮುಡಿ ಅಕ್ಕಿಯನ್ನು ಸೂಕ್ತ ಬೆಲೆಗೆ ತಲುಪಿಸುವುದು.
ನಾನು ಟೊಯೋಟಾದಲ್ಲಿ ಕೆಲಸದಲ್ಲಿದ್ದಾಗ ಹೆಚ್ಚು ಗಮನವಹಿಸಿದ್ದು ಗುಣಮಟ್ಟದ ಬಗ್ಗೆ. ಅದನ್ನೇ ಇಲ್ಲಿಯೂ ಕಾಯ್ದುಕೊಳ್ಳಲು ಪ್ರಯತ್ನಿಸಿಸಿದ್ದು. ಯಾರಿಗೆ ಗುಣಮಟ್ಟ ಬೇಕೋ ಅವರು ನಮ್ಮ ಬಳಿ ಬರುತ್ತಾರೆ ಎಂದು ಎರಡು ತಿಂಗಳು ಕಾಯ್ದಿದ್ದಕ್ಕೆ ಮತ್ತೆ ಒಂದೊಂದಾಗಿ ಆರ್ಡರ್ ಬರುವುದಕ್ಕೆ ಶುರುವಾದವು. ಒಂದು ದಿನ ಯೋಗರಾಜ್ ಭಟ್ ಅವರ ಮನೆಯಿಂದ ಫೋನ್ ಬಂದಿತು. ಅವರಿಗೆ ನಮ್ಮ ಅಕ್ಕಿಯ ಗುಣಮಟ್ಟ ಇಷ್ಟವಾಯಿತು. ಅವರ ಹೆಂಡತಿ ರೇಣುಕಾ ಅವರು, ‘ಬೇರೆ ಬೇರೆ ಪ್ರಾಡಕ್ಟ್ ಸೇರಿಸಿ. ಕೇವಲ ಅಕ್ಕಿಯೊಂದರಿಂದಲೇ ನಿಮಗೆ ಲಾಭ ಬಾರದು’ ಎಂದು ಸಲಹೆ ನೀಡಿದರು. ಇದರೊಂದಿಗೆ ಬಹಳ ದಿನಗಳಿಂದ ನಮ್ಮ ಇತರೇ ಗ್ರಾಹಕರೂ ಜವೇ ಗೋದಿ, ಜೋನಿ ಬೆಲ್ಲ, ಕೆಂಪವಲಕ್ಕಿ, ಬೆಲ್ಲ ಮುಂತಾದವುಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಆಗ ನಾವೇ ರೈತರ ಉತ್ಪಾದನೆಗಳನ್ನು ಖುದ್ದಾಗಿ ಪರಿಶೀಲಿಸಿ ಗ್ರಾಹಕರಿಗೆ ತಲುಪಿಸಬಾರದೇಕೆ ಅನ್ನಿಸಿತು. ಹೀಗೆ ‘ಶ್ರೀ ನಂದಿ ದಿನಸಿಮನೆ’ ಶುರುವಾಯಿತು. ಇಂದು ನಮ್ಮಲ್ಲಿ 40 ಉತ್ಪನ್ನಗಳು ಲಭ್ಯ. ಯಾವುದೇ ಆ್ಯಪ್ನ ಸಹಾಯವಿಲ್ಲದೆ ಕೇವಲ ಮೊಬೈಲ್ ಮೂಲಕ ಒಂದು ವರ್ಷದಲ್ಲಿ ಸುಮಾರು 5,000 ಗ್ರಾಹಕರನ್ನು ಸಂಪಾದಿಸಿದ್ದೇವೆ. ಯಾವುದೇ ಡೆಲಿವರಿ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳದೆ ಈಗಲೂ ನಾವೇ ಉತ್ಪನ್ನಗಳನ್ನು ಗ್ರಾಹಕರ ಮನೆಮನೆಗೆ ತಲುಪಿಸುತ್ತಿದ್ದೇವೆ.
