Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?

| Updated By: Skanda

Updated on: Aug 25, 2021 | 7:54 AM

ಎನ್​ಎಫ್​ಒಗಳಲ್ಲಿ ಹೂಡಿಕೆ ಅನಿವಾರ್ಯವೇ? ಅಂಥ ಹೂಡಿಕೆಯು ಸುರಕ್ಷಿತವೇ ಎಂಬ ಪ್ರಶ್ನೆಗಳು ಹೂಡಿಕೆದಾರರ ವಲಯದಲ್ಲಿ ಚರ್ಚೆಗೆ ಬರುತ್ತಿದೆ. ಎನ್​ಎಫ್​ಒ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?
ಸಾಂದರ್ಭಿಕ ಚಿತ್ರ
Follow us on

ಈಗ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಹೊಸ ಫಂಡ್​ಗಳ ಸುರಿಮಳೆಯೇ ಆಗುತ್ತಿದೆ. ಮ್ಯೂಚುವಲ್ ಫಂಡ್​ಗಳನ್ನು ನಿರ್ವಹಿಸುವ ಎಎಂಸಿಗಳು (Asset Management Company – AMC) ಷೇರುಪೇಟೆ ಉತ್ತುಂಗದಲ್ಲಿದ್ದಾಗ ಎನ್​ಎಫ್​ಒ (New Fund Offer – NFO) ಘೋಷಿಸಿ, ಹೂಡಿಕೆದಾರರನ್ನು ಆಕರ್ಷಿಸುವುದು ವಾಡಿಕೆಯೇ ಆಗಿದೆ. ಎನ್​ಎಫ್​ಒಗಳಲ್ಲಿ ಹೂಡಿಕೆ ಅನಿವಾರ್ಯವೇ? ಅಂಥ ಹೂಡಿಕೆಯು ಸುರಕ್ಷಿತವೇ ಎಂಬ ಪ್ರಶ್ನೆಗಳು ಹೂಡಿಕೆದಾರರ ವಲಯದಲ್ಲಿ ಚರ್ಚೆಗೆ ಬರುತ್ತಿದೆ. ಮ್ಯೂಚುವಲ್ ಫಂಡ್​ ಹೂಡಿಕೆದಾರರನ್ನು ಕಾಡುವ ಎನ್​ಎಫ್​ಒ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಎನ್​ಎಫ್​ಒ ಎಂದರೇನು?
ಯಾವುದೇ ಎಎಂಸಿ ಒಂದು ಎನ್​ಎಫ್​ಒ ಘೋಷಿಸಿದಾಗ ಆರಂಭದ ಕೆಲವು ದಿನಗಳನ್ನು ಹೂಡಿಕೆಗೆ ತೆರೆದಿಡುತ್ತದೆ. ಈ ಅವಧಿಯಲ್ಲಿ ಫಂಡ್​ ಮ್ಯಾನೇಜರ್​ಗಳು ಆ ಫಂಡ್​ಗೆ ಬೇಕಿರುವ ಷೇರು ಅಥವಾ ಬಾಂಡ್​ಗಳನ್ನು ಆಯ್ಕೆ ಮಾಡಿಕೊಂಡು ಪೋರ್ಟ್​ಫೋಲಿಯೊ ನಿರ್ಮಿಸುತ್ತಾರೆ. ಷೇರುಪೇಟೆಯಲ್ಲಿ ಹೊಸ ಕಂಪನಿಯೊಂದು ಲಿಸ್ಟ್​ ಆಗುವ ನಡೆಯುವ ಐಪಿಒ ಜೊತೆಗೆ ಎನ್​ಎಫ್​ಒಗಳನ್ನು ಕೆಲವರು ಹೋಲಿಸುತ್ತಾರೆ. ವಾಸ್ತವದಲ್ಲಿ ಇವೆರೆಡೂ ಸಂಪೂರ್ಣ ಭಿನ್ನ. ಎನ್​ಎಫ್​ಒ ಅವಧಿ ಮುಗಿದ ನಂತರ ಫಂಡ್​ನ ಯೂನಿಟ್​ ಮೌಲ್ಯವನ್ನು ಫಂಡ್​ ಹೌಸ್ ಘೋಷಿಸಿ,​ ಸಾರ್ವಜನಿಕರು ಖರೀದಿಸಲು ಅವಕಾಶ ಮಾಡಿಕೊಡುತ್ತದೆ.

ಎನ್​ಎಫ್​ಒ ಹೂಡಿಕೆ ಸುರಕ್ಷಿತವೇ?
ಮೊದಲೇ ಹೇಳಿದಂತೆ ಇದು ಐಪಿಒಗಿಂತ ಸಂಪೂರ್ಣ ಭಿನ್ನವಾದುದು. ಯಾವ ಫಂಡ್​ ಹೌಸ್​ನಿಂದ ಎಂಥ ಫಂಡ್​ ಘೋಷಣೆಯಾಗಿದೆ, ಫಂಡ್ ಮ್ಯಾನೇಜರ್ ಯಾರು ಎಂಬುದನ್ನು ಗಮನದಲ್ಲಿರಿಸಿಕೊಂಡೇ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ ಫಂಡ್​ಗಳ ಮಾದರಿಯಲ್ಲಿಯೇ ಹೊಸತೊಂದು ಫಂಡ್ ಬಂದರೆ ಅಂಥದ್ದನ್ನು ಪರಿಗಣಿಸುವ ಅಗತ್ಯ ಖಂಡಿತ ಇಲ್ಲ. ಆದರೆ ಇನ್ನೊವೇಟಿವ್ ಎನಿಸುವ ಹೊಸ ರೀತಿಯ ಫಂಡ್ (ಉದಾ: ಭಾರತ್ 22 ಇಟಿಫ್ ಅಥವಾ ಮೊತಿಲಾಲ್ ಒಸ್ವಾಲ್ ನಾಸ್​ಡಾಕ್ ಫಂಡ್ ಇತ್ಯಾದಿ) ಬಂದರೆ ಖಂಡಿತ ಹೂಡಿಕೆಗೆ ಪರಿಗಣಿಸಬಹುದು.

