Note Ban and Bajaj: ನೈಜೀರಿಯಾದಲ್ಲಿ ನೋಟ್ ಬ್ಯಾನ್; ಸಂಕಷ್ಟಕ್ಕೆ ಸಿಲುಕಿದ ಬಜಾಜ್

|

Updated on: Feb 27, 2023 | 7:23 PM

Bajaj Auto's Production Reduced: ನೈಜೀರಿಯಾ ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಭಾರತದ ಬಜಾಜ್ ಆಟೊ ಸಂಸ್ಥೆಯ ತಲೆ ಮೇಲೆ ಕೈಹೊತ್ತುಕೊಳ್ಳುವಂತೆ ಆಗಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಎಂಬ ವಿವರ ಇಲ್ಲಿದೆ....

Note Ban and Bajaj: ನೈಜೀರಿಯಾದಲ್ಲಿ ನೋಟ್ ಬ್ಯಾನ್; ಸಂಕಷ್ಟಕ್ಕೆ ಸಿಲುಕಿದ ಬಜಾಜ್
ಬಜಾಜ್ ಆಟೊ
Follow us on

ನವದೆಹಲಿ: ನೈಜೀರಿಯಾದಲ್ಲಿ ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿರುವ ಅಲ್ಲಿನ ನೋಟ್ ಬ್ಯಾನ್ (Note Ban) ಕ್ರಮದ ಪರಿಣಾಮ ಭಾರತದ ಬಜಾಜ್ ಆಟೊ (Bajaj Auto) ಸಂಸ್ಥೆ ಮೇಲೆ ಬಿದ್ದಿದೆ. ಭಾರತದ ಷೇರುಪೇಟೆಯಲ್ಲಿ ಬಜಾಜ್​ನ ಷೇರು ಮೌಲ್ಯ ಇಂದು ಸೋಮವಾರ ಶೇ. 5ರಷ್ಟು ಬಿದ್ದಿದೆ. ಇದಕ್ಕಿಂತ ಹೆಚ್ಚಾಗಿ ಬಜಾಜ್ ವಾಹನ ಘಟಕದಲ್ಲಿ ಉತ್ಪಾದನೆ ಕಡಿಮೆ ಆಗಿದೆ. ಅಷ್ಟಕ್ಕೂ ನೈಜೀರಿಯಾದಲ್ಲಿ ಡೀಮಾನಿಟೈಸೇಶನ್ (Demonetisation) ಆಗುವುದಕ್ಕೂ ಭಾರತದ ವಾಹನ ಕಂಪನಿ ಸಂಕಷ್ಟಕ್ಕೆ ಸಿಲುಕುವುದಕ್ಕೂ ನಂಟಿದೆ.

ಬಜಾಜ್ ಆಟೊದ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ವಿದೇಶದಲ್ಲಿರುವ ಅತಿದೊಡ್ಡ ಮಾರುಕಟ್ಟೆಗಳಲ್ಲಿ ನೈಜೀರಿಯಾ ಒಂದು. ಬಜಾಜ್ ವಾಹನಗಳ ರಫ್ತಿನಲ್ಲಿ ನಾಲ್ಕನೇ ಒಂದು ಭಾಗ ನೈಜೀರಿಯಾ ಮಾರುಕಟ್ಟೆಯದ್ದಾಗಿದೆ.

ವರದಿಗಳ ಪ್ರಕಾರ ಬಜಾಜ್ ಸಂಸ್ಥೆ ತನ್ನ ವಾಹನಗಳ ಉತ್ಪಾದನೆಯನ್ನು ಸಾಕಷ್ಟು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ವಲುಜ್ ಮತ್ತು ಪಂತ್ ನಗರ್​ನಲ್ಲಿರುವ ಅದರ ಘಟಕಗಳಲ್ಲಿ ಈಗಾಗಲೇ ಮಾಮೂಲಿಗಿಂತ ಕಡಿಮೆ ಸಂಖ್ಯೆಯಲ್ಲಿ ವಾಹನಗಳ ತಯಾರಿಕೆ ಆಗುತ್ತಿದೆ. ಮಾಮೂಲಿಯಾಗಿ 3.38 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿತ್ತು. ಅದರ ಸಂಖ್ಯೆ ಈಗ 2.5 ಲಕ್ಷಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Rs 5 Coin: ಭಾರತದ 5 ರೂ ನಾಣ್ಯ ಬಳಸಿ ಬಾಂಗ್ಲಾದಲ್ಲಿ ಬ್ಲೇಡ್ ಬಿಸಿನೆಸ್? ಆರ್​ಬಿಐ ಕಾಯಿನ್ ಕಥೆ