ಒಂದು ದಿನ ಜಿಗಣಿ ಟೊಯೋಟಾ ಎಂಜಿನ್ ಪ್ಲ್ಯಾಂಟ್ನಲ್ಲಿ ಎಚ್ಆರ್ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುವ ನಮ್ಮ ಗ್ರಾಹಕರೊಬ್ಬರು ಫೋನ್ ಮಾಡಿ, ಅಕ್ಕಿಯನ್ನು ಕ್ಯಾಂಟೀನ್ಗೆ ಟೆಸ್ಟಿಂಗ್ಗೆ ಕೊಡಲು ತಿಳಿಸಿದರು. ಮೂರು ದಿನಗಳು ಕಳೆದ ನಂತರ ಅಲ್ಲಿಂದ ಫೋನ್ ಬಂದಿತು. ನಿಮ್ಮ ಅಕ್ಕಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಅವರು ಹೇಳಿದಾಗ, ನಮಗೆ ಖುಷಿಯಾಗದೆ ಭಯವಾಯಿತು. ಕಾರಣ, ಪ್ರತಿದಿನ 5 ರಿಂದ 6 ಸಾವಿರ ಉದ್ಯೋಗಿಗಳ ಊಟಕ್ಕೆ ಬೇಕಾಗುವಷ್ಟು ಪ್ರಮಾಣದ ಅಕ್ಕಿಯನ್ನು ತಲುಪಿಸಲು ಸಾಧ್ಯವೇ? ಬೆನ್ನಲ್ಲೇ ಮುಂದಿನ ವಾರದಿಂದ ಅಕ್ಕಿಯನ್ನು ಸಾಗಿಸಿ ಎಂದೂ ತಿಳಿಸಿದರು. ಆದರೆ, ಇದನ್ನೇ ಸವಾಲಾಗಿ ತೆಗೆದುಕೊಂಡು ಒಂದು ತಿಂಗಳ ಕಾಲಾವಕಾಶ ಕೋರಿದೆವು. ಆ ಪ್ರಮಾಣಕ್ಕೆ ತಕ್ಕಂತೆ ಗುಣಮಟ್ಟ ಕಾಪಾಡಿಕೊಳ್ಳಲು ಏನು ಮಾಡಬೇಕೆಂದು ಯೋಚಿಸಿ ಕೊನೆಗೆ ಆರ್ಆರ್ನಗರದ ‘ದೈನಿಕ ದಿನಸಿ’ಯೊಂದಿಗೆ ಶೇಖರಣೆ ಮತ್ತು ಸ್ವಚ್ಛತೆ ವಿಷಯವಾಗಿ ಒಪ್ಪಂದ ಮಾಡಿಕೊಂಡೆವು.
ಈಗ ಹಿಂದೆ ನಾನು ಕೆಲಸ ಮಾಡಿದ ಸಂಸ್ಥೆಗೆ ಕಳೆದ ನಾಲ್ಕು ತಿಂಗಳಿಂದ ರಾಜಮುಡಿ ಅಕ್ಕಿ ಸಾಗಿಸುತ್ತಿದ್ದೇನೆ. ಯಾವ ಕಂಪೆನಿಯು ವಿದ್ಯೆ ಮತ್ತು ಅರ್ಹತೆಗೆ ತಕ್ಕಂತೆ ಕೆಲಸವನ್ನು ಕೊಟ್ಟು ಜೀವನವನ್ನು ಬದಲಿಸಿತೋ ಅದೇ ಕಂಪೆನಿಯ ವೆಂಡರ್ ನಾನೀವತ್ತು. ಬಾಲ್ಯದ ಗೆಳೆಯ ನಂದಕುಮಾರ ಕೂಡ ಇದಕ್ಕೆ ಸಾಥ್ ಕೊಟ್ಟಿದ್ದು ಖುಷಿ ವಿಷಯ. ಮುಖ್ಯವಾಗಿ ರಾಜಮುಡಿ ಅಕ್ಕಿ ಎಂಎನ್ಸಿ ಕ್ಯಾಂಟೀನ್ ತಲುಪಿ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ಬೆಲೆಯನ್ನೂ ವಿಸ್ತಿರಿಸಿಕೊಂಡಿದ್ದು ಹೆಮ್ಮೆ. ಇದರಿಂದ ರೈತರಿಗೂ ಲಾಭವಾಗುತ್ತಿದೆ. ನಮ್ಮ ದೇಶಿಯ ತಳಿಗಳು ಹೆಚ್ಚು ಬೆಳೆಯುವಂತಾಗಲಿ ಗುಣಮಟ್ಟ ಕಾಯ್ದುಕೊಂಡು ಎಲ್ಲೆಡೆ ತಲುಪಲಿ ಎನ್ನುವುದೇ ನಮ್ಮ ಉದ್ದೇಶ.
ಇದನ್ನೂ ಓದಿ : Lockdown Stories : ಚಲನಾಮೃತ ; ‘ಇದು ನಿನ್ನ ಮೊದಲ ದುಡಿಮೆ’ ಮಗಳು ಹಣ ಕೈಗಿತ್ತಾಗ ಕಣ್ಣುತುಂಬಿದವು
Published On - 2:19 pm, Tue, 15 June 21