ಎನ್​ಎಫ್​ಒ ಹೂಡಿಕೆ ರಿಸ್ಕ್​ ಏಕೆ?
ಮ್ಯೂಚುವಲ್ ಫಂಡ್​ಗಳನ್ನು ಅಳೆಯುವುದೇ ಅವುಗಳ ಈವರೆಗಿನ ಕಾರ್ಯಕ್ಷಮತೆಯಿಂದ (ಟ್ರ್ಯಾಕ್ ರೆಕಾರ್ಡ್). ಅದರ ಕಾರ್ಯಕ್ಷಮತೆ ನಿರೂಪಿತವಾಗುವುದೇ ಅದು ಎಷ್ಟು ಅವಧಿಯಲ್ಲಿ ಹೂಡಿಕೆದಾರರಿಗೆ ಎಷ್ಟು ಪ್ರತಿಫಲ ತಂದುಕೊಟ್ಟಿದೆ ಎಂಬುದು ಕಾರ್ಯಕ್ಷಮತೆಯನ್ನು ಅಳೆಯುವ ಬಹುಮುಖ್ಯ ಮಾನದಂಡ. ಒಂದು ಫಂಡ್​ನ ಕಾರ್ಯಕ್ಷಮತೆಗೆ ಅದರ ಫಂಡ್​ ಮ್ಯಾನೇಜರ್​ ರೂಪಿಸಿಕೊಳ್ಳುವ ಷೇರು-ಬಾಂಡ್​ಗಳ ಗುಚ್ಛವು ಬಹುಪಾಲು ಕಾರಣ. ಇವೆಲ್ಲವೂ ಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಹೊಸ ಫಂಡ್​ ಸಹಜವಾಗಿಯೇ ಕಾಲದ ಪರೀಕ್ಷೆಗೆ ಒಡ್ಡಿಕೊಂಡಿರುವುದಿಲ್ಲ. ಹೀಗಾಗಿ ಎನ್​ಎಫ್​ಒಗಳಿಂದ ದೂರ ಉಳಿಯುವುದೇ ಜಾಣತನ ಎಂದು ಬಹುತೇಕ ವೈಯಕ್ತಿಕ ಹಣಕಾಸು ಸಮಾಲೋಚಕರು ಸಲಹೆ ಮಾಡುತ್ತಾರೆ.

ಬಹುತೇಕ ಸಂದರ್ಭದಲ್ಲಿ ಎನ್​ಎಫ್​ಒಗಳು ಆ ನಿರ್ದಿಷ್ಟ ಫಂಡ್​ಹೌಸ್​ಗೆ ಮಾತ್ರ ಹೊಸದು (ನ್ಯೂ) ಎನಿಸಿಕೊಂಡಿರುತ್ತದೆ. ಮಾರುಕಟ್ಟೆಯಲ್ಲಿ ಅದಾಗಲೇ ಅಂಥ ಹಲವು ಫಂಡ್​​ಗಳು ಲಭ್ಯವಿರುತ್ತವೆ. ಆದರೆ ಈ ಫಂಡ್​ನಲ್ಲಿ ಹೂಡಿಕೆ ಮಾಡದಿದ್ದರೆ ನೀವು ಏನೋ ಕಳೆದುಕೊಳ್ಳುತ್ತೀರಿ ಎನ್ನುವಂತೆ ಜಾಹೀರಾತಿನ ಮೋಡಿ ಹೆಣೆಯಲಾಗುತ್ತದೆ. ಇಂಥ ಸಂದರ್ಭದಲ್ಲಿ ವಿವೇಚನೆ ಬಳಸಿ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳುವುದು ಜಾಣತನವಾಗುತ್ತದೆ.

ಅಂಕಿಅಂಶ
ಪ್ರಸ್ತುತ ವಿವಿಧ ಮ್ಯೂಚುವಲ್ ಫಂಡ್​ಹೌಸ್​ಗಳ 40 ಎನ್​ಎಫ್​ಒಗಳು ಘೋಷಣೆಯ ದಿನಾಂಕ ಎದುರು ನೋಡುತ್ತಿವೆ. 2021ರ ಬ್ಲಾಕ್​ಬಸ್ಟರ್​ ಎನ್​ಎಫ್​ಒ ಐಸಿಐಸಿಐ ಪ್ರು ಫ್ಲೆಕ್ಸಿಕ್ಯಾಪ್ ಫಂಡ್. ಇದು ಸಂಗ್ರಹಿಸಿದ್ದ ಮೊತ್ತ ₹ 9800 ಕೋಟಿ. 2006ರಲ್ಲಿ ಬಿಡುಗಡೆಯಾಗಿದ್ದ ರಿಲಯನ್ಸ್​ ಎಎಂಸಿಯ ಫೋಕಸ್ಡ್​ ಲಾರ್ಜ್​ಕ್ಯಾಪ್ ಸಂಗ್ರಹಿಸಿದ್ದ ಮೊತ್ತ ₹ 5690 ಕೋಟಿ. ಇದು 2ನೇ ಅತಿದೊಡ್ಡ ಮೊತ್ತ ಎನಿಸಿಕೊಂಡಿದೆ.

(Mutual Fund NFOs Are the Profitable explainer in Kannada)

ಇದನ್ನೂ ಓದಿ: How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​

ಇದನ್ನೂ ಓದಿ: Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?