ನೈಜೀರಿಯಾದಲ್ಲಿ ನೋಟ್ ಬ್ಯಾನ್ ಆಗಿದ್ದ ಮಾತ್ರಕ್ಕೆ ಬಜಾಜ್ ವಾಹನಗಳಿಗೆ ಬೇಡಿಕೆ ಇಳಿದಿಲ್ಲ. ಕಳೆದ ಕೆಲ ತಿಂಗಳಿಂದಲೂ ನೈಜೀರಿಯಾದಲ್ಲಿ ಬಜಾಜ್ ರಫ್ತು ಇಳಿಮುಖವಾಗುತ್ತಾ ಬಂದಿದೆ. ಈಗ ನೋಟ್ ಬ್ಯಾನ್ ಆಗಿರುವುದು ಈ ಇಳಿಮುಖದ ವೇಗ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಏನಿದು ನೋಟ್ ಬ್ಯಾನ್?

ಭಾರತದಲ್ಲಿ 2016ರಲ್ಲಿ ಸರ್ಕಾರ ನೋಟು ಅಮಾನ್ಯೀಕರಣ ಮಾಡಿದ ರೀತಿಯಲ್ಲಿ ನೈಜೀರಿಯಾ ನೋಟ್ ಬ್ಯಾನ್ ಪ್ರಕಟಿಸಿದೆ. ಕಳೆದ ವರ್ಷಾಂತ್ಯದಲ್ಲಿ ಅಲ್ಲಿನ ಸರ್ಕಾರ ಡೀಮಾನಿಟೈಸ್ ಮಾಡಿತು. ಹಳೆಯ 200, 500 ಮತ್ತು 1000 ನೈರಾ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಈ ನೋಟುಗಳನ್ನು ಮರಳಿಸಲು ಜನವರಿ 31ಕ್ಕೆ ಡೆಡ್​ಲೈನ್ ಕೊಡಲಾಯಿತು. ನಂತರ ಅದು ಫೆಬ್ರುವರಿ 10ಕ್ಕೆ ವಿಸ್ತರಣೆ ಆಯಿತು. ಹೊಸ ನೋಟು ಸರಿಯಾದ ಪ್ರಮಾಣದಲ್ಲಿ ಮುದ್ರಣವಾಗದ ಹಿನ್ನೆಲೆಯಲ್ಲಿ ಡೆಡ್​ಲೈನ್ ಫೆಬ್ರುವರಿ 20ಕ್ಕೆ ವಿಸ್ತರಣೆ ಆಯಿತು.

ಇದನ್ನೂ ಓದಿ: Hyundai ಮತ್ತು KIA ಕಾರುಗಳಿಂದ ಭಾರತಕ್ಕೆ ಭಾರೀ ನಷ್ಟ? ಕೊರಿಯನ್ ಕಂಪನಿಗಳ ಬಗ್ಗೆ ಸಚಿವ ಗೋಯಲ್ ಅಸಮಾಧಾನ

ಕೋಟಾ ನೋಟು, ಕಪ್ಪು ಹಣ ನಿಯಂತ್ರಿಸುವುದು ನೋಟ್ ಬ್ಯಾನ್​ನ ಪ್ರಮುಖ ಉದ್ದೇಶಗಳಲ್ಲಿದೆ. ಹಾಗೆಯೇ, ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಪುಷ್ಟಿ ಸಿಕ್ಕ ರೀತಿಯಲ್ಲಿ ನೈಜೀರಿಯಾದಲ್ಲೂ ಆಗಬಹುದು ಎಂಬ ಎಣಿಕೆಯಿಂದಲೂ ಈ ಕ್ರಮ ಕೈಗೊಳ್ಳಲಾಗಿದೆ.

ಆದರೆ, ನೈಜೀರಿಯಾ ಜನರು ಹಣ ಇಲ್ಲದೇ ಕಂಗಾಲಾಗಿದ್ದಾರೆ. ದೇಶದ ವಿವಿಧೆಡೆ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದೇ ತಿಂಗಳು ಅಲ್ಲಿ ಸಾರ್ವತ್ರಿಕ ಚುನಾವಣೆಗಳೂ ನಡೆಯುತ್ತಿವೆ. ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ನೈಜೀರಿಯಾ ಈಗ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದೆ. ಅದರ ಮುಂದಿನ ದಾರಿ ಎತ್ತ ಸಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