Yezdi: ಅಂದು ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಸೃಷ್ಟಿಸಿದ್ದ ಈ ಬೈಕ್ ಇದೀಗ ಮತ್ತೆ ರಸ್ತೆಗಿಳಿಯಲು ರೆಡಿ

| Updated By: Vinay Bhat

Updated on: Jan 06, 2022 | 1:05 PM

Mahindra Yezdi ADV: ಕರ್ನಾಟಕ ಹಾಗೂ ದೇಶದಲ್ಲಿ ಮೋಡಿ ಮಾಡಿದ್ದ ಇದೇ ಯೆಜ್ಡಿ ಬೈಕ್ ಇದೀಗ ಹೊಸ ರೂಪದಲ್ಲಿ ಅನಾವರಣಗೊಳ್ಳುತ್ತಿದೆ. ಜನವರಿ 13, 2022ರಲ್ಲಿ ಹೊಚ್ಚ ಹೊಸ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್(Yezdi roadking ADV) ಬಿಡುಗಡೆ ಆಗಲಿದೆ.

Yezdi: ಅಂದು ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಸೃಷ್ಟಿಸಿದ್ದ ಈ ಬೈಕ್ ಇದೀಗ ಮತ್ತೆ ರಸ್ತೆಗಿಳಿಯಲು ರೆಡಿ
ಫೋಟೋ ಕೃಪೆ: Bangalore Jawa Yezdi Motorcycle Club FB Page
Follow us on

ಭಾರತದಲ್ಲಿ ಬೈಕ್​ಗಳ (Bike) ಬೇಡಿಕೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಬೈಕ್‌ ಉತ್ಪಾದಕ ಕಂಪನಿಗಳು ಹೊಸ ಮಾದರಿ ಇಲ್ಲವೇ ಹಳೆ ಮಾದರಿಯನ್ನು ಇನ್ನಷ್ಟು ಸುಧಾರಿಸಿ ಬಿಡುಗಡೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಸದ್ಯ ಇದೇ ಸಾಲಿಗೆ 60 ಹಾಗೂ 70ರ ದಶಕಗಳಲ್ಲಿ ರಸ್ತೆಯ ರಾಜನಾಗಿದ್ದ ಯೆಜ್ಡಿ ರೋಡ್‌ಕಿಂಗ್‌ ಪುನಃ ನವಯುಗದ ರಸ್ತೆಗಳಲ್ಲಿ ಮಿಂಚಲಿದೆ. ಮಹೀಂದ್ರಾ (Mahindra) ಕಂಪನಿಯ ಅಂಗಸಂಸ್ಥೆಯಾದ ಕ್ಲಾಸಿಕ್‌ ಲೆಜೆಂಡ್ಸ್‌ ಕಡೆಯಿಂದ ಯೆಜ್ಡಿ‌ (Yezdi) ಬೈಕ್‌ಗಳು ಭಾರತದ ಕಾಂಕ್ರೀಟ್‌ ರಸ್ತೆಗಳಲ್ಲಿ ಸುತ್ತಾಡಲು ತಯಾರಾಗಿದೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಹೀರೋಗಳು ನಾಯಕಿಯರನ್ನು ಕೂರಿಸಿಕೊಂಡು ಓಡುತ್ತಿದ್ದ ವಾಹನ ಕೂಡ ಇದೇ ಆಗಿತ್ತು. ಇಂಥಾ ಬೈಕ್ ಏರಿ, ಪ್ರೀತಿಸಿದ ಯುವತಿಯನ್ನೋ, ಮೆಚ್ಚಿನ ಮಡದಿಯನ್ನೋ, ಕಾಲೇಜಿನ ಗರ್ಲ್ಸ್ ಫ್ರೆಂಡ್ ಅನ್ನೋ ಹಿಂದೆ ಕೂರಿಸಿಕೊಂಡು- ಬೈಕ್ ಓಡಿಸುವುದು ಆ ಕಾಲದ ‘ಹೀರೋಯಿಸಂ’ ಆಗಿತ್ತು. ಕರ್ನಾಟಕ ಹಾಗೂ ದೇಶದಲ್ಲಿ ಮೋಡಿ ಮಾಡಿದ್ದ ಇದೇ ಯೆಜ್ಡಿ ಬೈಕ್ ಇದೀಗ ಹೊಸ ರೂಪದಲ್ಲಿ ಅನಾವರಣಗೊಳ್ಳುತ್ತಿದೆ. ಜನವರಿ 13, 2022ರಲ್ಲಿ ಹೊಚ್ಚ ಹೊಸ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್(Yezdi roadking ADV) ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಖಚಿತ ಪಡಿಸಿದ್ದು ಟೀಸರ್ ಒಂದನ್ನು ಹಂಚಿಕೊಂಡಿದೆ.

