ಮೈಸೂರು: ಇಂದು ಬೆಳಗ್ಗೆಯಷ್ಟೇ ‘ಯಾರು ಏನೇ ಹುನ್ನಾರ ಮಾಡಿದ್ರು ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾರೇ ಏನೇ ಅಭಿಯಾನ ಮಾಡಿದ್ರು ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರಿಯುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಬರುತ್ತಿದ್ದಾರೆ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸಂಜೆಯ ವೇಳೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಸರಿಯಿಲ್ಲದಿದ್ದರೆ ಇನ್ವೆಸ್ಟರ್ಸ್ ಬರಲ್ಲ. ಹೂಡಿಕೆದಾರರು ಬರಲ್ಲ ಅಂದ್ರೆ ಆರ್ಥಿಕ ವ್ಯವಸ್ಥೆ ಕುಸಿಯುತ್ತೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿಯೇ ಓಲಾ ಬೈಕ್ ಕಂಪನಿ ತಮಿಳುನಾಡಿಗೆ ಹೋಯ್ತು. ಓಲಾ ಕಂಪನಿ ಇಲ್ಲೇ ಆಗಿದ್ರೆ 10,000 ಉದ್ಯೋಗ ಸಿಗುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉದಾಹರಣೆ ನೀಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಚುನಾವಣೆಗೆ ಹೋದರೆ ಸಾಧನೆ ಏನು ಎಂದು ಹೇಳಿಕೊಳ್ತಾರೆ? ಹಾಗಾಗಿ ಇಂತಹ ಧಾರ್ಮಿಕ ವಿಚಾರ ಮುನ್ನೆಲೆಗೆ ತರುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಕೆಲ ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಹಿಜಾಬ್, ಹಲಾಲ್, ಮಸೀದಿ ಮೈಕ್ಗೆ ನಿರ್ಬಂಧ ಅಂದರು. ದೇವಸ್ಥಾನ ಸುತ್ತಮುತ್ತ ವ್ಯಾಪಾರ ನಿರ್ಬಂಧ, ಮಾವು ಮಾರಾಟ ವಿಚಾರ ಮುಂದೆ ತಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ತೋರಿದರು.
ಬೆಲೆ ಏರಿಕೆ ಬಗ್ಗೆ ಮಾತನಾಡಲಿ, ಯಾಕೆ ಬಿಜೆಪಿ ಅದರ ಬಗ್ಗೆ ಮಾತಾಡ್ತಿಲ್ಲ? ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳವಾಗುತ್ತಲೇ ಇದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧಾರ್ಮಿಕ ವಿಚಾರ ಚರ್ಚೆಗೆ ತಂದಿದ್ದಾರೆ. ಹಲಾಲ್ ಮಾಂಸ ಹಿಂದೆಲ್ಲಾ ತಿಂದಿಲ್ವಾ? ಅದೇನ್ ಹೊಸದಾ? ಎಂದು ಮೈಸೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಆರಗ ಜ್ಞಾನೇಂದ್ರ ನಾಲಾಯಕ್ ಗೃಹಸಚಿವ:
ಸಿಎಂ ಬೊಮ್ಮಾಯಿ ಕೂಡಲೇ ಆರಗ ಜ್ಞಾನೇಂದ್ರನ ರಾಜೀನಾಮೆ ಪಡೆಯಲಿ. ಬೆಂಗಳೂರಿನಲ್ಲಿ ಚಂದ್ರು ಕೊಲೆ ಪ್ರಚೋದಿಸಿದ್ದೇ ಗೃಹ ಸಚಿವ. ಉರ್ದು ಬರಲಿಲ್ಲವೆನ್ನುವ ಕಾರಣಕ್ಕೆ ಕೊಂದಿದ್ದಾರೆಂದು ಹೇಳಿದ್ದ. ಗೃಹ ಸಚಿವ ಆರಗ ಜ್ಞಾನೇಂದ್ರ ಚುಚ್ಚಿ ಚುಚ್ಚಿ ಕೊಂದಿದ್ದಾರೆಂದಿದ್ದ. ಆದರೆ ಬೈಕ್ ಅಪಘಾತ ವಿಚಾರದಲ್ಲಿ ಚಂದ್ರು ಕೊಲೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಪ್ರಚೋದನೆ ಆಗಲ್ವಾ? ರಾಜ್ಯ ಡಿಜಿ & ಐಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರು, ಗುಪ್ತ ದಳ ಇದೆ, ಮಾಹಿತಿ ಪಡೆಯಲಿ. ಯಾವುದೇ ಮಾಹಿತಿ ಇಲ್ಲದೆ ಗೃಹ ಮಂತ್ರಿ ಹೇಗೆ ಮಾತಾಡಿದರು? ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:
ಮಾಡಬಾರದ ವಯಸ್ಸಿನಲ್ಲಿ ಲವ್ ಮಾಡಿ, ಸಂಕಷ್ಟ ತಂದುಕೊಂಡು, ದಾರುಣವಾಗಿ ಅಂತ್ಯ ಕಂಡ ಗದಗ ಪಿಯುಸಿ ವಿದ್ಯಾರ್ಥಿ
ಇದನ್ನೂ ಓದಿ:
JC Madhuswamy: ಹಿಂದೂಪರ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದ ಸಚಿವ ಮಾಧುಸ್ವಾಮಿ
Published On - 7:07 pm, Fri, 8 April 22