ಮುಂಬೈ: ಆರ್ಥಿಕ ಜಗತ್ತು ಅತ್ಯಂತ ಕಾತರದಿಂದ ಎದುರು ನೋಡುವ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಮಾನಿಟರಿ ಪಾಲಿಸಿ ಕಮಿಟಿ (Monetary Policy Committee – MPC) ಶುಕ್ರವಾರ ನಡೆಯಿತು. ಸಭೆಯ ನಂತರ ವಿವರಗಳನ್ನು ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸತತ 11ನೇ ಬಾರಿಗೆ ರೆಪೊ ದರಗಳನ್ನು ಯಥಾಸ್ಥಿತಿ ಉಳಿಸಿಕೊಂಡಿರುವುದಾಗಿ ಘೋಷಿಸಿದರು. ಹೀಗಾಗಿ ನಿಮ್ಮ ಗ್ರಾಹಕರ ಗೃಹಸಾಲ ಮತ್ತು ವೈಯಕ್ತಿಕ ಸಾಲದ ಇಎಂಐ ಸಹ ವ್ಯತ್ಯಾಸವಾಗುವುದಿಲ್ಲ. ಪ್ರಸ್ತುತ ದೇಶದಲ್ಲಿ ರೆಪೊ ದರಗಳು ಶೇ 4 ಇದೆ. ರಿವರ್ಸ್ ರೆಪೊ ದರ ಸಹ ಬದಲಾಗಿಲ್ಲ. ಪ್ರಸ್ತುತ ರಿವರ್ಸ್ ರೆಪೊ ದರ ಶೇ 3.35 ಇದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಮತ್ತು ಬ್ಯಾಂಕ್ ರೇಟ್ಗಳನ್ನೂ ಎಂಪಿಸಿ ಬದಲಿಸಿಲ್ಲ. ಇವು ಸಹ ಯಥಾಸ್ಥಿತಿಯಲ್ಲಿ, ಅಂದರೆ ಶೇ 4.25ರ ಪ್ರಮಾಣದಲ್ಲಿ ಮುಂದುವರಿಯಲಿವೆ. ಲಿಕ್ವಿಡಿಡಿ ಅಡ್ಜಸ್ಟ್ಮೆಂಟ್ ಸೌಲಭ್ಯದ (Liquidity Adjustment Facility – LAF) ಮೂಲದರವನ್ನು ಕೊವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲು ಇದ್ದ ಮಟ್ಟಕ್ಕೆ, ಅಂದರೆ 50 ಬಿಪಿಎಸ್ಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ರಿಸರ್ವ್ ಬ್ಯಾಂಕ್ ನಿಲುವು ಕುರಿತು ಪ್ರಸ್ತಾಪಿಸಿದ ಅವರು, ಹಣದುಬ್ಬರ ನಿಯಂತ್ರಿಸುವುದು ಮತ್ತು ಆರ್ಥಿಕ ಪ್ರಗತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಎಂಪಿಸಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಭಾರತದ ಎಲ್ಲ ಎಟಿಎಂಗಳಲ್ಲಿ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯ (Cardless Cash Withdrawal) ಸೌಲಭ್ಯ ಕಲ್ಪಿಸುವ ಸಾಧ್ಯತೆಯನ್ನು ಆರ್ಬಿಐ ಈ ಬಾರಿ ಎಂಪಿಸಿಯಲ್ಲಿ ಪ್ರಸ್ತಾಪಿಸಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface – UPI) ಮೂಲಕ ಈ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ದಾಸ್ ಅಭಿಪ್ರಾಯಪಟ್ಟರು. ‘ಪ್ರಸ್ತುತ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯವು ಕೆಲವೇ ಬ್ಯಾಂಕ್ಗಳಿಗೆ ಸೀಮಿತವಾಗಿದೆ. ಇದನ್ನು ಎಲ್ಲ ಬ್ಯಾಂಕ್ಗಳು ಮತ್ತು ಎಟಿಎಂ ಜಾಲಗಳಿಗೆ ವಿಸ್ತರಿಸಲಾಗುವುದು’ ಎಂದು ದಾಸ್ ಹೇಳಿದರು. ಕಾರ್ಡ್ರಹಿತ ಪಾವತಿ ವಿಧಾನಗಳ ಅಳವಡಿಕೆಯಿಂದ ಸ್ಕಿಮಿಂಗ್ ಮತ್ತು ಕಾರ್ಡ್ ಕ್ಲೋನಿಂಗ್ನಂಥ ಅಕ್ರಮಗಳನ್ನೂ ತಡೆಗಟ್ಟಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಬಿಐ ನಿಯಂತ್ರಣದಲ್ಲಿರುವ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಒದಗಿಸುತ್ತಿರುವ ಸೇವೆಯ ಗುಣಮಟ್ಟದ ಬಗ್ಗೆ ಸಹ ನಾವು ನಿಗಾ ಇರಿಸುತ್ತೇವೆ. ಹೊಸಹೊಸ ಆವಿಷ್ಕಾರಗಳು, ಉತ್ಪನ್ನಗಳು ಮತ್ತು ಸೇವೆಗಳು ಬಳಕೆಗೆ ಬರುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆದಾರರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕ ಸೇವೆಗಳ ಸ್ಥಿತಿಗತಿ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧಿಕಾರ ಅವಧಿ ವಿಸ್ತರಣೆ; ಮುಂದಿನ 3ವರ್ಷಕ್ಕೆ ಅವರೇ ಮತ್ತೆ ಗವರ್ನರ್
ಇದನ್ನೂ ಓದಿ: ಬ್ಯಾಂಕ್ ಖಾಸಗೀಕರಣದ ಬಗ್ಗೆ ರಿಸರ್ವ್ ಬ್ಯಾಂಕ್ ಜತೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ; ಶಕ್ತಿಕಾಂತ್ ದಾಸ್
Published On - 11:56 am, Fri, 8 April 22