ಒಟ್ಟು ಮೂರು ಶ್ರೇಣಿಯ ಯೆಜ್ಡಿ‌ ಬೈಕ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಒಂದು ರೋಡ್‌ಕಿಂಗ್‌, ಎರಡನೇಯದು ಅಡ್ವೆಂಚರ್‌ ಹಾಗೂ ಮೂರನೇಯದು ಸ್ಕ್ರ್ಯಾಂಬ್ಲರ್‌. 334 ಸಿಸಿ ಸಾಮರ್ಥ್ಯ‌ದ ಇಂಜಿನ್‌ ಹೊಂದಲಿರುವ ರೋಡ್‌ಕಿಂಗ್‌ ರಾಯಲ್‌ ಎನ್‌ಫೀಲ್ಡ್‌ನ ಮಿಟಿಯಾರ್‌ 350 ಮತ್ತು ಕ್ಲಾಸಿಕ್‌ 350ಗೆ ಪೈಪೋಟಿ ಕೊಡಲಿದೆ. ಈಗಾಗಲೇ ಕ್ಲಾಸಿಕ್‌ ಲೆಜೆಂಡ್ಸ್‌ ಕಂಪನಿಯು ಹಳೆಯ ಜಾವಾ ಬೈಕ್‌ಗಳಿಗೆ ಮರುಜೀವ ನೀಡಿ, ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು ಆಗಿದೆ. ಇದಲ್ಲದೇ ಬೆನೆಲ್ಲಿ, ಹೊಂಡಾ ಹಾಗೂ ಟ್ರಯಂಫ್‌ ಕಂಪನಿಯ ಬೈಕ್‌ಗಳಿಗೂ ಯೆಜ್ಡಿ‌ ಪೈಪೋಟಿ ನೀಡುವುದು ಪಕ್ಕಾ ಎನ್ನುತ್ತಿದ್ದಾರೆ ಬೈಕ್‌ ಪ್ರೇಮಿಗಳು.

 

ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಯೆಜ್ಡಿ ಬಹಿರಂಗ ಪಡಿಸಿಲ್ಲ. ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 334cc ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 30.64bhp ಪವರ್ 32.74Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ಎಂಜಿನ್ ಜಾವಾ ಪೆರಾಕ್ ಬಾಬರ್ ಬೈಕ್‌ನಲ್ಲಿ ಬಳಸಲಾಗಿದೆ.  ಅಡ್ವೆಂಚರ್ ಬೈಕ್‌ಗೆ ಇರಬೇಕಾದ ಪವರ್ ಹಾಗೂ ಸಸ್ಪೆನ್ಶನ್ ನೀಡಲು ಕ್ಲಾಸಿಕ್ ಲೆಜೆಂಡ್ ಮುಂದಾಗಿದೆ.

ಯೆಜ್ಡಿ ರೋಡ್​ ಕಿಂಗ್ ಬೈಕ್ 1978 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ರಸ್ತೆಗಳಲ್ಲಿ ಡುಗ್ ಡುಗ್ ಡುಗ್ ಎಂದು ಲಯಬದ್ಧವಾಗಿ ಸದ್ದು ಮಾಡುತ್ತಾ ರಸ್ತೆ ರಾಜ ಎನ್ನಿಸಿಕೊಂಡಿದ್ದ ಜಾವಾ ಬೈಕ್‌ಗಳು ಕಾಲ ಕ್ರಮೆಣ ನೆಪಥ್ಯಕ್ಕೆ ಸರಿಯಿತು. ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ಜಾವಾ ಯೆಜ್ಡಿ ಬೈಕ್‌ಗಳಿಗೆ ಫಿದಾ ಆಗದವರೇ ಇಲ್ಲ ಎಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಬೈಕ್ ಪ್ರೇಮಿಗಳ ಮನಗೆದ್ದಿದ್ದ ಈ ಬೈಕ್‌ಗಳು ಬಹುತೇಕರ ಪಾಲಿನ ಆ್ಯಂಟಿಕ್ ಪೀಸ್.ಇದೀಗ 44 ವರ್ಷಗಳ ಬಳಿಕ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಗಳಲ್ಲಿ ಲಗ್ಗೆಯಿಡಲು ಮುಂದಾಗಿದೆ.

ಷೇರುಪೇಟೆಯಲ್ಲಿ ಒಮಿಕ್ರಾನ್ ಭೀತಿ; 800ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 230 ಪಾಯಿಂಟ್ಸ್ ಇಳಿಕೆ